ದ್ವಾದಶ ರಾಶಿಗಳ ವರ್ಷ ಭವಿಷ್ಯ

| ಆಚಾರ್ಯ ವಿಠ್ಠಲ ಭಟ್ ಕೆಕ್ಕಾರು, ಮೊಬೈಲ್: 9845682380

ಸ್ವಭಾವತಃ ಹಠವಾದಿಯಾದ ನೀವು ಈ ವರ್ಷ ಸಿಟ್ಟು -ಹಠ ಕಡಿಮೆ ಮಾಡಿಕೊಂಡರೆ ಉತ್ತಮ. ಏಕೆಂದರೆ, ಇನ್ನೊಬ್ಬರ ಮೇಲೆ ಹೆಚ್ಚು ಅವಲಂಬಿಸಬೇಕಾದ ವರ್ಷವಿದು. ಈ ವರ್ಷದ ಹೆಚ್ಚಿನ ಭಾಗ ಗುರು ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿ ಇರುವುದರಿಂದ ಆರೋಗ್ಯ ರೀತ್ಯಾ ಅಷ್ಟು ಉತ್ತಮ ಅಲ್ಲ. ಹಾಗಾಗಿ ಆಹಾರದ ವಿಷಯದಲ್ಲಿ ಕಟ್ಟುನಿಟ್ಟಾಗಿರಿ. ನಿತ್ಯ ವ್ಯಾಯಾಮ ರೂಢಿ ಮಾಡಿಕೊಳ್ಳಿ. ನಿರುದ್ಯೋಗಿಗಳಿಗೆ 2019 ಏಪ್ರಿಲ್ ಸ್ವಲ್ಪ ಪರವಾಗಿಲ್ಲ. ಸಹೋದರರ ಮಧ್ಯ ನ್ಯಾಯಾಲಯದಲ್ಲಿ ದಾವೆ ಇದ್ದಲ್ಲಿ ನಿಮಗೆ ಖರ್ಚು, ಓಡಾಟ ಹೆಚ್ಚು. ವ್ಯಕ್ತಿಗತವಾಗಿ ನಿಮ್ಮ ಜಾತಕ ಅವಲಂಬಿಸಿ ರಾಜಕೀಯ ಬೆಳವಣಿಗೆ ಹಾಗೂ ಅಧಿಕಾರ ಪ್ರಾಪ್ತಿಗೆ ಚಿಕ್ಕ ಅವಕಾಶ ಇದೆ. ಸಂಪೂರ್ಣ ವರ್ಷ ಭಾಗ್ಯಸ್ಥಾನದಲ್ಲಿ ಶನಿ ಕೂರಲಿದ್ದು, ಭಾಗ್ಯಾಧಿಪತಿ ಗುರು ಅಷ್ಟಮದಲ್ಲಿ ಮುಕ್ಕಾಲು ಭಾಗ ಇರುವುದರಿಂದಾಗಿ ಅದೃಷ್ಟ ಅಷ್ಟು ಸಲೀಸಾಗಿ ನಿಮಗೆ ಒಲಿಯುವುದಿಲ್ಲ. ಹಾಗಾಗಿ ಹೊಸ ಉದ್ಯೋಗ ಹುಡುಕಲು ಇರುವ ಕೆಲಸ ಬಿಡುವುದು, ಅಥವಾ ಉದ್ಯೋಗ ಬಿಟ್ಟು ಹೊಸ ವ್ಯಾಪಾರ ಮಾಡುವ ಆಲೋಚನೆ ಅಷ್ಟು ಉತ್ತಮವಲ್ಲ. ಅವಿವಾಹಿತರಿಗೆ ವರ್ಷಾಂತ್ಯದಲ್ಲಿ ವಿವಾಹ ಯೋಗವಿದೆ.


ಪರಿಹಾರ: ಗುರು ಸಾನ್ನಿಧ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಯಥಾಶಕ್ತಿ ಸೇವೆ ಮಾಡಿ.

2019 ನೆಮ್ಮದಿಯ ವರ್ಷ ಆಗಲಿದೆ. ಆರೋಗ್ಯ ಸಮಸ್ಯೆ ಇದ್ದವರಿಗೆ ಆರೋಗ್ಯಭಾಗ್ಯವಿದೆ. ಸಾಲದಲ್ಲಿ ಮುಳುಗಿದವರಿಗೆ ಸಾಲ ಮತ್ತು ಸಮಸ್ಯೆಯ ಕೂಪದಿಂದ ಹೊರಬರಲು ಉತ್ತಮ ವ್ಯಕ್ತಿಗಳ ನೆರವು ಸಿಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಇದೆ. ಇರುವ ಉದ್ಯೋಗ ಬಿಟ್ಟು ಹೊಸದಾಗಿ ವ್ಯಾಪಾರ ಮಾಡುವ ಉದ್ದೇಶ ಇರುವವರು ಜಾತಕ ಪರಿಶೀಲನೆ ಮಾಡಿಸಿ ಮುಂದುವರಿಯಿರಿ. ಅವಿವಾಹಿತರಿಗೆ ವರ್ಷದ ಆರಂಭದಲ್ಲೇ ವಿವಾಹ ಪ್ರಯತ್ನ ಮಾಡುವುದು ಉತ್ತಮ. ಭೂ ಸಂಬಂಧ ವ್ಯವಹಾರ ಮಾಡುವವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಸ್ನೇಹಿತರನ್ನು ಕಳೆದುಕೊಳ್ಳಬೇಡಿ. ಬಂಗಾರ ಖರೀದಿಸುವ ಅನಿವಾರ್ಯತೆಯಿಂದಾಗಿ ವರ್ಷಾಂತ್ಯದಲ್ಲಿ ನಿಮ್ಮ ಖರ್ಚುವೆಚ್ಚದ ಲೆಕ್ಕಾಚಾರ ತಲೆಕೆಳಗೆ ಆಗುವ ಸಾಧ್ಯತೆಗಳು ಇವೆ. ಚಲನಚಿತ್ರ ಕ್ಷೇತ್ರದವರಿಗೆ ಯಶಸ್ಸಿನ ದಾರಿಯಲ್ಲಿ ಕೆಲ ಕಲ್ಲು-ಮುಳ್ಳುಗಳಿವೆ ಎಚ್ಚರ.


ಪರಿಹಾರ: ನಿಮ್ಮ ಕೈಯಲ್ಲಿ ನೀಲಿ ಪುಷ್ಯರಾಗ ರತ್ನ ಧಾರಣೆ ಮಾಡಿದ್ದಲ್ಲಿ ಈ ವರ್ಷ ಅದನ್ನು ತೆಗೆದಿಡಿ.

ಕಷ್ಟಪಟ್ಟು ಅಥವಾ ಅದೃಷ್ಟದ ಬಲದಿಂದ ನೀವು ಗಳಿಸಿಕೊಂಡಿದ್ದನ್ನು ಉಳಿಸಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ವರ್ಷದ ಆರಂಭದಲ್ಲೇ ಹೊಸ ವಾಹನ ಖರೀದಿಸುವ ಆಸೆ ಇದ್ದವರು ಕೆಲ ತಿಂಗಳು ಕಾಯುವುದು ಒಳ್ಳೆಯದು. ಪ್ರೇಮಿಗಳಿಗೆ ಉತ್ತಮ ಸಮಯ. ಅವಿವಾಹಿತರಿಗೆ ಹೆಚ್ಚು ಮದುವೆಯ ಪ್ರಸ್ತಾಪ ಬರಲಿವೆ. ದೂರ ಪ್ರಯಾಣಗಳಿಂದ ಉತ್ತಮ ಲಾಭಗಳಿವೆ. ದಿವ್ಯಕ್ಷೇತ್ರ ದರ್ಶನ ಯೋಗವಿದೆ. ಸ್ತ್ರೀಯರ ಮುಖಾಂತರ ಮಾಡುವ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ತಿಂಗಳಾಂತ್ಯದಿಂದ ಭೂ ವ್ಯವಹಾರ ಮಾಡುವವರಿಗೆ ಲಾಭದ ಸಮಯ. ಅಧ್ಯಾಪಕ ವೃತ್ತಿಯಲ್ಲಿ ಇರುವವರಿಗೆ ಸಂಬಳ ಹೆಚ್ಚಳ, ಧನಲಾಭ. ಆದರೆ, ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣ ತಗ್ಗುವ ಸಾಧ್ಯತೆ. ನೇರ ನಡೆನುಡಿಯಿಂದ ವಿರೋಧಿಗಳು ಹೆಚ್ಚಬಹುದು. ಚಿಕ್ಕಪುಟ್ಟ ವ್ಯಾಪಾರ ಮಾಡುತ್ತಿರುವ ಸ್ತ್ರೀಯರಿಗೆ ಕಠಿಣ ಸವಾಲುಗಳು ಎದುರಾಗಬಹುದು. ಆದರೆ ಕೊನೆಯಲ್ಲಿ ಧನಲಾಭ ಇದೆ. ಸ್ವಲ್ಪ ಪ್ರಯತ್ನಿಸಿದರೂ ಹಳೆಯ ಕೆಲ ಸಾಲಗಳನ್ನು ತೀರಿಸಬಹುದು.


ಪರಿಹಾರ: ನಿಮ್ಮ ಕುಲಗುರುಗಳ ಮಠದಲ್ಲಿ ಗುರು ಪಾದುಕಾ ಪೂಜೆ ಮಾಡಿಸಿ ಅಥವಾ ಶ್ರೀಕ್ಷೇತ್ರ ಮಂತ್ರಾಲಯಕ್ಕೆ ಹೋಗಿ ಯಥಾಶಕ್ತಿ ಸೇವೆ ಸಲ್ಲಿಸಿ ಬನ್ನಿ.

ವಿದೇಶದಲ್ಲಿ ಅಧ್ಯಯನ ಮಾಡುವ ಕನಸುಳ್ಳವರಿಗೆ ಅತ್ಯುತ್ತಮ ವರ್ಷ. ಅದಕ್ಕೆ ಸಾಲಸೌಲಭ್ಯ ಸಲೀಸಾಗಿ ಲಭಿಸುತ್ತದೆ. ಆದರೆ, ವಿದ್ಯಾರ್ಥಿಗಳಿಗೆ ಹಿರಿಯರು ಬೇಡ ಎಂದಿದ್ದನ್ನು ಮಾಡಲೇಬೇಕೆನ್ನುವ ಹಟ ಬೇಡ. ಕೆಲವರಿಗೆ ವರ್ಷಾಂತ್ಯದಲ್ಲಿ ಅನಾರೋಗ್ಯ ಕಾಡಬಹುದು. ವ್ಯವಹಾರಗಳ ವಿಚಾರದಲ್ಲಿ ಸಿಟ್ಟು-ಸೆಡವು ಬೇಡ. ಪಿತ್ರಾರ್ಜಿತ ಆಸ್ತಿಗಾಗಿ ಪ್ರಯತ್ನಿಸುವವರಿಗೆ ಯಶಸ್ಸಿದೆ. ಜಮೀನು ಅಥವಾ ಕಟ್ಟಿದ ಮನೆ ಕೊಳ್ಳುವುದಿದ್ದರೆ ಸ್ಥಳ ಪರಿಶೀಲನೆ ಅವಶ್ಯ ಮಾಡಿಸಿ. ಕಬ್ಬಿಣ ಹಾಗು ಸಿಮೆಂಟ್ ವ್ಯಾಪಾರಿಗಳು ಮಾತ್ರ ಈ ವರ್ಷ ಹೆಚ್ಚಿನ ಜಾಗ್ರತೆಯಿಂದ ಇರಬೇಕು. ಬೇರೆಯವರ ಸಾಲಗಳಿಗೆ ಜಾಮೀನು ಹಾಕಬೇಡಿ.


ಪರಿಹಾರ: ಚಂಡಿಕಾ ಪರಮೇಶ್ವರಿ ಆರಾಧಿಸಿ. ಅವಕಾಶ ಇದ್ದವರು ಪ್ರತಿ ತಿಂಗಳೂ ಒಂದು ಶುಕ್ರವಾರದಂದು ಸಂಪುಟೀ ವಿಧಾನದಲ್ಲಿ ಚಂಡಿ ಪಾರಾಯಣ ಮಾಡಿಸಿ.

ಸರ್ಕಾರದಿಂದ ಕೆಲಸಗಳು ಆಗಬೇಕಿದ್ದಲ್ಲಿ ಈ ವರ್ಷ ಪ್ರಯತ್ನ ಮಾಡದೇ ಇರುವುದು ಉತ್ತಮ. ಸ್ತ್ರೀಯರಿಗೆ ತವರುಮನೆಯಿಂದ ಆಸ್ತಿ ಬರುವುದಿದ್ದಲ್ಲಿ ಸಿಗುವ ಸಾಧ್ಯತೆಗಳಿವೆ. ಹಿತಶತ್ರುಗಳ ಕಾಟ ಸ್ವಲ್ಪ ಹೆಚ್ಚಬಹುದು. ಆದರೆ ಅವರ ಕುಮ್ಮಕ್ಕಿನಿಂದಲೂ ಒಳಿತೇ ಆಗಲಿದೆ. ಈ ವರ್ಷ ಎಲ್ಲರ ಜತೆ ಇರುವಾಗಲೂ ಒಂಟಿತನ ಬಹಳ ಕಾಡುತ್ತದೆ. ಸಾಹಸ ಪ್ರವೃತ್ತಿಯುಳ್ಳವರು ಎಚ್ಚರಿಕೆಯಿಂದಿರಿ. ಈ ವರ್ಷ ಎಲ್ಲ ವಿಧದ ವ್ಯಾಪಾರಿಗಳಿಗೂ ಸ್ಪರ್ಧೆ ಹೆಚ್ಚಾಗಿ ವ್ಯಾಪಾರದಲ್ಲಿ ನಷ್ಟ ಕಾಣಿಸುತ್ತದೆ. ಆದರೆ ಸೌಂದರ್ಯವರ್ಧಕ ವ್ಯಾಪಾರಿಗಳಿಗೆ ಸ್ವಲ್ಪ ಚೇತರಿಕೆ ಉಂಟು. ವಿದ್ಯಾರ್ಥಿಗಳಿಗೆ ಈ ವರ್ಷ ವಿದ್ಯಾಭ್ಯಾಸದತ್ತ ಹೆಚ್ಚು ಗಮನ ಹೋಗುವುದಿಲ್ಲ ಎಂದೇ ಹೇಳಬಹುದು.


ಪರಿಹಾರ: ಪ್ರತಿ ಶನಿವಾರ ಶನಿ ದೇಗುಲಕ್ಕೆ ಹೋಗಿ ಕನಿಷ್ಠ 21 ಅಥವಾ 108 ಪ್ರದಕ್ಷಿಣೆ ಮಾಡಿ, ಶ್ರೀದೇವರಿಗೆ ಪರಿಶುದ್ಧವಾದ ಎಳ್ಳೆಣ್ಣೆ ಸಮರ್ಪಿಸಿ.

ನೀವು ಬಹಳ ಬದಲಾವಣೆಗಳನ್ನು ಕಾಣುವ ವರ್ಷ. ನೀವು ಪ್ರಮುಖವಲ್ಲ ಅಂದುಕೊಂಡಿದ್ದ ಕೆಲ ವ್ಯವಹಾರಗಳಲ್ಲಿ ಹೊಸದಾಗಿ ಆಗುವ ಬದಲಾವಣೆಗಳು ಭವಿಷ್ಯದ ಕುರಿತು ಆಲೋಚನೆಗಳನ್ನು ಹುಟ್ಟಿಸಬಹುದು. ಸ್ತ್ರೀಯರಿಗೆ ಕೆಲ ಮಾನಸಿಕ ಒತ್ತಡ ಹಾಗೂ ಇತರ ಕಾರಣಗಳಿಂದ ಆರೋಗ್ಯ ಏರುಪೇರಾಗಬಹುದು. ಮಕ್ಕಳ ವಿಚಾರದಲ್ಲಿ ಜವಾಬ್ದಾರಿಯ ಅವಶ್ಯಕತೆ ಕಾಣುತ್ತಿದೆ. ಎಂಥ ಸನ್ನಿವೇಶದಲ್ಲೂ ನ್ಯಾಯಾಲಯದ ಮುಂದೆ ಹೋಗುವ ಪರಿಸ್ಥಿತಿ ತಂದುಕೊಳ್ಳಬೇಡಿ. ವ್ಯಾಪಾರ ಮಾಡುವವರು ಸಾಲ ಕೊಡದೆ ವ್ಯಾಪಾರ ಆಗುವುದಿಲ್ಲ, ಹಾಗೆಂದು ಕೊಟ್ಟರೆ ಮರುಪಾವತಿ ಆಗದೇ ಪರಿಸ್ಥಿತಿ ಚಿಂತಾಜನಕ ಆಗುವ ಸಾಧ್ಯತೆ ಇದೆ. ವಾಹನ ಖರೀದಿಗೆ ವರ್ಷಾಂತ್ಯದ ತನಕ ಕಾಯುವುದು ಉತ್ತಮ. ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗ ಯೋಗವಿದೆ. ಕೇಳಿದ್ದು ಸಿಗಲಿಲ್ಲ ಎಂಬ ಕಾರಣಕ್ಕೆ ತಂದೆ ತಾಯಿಯನ್ನು ದೂರುವ ಮೊದಲು ಅವರ ಸ್ಥಾನದಲ್ಲಿ ನಿಂತು ಯೋಚಿಸಿ.


ಪರಿಹಾರ: ನಿಮ್ಮ ಜಾತಕ ಪರಿಶೀಲನೆ ಮಾಡಿಸಿ ಹಾಗೂ ನಿಮ್ಮ ಈ ವರ್ಷದ ದಶಾಕಾರಕ ಭುಕ್ತಿಕಾರಕಗ್ರಹಗಳಿಗೆ ಶಾಂತಿಹವನ ಮಾಡಿಸಿ.

ಪ್ರಮುಖವಾದ ಒಬ್ಬರ ಅನುಪಸ್ಥಿತಿ ಈ ವರ್ಷಪೂರ್ತಿ ನಿಮ್ಮನ್ನು ಕಾಡಲಿದೆ. ವ್ಯಾಪಾರಸ್ಥರಿಗೆ ಕೆಲ ಅನಿರೀಕ್ಷಿತ ಸಂದಿಗ್ಧ ಪರಿಸ್ಥಿತಿಗಳು ಎದುರಾಗಬಹುದು. ಉದ್ಯೋಗಸ್ಥರಿಗೂ ದ್ವಂದ್ವ ಮನಸ್ಸಿನಿಂದ ಪೇಚಾಟವಾಗಬಹುದು. ಹಣದ ಲೇವಾದೇವಿಯಲ್ಲಿ ನೀವು ಬಹಳ ಬುದ್ಧಿವಂತರು. ಆದರೂ ಎಚ್ಚರಿಕೆಯಿಂದಿರಿ. ದೂರದಲ್ಲಿರುವ ಮನೆಯ ಹಿರಿಯರಿಗೆ ನೆರವಾಗಲು ದಾರಿ ಸಿಗುತ್ತದೆ. ನಿಮ್ಮ ಸ್ನೇಹ ಒಕ್ಕೂಟದಲ್ಲಿ ಬಂಡಾಯದ ಸೂಚನೆಗಳಿವೆ. ನಿಮ್ಮ ಯಶಸ್ಸು ಹಾಗೂ ನೀವು ಇತರರಿಗೆ ಕೊಡುವ ಆದೇಶ ಬಹಳ ಜನರ ಕಣ್ಣು ಕುಕ್ಕುತ್ತದೆ. ಈ ವರ್ಷ ನಿಮಗೆ ಸಂಗೀತಾಸಕ್ತಿ ಹೆಚ್ಚುತ್ತದೆ. ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡಲು ಕೊಟ್ಟು ನಿಮ್ಮ ತಾಳ್ಮೆ ಪರೀಕ್ಷಿಸುವ ವಾತಾವರಣ ಕೆಲಸಸ್ಥಳದಲ್ಲಿ ಆಗುತ್ತದೆ. ಸಂತಾನ ಇಲ್ಲದವರು ಜಾತಕದ ಪ್ರಕಾರ ದೋಷ ಪರಿಹಾರ ಮಾಡಿಕೊಂಡು ಪ್ರಯತ್ನಿಸುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಉತ್ಸಾಹ ಕಾಣುತ್ತದೆ.


ಪರಿಹಾರ: ಈ ವರ್ಷ ಪ್ರತಿ ತಿಂಗಳೂ ತಿಂಗಳಿಗೆ ಒಮ್ಮೆ ಶುಕ್ರವಾರದಂದು ಸಂಕಲೀಕರಣ ವಿಧಾನದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿಸಿ, ಸಾಧ್ಯ ಆದಲ್ಲಿ ಒಮ್ಮೆ ಹವನ ಮಾಡಿಸಿ.

ಈ ವರ್ಷ ಬದಲಾವಣೆಯ ಪರ್ವವನ್ನು ನೀವು ಬಹಳ ಬಯಸುತ್ತ ಇದ್ದೀರಿ. ಆದರೆ ಅದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ ಅನಿಸುತ್ತಿದೆ. ಪ್ರತಿಕೂಲ ಪರಿಸ್ಥಿತಿಗಳನ್ನೂ ಧೈರ್ಯವಾಗಿ ಎದುರಿಸಿ ಗೆದ್ದುಬರಲು ನಿಮಗೆ ತಾಳ್ಮೆ ಸಂಯಮ ಹಾಗೂ ದೈವಾನುಗ್ರಹ ಬೇಕೇಬೇಕು. ವಸ್ತ್ರ ವ್ಯಾಪಾರಿಗಳು, ಚಲನಚಿತ್ರ ನಟರು, ಹಾಡುಗಾರರು ಸ್ವಲ್ಪ ಉತ್ತಮ ಅವಕಾಶ, ಪ್ರಖ್ಯಾತಿ, ಧನ ಲಾಭ ಇತ್ಯಾದಿ ಅಪೇಕ್ಷಿತ ಎಲ್ಲವನ್ನೂ ಪಡೆಯಬಹುದು. ನಿಮಗೆ ವರ್ಷದ ಕೊನೇಭಾಗದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಅನೂರಾಧ ನಕ್ಷತ್ರದ ಅವಿವಾಹಿತ ಮಹಿಳೆಯರಿಗೆ ವಿವಾಹಯೋಗ ಇದೆ. ವಿದ್ಯಾರ್ಥಿಗಳು ಸ್ವಲ್ಪ ವಿಚಲಿತ ಆದರೂ ಓದು ಮರೆಯುತ್ತದೆ. ಎಚ್ಚರಿಕೆ ವಹಿಸಿ.


ಪರಿಹಾರ: ಪ್ರತಿ ಸೋಮವಾರ ಶಿವ ದೇಗುಲದಲ್ಲಿ ಕ್ಷೀರಾಭಿಷೇಕ ಮಾಡಿಸಿ.

ಈ ವರ್ಷ ಸಮಯಸಾಧಕರ ನಡುವೆ ನಿಮ್ಮ ಕಾರ್ಯಸಾಧನೆಗೆ ಸಮಯ ಸಿಗುವ ಲಕ್ಷಣ ಬಹಳ ವಿರಳ ಅನಿಸುತ್ತದೆ. ಮೌನ ನಿಮಗೆ ಒಳ್ಳೆಯ ಹೆಸರು ತಂದುಕೊಡುತ್ತದೆ. ದೂರ ಪ್ರಯಾಣಗಳಿಗೆ ಬಹಳ ಖರ್ಚು ಮಾಡುತ್ತೀರಿ. ವಿದೇಶ ಪ್ರಯಾಣ ಸುಲಭವಾಗಿ ಸಿಗೋದಿಲ್ಲ. ನ್ಯಾಯಾಲಯದ ವಿಚಾರಗಳಲ್ಲಿ ರಾಜಿ ಪ್ರಯತ್ನಿಸುವುದಾದರೂ ಹೆಚ್ಚು ಓಡಾಡಬೇಕಾಗುತ್ತದೆ. ಗರ್ಭಿಣಿಯರು ಸ್ವಲ್ಪ ಜಾಸ್ತಿ ಎಚ್ಚರಿಕೆಯಿಂದ ಓಡಾಡಬೇಕು. ನಿರುದ್ಯೋಗಿ ಮಹಿಳೆ ಈ ವರ್ಷದ ಮಧ್ಯದೊಳಗೆ ಕೆಲಸ ಹುಡುಕಿಕೊಂಡರೆ ಒಳಿತು. ವಿದ್ಯಾರ್ಥಿಗಳಿಗೆ ಆಲಸ್ಯ ಬೇಡ. ಅನ್ಯವಿಚಾರಗಳ ಬಗ್ಗೆ ಚಿಂತಿಸದೆ, ವ್ಯಾಸಂಗದ ಕಡೆ ಗಮನ ನೀಡಿ.


ಪರಿಹಾರ: ಎಲ್ಲಿ ಸಾಧ್ಯವೋ ಅಲ್ಲಿ ತಪ್ಪದೆ ಈ ವರ್ಷ ಅನ್ನದಾನ ಹೆಚ್ಚು ಮಾಡಿ. ಸಾಧ್ಯವಾದಲ್ಲಿ ಸರ್ಪಶಾಂತಿ ಹವನ ಸಹಿತ ನಾಗಾರಾಧನೆ ಮಾಡಿಸಿ.

ವೃಥಾ ಓಡಾಟ ಮಾಡುತ್ತಿದ್ದೀರಿ, ಸಾಲದ್ದಕ್ಕೆ ದುಡ್ಡನ್ನು ನೀರಿನಂತೆ ಖರ್ಚು ಮಾಡುತ್ತಿದ್ದೀರಿ. ಅನಿವಾರ್ಯ ಎನ್ನುತ್ತ ಹೆಚ್ಚು ಸುಳ್ಳು ಹೇಳುವುದು ಬೇಡ. ಕೆಲವರು ದುಶ್ಚಟಕ್ಕೂ ಬಲಿ ಆಗಬಹುದು ಎಚ್ಚರ. ಹೊಸದಾಗಿ ವ್ಯಾಪಾರ ಆರಂಭಿಸುವುದಕ್ಕೆ ಈ ವರ್ಷ ಉತ್ತಮವೇ ಆದರೂ ಯಾವ ವ್ಯಾಪಾರ ಆಗಿಬರುತ್ತದೆ ಎಂದು ಜಾತಕ ವಿಮರ್ಶೆ ಮಾಡಿಸಿ. ವಿದೇಶ ಪ್ರಯಾಣಕ್ಕೆ ಸಹ ಈ ವರ್ಷ ಸುಸಮಯ. ವ್ಯಾಪಾರಿಗಳಿಗೆ ಅತ್ಯಧಿಕ ಧನಲಾಭ ನೋಡುವ ಸಮಯ. ಉನ್ನತ ಶಿಕ್ಷಣದ ಉದ್ದೇಶ ಇರುವ ವಿದ್ಯಾರ್ಥಿಗಳು ನಿಮ್ಮ ಗುರುಗಳ ದೃಷ್ಟಿಯಲ್ಲಿ ಉತ್ತಮ ವಿದ್ಯಾರ್ಥಿ ಎಂಬ ಬಿರುದು ಪಡೆಯಲೇಬೇಕು.


ಪರಿಹಾರ: ಬೆಳ್ಳಿಯಲ್ಲಿ ಸುತ್ತಿದ ಅಭಿಮಂತ್ರಿತ ವ್ಯಾಘ್ರನೇತ್ರ ರತ್ನಮಾಲೆ ಧರಿಸಿ ಹಾಗೂ ಜಾತಕ ಪರಿಶೀಲನೆ ಮಾಡಿಸಿ ದೂರ್ವಾ ಮೃತ್ಯುಂಜಯ ಶಾಂತಿಹವನ ಮಾಡಿಸಿ.

ದೇವರ ಕೆಲಸಗಳು, ಅಂದರೆ ಧಾರ್ವಿುಕ ಕೆಲಸ ಕಾರ್ಯಗಳು ನಿಮ್ಮಿಂದ ಹೆಚ್ಚು ನಡೆಯುವ ವರ್ಷ ಇದು ಎಂದು ಹೇಳಬಹುದು. ಮೇ ತಿಂಗಳ ಒಳಗೆ ಹೆಚ್ಚು ಪ್ರಯತ್ನ ಮಾಡಿದರೆ ಭೂ ವ್ಯವಹಾರಗಳಲ್ಲಿ ಲಾಭವಿದೆ. ನಿಮ್ಮ ವ್ಯವಹಾರಗಳಿಗೆ ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ಕೆಲವರಿಗೆ ಮಾತ್ರ ಬಂಗಾರ ಖರೀದಿಯ ಯೋಗಫಲವಿದೆ; ಆದರೆ ಮೋಸ ಹೋಗುವ ಸಾಧ್ಯತೆಗಳಿವೆ ಎಚ್ಚರ. ವಿದ್ಯಾರ್ಥಿಗಳು ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಮಾಡುವ ತಂತ್ರಗಳು ತಾತ್ಕಾಲಿಕವಾಗಿ ಉಪಯೋಗಕ್ಕೆ ಬಂದರೂ ಪುನರಾವರ್ತನೆ ಆದಲ್ಲಿ ನಷ್ಟ. ವಿದೇಶದಲ್ಲಿ ಅಧ್ಯಯನಕ್ಕೆ ಅವಕಾಶಗಳು ನಿರಾಯಾಸವಾಗಿ ಲಭಿಸುವ ಸಾಧ್ಯತೆಗಳಿವೆ. ನಿಮ್ಮ ಮೇಲೆ ಆಪಾದನೆ ಬಂದರೆ ಶಾಂತವಾಗಿ ಅದನ್ನು ಎದುರಿಸಿ ಪಾರಾಗಿ.


ಪರಿಹಾರ: ಅನಾಥರಿಗೆ ಹತ್ತಿಯ ವಸ್ತ್ರ ದಾನ ಮಾಡಿ. ನಿಮ್ಮ ಜಾತಕದಲ್ಲಿ ಇರುವ ಗ್ರಹಸ್ಥಿತಿಗೆ ಅನುಗುಣವಾಗಿ ಅಷ್ಟು ಸಂಖ್ಯೆಯ ನಾರಿಕೇಳ ಅಷ್ಟದ್ರವ್ಯ ಮಹಾಗಣಪತಿ ಹವನ ಮಾಡಿಸಿ.

ಈ ವರ್ಷ ನಿಮ್ಮ ತಾಯಿಯ ಆರೋಗ್ಯದ ವಿಚಾರದಲ್ಲಿ ಎಚ್ಚರವಹಿಸಿ. ವ್ಯಾಪಾರಿಗಳಿಗೆ ವ್ಯಾಪಾರದ ಲೆಕ್ಕದಲ್ಲಿ ಹೆಚ್ಚಿನ ವ್ಯತ್ಯಾಸಗಳಾಗಿ ಚಿಂತಿಸಬೇಕಾಗಿ ಬರಬಹುದು. ತೈಲ, ಕಿರಾಣಿ ಅಂಗಡಿ ಹಾಗೂ ಭೂ ವ್ಯಾಪಾರಿಗಳಿಗೆ ಸ್ವಲ್ಪ ಮಟ್ಟಿಗಿನ ಲಾಭ ಕಂಡುಬರುತ್ತಿದೆ. ವಿನಾಕಾರಣ ಸಿಟ್ಟಿನಿಂದ ಉದ್ಯೋಗಿಗಳಿಗೆ ಉದ್ಯೋಗದಲ್ಲಿಯೇ ತೊಂದರೆ ಆಗಬಹುದು. ಬಾಳಸಂಗಾತಿಯೊಡನೆ ಈ ವರ್ಷ ತುಸು ಹೆಚ್ಚು ಆತ್ಮೀಯವಾಗಿ ಇರುತ್ತೀರಿ. ಅವಿವಾಹಿತರಿಗೆ ವಿವಾಹ ನಿಶ್ಚಯ ಆಗುವ ಸಾಧ್ಯತೆ ಇದೆ. ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡಿದ್ದಲ್ಲಿ ಕಾಗದಪತ್ರದ ವ್ಯತ್ಯಾಸ ಗೊಂದಲ ಸೃಷ್ಟಿಸುತ್ತವೆ. ಸ್ನೇಹಿತರಿಗೆ ಸಾಲ ಕೊಡಿಸಿದರೆ, ಅದರ ಕಂತನ್ನೂ ನೀವೇ ಕಟ್ಟಬೇಕಾಗುತ್ತದೆ ಜಾಗ್ರತೆ. ಬಡ್ಡಿಗೆ ದುಡ್ಡಿನ ವ್ಯವಹಾರ ನಡೆಸುವ ಸ್ತ್ರೀಯರಿಗೆ ಕಷ್ಟ ಹಾಗೂ ಧನಹಾನಿ ಆಗುವ ಸಂಭವವಿದೆ ಎಂದರ್ಥ. ಕುಂಭ ರಾಶಿಯವರೊಂದಿಗಿನ ಸ್ನೇಹ ಲಾಭ ಕೊಡಿಸಲಿದೆ. ವಿದ್ಯಾರ್ಥಿಗಳನ್ನು ಪರೀಕ್ಷಿಸುವ ಕಾಲ ಇದು. ಆದರೆ ಪೂರ್ಣ ವರ್ಷ ನೋಡಿದಾಗ ಸ್ವಲ್ಪ ಉತ್ತಮ ಎನ್ನಬಹುದು.


ಪರಿಹಾರ: ಪ್ರದಕ್ಷಿಣೆ ನಮಸ್ಕಾರ ಅಭಿಷೇಕ ಹೋಮ ಇತ್ಯಾದಿ 48 ದಿನಗಳ ಕಾಲ ವ್ರತವನ್ನು ಆಚರಿಸಿ. ಆಗ ಮಾತ್ರ ಅದು ನಿಮಗೆ ಹೆಚ್ಚಿನ ಯಶಸ್ಸು ನೀಡುತ್ತದೆ.