2019ಕ್ಕೆ ಚಾಲಕರಿಗೆ ಭಾರಿ ದಂಡ!

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡ ಹೆಚ್ಚಳ ಕುರಿತು ಹೊಸ ವರ್ಷಾರಂಭದಲ್ಲೇ ಸಾರಿಗೆ ಇಲಾಖೆ ಅಧಿಸೂಚನೆ ಪ್ರಕಟಿಸಲು ಸಿದ್ಧತೆ ನಡೆಸಿದೆ. ಸಾರಿಗೆ ಆಯುಕ್ತರು ಹಾಗೂ ಪೊಲೀಸ್ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆ ಪರಿಶೀಲಿಸಿರುವ ಸಾರಿಗೆ ಇಲಾಖೆ, ನಿಯಮ ಉಲ್ಲಂಘಿಸುವವರ ಮೇಲೆ ‘ದಂಡಾಸ್ತ್ರ’ ಪ್ರಯೋಗಿಸಲು ಸಜ್ಜಾಗಿದೆ.

ವಾರದೊಳಗೆ ಸಾರಿಗೆ ಆಯುಕ್ತರು, ಸಾರಿಗೆ ಇಲಾಖೆ ಹಾಗೂ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯಲಿದ್ದು, ಅಧಿಸೂಚನೆ ಅಂತಿಮ ಸ್ಪರ್ಶ ಪಡೆಯಲಿದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ಮಾಹಿತಿ ನೀಡಿದರು.

ಪ್ರಸ್ತುತ ಇರುವಂತಹ ದಂಡದ ಮೊತ್ತ ಅತ್ಯಲ್ಪವಾಗಿದ್ದು, ನಿಯಮ ಉಲ್ಲಂಘಿಸುವವರ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿಲ್ಲ. ಹೀಗಾಗಿಯೇ ನಿಯಮಗಳನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಂಡ ಹೆಚ್ಚಳಕ್ಕೆ ಡಿಜಿಪಿ ಸಾರಿಗೆ ಇಲಾಖೆಗೆ ಜುಲೈನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದರು. ‘ಟ್ರಾಫಿಕ್ ಉಲ್ಲಂಘನೆಗೆ ದುಪ್ಪಟ್ಟು ದಂಡ’ ಶೀರ್ಷಿಕೆಯಡಿ ‘ವಿಜಯವಾಣಿ’ ಈ ಕುರಿತು ವಿಶೇಷ ವರದಿ ಪ್ರಕಟಿಸಿತ್ತು. ಜತೆಗೆ ಸಾರಿಗೆ ಆಯುಕ್ತರೂ ನವೆಂಬರ್​ನಲ್ಲಿ ದಂಡ ಹೆಚ್ಚಳ ಕುರಿತು ಸಾರಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು.

ಸಂಚಾರ ಪೊಲೀಸರು ನಿಯಮ ಉಲ್ಲಂಘನೆ ಮೇಲೆ ನಿಗಾ ಇರಿಸುತ್ತಿರುವ ಹಿನ್ನೆಲೆಯಲ್ಲಿ ಎರಡೂ ಪ್ರಸ್ತಾವನೆ ಕ್ರೋಡೀಕರಿಸಿ ಗೃಹ ಇಲಾಖೆ ಒಪ್ಪಿಗೆಗಾಗಿ ಸಾರಿಗೆ ಇಲಾಖೆ ಕಳುಹಿಸಿಕೊಟ್ಟಿತ್ತು. ಗೃಹ ಇಲಾಖೆ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಜತೆಗೆ ಮುಖ್ಯ ಕಾರ್ಯದರ್ಶಿಗಳೂ ದಂಡ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.

ಸಂಚಾರ ನಿಯಮ ಉಲ್ಲಂಘನೆ ದಂಡ ವಿಚಾರದಲ್ಲಿ ಸಾರಿಗೆ ಇಲಾಖೆ ಐದಾರು ನಿಯಮ ಉಲ್ಲಂಘನೆ ದಂಡ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಪೊಲೀಸ್ ಇಲಾಖೆ 20ಕ್ಕೂ ಅಧಿಕ ದಂಡ ಹೆಚ್ಚಿಸಬೇಕು ಎಂದಿತ್ತು. ಹೀಗಾಗಿ ಅಂತಿಮ ಸಭೆಯಲ್ಲಿ ಎಷ್ಟು ನಿಯಮಗಳಿಗೆ ದಂಡ ಎಷ್ಟೆಷ್ಟು ಹೆಚ್ಚಳ ಮಾಡಬೇಕು ಎಂಬ ನಿರ್ಧಾರವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕಠಿಣ ನಿಯಮ ಅಗತ್ಯ

ಇಯರ್​ಫೋನ್ ಹಾಕಿಕೊಂಡು ಮೊಬೈಲ್​ನಲ್ಲಿ ಮಾತನಾಡುತ್ತ ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ರೀತಿ ಮೊಬೈಲ್ ಬಳಸುವುದರಿಂದಲೇ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪಾದಚಾರಿಗಳು, ಇತರೆ ಚಾಲಕರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಚಾಲನೆ ವೇಳೆ ಮೊಬೈಲ್ ಬಳಕೆ ಕಡಿವಾಣಕ್ಕೆ ಸರ್ಕಾರ ಕಠಿಣ ನಿಯಮ ರೂಪಿಸಬೇಕು ಎನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.