ಬಾಡಿ ಗ್ಯಾರೇಜ್‌ಗಳಿಗೆ ಕೋಡ್ ಬರೆ

ವೇಣುವಿನೋದ್ ಕೆ.ಎಸ್. ಮಂಗಳೂರು

ಹೊಸದಾಗಿ ಖರೀದಿಸಿರುವ ದೊಡ್ಡ ಬಸ್‌ಗಳಿಗೆ ‘ಬಾಡಿ ಕೋಡ್’ ಕಡ್ಡಾಯ ಮಾಡಿರುವುದು ಸ್ಥಳೀಯ ಗ್ಯಾರೇಜ್ ಮಾಲೀಕರಲ್ಲಿ ಭೀತಿ ಹುಟ್ಟಿಸಿದೆ.

13ಕ್ಕಿಂತ ಹೆಚ್ಚು ಸೀಟ್ ಇರುವ ಬಸ್‌ಗಳನ್ನು ಜನವರಿ 1ರಿಂದ ನೋಂದಣಿ ಮಾಡಬೇಕಾದರೆ ‘ಬಾಡಿ ಕೋಡ್’ ಪಾಲನೆ ಕುರಿತು ಗ್ಯಾರೇಜ್‌ನವರು ಪ್ರಮಾಣಪತ್ರ ನೀಡಲೇಬೇಕು. ಸ್ಥಳೀಯವಾಗಿ ಬಸ್‌ಗಳಿಗೆ ಬಾಡಿ ಕಟ್ಟುವುದೇ ದೊಡ್ಡ ಉದ್ಯಮವಾಗಿ ಬೆಳೆದಿದ್ದು, ಸಹಸ್ರಾರು ಗ್ಯಾರೇಜ್‌ಗಳಿಗೆ ಜೀವನೋಪಾಯ. ಆದರೆ 2014ರಲ್ಲಿ ಕೇಂದ್ರ ಭೂಸಾರಿಗೆ ಸಚಿವಾಲಯ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯಿದೆ 1988ಕ್ಕೆ ತಿದ್ದುಪಡಿ ತಂದಿದೆ. ಅದರನ್ವಯ ಹಲವು ನಿಯಮಾವಳಿಗಳನ್ನು ತರಲಾಗಿದೆ. ಈ ನಿಯಮಾವಳಿ ಗ್ಯಾರೇಜ್‌ನವರಿಗೆ ದೊಡ್ಡ ಹೊಡೆತ.

ದೊಡ್ಡ ಬಂಡವಾಳ ಬೇಕು: ದ.ಕ, ಉಡುಪಿ ಗ್ಯಾರೇಜ್ ಮಾಲೀಕರ ಸಂಘದಡಿ 700ಕ್ಕೂ ಹೆಚ್ಚು ಗ್ಯಾರೇಜ್‌ಗಳು ನೋಂದಣಿಯಾಗಿವೆ. ಬಸ್ ಮಾಲೀಕರು ಹೊಸದಾಗಿ ಬಸ್ ಖರೀದಿಸಿದಾಗ ಅದಕ್ಕೆ ಬಾಡಿ ಕಟ್ಟುವ ಕೆಲಸವನ್ನು ಗ್ಯಾರೇಜ್‌ನವರು ಮಾಡುತ್ತಿದ್ದರು, ಒಂದು ಬಸ್‌ಗೆ ಬಾಡಿ ಕಟ್ಟಲು 40 ದಿನ ಬೇಕಾಗುತ್ತದೆ. ಅಷ್ಟು ಮಂದಿಗೆ ಕೆಲಸವೂ ಆಗುತ್ತಿತ್ತು. ಆದರೆ, ಹೊಸ ನಿಯಮದಂತೆ ಗ್ಯಾರೇಜ್ ಮಾಲೀಕರು ಹೊಸ ಬಸ್‌ಗೆ(13 ಸೀಟ್ ಮೇಲ್ಪಟ್ಟ) ಬಾಡಿ ಕಟ್ಟಬೇಕಾದರೆ ಅಟೊಮೊಟಿವ್ ರಿಸರ್ಚ್ ಅಸೋಸಿಯೇಶನ್ ಆಫ್ ಇಂಡಿಯಾ(ಎಆರ್‌ಎಐ) ಎಂಬ ಅಧಿಕೃತ ಸಂಸ್ಥೆಯಿಂದ ಮಾನ್ಯತಾ ಪ್ರಮಾಣಪತ್ರ ಪಡೆಯಬೇಕು.
ಆದರೆ ಇದು ಸುಲಭವಲ್ಲ, ಕಠಿಣ ನಿಯಮ ಇದೆ. ಅಷ್ಟೇ ಅಲ್ಲ, ದೊಡ್ಡ ಮೊತ್ತದ ಬಂಡವಾಳ ಹೂಡಿಕೆಯನ್ನೂ ಮಾಡಬೇಕಾಗುತ್ತದೆ. ಬಡ ಗ್ಯಾರೇಜ್ ಮಾಲೀಕರು ಅಷ್ಟು ಖರ್ಚು ಮಾಡಲು ಸಾಧ್ಯವಿಲ್ಲ. ಗ್ಯಾರೇಜ್‌ನಲ್ಲಿ ಕಟ್ಟಿದ ಬಾಡಿಯನ್ನು ಪುಣೆಯ ಏಜೆನ್ಸಿಗೆ ಕಳುಹಿಸಿ, ಅಲ್ಲಿ ಅದನ್ನು ಪರೀಕ್ಷೆ ಮಾಡಿದ ಬಳಿಕವಷ್ಟೇ ಗ್ಯಾರೇಜ್‌ಗೆ ಬಾಡಿ ಕಟ್ಟಲು ಲೈಸೆನ್ಸ್ ಸಿಗುತ್ತದೆ. ಕೋಟ್ಯಂತರ ರೂಪಾಯಿ ಬಂಡವಾಳ ಹೂಡಲು ನಮ್ಮಿಂದ ಸಾಧ್ಯವಿಲ್ಲ ಎನ್ನುತ್ತಾರೆ ಗ್ಯಾರೇಜ್ ಮಾಲೀಕರು.

ಸದ್ಯಕ್ಕೆ ಮಂಗಳೂರಿನಲ್ಲಿ ಯಾವ ಗ್ಯಾರೇಜ್ ಮಾಲೀಕರೂ ಲೈಸೆನ್ಸ್ ಪಡೆದಿಲ್ಲ. ಹೊಸದಾಗಿ ಬಸ್ ಖರೀದಿಸಿದವರು ಬೆಂಗಳೂರಿನ ದೊಡ್ಡ ಬಾಡಿ ಬಿಲ್ಡಿಂಗ್ ಘಟಕಗಳಿಗೆ ಹೋಗುವ ಪರಿಸ್ಥಿತಿ ಇದೆ. ನಮಗೆ ಇದರಿಂದ ದೊಡ್ಡ ಪ್ರಮಾಣದ ನಷ್ಟವಾಗಲಿದೆ, ಕೆಲಸ ಕಡಿಮೆಯಾಗುತ್ತದೆ. ಮುಂದಿನ ದಿನಗಳಲ್ಲಿ 13ಕ್ಕಿಂತ ಕಡಿಮೆ ಸೀಟಿನ ಬಸ್ ಬಾಡಿ ಮಾತ್ರ ಕಟ್ಟಲು ಸಾಧ್ಯ. ಬಸ್‌ಗಳ ಬಾಡಿ ರಿಪೇರಿ ಕೆಲಸ ಮಾತ್ರ ಬರಬಹುದು ಎಂದು ದಕ್ಷಿಣ ಕನ್ನಡ- ಉಡುಪಿ ಗ್ಯಾರೇಜ್ ಮಾಲೀಕರ ಸಂಘದ ಅಧ್ಯಕ್ಷ ಗುಣಪಾಲ ಎಂ. ಹೇಳುತ್ತಾರೆ.

ಸುರಕ್ಷತೆ ಹಿನ್ನೆಲೆ: ವಾಹನಗಳಲ್ಲಿ ಸುರಕ್ಷತೆ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವಾಲಯದ ತಾಂತ್ರಿಕ ಸಮಿತಿ 2001ರಿಂದಲೇ ಚರ್ಚಿಸುತ್ತಿದೆ. ಬಸ್‌ಗಳ ಕಳಪೆ ಬಾಡಿಯಿಂದಾಗಿ ಅಪಘಾತದ ವೇಳೆ ಜೀವ ಹಾನಿ ಹೆಚ್ಚುತ್ತಿರುವುದನ್ನು ಗಮನಿಸಿ ಇದಕ್ಕೆ ಕೆಲ ನಿಯಮಾವಳಿ ತರಬೇಕು ಎನ್ನುವ ಬಗ್ಗೆ ಸಭೆಗಳಲ್ಲಿ ಚರ್ಚಿಸಲಾಗುತ್ತಿತ್ತು. ಈ ಕುರಿತ 2008ರಲ್ಲಿ ನಿಯಮ ಅಂತಿಮಗೊಳಿಸಲಾಯಿತು. ಹಲವು ಬಾರಿ ಬದಲಾವಣೆಗೊಂಡು ಕೊನೆಗೂ ನಿಯಮಾವಳಿ ಜಾರಿಗೆ ಬಂದಿದೆ.

ಖಾಸಗಿಯಾಗಿ ಬಸ್‌ಗಳಿಗೆ ಬಾಡಿ ಕಟ್ಟಿಸಿಕೊಂಡರೆ ನಾವು ನೋಂದಣಿ ಮಾಡುವಂತಿಲ್ಲ. ಅಧಿಕೃತವಾಗಿ ಲೈಸೆನ್ಸ್ ಹೊಂದಿದ ಗ್ಯಾರೇಜ್‌ಗಳಲ್ಲಿ ನೋಂದಣಿ ಮಾಡಿಸಿ, ಬಳಿಕ ಅವರಿಂದ ಸರ್ಟಿಫಿಕೇಟ್ ತಂದು ಕೊಟ್ಟರೆ ಮಾತ್ರ ನಾವು ನೋಂದಣಿ ಮಾಡಬಹುದು.
|ಜಾನ್ ಮಿಸ್ಕಿತ್, ಮಂಗಳೂರು ಆರ್‌ಟಿಒ

ಈ ನೂತನ ನಿಯಮಾವಳಿ ನಮಗೆ ಹೊಡೆತ ನೀಡಲಿದೆ, ಇದನ್ನು ವಿರೋಧಿಸಿ ಕೇಂದ್ರ ಭೂಸಾರಿಗೆ ಸಚಿವಾಲಯಕ್ಕೆ ನಾವು ಮನವಿ ನೀಡುವ ಬಗ್ಗೆ ಯೋಜಿಸುತ್ತಿದ್ದೇವೆ, ಇದರಲ್ಲಿ ಒಂದಷ್ಟು ಸರಳೀಕರಣ ಮಾಡಿದರೂ ಉತ್ತಮ, ಇಲ್ಲವಾದರೆ ನಮ್ಮ ಅಸ್ತಿತ್ವ ಇಲ್ಲದಾಗುತ್ತದೆ.
|ಗುಣಪಾಲ ಎಂ, ಅಧ್ಯಕ್ಷ, ಗ್ಯಾರೇಜ್ ಮಾಲೀಕರ ಸಂಘ, ದ.ಕ- ಉಡುಪಿ