2019ರ ಸುಖದುಃಖಗಳ ಸರಪಳಿ ಏನು ಎತ್ತ…

| ಮಹಾಬಲಮೂರ್ತಿ ಕೊಡ್ಲೆಕೆರೆ, ಮೊಬೈಲ್: 7760063034

‘ಇದು ಬಾಳು ನೋಡು ಇದ ಬಲ್ಲೆನೆಂದರೂ ತಿಳಿದಾತ ಧೀರನಿಲ್ಲ. ಹಲವುತನದ ಮೈಮರೆಸುವಾಟವಿದು ನಿಜವು ತೋರದಲ್ಲ’ ಎಂದು ಕವಿ ಗೋಪಾಲಕೃಷ್ಣ ಅಡಿಗರು ತಮ್ಮ ಕವಿತೆಯಲ್ಲಿ ಗೂಢವಲ್ಲದ, ತೆರೆದ ಪುಸ್ತಕದಂತಿರುವ ಬಾಳಿನ ಕುರಿತು ಅಭಿಪ್ರಾಯಪಡುತ್ತಲೇ, ಇದು ನಿಗೂಢ ಎಂದು ಬದುಕಿನ ವಿರಾಟಶಕ್ತಿಗೆ ಬೆರಗು ಸೂಚಿಸುತ್ತಾರೆ. ಇನ್ನೊಂದೆಡೆ, ‘ವೇಳೆ’ ಮತ್ತು ‘ನೆಲೆ’ (Time and Space) ಬಗ್ಗೆ ಯೋಚಿಸುತ್ತ ಹೋದರೆ, ವಿಶ್ವದ ವಿಚಾರ ಇನ್ನಷ್ಟು ಕಗ್ಗಂಟು. ಯಾವಾಗ ಸಮಯದ ಪ್ರಾರಂಭವಾಯಿತು? ವಿಶ್ವ ಎಂಬ ಈ ವಿರಾಟಪುರುಷನ ನೆಲೆಗೆ ಎಲ್ಲಿ ಜಾಗ ದೊರೆಯಲ್ಪಟ್ಟಿದೆ…..? ಎಂಬುದನ್ನು ಯೋಚಿಸುತ್ತ ಹೋದರೆ, ಇದು ಬಿಡಿಸಲಾಗದ ಒಗಟು. ನಮ್ಮ ಆರ್ಷೆಯ ಶಾಂತಿಮಂತ್ರದ ಸೊಗಡು ಕಿಕ್ಕಿರಿದಿರುವ ‘ಪುರುಷಸೂಕ್ತ’, ‘ಸಭೂಮಿಂ ವಿಶ್ವತೋ ವೃತ್ವಾ ಅತ್ಯತ್ತಿಷ್ಠ ದಶಾಂಗುಲಂ’ ಎಂದು ಕಾಲಪುರುಷನ ಒಟ್ಟಾರೆಯಾದ ಬೀಡನ್ನು ವರ್ಣಿಸುತ್ತದೆ. ಇದು ಇಷ್ಟು, ಹೀಗೆ ಎಂದು ತಿಳಿಯುವ ಹೊತ್ತಿಗೇ ಇದು ಇನ್ನೂ ಹತ್ತು ಅಂಗುಲದಷ್ಟು ವಿಸ್ತರಿಸುತ್ತದೆ ಎಂದು ವ್ಯಾಖ್ಯಾನಿಸುತ್ತದೆ. ಭೂಮಿಯ, ವಿಶ್ವದ ಆಕೃತಿಯ ಬಗೆಗೆ ಖಚಿತತೆಯನ್ನು ಹೇಳಿ ತಿಳಿಸಲೆತ್ನಿಸುತ್ತದೆ. ಇದೇನೇ ಇರಲಿ, 2019ರ ವರ್ಷ ಸಂಭ್ರಮದಿಂದಲೇ ಬರುತ್ತಲಿದೆ. ಹಾಗಾದರೆ, ಒದಗಿಬಂದಿರುವ 2019ರ ಭವಿಷ್ಯ ಜಾಗತಿಕವಾಗಿ ಶುಭವೋ ಅಶುಭವೋ? ಶುಭವಾದರೆ ಏನು, ಎಷ್ಟು? ಅಶುಭವಾದರೆ ಹೇಗೆ, ಯಾಕೆ ಎಂಬುದರ ಬಗ್ಗೆ ಇಲ್ಲೊಂದು ವಿವರ

ಜಾಗತಿಕ ಪಲ್ಲಟ
ಬೃಹತ್ತಾದ ಸ್ವರೂಪದ ಭೂಕಂಪನವೊಂದು ಸಂಭವಿಸಲಿದೆ. ಮನುಷ್ಯನ ಗೋಳಾಟಗಳು ಒಂದಲ್ಲ, ಎರಡಲ್ಲ. ಶ್ರೀ ವಿಳಂಬ ನಾಮ ಸಂವತ್ಸರದಿಂದ ಶ್ರೀ ವಿಕಾರಿ ನಾಮ ಸಂವತ್ಸರಗಳ ಆಜುಬಾಜುಗಳನ್ನು ತೆಕ್ಕೆಗೆ ಪಡೆದಿರುವ 2019, ರಾಹುಕೇತುಗಳ ಪಲ್ಲಟನಗಳನ್ನು ಮಾರ್ಚ್ ಅಂತ್ಯದ ವೇಳೆಗೆ, ಗುರುಗ್ರಹದ ಪಲ್ಲಟನವನ್ನು 2019 ನವೆಂಬರ್ 4ರ ವೇಳೆಗೆ ನೋಡಲಿದೆ. ಶ್ರೀ ವಿಳಂಬಿ ನಾಮ ಸಂವತ್ಸರವೇ ಗೋಳಿನ ಹಿಮಾಲಯವಾಗಿರುವಾಗ, ಶ್ರೀ ವಿಕಾರಿ ನಾಮ ಸಂವತ್ಸರ (2019ರ ಏಪ್ರಿಲ್ ನಂತರ ಶುರು) ಪ್ರಪಂಚದಾದ್ಯಂತ ಹಲವು ಪ್ರಾಕೃತಿಕ ವಿಪ್ಲವಗಳನ್ನು ವಿಸ್ತರಿಸುತ್ತದೆ. ಸ್ವಯಂನಿರ್ವಿುತ ಗೋಳುಗಳಿಂದಲೂ, ಪ್ರಾಕೃತಿಕ ಗೋಳುಗಳಿಂದಲೂ ಪ್ರಪಂಚದ ಜನರು ಭೂಕಂಪನಗಳನ್ನು, ಹೆಚ್ಚಿನ ಅನಾವೃಷ್ಟಿಯನ್ನು ಎದುರಿಸಲಿದ್ದಾರೆ. ಕಂಡರಿಯದ ಭಯೋತ್ಪಾದಕ ಘಟನೆಗಳಿಗೆ ಅಮೆರಿಕ ಸಾಕ್ಷಿಯಾಗಲಿದೆ. ಭೂಕಂಪನದ ತೀವ್ರತೆಗೆ ಏಷ್ಯಾ ಖಂಡವೇ ವೇದಿಕೆಯಾಗಿರುವುದು ದೊಡ್ಡ ದುರಂತವೇ. ಇರಾಕ್ ಮತ್ತು ಇರಾನ್​ಗಳನ್ನು ವಿವಿಧ ಕಾರಣಗಳಿಗಾಗಿ ಮುಖಾಮುಖಿಯಾಗಲು ಬಯಸುವ ಡೊನಾಲ್ಡ್ ಟ್ರಂಪ್ ಮತ್ತೊಂದು ಯುದ್ಧಕ್ಕೆ ಏಷ್ಯಾವನ್ನೇ ವೇದಿಕೆ ಮಾಡಿಕೊಳ್ಳುವ ಅಪಾಯ ಇದೆ. ಸೌದಿ ಅರೇಬಿಯಾ ರಾಜಕೀಯ ಅತಂತ್ರಗಳಿಗೆ ಬಲಿಯಾಗಿ ಪ್ರಪಂಚಕ್ಕೆ ಹೊಸ ತಲೆನೋವು ತರಲಿದೆ. ಸೂರ್ಯನ ನಕ್ಷತ್ರವಾದ ಉತ್ತರಾಷಾಢ ಮೊದಲನೇ ಪಾದಕ್ಕೆ ಕಾಲೂರುವ ಕೇತು, ಧನುರ್ ರಾಶಿಯಲ್ಲಿ ವ್ಯಗ್ರನಾಗುತ್ತಾನೆ. ಪುನರ್ವಸು ನಕ್ಷತ್ರದ ಮೂರನೇ ಪಾದದ ಮೂಲಕ ಮಿಥುನ ರಾಶಿಗೆ ಕಾಲಿಡುವ ರಾಹು ಮಾತ್ರ ಉತ್ತರ ಕೊರಿಯಾದ ಮುಖ್ಯಸ್ಥ ಕಿಮ್ ಜಾಂಗ್ ಉನ್​ರನ್ನು ಮೆದುವಾಗಿಸುತ್ತಾನೆ. ಟ್ರಂಪ್ ಪಾಲಿಗೆ ರಾಹು ವ್ಯಗ್ರನಾಗಿರುತ್ತಾನೆ. ರಾಜಕೀಯ ಜೀವನದ ಹಲವಾರು ಮುಖಭಂಗಗಳನ್ನು, ಪೇಚಾಟಗಳನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮೂಲಕ ಟ್ರಂಪ್ ಎದುರಿಸಲಿದ್ದಾರೆ.

ಭಾರತಕ್ಕೆ ಪ್ರಾಕೃತಿಕ ಸಂಕಷ್ಟ
ಭೂಕಂಪನಕ್ಕೆ ದೊಡ್ಡ ವೇದಿಕೆಯೊಂದನ್ನು ನಿರ್ವಿುಸಿಕೊಡುವ ಪಥ್ಯವಲ್ಲದ ವಿಚಾರ ಪ್ರಾಕೃತಿಕವಾಗಿ ಭಾರತವನ್ನು ಬಾಧಿಸಬಹುದಾಗಿದೆ. ಆರ್ಥಿಕ ವಿಚಾರಗಳು ಸ್ವಲ್ಪಮಟ್ಟಿಗೆ ಆಶಾದಾಯಕವಾಗುವ ಹಂತ ತೋರಿಬರುವಾಗಲೇ ಅಂತಾರಾಷ್ಟ್ರೀಯವಾದ ಸಮಸ್ಯೆಯೊಂದು ಭಾರತವನ್ನು ಆರ್ಥಿಕತೆಯ ದೃಷ್ಟಿಯಿಂದ ತಲ್ಲಣಗಳಿಗೆ ದೂಡಬಹುದು. ಮಳೆಯ ವಿಚಾರ ಭಾರತವನ್ನು ಕಾಡಲಿದೆ (ಬಹುತೇಕವಾಗಿ ಈಶಾನ್ಯ ಭಾರತದ ಭಾಗವನ್ನು). ದಕ್ಷಿಣದ ರಾಜ್ಯಗಳು ಅನಾವೃಷ್ಟಿ ಎದುರಿಸಬೇಕಾದ ಸಂಭವವೇ ಜಾಸ್ತಿ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುವ ಭಾರತದ ಲೋಕಸಭಾ ಚುನಾವಣೆ, ಫಲಿತಾಂಶದ ಬಗ್ಗೆ ಜನರನ್ನು ತುದಿಗಾಲ ಮೇಲೆ ನಿಲ್ಲಿಸುತ್ತದೆ. ಪ್ರಧಾನವಾಗಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ಕಾವಾಗಿ ಲೋಕಸಭಾ ಚುನಾವಣೆ ಹೊರಹೊಮ್ಮುವುದು ಹೌದಾದರೂ, ರಾಜಕೀಯ ಅನನುಭವಿಯಾಗಿರುವ ನೆರೆದೇಶದ (ಪಾಕಿಸ್ತಾನದ) ಪ್ರಧಾನಿ ಇಮ್ರಾನ್ ಖಾನ್ ತಮ್ಮಿಂದ ನಿಯಂತ್ರಿಸಲಾಗದ ತಮ್ಮ ದೇಶದ ಸಮಸ್ಯೆಗಳ ನಡುವೆಯೂ ಭಾರತವನ್ನು ಕೆಣಕುವುದಕ್ಕೆ ಮುಂದಾಗಲು ಇದೇ ಅವಧಿಯನ್ನು ಉಪಯೋಗಿಸಿಕೊಳ್ಳುವ ಸಾಧ್ಯತೆಯಿದೆ. ರಷ್ಯಾದ ಮುಖ್ಯಸ್ಥ ವ್ಲಾದಿಮಿರ್ ಪುಟಿನ್ ಭಾರತದ ಪರವಾಗಿ ನಿಲ್ಲುವುದು ಚೀನಾದ ಹಸ್ತಕ್ಷೇಪವನ್ನು ನಿಯಂತ್ರಿಸುತ್ತದೆ. ಪ್ರಧಾನವಾಗಿ ಗುರುಗ್ರಹವು, ಭಾರತವು ನಡೆಸಲೇಬೇಕಾಗಿ ಬರುವ ಯುದ್ಧವೊಂದನ್ನು ತಡೆಯುತ್ತದೆ. ಹಿರಿಯ ನಾಯಕರುಗಳ ಸಾವುಗಳನ್ನು (ಪ್ರಧಾನವಾಗಿ ಮೂರು) ವರ್ಷಾಂತ್ಯದ ಒಳಗೆ ದೇಶ ಕಾಣಬೇಕಾಗಿ ಬರುತ್ತದೆ. ಭಾರತದ ಮತದಾರರ ಒಲವುಗಳು ಮೋದಿ, ರಾಹುಲ್, ನಿತೀಶ್ ಕುಮಾರ್, ಮುಲಾಯಂ ಸಿಂಗ್ ಯಾದವ್, ಮಾಯಾವತಿ, ಚಂದ್ರಬಾಬು ನಾಯ್ಡು, ಜಗನ್​ವೋಹನ ರೆಡ್ಡಿ, ಚಂದ್ರಶೇಖರ ರಾವ್, ದೇವೇಗೌಡ, ರಜನೀಕಾಂತ್, ಸ್ಟಾಲಿನ್, ಮಮತಾ ಬ್ಯಾನರ್ಜಿ, ಕೇರಳದ ಪಿಣರಾಯಿ ವಿಜಯನ್​ರ ಸುತ್ತಲೂ ಗಿರಕಿ ಹೊಡೆಯುತ್ತಿರುತ್ತವೆ. ಈಶಾನ್ಯ ಭಾರತದ, ವಾಯವ್ಯ ಭಾಗದಲ್ಲಿನ ಪ್ರದೇಶಗಳು ತೀವ್ರವಾದ ಆತಂಕಗಳನ್ನು ಎದುರಿಸುವ ಸ್ಥಿತಿ ನಿರೀಕ್ಷಿತ.

ಕರ್ನಾಟಕದಲ್ಲಿ ಸವಾಲು
ಸಿಎಂ ಕುಮಾರಸ್ವಾಮಿಯವರು ಕೇತುವಿನ ಉಪಟಳಗಳನ್ನು ಎದುರಿಸಬೇಕಾಗಿ ಬರುವುದು ಸಾಮಾನ್ಯ. ಬೇಕಾಗಿರದ ಮಾತುಗಳನ್ನು, ಬೇಕಾಗಿರದ ತೀವ್ರ ಕೆಲಸದ ಭಾರವನ್ನು ನಿಯಂತ್ರಿಸುವತ್ತ ಅವರು ಗಮನ ಇಡಬೇಕು. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಹಲವು ನಿರ್ಣಯಾತ್ಮಕ ಸನ್ನಿವೇಶಗಳಲ್ಲಿ ಅವರವರ ಪಕ್ಷದ ಸಂವರ್ಧನೆಗೆ ಹೆಚ್ಚಿನ ಶಕ್ತಿಯಾಗಿ ನಿಲ್ಲುತ್ತಾರಾದರೂ, ದುಷ್ಟ ರಾಹುವಿನ ಕಾರಣದಿಂದಾಗಿ ಅನೇಕ ಹತಾಶೆಗಳನ್ನೂ ಎದುರಿಸಬೇಕಾಗಬಹುದು. ಯಡಿಯೂರಪ್ಪ ತೀವ್ರತಮವಾದ ಅಂತರ್ಗತ (ಒಳವಲಯದಲ್ಲಿ) ಶಕ್ತಿ ಸವಕಳಿಯನ್ನು ಶಾಂಭವಿಯ ಕರುಣೆಯಿಂದ ಮೆಟ್ಟಿನಿಲ್ಲಬೇಕಾಗಿದೆ. ಕುಮಾರಸ್ವಾಮಿ ಮಂತ್ರಿಮಂಡಳದ ಕೆಲಸಕಾರ್ಯಗಳನ್ನು ಪ್ರಧಾನವಾಗಿ ಕೇತುವೇ ನಿರ್ಧರಿಸುವ ಸ್ಥಿತಿಗತಿ (ಪ್ರತಿಜ್ಞಾವಿಧಿ ಸ್ವೀಕರಿಸಿದ ಸಂದರ್ಭದ ಬಲದ ಮೇಲೆ ನಿಶ್ಚಯಿಸುವುದಾದರೆ) ಇರುತ್ತದೆ. ಕೇತುವನ್ನು ಪ್ರತಿನಿಧಿಸುವ ಧೂಮ್ರವರ್ಣನ (ಅಂದರೆ ಗಣಪತಿಯ) ಸಿದ್ಧಿ ಅವರಿಗೆ ಮುಖ್ಯವಾಗಿ ಬೇಕಾಗಿದೆ. ಮಳೆಯ ಕಾರಣದಿಂದಾಗಿ ನೀರಿನ ವಿಷಯದಲ್ಲಿ ಕರ್ನಾಟಕ ಅನೇಕ ಜಂಜಡಗಳನ್ನು ಎದುರಿಸಬೇಕಾಗುತ್ತದೆ. ಕುಮಾರಸ್ವಾಮಿ ಸರ್ಕಾರ ಜನವರಿ ಅಥವಾ ಏಪ್ರಿಲ್​ನಲ್ಲಿ ತೀವ್ರತರವಾದ ಸುನಾಮಿಯನ್ನು ಗೆಲ್ಲಲೇಬೇಕಾದ ಕಷ್ಟ ಇರುತ್ತದೆ.

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ…ಯಾರು ಹಿತವರು ನಿನಗೆ ಈ ಮೂವರೊಳಗೆ?

ನರೇಂದ್ರ ಮೋದಿ
ಮೋದಿಯವರಿಗೆ ಈಗ ಚಂದ್ರ ದಶಾದಲ್ಲಿ ಬುಧನ ಭುಕ್ತಿ ನಡೆಯುತ್ತಿದೆ. ಜೀವದ ಮೇಲಿನ ತೀವ್ರ ಎಚ್ಚರಿಕೆಯ ಜತೆಗೆ, ಹಿನ್ನಡೆಯನ್ನು ಅನುಭವಿಸಬೇಕಾಗಿ ಬರುವ ಚಡಪಡಿಕೆಯಿರುತ್ತದೆ. ಮರಣಾಧಿಪತಿಯಾದ ಬುಧ ಐದು ರಾಜ್ಯಗಳಲ್ಲಿ (ಕರ್ನಾಟಕದಲ್ಲಿ ಮತ್ತೊಂದು ರೀತಿಯ) ಹಿನ್ನಡೆಯನ್ನು ಒದಗಿಸಿದ್ದು ಈಗ ಮುಗಿದ ಅಧ್ಯಾಯ. ಬರುವ ಮಾರ್ಚ್​ನಿಂದ ಶುರುವಾಗುವ ಕೇತುಭುಕ್ತಿ ಕರಿಮೋಡಗಳನ್ನು ದೂರಕ್ಕೆ ತಳ್ಳುವ ಅಮೃತ ಸ್ವರೂಪದ್ದಾದರೂ, ಅಂತರ್ಗತವಾಗಿದ್ದ ನಿಜವಾದ ಬಲ ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ. ಲೋಕಸಭಾ ಚುನಾವಣೆಯ ಅಂತಿಮವಾದ ಜಯದ ನಗುವಿಗೆ ಕೇತು ಆಧಾರವಾಗುವ ಹಾಗೆ, ವರ್ತಮಾನ ಗುರುವಿನ ಕಾರಣಕ್ಕಾಗಿ ಸ್ನೇಹಿಯಾಗಿದೆ.

ರಾಹುಲ್ ಗಾಂಧಿ
ವ್ಯಕ್ತಿತ್ವಕ್ಕೆ ಪ್ರಧಾನಿ ಪಟ್ಟದ ಪೋಷಾಕುಗಳನ್ನು ಒದಗಿಸಿ ಒಂದಲ್ಲ ಒಂದು ದಿನ ಪೀಠಕ್ಕೆ ಕೂರಿಸುವ ಹೊಣೆಹೊತ್ತಿರುವ ಶನೈಶ್ಚರ, ಅತುಳ ಬಲ ಪಡೆಯಲು ಹೆಣಗಾಡುತ್ತಲೇ ಇದ್ದಾನೆ. ಚಂದ್ರ ದಶಾ ಇದ್ದು, ಶನಿಕಾಟ ಇದ್ದು ಓಟದ ಅತ್ಯುನ್ನತ ಶಕ್ತಿಗೆ ಕೊರತೆಗಳಿವೆ. ಆದರೂ ಶನಿಭುಕ್ತಿ (2019 ಫೆಬ್ರವರಿ ಕೊನೆತನಕ ಇದೆ) ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಮೋದಿ ಸೋತಿರುವಲ್ಲಿ ರಾಹುಲ್ ಮೇಲೇಳುವಂತೆ ಮಾಡಿದೆ. ಹಿಂದುಳಿದ ವರ್ಗಗಳ ಬಲ ಈಗಲೂ ಅಬಾಧಿತ ಎನ್ನಲಾಗದ ಹಾಗೆ 2019ರ ಮಾರ್ಚ್​ನಿಂದ ಶುರುವಾಗುವ ಬುಧಭುಕ್ತಿ (ಬುಧನ ಪಾಪಕರ್ತರಿ ಯೋಗದಿಂದಾಗಿ) ಇದ್ದರೂ ಶುಕ್ರಗ್ರಹದ ಸಿದ್ಧಿಸತ್ವ ಪಡೆದಿರುವುದರಿಂದ ಪ್ರಧಾನವಾದುದನ್ನು ಒದಗಿಸುವ ಗರಿಷ್ಠವಾದ ಬಲವನ್ನು ಬುಧ ಒದಗಿಸುತ್ತಾನೆ. ಮಾರ್ಚ್​ನಿಂದ ಉತ್ತಮ ಭಾವಕ್ಕೆ ಬರುವ ರಾಹುವೂ, ರಾಹುಲರನ್ನು ದುರ್ಬಲಗೊಳಿಸಲಾರ. ಮೋದಿಯವರನ್ನು ಎದುರಿಸಲು ರಂಗ ಸಜ್ಜಾಗಿದೆ.

ಎಚ್.ಡಿ. ದೇವೇಗೌಡ
ಬಾಧೆ ಕೊಡುತ್ತಲೇ ಬಂದಿರುವ ರಾಹು-ಕೇತುಗಳಲ್ಲಿ ಕೇತುವು ಲೋಕಸಭಾ ಚುನಾವಣೆಯ ಹೊತ್ತಿಗೆ ತುಸು ಮೃದುವಾಗಿರುತ್ತಾನೆ. ಆದರೆ ರಾಹು ಪೀಡೆ ಕೊಡದಿರಲಾರ. ಉತ್ತಮವಾದ ಧರ್ಮಕರ್ವಧಿಪ ಯೋಗವನ್ನು ಕೆಡಿಸುವ ಯಾವ ಸಂದರ್ಭಗಳನ್ನೂ ಕೇತು (ಪ್ರಧಾನವಾಗಿ), ಶನೈಶ್ಚರ ಮತ್ತು ರಾಹು ದೇವೇಗೌಡರ ಜಾತಕದಲ್ಲಿ ಬಿಟ್ಟುಕೊಟ್ಟಿಲ್ಲ. ಚಂದ್ರದಶಾ ಕಾಲ ಹೌದಾದರೂ ಚಂದ್ರನು ರಾಹುಗ್ರಸ್ತನಾಗಿ ಮೂಲಜಾತಕದಲ್ಲಿರುವ ಕಾರಣ ಫೀನಿಕ್ಸ್​ನಂತೆ ಮತ್ತೆ ಎದ್ದುಬರುತ್ತೇನೆ ಎಂದು ಹೇಳಿರುವ (1997ರಲ್ಲಿ) ದೇವೇಗೌಡರಿಗೆ ಸಕಲಬಲಸಹಿತವಾದ ಚದುರಂಗ ದಳವನ್ನು ಗಟ್ಟಿಯಾಗಿ ಹರಳುಗಟ್ಟಿಸಲಾಗುತ್ತಿಲ್ಲ. ಆದರೆ ಸಮರ್ಥ ದಾಳಗಳನ್ನು ಉರುಳಿಸಬಲ್ಲ ಚೈತನ್ಯ ಈ 85ರ ಇಳಿಪ್ರಾಯದಲ್ಲಿ ಕ್ರಿಯಾಶೀಲವಾಗಿದ್ದರೂ ಪ್ರಧಾನಿ ಪಟ್ಟ ಅಂಗೈಗೆ ಬರುವ ವಿಚಾರ ಕಷ್ಟಕರ.