28ರೊಳಗೆ ಹೊಸ ಮೀಸಲು

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಂಬಂಧಿಸಿ ಸರ್ಕಾರ ಪ್ರಕಟಿಸಿದ ಮೀಸಲು ಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿ ತೀರ್ಪು ನೀಡಿದೆ. ನಿಯಮಾವಳಿ ಪ್ರಕಾರ ವಾರ್ಡ್‌ಗಳ ಮೀಸಲು ನಿಗದಿಯಾಗಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಜ.28ರೊಳಗೆ ಹೊಸ ಮೀಸಲು ಪ್ರಕಟಿಸುವಂತೆ ಆದೇಶಿಸಿದೆ.

2018ರ ಜೂ.26ರಂದು ಮಂಗಳೂರು ಮಹಾನಗರ ಪಾಲಿಕೆಯ ಕರಡು ಮೀಸಲು ಪ್ರಕಟವಾಗಿತ್ತು. ಆಕ್ಷೇಪ ಅರ್ಜಿ ಸಲ್ಲಿಸಲು ಒಂದು ವಾರದ ಕಾಲಾವಕಾಶ ನೀಡಲಾಗಿತ್ತು. ನಿಗದಿತ ಅವಧಿಯಲ್ಲಿ 70ಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿತ್ತು. ಬಳಿಕ 30 ವಾರ್ಡ್‌ಗಳ ಮೀಸಲು ಬದಲಾವಣೆ ಮಾಡಲಾಗಿತ್ತು. ಈ ಸಂದರ್ಭ ಕರಡು ಮೀಸಲು ಪಟ್ಟಿಯಲ್ಲಿ ಅವಕಾಶ ವಂಚಿತರಾಗಿದ್ದ ಕಾಂಗ್ರೆಸ್‌ನ ಎಲ್ಲ ಕಾರ್ಪೋರೇಟರ್‌ಗಳು ತಮ್ಮ ವಾರ್ಡ್‌ನಲ್ಲೇ ಸ್ಪರ್ಧೆಗೆ ಅವಕಾಶ ಪಡೆದಿದ್ದರು.

ರಿಟ್ ಅರ್ಜಿ ಸಲ್ಲಿಕೆ: ಬಿಜೆಪಿಯ ಒಂದಿಬ್ಬರು ಹಾಲಿ ಕಾರ್ಪೋರೇಟರ್‌ಗಳನ್ನು ಹೊರತುಪಡಿಸಿ ಉಳಿದವರು ಮತ್ತೆ ತಮ್ಮ ವಾರ್ಡ್‌ನಿಂದ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿದ್ದರು. ಮೀಸಲು ಪಟ್ಟಿಯಲ್ಲಿ ರಾಜಕೀಯ ಹಸ್ತಕ್ಷೇಪವಿದೆ. ನಿಯಮಾವಳಿ ಪ್ರಕಾರ ಕೆಲವು ವಾರ್ಡ್‌ಗಳಲ್ಲಿ ಮೀಸಲು ನಿಗದಿಯಾಗಿಲ್ಲ. ಸತತ ಮೂರನೇ ಸಲ ಒಂದೇ ಮೀಸಲು ಬಂದ ವಾರ್ಡ್ ಕೂಡ ಇದೆ ಎಂದು ಆರೋಪಿಸಿ ಕೆಲವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಜ.10ರೊಳಗೆ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡುವಂತೆ ಚುನಾವಣಾ ಆಯೋಗ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಿದೆ.

ಸರ್ಕಾರಕ್ಕೆ ಹಿನ್ನಡೆ: ರಿಟ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಅರ್ಜಿದಾರರ ಪರ ತೀರ್ಪು ನೀಡಿದ್ದು, ಸರ್ಕಾರಕ್ಕೆ ಹಿನ್ನಡೆಯಾಗಿದೆ. ಅರ್ಜಿದಾರರ ಪರವಾಗಿ ವಕೀಲ ಮನಮೋಹನ್ ವಾದಿಸಿದ್ದರು. ಸರ್ಕಾರ ಸಕಾಲದಲ್ಲಿ ಹೊಸ ಮೀಸಲು ಪಟ್ಟಿ ಪ್ರಕಟಿಸಿದರೆ ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆಯಾಗಬಹುದು. ವಿಳಂಬ ನೀತಿ ಅನುಸರಿಸಿದರೆ ಪಾಲಿಕೆ ಚುನಾವಣೆ ಮುಂದೂಡಿಕೆಯಾಗಿ ಆಡಳಿತಾಧಿಕಾರಿ ನೇಮಕವಾಗಲಿದೆ.

ಸತ್ಯಕ್ಕೆ ಸಂದ ಜಯ: ಮನಪಾ ವಾರ್ಡ್ ಮೀಸಲಾತಿಯಲ್ಲಿ ರೋಟೇಶನ್ ಪದ್ಧತಿ ಅನುಸರಿಸಿಲ್ಲ ಎಂದು ಹೈಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹ ಎಂದು ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ ತಿಳಿಸಿದ್ದಾರೆ. ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಅಧಿಕಾರ ದುರ್ಬಳಕೆ ಮಾಡಿ ತಮ್ಮ ಪಕ್ಷಕ್ಕೆ ಅನುಕೂಲವಾಗುವ ಮೀಸಲಾತಿ ತಂದಿದ್ದರು. ಈಗ ನ್ಯಾಯಾಲಯ ಮೀಸಲು ಪಟ್ಟಿಯನ್ನು ರದ್ದುಗೊಳಿಸಿದೆ. ನ್ಯಾಯಾಲಯದ ತೀರ್ಪಿನಿಂದ ಸಚಿವರಿಗೆ ಮುಖಭಂಗವಾಗಿದೆ. ಸರ್ಕಾರದ ಅಟಾರ್ನಿ ಜನರಲ್ ಸರ್ಕಾರದ ಪರವಾಗಿ ಮೀಸಲಾತಿ ಸರಿ ಇದೆ ಎಂದು ವಾದ ಮಂಡಿಸಿದ್ದರು. ಆದರೆ ನ್ಯಾಯಾಲಯ ರೋಟೇಶನ್ ಪದ್ಧತಿಯಂತೆ ಮೀಸಲು ಪ್ರಕಟಿಸಿ ಚುನಾವಣೆ ನಡೆಸಬೇಕು ಎಂದು ಹೇಳಿರುವುದು ಸತ್ಯಕ್ಕೆ ಸಂದ ಜಯ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.