ಈ ಬಾರಿಯ ಐಪಿಎಲ್​ಗೆ ನೂತನವಾಗಿ ಸೇರ್ಪಡೆಯಾದ ಅಪಾಯಕಾರಿ ಆಟಗಾರರು ಇವರೇ…

ಮೂರೂವರೆ ತಾಸಿನ ಭರಪೂರ ಮನರಂಜನೆ ನೀಡುವ ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿ ಎಂದರೆ ಪ್ರತಿ ದೇಶಿ-ವಿದೇಶಿ ಪ್ರತಿಭಾವಂತರಿಗೆ ಮಹತ್ವದ ವೇದಿಕೆ. ವಿಶ್ವದೆಲ್ಲೆಡೆ ಹಲವು ಲೀಗ್​ಗಳಿದ್ದರೂ, ಶ್ರೀಮಂತ ಲೀಗ್ ಐಪಿಎಲ್​ನಲ್ಲಿನ ಅವಕಾಶಕ್ಕಾಗಿ ಎಲ್ಲರೂ ಹಂಬಲಿಸುತ್ತಿರುತ್ತಾರೆ. ಐಪಿಎಲ್ ಪ್ರತಿ ಆವೃತ್ತಿಗಳಲ್ಲೂ ಹಲವು ಉದಯೋನ್ಮುಖ ಆಟಗಾರರು ಕ್ರಿಕೆಟ್ ಜಗತ್ತಿನ ಗಮನ ಸೆಳೆಯುತ್ತಾರೆ. ಹೀಗೆ ಈ ಸಲವೂ ಹರಾಜಿನಲ್ಲಿ ವಿಶೇಷ ಪ್ರತಿಭೆಯುಳ್ಳ ಆಟಗಾರರು ವಿವಿಧ ತಂಡಗಳಿಗೆ ಸೇರ್ಪಡೆಯಾಗಿದ್ದಾರೆ. ಶನಿವಾರ ಚೆನ್ನೈನಲ್ಲಿ ಶುರುವಾಗಲಿರುವ 12ನೇ ಆವೃತ್ತಿಯ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿದರೆ ಮಿಂಚಬಲ್ಲರೆಂಬ ನಿರೀಕ್ಷೆ ಇವರ ಮೇಲಿದೆ. ಶಿಮ್ರೊನ್ ಹೆಟ್ಮೆಯರ್, ಸ್ಯಾಮ್ ಕರ›ನ್, ವರುಣ್ ಚಕ್ರವರ್ತಿ, ಶಿವಂ ದುಬೇ, ಆಶ್ಟನ್ ಟರ್ನರ್, ಲೂಕಿ ಫರ್ಗ್ಯನ್ ಇವರಲ್ಲಿ ಪ್ರಮುಖರೆನಿಸಿದ್ದಾರೆ. ಚೆನ್ನೈನಲ್ಲಿ ಅವಕಾಶ ಪಡೆದಿರುವ ಯುವ ಬ್ಯಾಟ್ಸ್​ಮನ್ ರುತುರಾಜ್ ಗಾಯಕ್ವಾಡ್, ಆಲ್ರೌಂಡರ್ ಚೈತನ್ಯ ಬಿಷ್ಣೋಯ್, ಡೆಲ್ಲಿ ತಂಡದಲ್ಲಿರುವ ವಿಂಡೀಸ್ ಆಲ್ರೌಂಡರ್ ಕೀಮೊ ಪೌಲ್, ರಾಜಸ್ಥಾನದಲ್ಲಿರುವ ವೇಗಿ ಒಶಾನೆ ಥಾಮಸ್, ಮುಂಬೈಯಲ್ಲಿರುವ ಅನುಕುಲ್ ರಾಯ್ ನಿರೀಕ್ಷೆ ಮೂಡಿಸಿದ್ದಾರೆ.

ಕೆರಿಬಿಯನ್ ಹಿಟ್ಟರ್ ಶಿಮ್ರೊನ್ ಹೆಟ್ಮೆಯರ್

ವಿದೇಶಿ ಆಟಗಾರನೊಬ್ಬ ವಿದೇಶದಲ್ಲೇ ಮಿಂಚಿದ್ದಕ್ಕಿಂತ ಭಾರತದಲ್ಲೇ ಯಾವುದಾದರೊಂದು ಸರಣಿಯಲ್ಲಿ ಗಮನ ಸೆಳೆದರೆ ಆತನಿಗೆ ಐಪಿಎಲ್ ಎಂಟ್ರಿ ಪಕ್ಕಾ ಎಂದೇ ನಿರೀಕ್ಷಿಸಲಾಗುತ್ತದೆ. ವಿಂಡೀಸ್​ನ ಎಡಗೈ ಸ್ಪೋಟಕ ಬ್ಯಾಟ್ಸ್​ಮನ್ ಶಿಮ್ರೊನ್ ಹೆಟ್ಮೆಯರ್ ಇದೇ ಸಾಲಿಗೆ ಸೇರ್ಪಡೆಯಾಗುತ್ತಾರೆ. ಕಳೆದ ಭಾರತದ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಬಳಗದ ವಿರುದ್ಧ ತಲಾ 1 ಶತಕ, ಅರ್ಧಶತಕ ಸಿಡಿಸಿದ್ದ ಹೆಟ್ಮೆಯರ್ ಅದರ ಬೆನ್ನಲ್ಲೇ ನಡೆದ ಐಪಿಎಲ್ ಹರಾಜಿನಲ್ಲಿ 4.2 ಕೋಟಿ ರೂ.ಗೆ ಆರ್​ಸಿಬಿ ಪಾಲಾದರು. ವಿಂಡೀಸ್ ಪರ ಇತ್ತೀಚೆಗೆ ಏಕದಿನದಲ್ಲಿ 4 ಶತಕ, 2 ಅರ್ಧಶತಕ ಬಾರಿಸಿರುವ 22 ವರ್ಷದ ಹೆಟ್ಮೆಯರ್ ಹಿಂದಿನ ಸ್ಪೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್ ಅವರ ಸ್ಥಾನ ತುಂಬುವರೆಂಬ ನಿರೀಕ್ಷೆ ಗರಿಗೆದರಿದೆ.

ಹಳೇ ಹುಲಿ ಇನ್​ಗ್ರಾಂ

ದಕ್ಷಿಣ ಆಫ್ರಿಕಾ ಪರ 6 ವರ್ಷಗಳ ಹಿಂದೆ ಕೊನೇ ಏಕದಿನ ಪಂದ್ಯವಾಡಿದ್ದ ವಿಕೆಟ್ ಕೀಪರ್ ಹಾಗೂ ಸ್ಪೋಟಕ ಎಡಗೈ ಬ್ಯಾಟ್ಸ್ ಮನ್ ಕಾಲಿನ್ ಇನ್​ಗ್ರಾಂ. ಕಳೆದ ಬಾರಿ ಹರಾಜು ಆಗದಿದ್ದ ಇನ್​ಗ್ರಾಂ ಈ ಸಲ ಬರೋಬ್ಬರಿ 6.40 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿ ಅಚ್ಚರಿ ಮೂಡಿಸಿದರು. 2011ರಲ್ಲಿ ಇದೇ ಡೆಲ್ಲಿ ಪರ 3 ಪಂದ್ಯವಾಡಿದ್ದ ಇನ್​ಗ್ರಾಂ ನಿರೀಕ್ಷೆ ಹುಸಿಗೊಳಿಸಿದ್ದರು. ಈಗ ಮತ್ತೆ ಭರವಸೆ ಮೂಡಿಸಲು ಕಾರಣ ಪಾಕಿಸ್ತಾನ ಸೂಪರ್ ಲೀಗ್, ದೇಶೀಯ ಟಿ20ಯಲ್ಲಿ ತೋರಿದ ಸ್ಪೋಟಕ ನಿರ್ವಹಣೆ. ಗೂಗ್ಲಿ ಲೆಗ್ ಸ್ಪಿನ್ನರ್ ಕೂಡ ಆಗಿದ್ದು, ಬೌಲಿಂಗ್​ನಲ್ಲೂ ಮಿಂಚಬಲ್ಲರು.

ಆಲ್ರೌಂಡರ್ ಸ್ಯಾಮ್ ಕರ›ನ್

ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾದ ಟೆಸ್ಟ್ ಸರಣಿ ಗೆಲುವಿನ ಕನಸನ್ನು ಭಗ್ನಗೊಳಿಸಿದ್ದ ಎಡಗೈ ವೇಗದ ಬೌಲಿಂಗ್ ಆಲ್ರೌಂಡರ್ ಸ್ಯಾಮ್ ಕರ›ನ್ ಕಳೆದ ಹರಾಜಿನಲ್ಲಿ ಅತ್ಯಧಿಕ 7.30 ಕೋಟಿ ರೂ.ಗೆ ಬಿಡ್ ಆದ ವಿದೇಶಿ ಆಟಗಾರ. ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿಯಲಿರುವ 20 ವರ್ಷದ ಸ್ಯಾಮ್ ಕರ›ನ್ ಟೆಸ್ಟ್​ನಲ್ಲಿ 15 ವಿಕೆಟ್ ಹಾಗೂ 3 ಅರ್ಧಶತಕ ಬಾರಿಸಿದ್ದಾರೆ. ಪಂಜಾಬ್ ತಂಡಕ್ಕೆ ಕೊರತೆಯಿದ್ದ ಎಡಗೈ ವೇಗದ ಬೌಲರ್​ನ ಸ್ಥಾನವನ್ನು ತುಂಬಲು ಕರ›ನ್ ಸೂಕ್ತ ಆಟಗಾರ ಎನ್ನಲಾಗುತ್ತಿದೆ. ಇವರೊಂದಿಗೆ ವಿಂಡೀಸ್​ನ ವಿಕೆಟ್ ಕೀಪರ್ ಟಿ20 ಸ್ಪೆಷಲಿಸ್ಟ್ ಬ್ಯಾಟ್ಸ್​ಮನ್ ನಿಕೋಲಾಸ್ ಪೂರನ್ ಇದ್ದಾರೆ.

ಮಿಸ್ಟರಿ ಸ್ಪಿನ್ನರ್ ವರುಣ್!

ಕರ್ನಾಟಕ ಮೂಲದ ಬೀದರ್​ನ ವರುಣ್ ಚಕ್ರವರ್ತಿ ಈ ಸಲ ಐಪಿಎಲ್​ನಲ್ಲಿ ಭರ್ಜರಿ ಮೊತ್ತಕ್ಕೆ ಹರಾಜಾದ ದೇಶೀಯ ಆಟಗಾರ. ಲೆಗ್​ಬ್ರೇಕ್ ಗೂಗ್ಲಿ ಹಾಗೂ ಮಿಸ್ಟರಿ ಸ್ಪಿನ್ನರ್ 27 ವರ್ಷದ ವರುಣ್ ಕಳೆದ ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ಗಮನ ಸೆಳೆದಿದ್ದು, ವಿಂಡೀಸ್​ನ ಸುನೀಲ್ ನಾರಾಯಾಣ್ ಶೈಲಿಯಂತೆ ಬೌಲಿಂಗ್ ಮಾಡಬಲ್ಲ ಪ್ರತಿಭೆ. ಜೈದೇವ್ ಉನಾದ್ಕತ್​ರಷ್ಟೇ ಮೊತ್ತ -ಠಿ;8.4 ಕೋಟಿಗೆ ಪಂಜಾಬ್ ಪರ ಆಡಲಿರುವ ವರುಣ್​ಗೆ ಟೀಮ್ ಇಂಡಿಯಾ ಪರ ಆಡುವ ಸಾಮರ್ಥ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲೆಗ್ ಸ್ಪಿನ್, ಆಫ್ ಸ್ಪಿನ್, ಗೂಗ್ಲಿ, ಕ್ಯಾರನ್ ಬಾಲ್, ಫ್ಲಿಪರ್, ಟಾಪ್ ಸ್ಪಿನ್, ಸ್ಲೆ ೖಡರ್ ಹೀಗೆ 7 ಶೈಲಿಯಲ್ಲಿ ಬೌಲಿಂಗ್ ಮಾಡುವುದೇ ವರುಣ್ ವಿಶೇಷತೆ.

ಮಿಂಚಿನ ವೇಗಿ ಫರ್ಗ್ಯನ್

ನ್ಯೂಜಿಲೆಂಡ್​ನ ಲೂಕಿ ಫರ್ಗ್ಯನ್ ಗಂಟೆಗೆ ಸರಾಸರಿ 150 ಕಿ.ಮೀ ಅಧಿಕ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಕೆಲವೊಮ್ಮೆ ಅದನ್ನು 120-125ಕ್ಕೆ ಇಳಿಸಿ ವಿಕೆಟ್ ಕಬಳಿಸಬಲ್ಲ ವೇಗಿ. -ಠಿ;1.6 ಕೋಟಿ ರೂ.ಗೆ ಕೆಕೆಆರ್ ಪಾಲಾಗಿದ್ದ ಫರ್ಗ್ಯನ್ ಭರವಸೆ ಮೂಡಿಸಿದ್ದಾರೆ. ಕೆಕೆಆರ್ ಈಗಾಗಲೆ ಗಾಯದ ಸಮಸ್ಯೆಯಿಂದಾಗಿ ವೇಗಿಗಳಾದ ಶಿವಂ ಮಾವಿ, ಕಮಲೇಶ್ ನಾಗರ್​ಕೋಟಿ ಮತ್ತು ಎನ್ರಿಚ್ ನೋರ್ಟ್ಜೆಯನ್ನು ಟೂರ್ನಿಯಿಂದಲೇ ಕಳೆದುಕೊಂಡಿರುವುದರಿಂದ ಲೂಕಿ ಫರ್ಗ್ಯುಸನ್ ಮುಂಚೂಣಿಯಲ್ಲಿ ಬೌಲಿಂಗ್ ವಿಭಾಗವನ್ನು ಮುನ್ನಡೆಸಬಹುದು. ಲೂಕಿ 27 ಏಕದಿನ ಪಂದ್ಯಗಳಲ್ಲಿ 46 ವಿಕೆಟ್ ಕಬಳಿಸಿದರೆ, 5 ಟಿ20ಯಲ್ಲಿ 10 ವಿಕೆಟ್ ಪಡೆದಿದ್ದಾರೆ.

ಅಪಾಯಕಾರಿ ಆಶ್ಟನ್ ಟರ್ನರ್

ಆಸ್ಟ್ರೇಲಿಯಾದ ಬಿಗ್​ಬಾಷ್ ಲೀಗ್ ಪ್ರತಿಭೆ ಆಶ್ಟನ್ ಟರ್ನರ್ ಕಳೆದ ವರ್ಷಾಂತ್ಯದಲ್ಲೇ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮೂಲ ಬೆಲೆ -ಠಿ;50 ಲಕ್ಷಕ್ಕೆ ಹರಾಜಾಗಿದ್ದಾಗ ಯಾರಿಗೂ ಪರಿಚಯವಿರಲಿಲ್ಲ. ಬಹುತೇಕರಿಗೆ ಪರಿಚಯವಾಗಿದ್ದು ಮೊನ್ನೆ ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಅಬ್ಬರಿಸಿದ ನಂತರ. ಮೊಹಾಲಿಯಲ್ಲಿ ಕೊಹ್ಲಿ ಪಡೆ ನೀಡಿದ್ದ ಅಸಾಧ್ಯವೆನಿಸಿದ್ದ 359 ರನ್ ಸವಾಲನ್ನು ಅಜೇಯ 84 ರನ್ ಸಿಡಿಸುವ ಮೂಲಕ ಸರಾಗಗೊಳಿದ್ದ ಆಶ್ಟನ್ ಈ ಬಾರಿ ಎಲ್ಲ ತಂಡಗಳಿಗೂ ಅಪಾಯಕಾರಿಯಾಗಬಲ್ಲರು.

ಕೀಪರ್ ಬೇರ್​ಸ್ಟೋ

ಇಂಗ್ಲೆಂಡ್​ನ ಜಾನಿ ಬೇರ್​ಸ್ಟೋ ಅನುಭವಿಯಾಗಿದ್ದರೂ, ಐಪಿಎಲ್​ನಲ್ಲಿ ಅವಕಾಶ ಪಡೆಯುತ್ತಿರುವುದು ಇದೇ ಮೊದಲ ಬಾರಿ. 2.2 ಕೋಟಿ ರೂ. ಗೆ ಹರಾಜಾದ ಬೇರ್​ಸ್ಟೋ ಸನ್​ರೈಸರ್ಸ್ ತಂಡಕ್ಕೆ ನಂಬಿಕಸ್ಥ ವಿಕೆಟ್ ಕೀಪರ್ ಆಗಿ ಜವಾಬ್ದಾರಿ ನಿಭಾಯಿಸಬಲ್ಲರು. ಶ್ರೀವತ್ಸ ಗೋಸ್ವಾಮಿ ಕಳೆದ ಆವೃತ್ತಿಯಲ್ಲಿ ಹೆಚ್ಚಿನ ಪಂದ್ಯಗಳಲ್ಲಿ ಕೀಪಿಂಗ್ ಮಾಡಿದರೂ, ಬ್ಯಾಟಿಂಗ್​ನಲ್ಲಿ ವಿಫಲ ಗೊಂಡಿದ್ದರು.

ದೇಶೀಯ ಆಲ್ರೌಂಡರ್ ಶಿವಂ ದುಬೇ

ಮುಂಬೈ ಪ್ರೀಮಿಯರ್ ಲೀಗ್​ನಲ್ಲಿ ಓವರ್ ಒಂದರಲ್ಲಿ 5 ಭರ್ಜರಿ ಸಿಕ್ಸರ್ ಸಿಡಿಸಿ ಸುದ್ದಿಯಾದ ಶಿವಂ ದುಬೇ ವೇಗದ ಬೌಲಿಂಗ್ ಆಲ್ರೌಂಡರ್. ಪ್ರಥಮ ದರ್ಜೆಯಲ್ಲಿ 2 ಶತಕ, 4 ಅರ್ಧಶತಕದೊಂದಿಗೆ ಕಡಿಮೆ ಅವಧಿಯಲ್ಲೇ ಅಬ್ಬರಿಸಿದ ಎಡಗೈ ಬ್ಯಾಟ್ಸ್​ಮನ್ ಶಿವಂ ದುಬೇ 28 ವಿಕೆಟ್ ಕೂಡ ಕಬಳಿಸಿದ್ದಾರೆ. ಆರ್​ಸಿಬಿಯಂಥ ತಂಡದಲ್ಲಿ ದೇಶಿಯ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಕಷ್ಟವಾದರೂ, ಶಿವಂ ದುಬೇ ನಾಯಕ ಕೊಹ್ಲಿ ಮನಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.