More

    PHOTOS &VIDEO: ಬೆಂಕಿಯ ಕೆನ್ನಾಲಿಗೆಯ ಜ್ವಾಲೆಗೆ ತತ್ತರಿಸುತ್ತಿದೆ ಆಸ್ಟ್ರೇಲಿಯಾ; ಕಪ್ಪು ಬೂದಿಯಾಯ್ತು ಹಸಿರು…ಸಜೀವ ದಹನವಾದವು ಮೂಕ ಜೀವಿಗಳು

    ಸಿಡ್ನಿ: ಬೆಂಕಿಯ ಕೆನ್ನಾಲಿಗೆ ಆಸ್ಟ್ರೇಲಿಯಾವನ್ನು ನುಂಗುತ್ತಿದೆ. ಆಗ್ನೇಯ ಆಸ್ಟ್ರೇಲಿಯಾದಲ್ಲಿ 2019ರ ಸೆಪ್ಟೆಂಬರ್​ನಿಂದಲೇ ಪ್ರಾರಂಭವಾದ ಕಾಡ್ಗಿಚ್ಚು ದಿನೇದಿನೆ ಹೆಚ್ಚುತ್ತಲೇ ಇದೆ.

    ಇದುವರೆಗೆ 19.8 ಮಿಲಿಯನ್​ ಎಕರೆಗಳಷ್ಟು ಅರಣ್ಯ ಬೆಂಕಿ ಜ್ವಾಲೆಗೆ ಸುಟ್ಟು ಬೂದಿಯಾದರೆ 48 ಕೋಟಿ ಅರಣ್ಯ ಜೀವಿಗಳು ಪ್ರಾಣ ತೆತ್ತಿವೆ. ಜನವಸತಿ ಪ್ರದೇಶಗಳಿಗೂ ಬೆಂಕಿ ಪಸರಿಸಿದ ಪರಿಣಾಮ 2 ಸಾವಿರ ಮನೆಗಳು ಆಹುತಿಯಾಗಿವೆ. 25 ಮಂದಿ ಜೀವಕಳೆದುಕೊಂಡಿದ್ದಾರೆ.

    ಬೆಂಕಿ ಹಬ್ಬಿರುವ ಮೆಲ್ಬೋರ್ನ್​, ಸಿಡ್ನಿ ಸೇರಿ ಹಲವು ಪ್ರದೇಶಗಳಲ್ಲಿ ಗಾಳಿಯ ಮಟ್ಟ ಕಡಿಮೆ ಇದೆ. ಆದರೆ ಬಲವಾದ ಗಾಳಿ ಹಾಗೂ ಉಷ್ಣ ವಾತಾವರಣ ಉಂಟಾಗುವ ಮುನ್ಸೂಚನೆ ಇರುವುದಾಗಿ ಅಲ್ಲಿನ ಹವಾಮಾನ ಇಲಾಖೆ ಹೇಳಿದ್ದರಿಂದ ಸಿಡ್ನಿ ಉಪನಗರಗಳಲ್ಲಿ ಮತ್ತಷ್ಟು ಪ್ರದೇಶಗಳಿಗೆ ಬೆಂಕಿ ಪಸರಿಸುವ ಆತಂಕವಿದೆ ಎನ್ನಲಾಗಿದೆ.

    ಕಾಡ್ಗಿಚ್ಚು ನಿಯಂತ್ರಣಕ್ಕೆ ಆಸ್ಟ್ರೇಲಿಯಾ ಸರ್ಕಾರ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಅರಣ್ಯ ಜೀವಿಗಳನ್ನು ಉಳಿಸಲು, ಬೆಂಕಿ ಹಬ್ಬಿದ ಜನವಸತಿ ಪ್ರದೇಶಗಳಿಂದ ಅಲ್ಲಿನ ನಿವಾಸಿಗಳನ್ನು ರಕ್ಷಿಸಲು ಸೇನೆಯ ಸಹಾಯ ತೆಗೆದುಕೊಂಡಿದೆ. ಸೇನಾ ಸಿಬ್ಬಂದಿ ಬೆಂಕಿಯ ಜ್ವಾಲೆಯೊಂದಿಗೆ ಇನ್ನಿಲ್ಲದಂತೆ ಹೋರಾಟಕ್ಕೆ ಇಳಿದಿದ್ದಾರೆ. ಅಗ್ನಿ ಪೀಡಿತ ಪ್ರದೇಶಗಳಿಂದ ಜನರನ್ನು ಬೇರೆ ಕಡೆಗೆ ಫ್ಲೈಟ್​ಗಳ ಮೂಲಕ ಕರೆದುಕೊಂಡು ಹೋಗಲಾಗುತ್ತಿದೆ.

    ನ್ಯೂ ಸೌತ್​ ವೇಲ್ಸ್​ ಪ್ರದೇಶದಲ್ಲಿ ಒಟ್ಟು 150 ಕಡೆಗಳಲ್ಲಿ ಬೆಂಕಿ ಉರಿಯುತ್ತಿದೆ. ಅತಿ ಹೆಚ್ಚು ಹಾನಿಗೀಡಾದ ಪ್ರದೇಶ ಇದೇ ಆಗಿದೆ. ಬೆಟ್ಟ-ಗುಡ್ಡಗಳು, ರಾಷ್ಟ್ರೀಯ ಉದ್ಯಾನವನಗಳೆಲ್ಲ ಸುಟ್ಟು ಕರಕಲಾಗಿವೆ. ಈಗಾಗಲೇ ಸರ್ಕಾರ 1.4 ಬಿಲಿಯನ್​ ಡಾಲರ್​ಗಳಷ್ಟು ನೆರವು ಘೋಷಿಸಿದೆ.

    ಹೊತ್ತಿ ಉರಿಯುತ್ತಿರುವ ಆಸ್ಟ್ರೇಲಿಯಾಕ್ಕೆ ಸಹಾಯ ಮಾಡಲು ಇಂಗ್ಲೆಂಡ್​ ಪ್ರಧಾನಿ ಬೋರಿಸ್​ ಜಾನ್ಸನ್ ಮುಂದಾಗಿದ್ದಾರೆ. ಬೆಂಕಿಯನ್ನು ನಿಯಂತ್ರಿಸಲು ಅಗತ್ಯ ಸಹಕಾರ ನೀಡುವುದಾಗಿ ಆಸ್ಟ್ರೇಲಿಯನ್​ ಪ್ರಧಾನಿ ಸ್ಕಾಟ್​ ಮಾರಿಸನ್​ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ.
    ರಾಷ್ಟ್ರೀಯ ಕಾಡ್ಗಿಚ್ಚು ನಿಯಂತ್ರಣಾ ಏಜೆನ್ಸಿ ರಚನೆಗಾಗಿ ಆಸ್ಟ್ರೇಲಿಯಾ ಪ್ರಧಾನಿ 2 ಬಿಲಿಯನ್​ ಡಾಲರ್​ ನೀಡುವುದಾಗಿ ಘೋಷಿಸಿದ್ದಾರೆ.

    ವಿಕ್ಟೋರಿಯಾ ಹಾಗೂ ನ್ಯೂ ಸೌತ್​ ವೇಲ್​ಗಳಲ್ಲೇ ಅತಿ ಹೆಚ್ಚು ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ವಿಪರೀತ ಹಾನಿಯಾಗಿದೆ. ಕರಾವಳಿ ಪ್ರದೇಶಗಳಲ್ಲಿರುವ ಅರಣ್ಯಗಳು, ಸಿಡ್ನಿ, ಮಲಕುಟಾ, ವೊಲೆಮಿ ನ್ಯಾಷನಲ್ ಪಾರ್ಕ್, ಪೋರ್ಟ್ ಮ್ಯಾಕ್ವಾರಿ, ನ್ಯೂಕ್ಯಾಸಲ್ ಮತ್ತು ಬ್ಲೂಮೌಂಟ್ಸ್​​ಗಳಲ್ಲಿ ಬೆಂಕಿ ಜ್ವಾಲೆ ಹೆಚ್ಚುತ್ತಲೇ ಇದೆ. ಅರಣ್ಯ ಪ್ರದೇಶಗಳೆಲ್ಲ ಕರಕಲು ಬೂದಿಯಾಗಿ ಮಾರ್ಪಟ್ಟಿವೆ.

    ದೇಶದ ಪ್ರಸಿದ್ಧ ಆಟಗಾರರು, ಗಣ್ಯರು ತಮ್ಮ ಕೈಲಾದ ಮಟ್ಟಿಗೆ ನೆರವು ನೀಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts