ಹತ್ತೊಂಬತ್ತರ ಹುರುಪು

ಹೊಸ ಕನಸು, ನಿರೀಕ್ಷೆಗಳಿಗೆ ತೆರೆದುಕೊಳ್ಳುತ್ತಿರುವ ಹೊಸ ವರ್ಷ ಲೋಕಸಭೆ ಚುನಾವಣೆ ಕೌಂಟ್​ಡೌನ್​ಗೂ ಮುನ್ನುಡಿ ಬರೆದಿದೆ. ಸಂಸತ್ ಗದ್ದುಗೆ ಸಮರದ ಅಖಾಡದಲ್ಲಿ ಚಳಿಗಾಲದಲ್ಲೂ ವಾಕ್ಸಮರದ ಗುಡುಗು, ಸಿಡಿಲು ಮೇಳೈಸುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಹಳ್ಳಿಯಿಂದ, ದಿಲ್ಲಿವರೆಗೆ ಎಲೆಕ್ಷನ್ ಜ್ವರ ಕಾವೇರಿದೆ. ನಮ್ಮ ರಾಜಕಾರಣಿಗಳ ಜತೆಗೆ ಸೆಲೆಬ್ರಿಟಿಗಳಿಗೂ ಮತಮೋಹ ತಟ್ಟಿದಲ್ಲಿ ಏನೆಲ್ಲ ಡೈಲಾಗ್ ಬರಬಹುದು? ಹೊಸ ವರ್ಷದ ದಿನ ನಿಮ್ಮ ಮುಖ ಅರಳಿಸುವುದಕ್ಕಾಗಿ ಹೀಗೊಂದು ವಿಶೇಷ ಪ್ರಯತ್ನ ಮಾಡಿದ್ದೇವೆ. ಓದಿ ನಕ್ಕು ಬಿಡಿ.

ಹಮಾರಾ ಸರ್ಕಾರ್
ನಮ್ಮ ಸರ್ಕಾರದಿಂದ ಹತ್ತೆಂಟು ಜನಪರ ಯೋಜನೆ ತಂದಿರೋದ್ರಿಂದ ಈ ಬಾರಿಯೂ ಜನ ಗೆಲ್ಲಿಸುವ ವಿಶ್ವಾಸವಿದೆ. ಆದ್ರೆ ಈ ಮಹಾಘಟಬಂಧನದಿಂದ ಏನಾದ್ರೂ ಸಮಸ್ಯೆ ಆಗಬಹುದಾ ಅಂತ….

ಏನೂ ಚಿಂತೆ ಬೇಡ, ಜನ ನಮ್ಮ ಕೈಬಿಡಲ್ಲ. ಹಾಗೇ ಕಳೆದ ಬಾರಿ ಕಾಶಿ ವಿಶ್ವನಾಥನ ಅನುಗ್ರಹ ಸಿಕ್ಕಂತೆ ಈ ಸಲ ರಾಮನ ಆಶೀರ್ವಾದ ಸಿಗುತ್ತೆ. ಅದೂ ಅಲ್ದೆ ಮಹಾಘಟಬಂಧನ ರಚನೆ ಆಗೋದ್ರಲ್ಲಿ ಲೋಕಸಭಾ ಎಲೆಕ್ಷನ್ನೇ ಮುಗ್ದಿರುತ್ತೆ ಬಿಡಿ ಮೋದಿ ಸಾಬ್…

ಕೈ ಹಿಡಿಯಲ್ಲ
ಇಟಲೀಲಿ ಮದ್ವೆ ಆಗಿದ್ಯಾಕೆ ದೀಪಿಕಾ? ಮುಂದೆ ಕಾಂಗ್ರೆಸ್ಸಿಂದ ಎಂಪಿ ಸೀಟಾ?
ನೋ ವೇ… ಪಿಗ್ಗಿ, ರಣವೀರ್ ಕೈ ಹಿಡಿದ ಮೇಲೆ ಬೇರೆ ‘ಕೈ’ ಯಾಕೆ?
ಮದ್ವೆ ನನ್​ಗಿಂತ ಲೇಟು, ಗುಡ್​ನ್ಯೂಸ್ ನನಗಿಂತ ಫಾಸ್ಟಾ ಪಿಗ್ಗಿ?
ಹೌದು, ಎಲೆಕ್ಷನ್ ರಿಸಲ್ಟ್​ಗೆ ಮೊದಲೇ ನನ್ ರಿಸಲ್ಟ್ ಅನೌನ್ಸ್ ಆಗಿಲ್ಲ ಅಂದ್ರೆ
ನಿಕ್ (ಜೋನಸ್) ನೇಮ್ ಬದಲಿಸ್ತೀನಿ ದೀಪು.

ಮೇರೆ ಮಾ
ರಾಹುಲ್ ಬೇಟಾ, ಮೋದಿಕೆ ಪಾಸ್ ಜಿಎಸ್​ಟಿ ಹೈ, ಜನ್​ಧನ್ ಹೈ, ರಫೇಲ್ ಹೈ, ಅಯೋಧ್ಯಾ ಹೈ, ಅಮಿತ್ ಷಾ ಹೈ… ನಿನ್ನ ಹತ್ರ ಟೆಂಪಲ್ ರನ್ ಬಿಟ್ರೆ ಬೇರೆ ಏನಿದೆ?

ಮೇರೆ ಪಾಸ್ ಮಾ ಹೈ!

ಅವರಪ್ಪನಾಣೆ…
ರೀ.. ಕುಮಾರಸ್ವಾಮಿ, ನಿನ್ನಪ್ಪನಾಣೆ ಸಿಎಂ ಆಗಲ್ಲ ಅಂತ ಸಾರಿಸಾರಿ ಹೇಳಿದ್ದೆ. ಆದ್ರೂ ನೀನೇ ಸಿಎಂ ಆಗ್ಬಿಟ್ಯಲ್ಲಯ್ಯ…

ಅಯ್ಯೋ ಸಿದ್ರಾಮಣ್ಣ, ನಮ್ ರೇವಣ್ಣನ್ ಲಿಂಬೆಕಾಯಿ ಮುಂದೆ ನಿನ್ ಆಣೆ ಯಾವ್ ಲೆಕ್ಕ. ಆದ್ರೆ, ಲೋಕಸಭೆ ಇಲೆಕ್ಷನ್ನಲ್ಲಿ ಹುಷಾರು. ‘ಮೋದಿ ಅವರಪ್ಪನಾಣೆ ಮತ್ತೆ ಪಿಎಂ ಆಗಲ್ಲ’ ಅಂತ ಮಾತ್ರ ಎಲ್ಲೂ ಭಾಷಣ ಮಾಡ್ಬೇಡಿ…

ಎಲ್ಲೂ ಹೋಗೋಲ್ಲ
ಮಲ್ಯಾಜೀ… ಬ್ರಿಟನ್ ಗಡಿಪಾರು ಮಾಡಿದ್ರೆ ವರಿ ಮಾಡ್ಕೋಬೇಡಿ… ನೀವೂ ಸಾಲಗಾರರು.. ನಾವೂ ಸಾಲಗಾರರು… ನಮ್ ದೇಶಕ್ಕೆ ಬಂದ್ಬಿಡಿ.. ಭಾರತದ ಬ್ಯಾಂಕ್​ಗೆ ಬಾಕಿ ಇರೋ ಹಣ ನಮ್ಗೆ ಕೊಟ್ಬಿಡಿ… ಭೂಗತ ಡಾನ್ ಥರ ಮಜವಾಗಿರಿ…

ಇಮ್ರಾನ್ ಭಾಯ್… ಡೋಂಟ್ ಅಂಡರ್​ಎಸ್ಟಿಮೇಟ್ ಮೋದಿ ಅಂಡ್ ದೋವಲ್. ನಾನು ಪಾಕ್​ಗೆ ಬಂದ್ರೆ ಅವು› ಸರ್ಜಿಕಲ್ ಸ್ಟ್ರೈಕ್ ಮಾಡಿ ನನ್ನ ಎತ್ಕೊಂಡ್ ಹೋಗ್ಬಿಡ್ತಾರೆ ಅಷ್ಟೆ…

ಪವರ್ ಶೋ
ಶಿವಕುಮಾರ್ ಅವ್ರೇ, ಲೋಕಸಭೆ ರಿಸಲ್ಟ್ ದಿನ ನಿಮ್ಮ ಮೈತ್ರಿ ಸರ್ಕಾರ ಬೀಳುತ್ತೆ. ಆಮೇಲೆ ನಂದೇ ಪವರ್… ನಮ್​ತೆ ಬಂದ್ಬಿಡಿ, ನಿಮ್ಗೂ ‘ಪವರ್’ ಕೊಡ್ತೀನಿ…

ರಾಜ್ಯದಲ್ಲಿ ಬೇಕಾದಷ್ಟು ಪವರ್ ಕಂಡಿದ್ದೀನಿ. ಕೇಂದ್ರದಲ್ಲಿ ಐಟಿ, ಇ.ಡಿ. ಕಂಟ್ರೋಲ್ ಮಾಡೋ ಪವರ್ ಕೊಡಿಸ್ತೀರಾ ಹೇಳಿ ಯಡಿಯೂರಪ್ಪನವ್ರೇ…

ಢಂ ಢಮಾರ್
ಮಿ| ಟ್ರಂಪ್, ಕೊರಿಯಾ ತಂಟೆಗೆ ಬಂದ್ರೆ ಹುಷಾರ್… ನಮ್ಮನ್ನು ಮುಟ್ಟಿದ್ರೆ ಒಂದೇ ಸಲ ಹತ್ತು ಕ್ಷಿಪಣಿ ಉಡಾಯ್ಸಿ ಢಂ ಢಂ ಅನ್ನಿಸಿಬಿಡ್ತೀವಿ…

ಹಲೋ, ಮಿ| ಕಿಂ ಇರಪ್ಪ, ಕಂಡಿದೀನಿ… ಇಂಡ್ಯಾದಲ್ಲಿ ಎಲೆಕ್ಷನ್ ಮುಗೀಲಿ ಇರು. ಅಲ್ಲಿ ಹೊಡೆಯೋ ಲಕ್ಷ್ಮೀ ಪಟಾಕಿ ಮುಂದೆ ನಿನ್ನ ಕ್ಷಿಪಣಿ ಎಲ್ಲ ಠುಸ್… ನಂಗೊತ್ತಿಲ್ವ…