ನವ ಮಾಧ್ಯಮಕ್ಕೆ ನವ ಜನಾಂಗ ದಾಸ್ಯ

ಮೈಸೂರು: ಫೇಸ್‌ಬುಕ್, ವಾಟ್ಸ್‌ಆ್ಯಪ್ ಎಂಬ ನವ ಮಾಧ್ಯಮಗಳು ಸಿಗರೇಟ್‌ನಂತೆ ಚಟಗಳಾಗಿವೆ ಎಂದು ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಕಳವಳ ವ್ಯಕ್ತಪಡಿಸಿದರು.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ರಂಗಾಯಣದ ಭೂಮಿಗೀತದಲ್ಲಿ ‘ಲಿಂಗ ಸಮಾನತೆ’ ಕುರಿತು ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಕಡೆಯ ದಿನವಾದ ಶುಕ್ರವಾರ ‘ಲಿಂಗ ಸಮಾನತೆ ಮತ್ತು ನವಮಾಧ್ಯಮ’ ಕುರಿತು ಮಾತನಾಡಿದರು.

ನವ ಜನಾಂಗ ನವ ಮಾಧ್ಯಮಕ್ಕೆ ದಾಸ್ಯವಾಗಿದೆ. ಅದರಲ್ಲೇ ದಿನವಿಡೀ ಮುಳುಗಿ ಹೋಗುತ್ತಿದೆ. ಇದು ಅಂಗೈಯಲ್ಲೇ ಮಾಯಾಲೋಕ ಸೃಷ್ಟಿಸಿದೆ. ಈ ಮಾಧ್ಯಮ ಬಹಳ ಮಜಾವಾಗಿ, ಹಾಸ್ಯಮಯವಾಗಿ, ಅದ್ಭುತವಾಗಿದೆ. ವಿಶ್ವ ವ್ಯಾಪ್ತಿಯಾಗಿರುವ ಇದು ಬಹಳ ಅಗ್ಗವೂ ಆಗಿದೆ. ಜತೆಗೆ, ಗ್ರಾಹಕಸ್ನೇಹಿಯಾಗಿದೆ. ಆದ್ದರಿಂದ ಈ ಹೊಸ ಸಂವಹನ ಮಾಧ್ಯಮಕ್ಕೆ ಜನರು ಮಾರುಹೋಗಿದ್ದಾರೆ ಎಂದರು.

ಸಾಂಪ್ರದಾಯಿಕ ಮಾಧ್ಯಮಗಳಾದ ಪತ್ರಿಕೆಗಳು, ವಾಹಿನಿಗಳು ಮಹಿಳೆಯರನ್ನು ಕಡೆಗಣಿಸಿಕೊಂಡು ಬಂದಿವೆ. ಆದರೆ, ನವಮಾಧ್ಯಮಗಳು ಮಹಿಳೆಯರಿಗೆ ವೇದಿಕೆ ಕಲ್ಪಿಸಿಕೊಟ್ಟಿವೆ. ಸ್ವಾವಲಂಬನೆ, ಸಬಲೀಕರಣ ತಂದುಕೊಟ್ಟಿವೆ. ಅಂತೆಯೆ, ಅವರನ್ನು ಇನ್ನಷ್ಟು ಹಿಂದಕ್ಕೆ ತಳ್ಳುವ ಮೂಲಕ ಶೋಷಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.

ನವ ಮಾಧ್ಯಮಗಳು ಬಹುಸಂಖ್ಯಾತರ ಭಾವನೆಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟು, ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿವೆ. ಸುಪ್ರೀಂಕೋರ್ಟ್ ನೀಡಿದ ತ್ರಿವಳಿ ತಲಾಕ್ ತೀರ್ಪಿನ ವಿರುದ್ಧ ಮುಸ್ಲಿಂ ಸಮುದಾಯದವರು ಬೀದಿಗಿಳಿದು ಪ್ರತಿಭಟಿಸಲಿಲ್ಲ. ಬದಲಿಗೆ, ಅದನ್ನು ಒಪ್ಪಿಕೊಂಡು ಗೌರವಿಸಿದ್ದರು. ಆದರೆ, ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್ ವಿರುದ್ಧವಾಗಿ ಹಿಂದು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ನರೇಂದ್ರ ಮೋದಿ, ಅಮಿತ್ ಷಾ, ಆರ್‌ಎಸ್‌ಎಸ್ ಮುಖಂಡರು ಈ ತೀರ್ಪಿನ ವಿರುದ್ಧವಾಗಿಯೇ ಮಾತನಾಡಿದ್ದಾರೆ. ಇದರ ಅರ್ಥವೇನು ಎಂದು ಪ್ರಶ್ನಿಸಿದರು.
ಲಿಂಗ ಅಸಮಾನತೆಯೇ ಈಗ ಮಾರುಕಟ್ಟೆಯ ವಸ್ತುವಾಗಿದೆ. ಇದೇ ಮಾದರಿಯಲ್ಲೇ ಧಾರವಾಹಿಗಳು ರೂಪಗೊಳ್ಳುತ್ತಿವೆ. ಮಹಿಳೆಯರನ್ನು ಅಗೌರವಿಸುವ, ಅವಮಾನಿಸುವ ಕಾರ್ಯಕ್ರಮಗಳಿಗೆ ಟಿಆರ್‌ಪಿ ಹೆಚ್ಚಿದೆ. ಹೀಗಾಗಿ, ಜಾಗತಿಕ ಮಾಧ್ಯಮದಲ್ಲಿ ಶೇ.10 ರಷ್ಟು ಸುದ್ದಿಗಳು ಮಹಿಳಾ ಕೇಂದ್ರಿತವಾಗಿವೆ ಎಂದು ವಿಶ್ಲೇಷಿಸಿದರು.

ಪತ್ರಕರ್ತ ಮಂಜುನಾಥ್ ಅದ್ದೆ, ಬರಹಗಾರ ಪ್ರೊ.ನಟರಾಜ ಬೂದಾಳು, ಪ್ರೊ.ಲತಾ ಪಾಲ್ಗೊಂಡಿದ್ದರು. ಬಳಿಕ ನಡೆದ ‘ಹಳಗನ್ನಡ ಸಾಹಿತ್ಯದಲ್ಲಿ ಲಿಂಗದ ಪರಿಕಲ್ಪನೆ(ಹರಿಶ್ಚಂದ್ರ ಕಾವ್ಯ)’ ಕುರಿತು ಅನುವಾದಕಿ ಪ್ರೊ.ವನಮಾಲ ವಿಶ್ವನಾಥ್, ‘ಲಿಂಗ ಸಮಾನತೆ ಮತ್ತು ರಂಗಭೂಮಿ’ ಕುರಿತು ಮಹಾರಾಷ್ಟ್ರದ ನಟ, ನಾಟಕಕಾರ ಅಭಿರಾಮ್ ಬಡ್ಕಮ್‌ಕರ್ ವಿಚಾರ ಮಂಡಿಸಿದರು. ಮರಿಯಮ್ಮನಹಳ್ಳಿಯ ಮಂಜಮ್ಮ ಜೋಗತಿ ಅವರು ತಮ್ಮ ಅನುಭವಿಗಳನ್ನು ಹಂಚಿಕೊಂಡರು.

ಮನೆಯೊಳಗೆ ಟಿವಿ, ಜೇಬಿನೊಳಗೆ ಮೊಬೈಲ್!: ಪತ್ರಿಕೆ ಮನೆ ಹೊರಗೆ ಬಿದ್ದಿರುತ್ತಿತ್ತು. ಟಿವಿ ಮನೆಯೊಳಗೆ ಬಂದಿತ್ತು. ಆದರೆ, ಮೊಬೈಲ್ ಪ್ರತಿಯೊಬ್ಬರ ಜೇಬಿನೊಳಗೆ ಸೇರಿಕೊಂಡಿದೆ. ಇದು ಬೇಕೋ, ಬೇಡವೋ ಎನ್ನುವ ಅರಿವು ನಮಗಿಲ್ಲವಾಗಿದೆ ಎಂದು ಕೃಷ್ಣಪ್ರಸಾದ್ ಹೇಳಿದರು.

ಒಂದು ನಿಮಿಷಕ್ಕೆ 43 ಲಕ್ಷ ಜನರು ಯೂಟ್ಯೂಬ್‌ಗೆ ಭೇಟಿ ಕೊಟ್ಟು ವಿಡಿಯೋ ವೀಕ್ಷಿಸುತ್ತಿದ್ದರೆ, 38 ಲಕ್ಷ ಮೆಸೇಜ್‌ಗಳು ಪರಸ್ಪರ ವಿನಿಮಯವಾಗಿವೆ. ಕೇವಲ 60 ಸೆಕೆಂಡಿನ ಒಳಗೆ 8.74 ಕೋಟಿ ಜನರು ಫೇಸ್‌ಬುಕ್ ನೋಡುತ್ತಿದ್ದರೆ, 4 ಲಕ್ಷ ಟ್ವಿಟ್ ಮಾಡಲಾಗಿದೆ. ಅಲ್ಲದೆ, 2019ರ ಹೊಸ ವರ್ಷದ ಶುಭಾಶಯ ಕೋರಿ 1400 ಕೋಟಿಯಷ್ಟು ಮೆಸೇಜ್‌ಗಳು ಹಂಚಿಕೆಯಾಗಿವೆ ಎಂದು ಅಂಕಿ ಅಂಶಗಳೊಂದಿಗೆ ವಿವರಿಸಿದರು.