ಸಿನಿಮಂದಿಯ ಹೊಸ ಸಂವತ್ಸರ

ನೋಡನೋಡುತ್ತಿದ್ದಂತೆಯೇ ಒಂದು ವರ್ಷ ಉರುಳಿ ಹೋಗಿದೆ. 2018ರ ಘಟನೆಗಳನ್ನು ಅವಲೋಕಿಸುತ್ತಲೇ 2019ರ ಹೊಸ ದಿನಗಳನ್ನು ಬರಮಾಡಿಕೊಳ್ಳಲು ಎಲ್ಲರೂ ಸಜ್ಜಾಗಿದ್ದಾರೆ. ಚಂದನವನದ ತಾರೆಯರೂ ಈ ಮಾತಿಗೆ ಹೊರತಲ್ಲ. ಹಳೇ ವರ್ಷದ ನೋವು-ನಲಿವು, ಲಾಭ-ನಷ್ಟ ಏನೇ ಇದ್ದರೂ ಹೊಸ ಸಂಕಲ್ಪ, ಹೊಸ ಭರವಸೆ, ಹೊಸ ಯೋಜನೆಗಳೊಂದಿಗೆ ಮೈ ಕೊಡವಿ ನಿಂತಿದ್ದಾರೆ. ಮನದಲ್ಲಿ ಜೀವ ಪಡೆಯುವ ಗುರಿ, ಆಶಯ, ಕನಸುಗಳನ್ನು ಈ ನೂತನ ವರ್ಷದಲ್ಲಿ ಈಡೇರಿಸಿಕೊಳ್ಳುವ ತವಕ ಎಲ್ಲರಲ್ಲೂ ಇದೆ. ಅದಕ್ಕೆ ಬೇಕಾದ ತಯಾರಿಯೊಂದಿಗೆ 2019ರ ಪಯಣ ಶುರುಮಾಡಿದ್ದಾರೆ. ಹಾಗಾದರೆ ಯಾವ್ಯಾವ ಸೆಲೆಬ್ರಿಟಿಗಳು ಏನೆಲ್ಲ ಪ್ಲಾ್ಯನ್ ಮಾಡಿಕೊಂಡಿದ್ದಾರೆ? ಯಾವುದರ ನಿರೀಕ್ಷೆಯಲ್ಲಿ ಅವರು ಹ್ಯಾಪಿ ನ್ಯೂ ಇಯರ್ ಎನ್ನುತ್ತಿದ್ದಾರೆ? ಇಲ್ಲಿದೆ ಉತ್ತರ…

ಸಿನಿಮಾ ಪ್ರಯಾಣ ಬರಹ…

ಒಳ್ಳೆಯ ಕಥೆಗಾಗಿ ಸಾಕಷ್ಟು ಸಮಯ ಕಾದ ಬಳಿಕ 2018ರ ಕೊನೆಯಲ್ಲಿ ‘ಕಾಳಿದಾಸ’ ಸಿನಿಮಾ ಸಿಕ್ಕಿತು. ಎರಡು ವರ್ಷದ ಗ್ಯಾಪ್ ಬಳಿಕ ಈ ಚಿತ್ರ ಒಪ್ಪಿಕೊಂಡೆ. ಆದರೆ 2019ರಲ್ಲಿ ಹೀಗೆ ತಡ ಮಾಡುವುದಿಲ್ಲ. ಕನಿಷ್ಠ ನಾಲ್ಕು ಸಿನಿಮಾ ಗಳಲ್ಲಿ ನಟಿಸ ಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ. ಅದರಲ್ಲಿ ‘ತುಮ್ಹಾರಿ ಸುಲು’ ರೀತಿಯ ಒಂದು ಮಹಿಳಾಪ್ರಧಾನ ಚಿತ್ರ ಕೂಡ ಇರಬೇಕು ಎಂಬ ಆಸೆ ಇದೆ. ಇನ್ನುಳಿದಂತೆ, ನನಗೆ ಪ್ರಮಾಣ ಮಾಡುವ ಕ್ರೇಝå್ ಹೆಚ್ಚು. ಈ ವರ್ಷ ಏನಿಲ್ಲವೆಂದರೂ ಎರಡು ಹೊಸ ದೇಶ ನೋಡಿಬರಬೇಕು. ಅದರ ಜತೆಗೆ ಒಂದು ಕಾದಂಬರಿ ಬರೆಯುವ ಯೋಜನೆ ಕೂಡ ಹಾಕಿಕೊಂಡಿದ್ದೇನೆ. ಅದಕ್ಕೆ ಬೇಕಾದ ಪೂರ್ವತಯಾರಿ ಈಗಲೇ ಶುರುವಾಗಿದೆ.
| ಮೇಘನಾ ಗಾಂವ್ಕರ್

ವರ್ಷಪೂರ್ತಿ ಆರೋಗ್ಯದ ಶಪಥ

ಹೊಸ ವರ್ಷ ಅಂದ ತಕ್ಷಣ ಅದೊಂದು ಫ್ರೆಷ್ ಸ್ಟಾರ್ಟ್ ಅಷ್ಟೇ. ಹಾಗಾಗಿ ಹೊಸ ಯೋಜನೆ ಎನ್ನುವುದಕ್ಕಿಂತ ಕಳೆದ ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಲು ಸಿದ್ಧಳಾಗುತ್ತಿದ್ದೇನೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿದ್ದೇನೆ. ಪಾಶ್ಚಾತ್ಯ ಮತ್ತು ಭಾರತೀಯ ನೃತ್ಯ ಪ್ರಕಾರಗಳೆಲ್ಲವನ್ನೂ ಕಲಿಯಬೇಕೆಂದುಕೊಂಡಿದ್ದೇನೆ. ಯೋಗ, ಜಿಮ್ಲ್ಲಿ ಹೆಚ್ಚು ತೊಡಗಿಸಿಕೊಂಡು ಇಡೀ ವರ್ಷ ಆರೋಗ್ಯದಿಂದಿರಲು ಶಪಥ ಮಾಡಿದ್ದೇನೆ. ಕಳೆದ ವರ್ಷದ ಸೋಲನ್ನು ಮರೆತು ಸಾಧನೆಯತ್ತ ನಡೆಯಬೇಕಿದೆ. ಸಿನಿಮಾ ಕ್ಷೇತ್ರಕ್ಕೂ ಈ ಮಾತು ಅನ್ವಯ. 2018ಕ್ಕೆ ಬಾಲಿವುಡ್​ಗೆ ಪದಾರ್ಪಣೆ ಮಾಡಿದೆ. ಬಾಲಿವುಡ್​ನಿಂದ ಬೇರೆ ಸಿನಿಮಾಗಳ ಆಫರ್​ಗಳು ಬರಲಾರಂಭಿಸಿವೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಅದರಲ್ಲಿ ಹಲವು ಬಿಡುಗಡೆಗೆ ರೆಡಿಯಾಗಿವೆ. ಈ ವರ್ಷ ಕಮರ್ಷಿಯಲ್ ಅಲ್ಲದ, ನಟನೆಗೆ ಹೆಚ್ಚಿನ ಪ್ರಾಶಸ್ಱ ಇರುವ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ.
| ವೇದಿಕಾ

ನಟನೆ ಕಡೆಗೆ ಹೆಚ್ಚಿನ ಗಮನ..

ಎಲ್ಲ ದೃಷ್ಟಿಯಿಂದಲೂ ನನಗೆ 2018ನೇ ವರ್ಷ ಸಮೃದ್ಧವಾಗಿತ್ತು. ಮೊದಲ ಬಾರಿಗೆ ನಾನು ನಿರ್ದೇಶಿಸಿದ ‘ಕಾಜಿ’ ಕಿರುಚಿತ್ರ ಎಲ್ಲಡೆ ಒಳ್ಳೆಯ ಪ್ರತಿಕ್ರಿಯೆ ಪಡೆಯುವುದರ ಜತೆಗೆ ಪ್ರಶಸ್ತಿಗಳನ್ನೂ ಬಾಚಿಕೊಂಡಿತು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡೆ. ‘ನಡುವೆ ಅಂತರವಿರಲಿ’ ಚಿತ್ರ ಕೂಡ ಯಶಸ್ವಿ ಆಯಿತು. ಈಗ ವಿದ್ಯಾಭ್ಯಾಸ ಮುಗಿದಿರುವುದರಿಂದ ಈ ವರ್ಷ ನಟನೆಯ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದುಕೊಂಡಿದ್ದೇನೆ. ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು. ಉಳಿದಂತೆ ಯಾವುದನ್ನೂ ಪ್ಲಾ್ಯನ್ ಮಾಡಿಕೊಂಡಿಲ್ಲ. ಎಲ್ಲವನ್ನೂ ಬಂದಂತೆ ಸ್ವೀಕರಿಸುತ್ತೇನೆ. ಪೂರ್ಣಾವಧಿ ಸಿನಿಮಾ ನಿರ್ದೇಶಿಸಬೇಕು ಎಂಬ ಆಸೆ ಇದೆಯಾದರೂ ಅದಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ. ಅಷ್ಟು ದೊಡ್ಡ ಜವಾಬ್ದಾರಿ ನಿಭಾಯಿಸಲು ಇನ್ನಷ್ಟು ತಯಾರಿ ಬೇಕಾಗುತ್ತದೆ.
| ಐಶಾನಿ ಶೆಟ್ಟಿ

ಬೈಕ್ ಓಡಿಸೋದು ಕಲಿಯಲೇಬೇಕು

2018ರಲ್ಲಿಯೇ ಬೈಕ್ ಓಡಿಸುವುದನ್ನು ಕಲಿಯಬೇಕು ಅಂದುಕೊಂಡಿದ್ದೆ. ಅದು ಈಡೇರಿಲ್ಲ. ಈ ವರ್ಷವಾದರೂ ಅದನ್ನು ಈಡೇರಿಸಿಕೊಳ್ಳುತ್ತೇನೆ. 2018ರಲ್ಲಿ ‘ಯೋಗಿ ದುನಿಯಾ’, ‘ಒಂಥರಾ ಬಣ್ಣಗಳು’ ಸಿನಿಮಾದಲ್ಲಿ ನಟಿಸಿದ್ದೆ. ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಈ ಚಿತ್ರಗಳಿಂದ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದೇನೆ. 2019ಕ್ಕೂ ಎರಡು ಸಿನಿಮಾಗಳು ಸಿದ್ಧವಾಗಿವೆ. ಈವರೆಗೂ ಚಾಲೆಂಜಿಂಗ್ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದೇನೆ. ಅದನ್ನು ಈ ವರ್ಷವೂ ಮುಂದುವರಿಸುತ್ತೇನೆ. ನನ್ನ ಕೆಲ ಸ್ನೇಹಿತರು ಯೂರೋಪ್​ನಲ್ಲಿದ್ದಾರೆ. ಅವರೆಲ್ಲರನ್ನೂ ಭೇಟಿಯಾಗಲು ವಿದೇಶ ಪ್ರವಾಸದ ಪ್ಲಾ್ಯನ್ ನಡೆಯುತ್ತಿದೆ. ಅದನ್ನು ಬಿಟ್ಟರೆ, ಕುಟುಂಬದ ಜತೆ ಹೆಚ್ಚು ಸಮಯ ಕಳೆಯುತ್ತೇನೆ.
| ಹಿತಾ ಚಂದ್ರಶೇಖರ್

ಕಾಲ ಬಂದಂತೆ ಹೋಗಬೇಕಷ್ಟೆ…

ಈವರೆಗೂ ನಾನು ಮುಂದಿನದನ್ನು ಆಲೋಚಿಸುತ್ತ ಪ್ಲಾ್ಯನ್ ಮಾಡೇ ಇಲ್ಲ. ಕಾಲ ಹೇಗೆ ಬರುತ್ತದೋ ಹಾಗೇ ಹೋಗುವುದೇ ನಾನು ಅಳವಡಿಸಿಕೊಂಡ ಯೋಜನೆ. ಯಾಕೆಂದರೆ, ಯಾವುದೂ ನಾವಂದುಕೊಂಡಂತೆ ಆಗುವುದಿಲ್ಲ. ಹಾಗಾಗಿ ಪ್ಲಾ್ಯನ್ ಮಾಡುವ ಅವಶ್ಯಕತೆಯೇ ಇಲ್ಲ. ಸಿನಿಮಾ ಮಾಡುವುದು ನಮ್ಮ ಕಾಯಕ. ಅದರಲ್ಲೇ ಮುಂದುವರಿಯುತ್ತೇನೆ. ಕಳೆದ ವರ್ಷಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕೆಂಬುದು ಪ್ರತಿಯೊಬ್ಬ ಕಲಾವಿದರ ಬಯಕೆ. ಅದೇ ಆಸೆ ನನ್ನಲ್ಲೂ ಇದೆ. ನೋಡೋಣ 2019ರಲ್ಲಿ ಏನೆಲ್ಲ ಆಗುತ್ತೋ ಅಂತ.
| ಚಿಕ್ಕಣ್ಣ

ಹೆಸರು ಉಳಿಸಿ ಕೊಳ್ಳುವ ಹೊಣೆ

2018ಕ್ಕೆ ನಾನು ನಟಿಸಿದ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಮತ್ತು ‘ಅಮ್ಮ ಐ ಲವ್ ಯೂ’ ಚಿತ್ರಗಳು ತೆರೆಕಂಡವು. ಅದಕ್ಕಿಂತ ಹೆಚ್ಚಾಗಿ ಕನ್ನಡಿಗರಿಗೆ ನಾನ್ಯಾರು ಎಂಬುದು ಗೊತ್ತಾಯಿತು. ಇದೀಗ 2019ರಲ್ಲಿ ಆ ಹೆಸರನ್ನು ಉಳಿಸಿಕೊಂಡು ಹೋಗ ಬೇ ಕಾದ ಜವಾಬ್ದಾರಿ ನನ್ನ ಮೇಲಿದೆ. ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸಬೇಕು, ಒಂದಕ್ಕಿಂತ ಒಂದು ಭಿನ್ನ ಚಿತ್ರಗಳಲ್ಲಿ ಬಣ್ಣ ಹಚ್ಚಬೇಕು ಎಂದುಕೊಂಡಿದ್ದೇನೆ. 2018ರ ವರ್ಷದ ಹೆಚ್ಚು ಸಮಯವನ್ನು ಶೂಟಿಂಗ್​ನಲ್ಲಿಯೇ ಕಳೆದಿದ್ದೇನೆ. ಎಲ್ಲಿಯೂ ಟ್ರಾವೆಲ್ ಮಾಡಲು ಆಗಿಲ್ಲ. 2019ರಲ್ಲಿ ಶೂಟಿಂಗ್​ನಿಂದ ಕೊಂಚ ಬಿಡುವು ಪಡೆದು ಬೇರೆ ಬೇರೆ ದೇಶ ಸುತ್ತುವ ಪ್ಲಾ್ಯನ್ ಹಾಕಿಕೊಂಡಿದ್ದೇನೆ. ಫ್ಯಾಮಿಲಿ ಜತೆಯಲ್ಲಿಯೂ ಸಮಯ ಕಳೆಯಬೇಕಿದೆ. ಇದೆಲ್ಲದರ ಜತೆಗೆ ಒಳ್ಳೊಳ್ಳೆಯ ಪ್ರಾಜೆಕ್ಟ್​ಗಳನ್ನು ಆಯ್ದುಕೊಳ್ಳಲಿದ್ದೇನೆ.
| ನಿಶ್ವಿಕಾ ನಾಯ್ಡು