ಚಿತ್ರದುರ್ಗ ಜಿಲ್ಲಾ ಪಂಚಾಯಿತಿಗೆ ಕಾಂಗ್ರೆಸ್​ನ ವಿಶಾಲಾಕ್ಷಿ ನಟರಾಜ್ ನೂತನ ಅಧ್ಯಕ್ಷೆ

ಚಿತ್ರದುರ್ಗ: ಜಿಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ಸಿನ ಹೊಸದುರ್ಗ ತಾಲೂಕು ಬಾಗೂರು ಕ್ಷೇತ್ರದ ಜಿ.ಎಂ.ವಿಶಾಲಾಕ್ಷಿ ನಟರಾಜ್ ಅವಿರೋಧವಾಗಿ ಆಯ್ಕೆಯಾದರು.

ಫೆ. 7ರಂದು ಹಿಂದಿನ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಅಂಗೀಕಾರವಾಗಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ನೂತನ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು.

37 ಸದಸ್ಯರ ಬಲದ ಜಿಪಂದಲ್ಲಿ ಕಾಂಗ್ರೆಸ್ 22,ಉಚ್ಛಾಟಿತ ಸದಸ್ಯರೊಬ್ಬರು, ಜೆಡಿಎಸ್‌ನ ಇಬ್ಬರು,ಪಕ್ಷೇತರರು ಇಬ್ಬರು ಹಾಗೂ ಬಿಜೆಪಿಯ 10 ಸದಸ್ಯರಿದ್ದಾರೆ. ಒಪ್ಪಂದಂತೆ ರಾಜೀನಾಮೆ ಕೊಟ್ಟಿಲ್ಲವೆಂದು ಕಾಂಗ್ರೆಸ್ ಹಾಗೂ ಸೌಭಾಗ್ಯ ಬಸವರಾಜ್ ವಿರುದ್ಧ ಅಧಿಕಾರಕ್ಕಾಗಿ ಹಗ್ಗ ಜಗ್ಗಾಟ ನಡೆದಿತ್ತು.

ನೂತನ ಅಧ್ಯಕ್ಷರ ಅವಧಿ ಇಂದಿನಿಂದ 2021 ಮೇ 3ರವರೆಗೆ ಇರುತ್ತದೆ. ಡಿಸಿ ವಿನೋತ್ ಪ್ರಿಯಾ,ಸಿಇಒ ಸಿ.ಸತ್ಯಭಾಮ, ಎಡಿಸಿ ಸಂಗಪ್ಪ, ಸಿಪಿಒ ಟಿ.ಶಶಿಧರ್ ಇದ್ದರು. ಜಿಪಂ ನೂತನ ಅಧ್ಯಕ್ಷರಾಗಿ ವಿಶಾಲಕ್ಷಿ ನಟರಾಜ್ ಆಯ್ಕೆ ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಜಯವೆಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.