ಬೆಂಗಳೂರು: ರಾಜ್ಯದಲ್ಲಿ ಪ್ರತಿದಿನ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದ್ದು, ಗುರುವಾರದಂದು ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದೇ ಮೊದಲ ಬಾರಿಗೆ ಅತೀ ಹೆಚ್ಚು 25,795 ಸೋಂಕು ಪ್ರಕರಣಗಳ ವರದಿಯಾಗಿವೆ. ದಿನದ ಸೋಂಕು ಪ್ರಮಾಣ ದರ ಶೇ. 15.87ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷ ಸಮೀಪಿಸಿದೆ.
ಗುರುವಾರ ಬೆಂಗಳೂರಿನಲ್ಲಿ 68 ಮಂದಿ ಸೇರಿದಂತೆ ರಾಜ್ಯದಲ್ಲಿ 123 ಮಂದಿ ಸಾವನ್ನಪ್ಪಿದ್ದಾರೆ. 1.96 ಲಕ್ಷ ಸಕ್ರಿಯ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ 243 ಮಂದಿ ಸೇರಿದಂತೆ ಒಟ್ಟು 985 ಮಂದಿ ಗಂಭೀರ ಸಮಸ್ಯೆಯಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ನಾನಾ ಆಸ್ಪತ್ರೆಗಳಲ್ಲಿ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಲಕ್ಷಣ ರಹಿತ ಸೋಂಕಿತರು ಮನೆ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಇದರ ಹೊರತಾಗಿ ಸೋಂಕು ಹೆಚ್ಚಳದಿಂದ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಅಲೆದಾಡುವುದು ಮುಂದುವರೆದಿದೆ.
123 ಮಂದಿ ಸೋಂಕಿಗೆ ಬಲಿ:
ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 68, ಕಲಬುರಗಿ 11, ಬಳ್ಳಾರಿ, ಧಾರವಾಡ ಮತ್ತು ತುಮಕೂರು 5, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಮಂಡ್ಯ 4, ಮೈಸೂರು ಮತ್ತು ಬೀದರ್ 3, ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಉತ್ತರ ಕನ್ನಡ ತಲಾ 2 ಹಾಗೂ ಬೆಳಗಾವಿ, ಶಿವಮೊಗ್ಗ, ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಬ್ಬರಂತೆ 123 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಸೋಂಕು:
ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗುರುವಾರ ಒಂದೇ ದಿನ 1.62 ಲಕ್ಷ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಕಳೆದ 24 ಗಂಟೆಯಲ್ಲಿ 25,795 ಹೊಸ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರ 15,244, ತುಮಕೂರು 1,231, ಬಳ್ಳಾರಿ 940, ಮೈಸೂರು 818, ಕಲಬುರಗಿ 659, ಹಾಸನ 689, ಕೋಲಾರ 587 ಸೇರಿದಂತೆ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 25,795 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಈವರೆಗಿನ ಸೋಂಕಿತರ ಸಂಖ್ಯೆ 1.24 ಲಕ್ಷ ದಾಟಿದೆ. ಒಂದೇ ದಿನ 5,624 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 10.37 ಲಕ್ಷ ಮೀರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಆಸ್ಪತ್ರೆಗಳಿಗಾಗಿ ಆರಂಭಿಸಿದ ಹೆಲ್ಪ್ಲೈನ್ಗೆ ಸಾರ್ವಜನಿಕರದ್ದೇ ಕರೆ! ಕಾಲ್ ಸೆಂಟರ್ ಸಿಬ್ಬಂದಿಗೆ ತಲೆನೋವು