ವರ್ಷಾಚರಣೆ ಅವಘಡಕ್ಕೆ 12 ಬಲಿ

ಬೆಂಗಳೂರು: ರಾಜ್ಯದ ವಿವಿಧೆಡೆ ಹೊಸ ವರ್ಷದ ಸಂಭ್ರಮದಲ್ಲಿ ತೊಡಗಿದ್ದ 12 ಮಂದಿ ಸೋಮವಾರ ತಡರಾತ್ರಿ ಪ್ರತ್ಯೇಕ ಪ್ರಕರಣಗಳಲ್ಲಿ ಸಾವನ್ನಪ್ಪಿದ್ದಾರೆ. ವರ್ಷಾಚರಣೆ, ಹುಟ್ಟುಹಬ್ಬ ಸಂಭ್ರಮದಲ್ಲಿದ್ದ ಮಂಗಳೂರಿನ ಉಪ್ಪಿನಂಗಡಿ ವಿದ್ಯಾರ್ಥಿಗಳಾದ ಅಬ್ದುಲ್ ಜಲೀಲ್ (18), ಕೌಕ್ರಾಡಿ ಮುಹಮ್ಮದ್ (17), ಸಹೀರ್(18) ನೇತ್ರಾವತಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬೆಂಗಳೂರಲ್ಲಿ ಬೈಕ್​ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಸೋಮ್ ಸಂದೀಪ್(23) ಕಾರು ಡಿಕ್ಕಿಯಾಗಿ ಮೃತಪಟ್ಟರೆ, ಉಲ್ಲಾಳದಲ್ಲಿ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ರಂಜನ್(20) ಮೃತಪಟ್ಟಿದ್ದಾನೆ. ಬೆಂಗಳೂರಿನ ರಾಜೀವ್ ರಂಜನ್ ತಿವಾರಿ (28), ಸ್ನೇಹ ಆಸಿಫ್ ಚಕ್ರವರ್ತಿ(28) ನಂಜನಗೂಡಿನ ಕಪಿಲಾ ನದಿ ಪಾಲಾದರೆ, ಕೋಲಾರದ ಕಾವರನಹಳ್ಳಿ ಸರ್ಕಾರಿ ಶಾಲೆಯ 7ನೇ ತರಗತಿಯ ಆಕಾಶ್(12) ಕೆರೆ ಪಾಲಾಗಿದ್ದಾನೆ. ನೆಲಮಂಗಲದಲ್ಲಿ ಕ್ಯಾಂಟರ್​ಗೆ ಕಾರು ಗುದ್ದಿ ಚಾಲಕ ಆನಂದ್(44) ಮೃತಪಟ್ಟಿದ್ದಾರೆ. ಬೆಂಗಳೂರಿನ ರವಿಕುಮಾರ ಧನಂಜಯ ಪೂಜಾರಿ (29) ಗೋವಾದಲ್ಲಿ ಸಮುದ್ರ ಪಾಲಾಗಿದ್ದಾರೆ. ಶಿರಸಿಯಿಂದ ಧಾರವಾಡ ನಡುವೆ ಕಾರು-ಲಾರಿ ಡಿಕ್ಕಿಯಾಗಿ ದರ್ಶನ್ ದಾನೇಶ್ವರ ಸರವೇದಿ (28), ಮಂಜುನಾಥ ಶಿವಗುತ್ತಿ (25) ಮೃತಪಟ್ಟಿದ್ದಾರೆ.