More

  ನವ ಕಾಶ್ಮೀರ; ಸುಧಾರಣೆ ಪಥದೆಡೆಗೆ ಭಾರತದ ಭೂಸ್ವರ್ಗ

  ಒಂದೆಡೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ, ಇನ್ನೊಂದೆಡೆ ಅವರದ್ದೇ ಕುಮ್ಮಕ್ಕಿನಿಂದ ಮೊಳಗುತ್ತಿದ್ದ ‘ಛೀನ್ ಕೆ ಲೇಂಗೆ ಆಜಾದಿ’ ಘೊಷಣೆ, ಇವೆರಡೂ ತಾರಕಕ್ಕೇರಿದ್ದ ಕಾಲವದು. ಅಂಥ ಹೊತ್ತಿನಲ್ಲಿ ವಿಶ್ವವೇ ಭಾರತದತ್ತ ತಿರುಗಿ ನೋಡುವಂಥ ಮಹತ್ವದ ವಿದ್ಯಮಾನ ಘಟಿಸಿತು. 2019ರ ಆಗಸ್ಟ್ 5ರಂದು ಗೃಹ ಸಚಿವ ಅಮಿತ್ ಷಾ ಸಂಸತ್ತಿನಲ್ಲಿ ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ ಅನುಚ್ಛೇದ 370 ಮತ್ತು 35ಎ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನಗಳನ್ನು ಹಿಂಪಡೆಯುವ ರಾಷ್ಟ್ರಪತಿಗಳ ಆದೇಶವನ್ನು ಪ್ರಕಟಿಸಿದರು. ತದನಂತರದಲ್ಲಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ‘ಜಮ್ಮು ಮತ್ತು ಕಾಶ್ಮೀರ ಮರುರಚನಾ ಕಾಯ್ದೆ’ಯನ್ನೂ ಜಾರಿಗೊಳಿಸಲಾಯಿತು. ಅಲ್ಲಿಗೆ ಭಾರತದ ಇತರ ರಾಜ್ಯಗಳಷ್ಟೇ ಹಕ್ಕುಗಳು ಜಮ್ಮು-ಕಾಶ್ಮೀರದವರಿಗೂ ಇರುವಂಥ ವ್ಯವಸ್ಥೆ ಜಾರಿಗೆ ಬಂತು. ಇವೆಲ್ಲವೂ ಸಂಸತ್ತಿನಲ್ಲಿ ಮೂರನೇ ಎರಡು ಬಹುಮತದೊಂದಿಗೆ ಜಾರಿಗೆ ಬಂದವು. ನಿರೀಕ್ಷೆಯಂತೆ ರಾಜಕೀಯ ಪ್ರೇರಿತ ಪ್ರತಿಭಟನೆಗಳು, ಬಂದ್ ಇತ್ಯಾದಿ ನಡೆದವು. ಉಗ್ರರು ಇದರ ಪ್ರಯೋಜನ ಪಡೆಯಬಾರದು ಎಂದು ಸರ್ಕಾರ ಇಂಟರ್​ನೆಟ್ ಸಂಪರ್ಕ ತುಂಡರಿಸಿತಲ್ಲದೆ ಬಿಗಿ ಬಂದೋಬಸ್ತ್, ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿ ಮಾಡಿತು. ಕೆಲ ತಿಂಗಳ ನಂತರ ಜಮ್ಮು-ಕಾಶ್ಮೀರ ಸಹಜ ಸ್ಥಿತಿಗೆ ಬಂತು.

  ಭರವಸೆಯ ಹಾದಿ: ಹಲವು ದಶಕಗಳಲ್ಲೇ ಮೊದಲ ಬಾರಿಗೆ ಭಾರತದ ಸಂವಿಧಾನ ಹಾಗೂ ಕೇಂದ್ರದ ಎಲ್ಲ 890 ಕಾನೂನುಗಳು ಪೂರ್ಣವಾಗಿ ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗಿವೆ. ಅಟಲ್ ಪಿಂಚಣಿ ಯೋಜನೆಯಂಥ ವಿಮಾ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಎಷ್ಟೋ ದಶಕಗಳ ಹಿಂದೆ ಜಮ್ಮು-ಕಾಶ್ಮೀರಕ್ಕೆ ಬಂದು ಇಲ್ಲಿಯ ಪ್ರಜೆಗಳಾಗಿದ್ದರೂ ಪೂರ್ಣ ಪೌರತ್ವ ಸಿಗದೆ ಮತದಾನದ ಹಕ್ಕನ್ನು ಕಳೆದುಕೊಂಡಿದ್ದ ಜನರಿಗೆ ಸಾಂತ್ವನ ತಂದಿರುವುದು ವಾಸ್ತವ್ಯ ಪ್ರಮಾಣಪತ್ರ ಯೋಜನೆ. ಜಮ್ಮು-ಕಾಶ್ಮೀರದಲ್ಲಿ 15 ವರ್ಷಗಳಿಂದ ನೆಲೆಸಿರುವವರಿಗೆ ಅಥವಾ 7 ವರ್ಷದಿಂದ ವಿದ್ಯಾಭ್ಯಾಸ ಮಾಡುತ್ತಿರುವ ಅಥವಾ 10ನೇ ತರಗತಿ ಅಥವಾ ಪಿಯುಸಿ ಪರೀಕ್ಷೆ ಬರೆದಿರುವವರಿಗೆ ಇಲ್ಲಿನ ವಾಸ್ತವ್ಯ ಪ್ರಮಾಣ ಪತ್ರ (ಡೊಮಿಸೈಲ್) ಸಿಗುತ್ತಿದೆ. ಈಗ ಮಹಿಳೆಯರೂ ಭೂಮಿ ಖರೀದಿಸಲು ಅವಕಾಶ ನೀಡಲಾಗಿದೆ. ಕಾಶ್ಮೀರದ ಹೊರಗಿನ ಪುರುಷನನ್ನು ಮದುವೆಯಾದರೂ ತಮ್ಮ ಭೂಮಿಯನ್ನು ಮಕ್ಕಳಿಗೆ ವರ್ಗಾಯಿಸಬಹುದು. ಮತ್ತೆ ಜಮ್ಮು-ಕಾಶ್ಮೀರವನ್ನು ರಾಜ್ಯವನ್ನಾಗಿ ಮಾಡಬೇಕು ಎನ್ನುವ ಬೇಡಿಕೆಯೇನೋ ಇದೆ. ಅದನ್ನು ಸೂಕ್ತ ಸಮಯದಲ್ಲಿ ಮಾನ್ಯ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಸದ್ಯಕ್ಕೆ ಈ ಪ್ರದೇಶದಲ್ಲಿ ಶಾಂತಿ, ಅಭಿವೃದ್ಧಿ ನೆಲೆಸಬೇಕು. ಹಿಂದಿನ ರಾಜ್ಯ ಸರ್ಕಾರಗಳು ಭಯೋತ್ಪಾದನೆಯನ್ನು ಮಟ್ಟ ಹಾಕದೆ ಜನರನ್ನು ವಿಭಜಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತ ಬಂದಿದ್ದರಿಂದ ಇಲ್ಲಿ ಅಲ್ಪಸಂಖ್ಯಾತರೆನಿಸಿರುವ ಹಿಂದೂ, ಸಿಖ್, ಬೌದ್ಧ ಧರ್ವಿುಯರಿಗೆ ಆತಂಕ ಸೃಷ್ಟಿಯಾಗಿತ್ತು.

  ಉದ್ಯೋಗಸೃಷ್ಟಿ: ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿರುವ ಮಾಹಿತಿಯಂತೆ ಕಳೆದ 4 ವರ್ಷಗಳಲ್ಲಿ ಜಮ್ಮು-ಕಾಶ್ಮೀರ ಸರ್ಕಾರವು 29,295 ಹುದ್ದೆಗಳನ್ನು ಭರ್ತಿ ಮಾಡಿದೆ. 12,560 ಯುವಕರಿಗೆ ಉದ್ಯೋಗಕ್ಕಾಗಿ ಕೌಶಲ ತರಬೇತಿ ನೀಡಲಾಗಿದೆ. 2,504 ಅಭ್ಯರ್ಥಿಗಳು ನೇಮಕಾತಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಅಂತಾರಾಷ್ಟ್ರೀಯ ಗಡಿಯ ಸಮೀಪ ವಾಸಿಸುವವರಿಗೆ ಸಾರ್ವಜನಿಕ ಸೇವೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡ 3ರಷ್ಟು ಮೀಸಲು ಒದಗಿಸಲಾಗಿದೆ.

  ಮನರಂಜನೆಗೂ ಬಂತು ಕಾಲ: 2019ರ ಮುಂಚೆ ಕಣಿವೆ ರಾಜ್ಯದಲ್ಲಿ ಒಂದೇಒಂದು ಮಲ್ಟಿಪ್ಲೆಕ್ಸ್ ಥೇಟರ್ ಇರಲಿಲ್ಲ. ಈಗ ಶ್ರೀನಗರದಲ್ಲಿ ಮಲ್ಟಿಪ್ಲೆಕ್ಸ್ ಥೇಟರ್ ಆರಂಭಿಸಲಾಗಿದ್ದು, ಕೆಲ ಹಳೆಯ ಚಿತ್ರಮಂದಿರಗಳು ಪುನರಾರಂಭಗೊಂಡಿವೆ. ನಾಲ್ಕು ವರ್ಷಗಳಲ್ಲಿ 300 ಸಿನಿಮಾಗಳು ಪ್ರದರ್ಶನ ಕಂಡಿವೆ.

  ಹೊಸ ಅವಕಾಶಗಳು: ವಿಧಿ 35ಎ ರದ್ದಾದರೆ ಭಾರತದ ಇತರ ಭಾಗಗಳಿಂದ ಜನರು ಬಂದು ತಮ್ಮೆಲ್ಲ ಭೂಮಿಯನ್ನು ಖರೀದಿಸುತ್ತಾರೆ ಎಂಬ ಆತಂಕ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಜನರದ್ದಾಗಿತ್ತು. ಆದರೆ ಅಂಥದ್ದೇನೂ ಆಗಿಲ್ಲ. ಈ ಮೊದಲು ಭಾರತದ ಇತರ ಭಾಗಗಳಿಂದ ಯಾವುದೇ ಪ್ರತಿಭಾವಂತ ವೃತ್ತಿಪರರು ಇಲ್ಲಿಗೆ ಬಂದು ಹೆಚ್ಚು ಕಾಲ ಕೆಲಸ ಮಾಡಲು ಸಿದ್ಧರಿರಲಿಲ್ಲ. ಈಗ ಹೊಸ ಅವಕಾಶಗಳಿಗೆ ಈ ಪ್ರದೇಶ ತೆರೆದುಕೊಳ್ಳುತ್ತಿದೆ. ಅದಕ್ಕಾಗಿ, ಭಯೋತ್ಪಾದನೆಯ ಅಂತ್ಯ ಮತ್ತು ಕಾಶ್ಮೀರಿ ಪಂಡಿತರ ಆಸ್ತಿಗಳನ್ನು ಪುನಃಸ್ಥಾಪಿಸುವುದು ಅತ್ಯಗತ್ಯ.

  ಬಾಗಿಲು ತೆರೆದ ಶಾಲೆಗಳು: ಭಯೋತ್ಪಾದಕರ ಬೆದರಿಕೆಯಿಂದ ಮುಚ್ಚಿದ್ದ ಶಾಲೆಗಳ ಪೈಕಿ 531 ಶಾಲೆಗಳನ್ನು ಮತ್ತೆ ಆರಂಭಿಸಲಾಗಿದೆ. ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಶೇ. 78ರಷ್ಟು ಏರಿಕೆಯಾಗಿದೆ. ಪರೀಕ್ಷೆಗಳು ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿವೆ.

  ekata yatra

  ಭಯೋತ್ಪಾದನೆಗೆ ಅಂಕುಶ: ಕೇಂದ್ರ ಸರ್ಕಾರವೇ ಸುಪ್ರೀಂ ಕೋರ್ಟ್​ಗೆ ನೀಡಿದ ಮಾಹಿತಿಯಂತೆ ಭಯೋತ್ಪಾದನೆ ದಾಳಿ ಅಥವಾ ಚಟುವಟಿಕೆಗಳಲ್ಲಿ 2018ಕ್ಕೆ ಹೋಲಿಸಿದರೆ 2023ರಲ್ಲಿ ಶೇಕಡ 45.2ರಷ್ಟು ಕುಸಿತ ಕಂಡುಬಂದಿದೆ. ಅಕ್ರಮ ನುಸುಳುವಿಕೆ ಶೇಕಡ 90ರಷ್ಟು ಇಳಿಮುಖವಾಗಿದೆ. ಕಲ್ಲುತೂರಾಟದ ಕೃತ್ಯಗಳು ಶೇಕಡ 97ರಷ್ಟು ಕಡಿಮೆಯಾಗಿವೆ. ಭದ್ರತಾ ಪಡೆಗಳು ಪ್ರಾಣ ಕಳೆದುಕೊಳ್ಳುವ ಪ್ರಕರಣಗಳಲ್ಲಿ ಶೇ. 65 ಇಳಿಕೆ ಕಂಡುಬಂದಿದೆ. 2018ರಲ್ಲಿ ಕಲ್ಲುತೂರಾಟದ 1,767 ಪ್ರಕರಣಗಳು ಸಂಭವಿಸಿದ್ದವು. 2023ರಲ್ಲಿ ಈ ಬಗೆಯ ಒಂದೇಒಂದು ಪ್ರಕರಣ ದಾಖಲಾಗಿಲ್ಲ. 2018ರಲ್ಲಿ ಪ್ರತ್ಯೇಕತಾವಾದಿಗಳ ಜತೆ ಹಲವು ಸಂಘಟನೆಗಳು ಸೇರಿ 52 ದಿನಗಳ ಬಂದ್ ನಡೆಸಿದ್ದವು. 2023ರಲ್ಲಿ ಒಂದು ದಿನ ಕೂಡ ಬಂದ್ ಮಾಡಲಾಗಿಲ್ಲ. ವಾಣಿಜ್ಯ ವಹಿವಾಟು, ಸಾರ್ವಜನಿಕ ಸಾರಿಗೆ, ಸರ್ಕಾರಿ ಕಚೇರಿ, ಶಿಕ್ಷಣ, ಆರೋಗ್ಯ ಸಂಸ್ಥೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.

  ಕೈಗಾರಿಕೆಗಳತ್ತ ಚಿತ್ತ: ಮುಂಚೆಯೆಲ್ಲ ಹಿಂಸಾಚಾರ, ಭಯೋತ್ಪಾದನೆ ಕೃತ್ಯಗಳ ಪರಿಣಾಮ ಜಮ್ಮು-ಕಾಶ್ಮೀರದಲ್ಲಿ ಯಾರೂ ಹೂಡಿಕೆ ಮಾಡಲು ಮುಂದೆ ಬರುತ್ತಿರಲಿಲ್ಲ. ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಹೊರರಾಜ್ಯದವರು ಇಲ್ಲಿ ಭೂಮಿ ಖರೀದಿಸಬಹುದಾದ್ದರಿಂದ ಪರಿಸ್ಥಿತಿ ಬದಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ 188 ಬೃಹತ್ ಹೂಡಿಕೆದಾರರು, ಕೈಗಾರಿಕೆ, ಕಂಪನಿಗಳ ಸ್ಥಾಪನೆಗಾಗಿ ಭೂಮಿಯನ್ನು ಖರೀದಿಸಿ, ಸ್ವಾಧೀನಪಡಿಸಿಕೊಂಡಿದ್ದಾರೆ. ವಿದೇಶಿ ನೇರ ಹೂಡಿಕೆಯೂ ಆರಂಭವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್​ನ (ಯುಎಇ) ಎಂಆರ್ ಗ್ರೂಪ್ 500 ಕೋಟಿ ರೂ. ಹೂಡಿಕೆ ಮಾಡುತ್ತಿದ್ದು, 10 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.

  ಚಿತ್ರಣ ಬದಲಿಸಿದ ಅಭಿವೃದ್ಧಿ ಪರ್ವ: ಅನುಚ್ಛೇದ 370 ಮತ್ತು 35ಎ ರದ್ದತಿಯ ಪ್ರಮುಖ ಪರಿಣಾಮವೆಂದರೆ ಜನರು ಈಗ ಆಶಾವಾದಿಗಳಾಗಿದ್ದಾರೆ. ಪ್ರವಾಸೋದ್ಯಮ ಪುನಶ್ಚೇತನದ ಹೊಸ ಭರವಸೆಗಳೊಂದಿಗೆ ಕಾಶ್ಮೀರ ಮತ್ತೆ ಸ್ವರ್ಗವಾಗುವ ನಿರೀಕ್ಷೆ ಗರಿಗೆದರಿದೆ. 2022ರಲ್ಲಿ 1.88 ಕೋಟಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿರುವುದು ಗಮನಾರ್ಹ. ಅಮರನಾಥ ಯಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆಯೂ ಕಳೆದ ಮೂರು ವರ್ಷಗಳಿಂದ (2021, 2022, 2023) ಹೆಚ್ಚಿದೆ. ಲಕ್ಷಾಂತರ ಭಕ್ತರು ಬಾಬಾ ಅಮರನಾಥನ ದರ್ಶನ ಪಡೆದುಕೊಂಡಿದ್ದಾರೆ. ಈ ವರ್ಷ 4.3 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಇದರಿಂದ ಸ್ಥಳೀಯ ಆರ್ಥಿಕ ಚಟುವಟಿಕೆಗಳು ಮತ್ತೆ ವೇಗ ಪಡೆದಿವೆ. ಹಲವು ದಶಕಗಳಿಂದ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಹೆಸರಿನಲ್ಲಿ ಜನರ ನಡುವೆ ಭೇದವೆಣಿಸಿ ಅಸಮಾನತೆ ತೋರುತ್ತಿದ್ದ ನಿಯಮಗಳು ಈಗಿಲ್ಲ. ಇವುಗಳಿಂದ ಸೋತು ಸುಣ್ಣವಾಗಿದ್ದ ಕಾಶ್ಮೀರಿಗಳು ಈಗ ಕೇಂದ್ರ ಸರ್ಕಾರದ ಯೋಜನೆಗಳ ಫಲ ಪಡೆಯುತ್ತಿದ್ದಾರೆ. ಪ್ರಸ್ತುತ ಸರ್ಕಾರ ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿ, ಸಾಮರ್ಥ್ಯವರ್ಧನೆ ಮೂಲಕ ಕಾಶ್ಮೀರಿಗಳ ಅವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಗಮನ ಹರಿಸಿದೆ. ಪ್ರಧಾನಿಯವರ ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಸುಮಾರು 80 ಸಾವಿರ ಕೋಟಿ ರೂ. ಮೊತ್ತದಲ್ಲಿ 53 ಯೋಜನೆಗಳನ್ನು ಆರಂಭಿಸಲಾಗಿದೆ. ಐಐಟಿ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಐಐಎಂ ಸ್ಥಾಪನೆಯಾಗಲಿದ್ದು, ಐದು ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ಸಿಕ್ಕಿದೆ. ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

  ಏಕತಾ ಯಾತ್ರಾ: ಅದು 1991. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಹಾವಳಿ ತೀವ್ರವಾಗಿದ್ದ ಕಾಲ. ಅಲ್ಲದೆ, ಶ್ರೀನಗರದ ಲಾಲ್ ಚೌಕ್​ನಲ್ಲಿ ತ್ರಿವರ್ಣ ಧ್ವಜ ಹಾರಿಸಲು ಬಿಡುವುದಿಲ್ಲ ಎಂದು ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಸಂಘಟನೆಗಳು ಸವಾಲು ಒಡ್ಡಿದವು. ಆಗ ಬಿಜೆಪಿ ಅಧ್ಯಕ್ಷರಾಗಿದ್ದ ಡಾ. ಮುರಳಿ ಮನೋಹರ ಜೋಷಿ ‘ಏಕತಾ ಯಾತ್ರೆ’ ಆರಂಭಿಸಿ ಪ್ರಾಣಭಯವನ್ನು ಲೆಕ್ಕಿಸದೆ ಲಾಲ್ ಚೌಕ್ ತಲುಪಿ ತ್ರಿವರ್ಣ ಧ್ವಜ ಹಾರಿಸಿದರು (1991ರ ಜನವರಿ 26). ಆಗ ಅವರ ಯಾತ್ರೆಯುದ್ದಕ್ಕೂ ಬೆಂಬಲವಾಗಿ ನಿಂತವರು ಈಗಿನ ಪ್ರಧಾನಿ ನರೇಂದ್ರ ಮೋದಿ.

  ಹೋರಾಟದ ಪಥ: ‘ಒಂದೇ ದೇಶದಲ್ಲಿ ಎರಡು ಸಂವಿಧಾನ, ಎರಡು ಗುರುತು (ಧ್ವಜ), ಎರಡು ಪ್ರಧಾನಿಗಳು ನಡೆಯುವುದಿಲ್ಲ’ ಎಂದು ಮೊದಲ ಬಾರಿ (1952) ಗಟ್ಟಿ ದನಿ ಎತ್ತಿದವರು ಭಾರತೀಯ ಜನಸಂಘದ ಸ್ಥಾಪಕರಾದ ಶ್ಯಾಮ ಪ್ರಸಾದ್ ಮುಖರ್ಜಿ. ಆ ದಿನಗಳಲ್ಲಿ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯನ್ನು ‘ಪ್ರಧಾನಮಂತ್ರಿ’ ಎಂದು ಕರೆಯಲಾಗುತ್ತಿತ್ತು. 33ನೇ ವಯಸ್ಸಿಗೆ ಕೊಲ್ಕತ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಶ್ಯಾಮ ಪ್ರಸಾದರು 1951ರಲ್ಲಿ ಜನಸಂಘವನ್ನು ಸ್ಥಾಪಿಸಿದರು. ಜಮ್ಮು-ಕಾಶ್ಮೀರ ಪ್ರವೇಶಕ್ಕೆ ‘ಪರ್ವಿುಟ್’ ಪಡೆಯಬೇಕೆಂಬ ಆಗಿನ ನೀತಿಯನ್ನು ವಿರೋಧಿಸಿ ಕಾಶ್ಮೀರಕ್ಕೆ ಯಾತ್ರೆ ಕೈಗೊಂಡ ಇವರು ಅಲ್ಲಿ ಬೃಹತ್ ರ್ಯಾಲಿಯನ್ನೂ ನಡೆಸಿ ದೇಶದ ಕಾನೂನುಗಳು ಜಮ್ಮು-ಕಾಶ್ಮೀರದಲ್ಲೂ ಜಾರಿಯಾಗಬೇಕು, ಪ್ರತ್ಯೇಕತೆ ತೊಲಗಬೇಕು ಎಂದು ಬಲವಾಗಿ ಆಗ್ರಹಿಸಿದ್ದರು. ಆಗಿನ ಶೇಖ್ ಅಬ್ದುಲ್ಲಾ ಸರ್ಕಾರ ಶ್ಯಾಮ ಪ್ರಸಾದರನ್ನು ಬಂಧಿಸಿ ಜೈಲಿಗೆ ಅಟ್ಟಿತು. ಕಾರಾಗೃಹಕ್ಕೆ ಸೇರಿದ ಕೆಲ ದಿನಗಳಲ್ಲಿ ಮುಖರ್ಜಿ ಮೃತಪಟ್ಟರು. ಅವರ ಸಾವಿನ ಕುರಿತಂತೆ ಯಾವ ತನಿಖೆಯನ್ನು ಕೈಗೊಳ್ಳಲಾಗಿಲ್ಲ. ‘ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವುದರ ಮೂಲಕ ಮುಖರ್ಜಿಯವರ ಕನಸು ಈಡೇರಿದಂತಾಗಿದೆ’ ಎಂದಿದೆ ಬಿಜೆಪಿ.

  ವಿವಾದದ ಹಾದಿ

  • 2018 ಡಿಸೆಂಬರ್ 20: ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ
  • 2019 ಜುಲೈ 3: ರಾಷ್ಟ್ರಪತಿ ಆಳ್ವಿಕೆ ಮುಂದುವರಿಕೆ
  • 2019 ಆಗಸ್ಟ್ 05: ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರ್ಕಾರ
  • 2019 ಆಗಸ್ಟ್ 06: ವಿಶೇಷ ಸ್ಥಾನಮಾನ ರದ್ದತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೊದಲ ಅರ್ಜಿ ದಾಖಲು
  • 2019 ಆಗಸ್ಟ್ 10: ನ್ಯಾಷನಲ್ ಕಾನ್ಪರೆನ್ಸ್ ಪಕ್ಷದಿಂದ ಅರ್ಜಿ ದಾಖಲು
  • 2019 ಆಗಸ್ಟ್ 28: ಸುಪ್ರೀಂ ಕೋರ್ಟ್ ನಿಂದ ಕೇಂದ್ರ ಸರ್ಕಾರಕ್ಕೆ ನೋಟಿಸ್
  • 2019 ಸೆಪ್ಟೆಂಬರ್ 19: ಪ್ರಕರಣದ ವಿಚಾರಣೆಗಾಗಿ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ ರಚಿಸಿದ ಸರ್ಕಾರ.
  • 2022: ವಿಚಾರಣೆ ತೀವ್ರಗೊಳಿಸಿದ ನ್ಯಾಯಾಲಯ
  • 2023 ಸೆಪ್ಟೆಂಬರ್ 05: 23 ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ಕಾದಿರಿಸಿದ ಸುಪ್ರೀಂ ನ್ಯಾಯಾಲಯ
  • 2023 ಡಿಸೆಂಬರ್ 11: ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದ ಕೋರ್ಟ್

  ಯಾರು ಏನೆಂದರು?

  ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇವೆ. 4 ವರ್ಷಗಳ ಹಿಂದೆ 370ನೇ ವಿಧಿಯನ್ನು ಹಿಂಪಡೆದ ನಿರ್ಧಾರವನ್ನು ಕೂಡ ಸ್ವಾಗತಿಸಿದ್ದೆವು. ಈಗ ಬೇಗ ಚುನಾವಣೆ ನಡೆದು, ಜನರ ದನಿ ವಿಧಾನಸಭೆಯಲ್ಲಿ ಪ್ರತಿಧ್ವನಿಸಲಿದೆ.

  | ಪ್ರಿಯಾಂಕಾ ವಾದ್ರಾ ಗಾಂಧಿ ಕಾಂಗ್ರೆಸ್ ನಾಯಕಿ

  ನ್ಯಾಯಾಲಯದ ಆದೇಶ ದುಃಖ ದಾಯಕ ಆದರೆ, ನಾವು ಇದನ್ನು ಒಪ್ಪಿಕೊಳ್ಳಬೇಕು.

  | ಗುಲಾಂ ನಬಿ ಆಜಾದ್ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ

  ತೀರ್ಪನ್ನು ಸ್ವಾಗತಿಸುತ್ತೇವೆ. ನಮ್ಮ ದೇಶದ ಅವಿಭಾಜ್ಯ ಅಂಗವಾಗಿರುವ ಜಮ್ಮು-ಕಾಶ್ಮೀರಕ್ಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ಸೇರ್ಪಡೆ ಮಾಡಿ, ಗ್ರೇಟರ್ ಕಾಶ್ಮೀರಕ್ಕೆ ಚುನಾವಣೆ ನಡೆಸಬೇಕು. ಕಾಶ್ಮೀರಿ ಪಂಡಿತರ ಸುರಕ್ಷಿತ ಹಿಂದಿರುಗುವಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಖಚಿತಪಡಿಸಬೇಕು.

  | ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮಾಜಿ ಸಿಎಂ

  ಸುಪ್ರೀಂ ಕೋರ್ಟ್ ತೀರ್ಪಿನಿಂದ ನಿರಾಶನಾಗಿದ್ದೇನೆ. ಆದರೆ, ಸೋಲು ಒಪ್ಪಿಕೊಂಡಿಲ್ಲ. ಹೋರಾಟ ಮುಂದುವರಿಯಲಿದೆ. ಇಲ್ಲಿಯವರೆಗೆ ತಲುಪಲು ಬಿಜೆಪಿಗೆ ಹಲವು ದಶಕಗಳೇ ಬೇಕಾದವು. ನಾವು ಕೂಡ ದೀರ್ಘಾವಧಿಯ ‘ಓಟ’ಕ್ಕೆ ಸಿದ್ಧರಾಗಿದ್ದೇವೆ.

  | ಓಮರ್ ಅಬ್ದುಲ್ಲಾ ಜಮ್ಮು-ಕಾಶ್ಮೀರದ ಮಾಜಿ ಸಿಎಂ

  ನಾವು ತೀರ್ಪಿನಿಂದ ನಿರಾಶರಾಗಿ ದ್ದೇವೆ. ಇದರಿಂದ ದೂರಗಾಮಿ ಪರಿಣಾಮಗಳಾಗುತ್ತವೆ. ಮುಂದೊಂದು ದಿನ ದೇಶದ ಪ್ರಮುಖ ನಗರಗಳನ್ನೂ ಬಿಜೆಪಿಯವರು ಕೇಂದ್ರಾಡಳಿತ ಪ್ರದೇಶ ಮಾಡಿಬಿಡಬಹುದು.

  | ಅಸದುದ್ದೀನ್ ಒವೈಸಿ ಎಐಎಂಐಎಂ ಮುಖಂಡ

  ನಾವು ಧೈರ್ಯ-ನಿರೀಕ್ಷೆ ಕಳೆದುಕೊಂಡಿಲ್ಲ. ಸುಪ್ರೀಂ ಕೋರ್ಟ್​ನ ತೀರ್ಪು ಒಂದು ಕಠಿಣವಾದ ತಿರುವಾಗಿದೆ. ಆದರೆ, ಇದುವೇ ಗುರಿಯಲ್ಲ. ನಾವು ಸೋಲು ಒಪ್ಪಿಕೊಂಡು, ನಿರೀಕ್ಷೆಗಳನ್ನು ತ್ಯಜಿಸಬೇಕೆಂದು ನಮ್ಮ ವಿರೋಧಿಗಳು ಬಯಸುತ್ತಿದ್ದಾರೆ. ಆದರೆ, ಹಾಗಾಗುವುದಿಲ್ಲ.

  | ಮೆಹಬೂಬಾ ಮುಫ್ತಿ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ

  ಆರ್ಟಿಕಲ್ 370 ಹಿಂಪಡೆದ ಕೇಂದ್ರ ಸರ್ಕಾರದ ನಿಲುವನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್ ಆದೇಶ ಸಂತಸ ತಂದಿದೆ. ಇದರಿಂದ ಬೇರೆ ರಾಜ್ಯಗಳಿಗೆ ಏನೆಲ್ಲ ಅನುಕೂಲ ಆಗುತ್ತದೆಯೋ ಅದೇ ಜಮ್ಮು-ಕಾಶ್ಮೀರಕ್ಕೂ ಅನ್ವಯ ಆಗುತ್ತದೆ.

  | ಎಚ್.ಡಿ. ದೇವೇಗೌಡ ಮಾಜಿ ಪ್ರಧಾನಿ

  ಕೇಂದ್ರ ಸರ್ಕಾರ ಕೈಗೊಂಡ ನಿರ್ಣಯ ಸಂಪೂರ್ಣವಾಗಿ ಸಂವಿಧಾನಾತ್ಮಕವಾಗಿತ್ತು ಎಂಬುದು ಸುಪ್ರೀಂ ಕೋರ್ಟ್ ತೀರ್ಪಿನ ಮೂಲಕ ಸ್ಪಷ್ಟವಾಗಿದೆ. ಕೇಂದ್ರದ ನಿರ್ಣಯವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ.

  | ಅಮಿತ್ ಷಾ ಕೇಂದ್ರ ಗೃಹ ಸಚಿವ

  ಸಂವಿಧಾನದ 370 ಮತ್ತು 35ಎ ವಿಧಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಶ್ಲಾಘನೀಯ. ಇದರಿಂದ ಒಂದು ಭಾರತ, ಭವ್ಯ ಭಾರತ ಎಂಬ ಪರಿಕಲ್ಪನೆಗೆ ಇನ್ನಷ್ಟು ಬಲ ಸಿಕ್ಕಂತಾಗಿದೆ. ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಜೋಡಿಸುವ ಮೂಲಕ ದೇಶದ ಮುಖ್ಯವಾಹಿನಿಗೆ ತಂದ ಪ್ರಧಾನಿ ನರೇಂದ್ರ ಮೋದಿ ಅವರ ‘ರಾಷ್ಟ್ರ ಮೊದಲು’ ಪರಿಕಲ್ಪನೆಗೆ ಧನ್ಯವಾದ ಸಲ್ಲಿಸುತ್ತೇನೆ.

  | ಯೋಗಿ ಆದಿತ್ಯನಾಥ ಉ.ಪ್ರ. ಸಿಎಂ

  370ನೇ ವಿಧಿ ಜಮ್ಮು-ಕಾಶ್ಮೀರಕ್ಕೆ ಕಳಂಕವಾಗಿತ್ತು. ಇದನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಸುಪ್ರೀಂ ಕೋರ್ಟ್ ನಿಂದಲೂ ಐತಿಹಾಸಿಕ ತೀರ್ಪು ಬಂದಿದೆ. ದೇಶದ ಎಲ್ಲ ರಾಜ್ಯಗಳಿಗೂ ಒಂದೇ ಕಾನೂನು ಇರಬೇಕೆಂಬ ನಮ್ಮ ನಿಲುವಿಗೆ ನ್ಯಾಯಾಲಯ ಸಮ್ಮತಿ ನೀಡಿರುವುದು ಸಂತಸದ ವಿಷಯ.

  | ಪ್ರಲ್ಹಾದ ಜೋಶಿ ಕೇಂದ್ರ ಸಚಿವ

  ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕಲಂ 370 ಹಿಂಪಡೆದ ಕೇಂದ್ರದ ಕ್ರಮವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯುವ ಮೂಲಕ, ಐತಿಹಾಸಿಕ ತೀರ್ಪು ನೀಡಿದೆ. ಸ್ವಾತಂತ್ರೊ್ಯೕತ್ತರ ಭಾರತದಲ್ಲಿ ಈ ನಿರ್ಧಾರ ಪ್ರಮುಖ ಮೈಲಿಗಲ್ಲಾಗಿದೆ. ಭಾರತದ ಏಕತೆ ಮತ್ತು ಸಮಗ್ರತೆ ಎಂದಿಗೂ ಪ್ರಶ್ನಿಸಲಾಗದು.

  | ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

  ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ಪ್ರತ್ಯೇಕ ಸ್ಥಾನಮಾನ ರದ್ದುಪಡಿಸಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದು ಸ್ವಾಗತಾರ್ಹ. ನಮ್ಮ ನೇತಾರರಾದ ಶ್ಯಾಮಾ ಪ್ರಸಾದ್ ಮುಖರ್ಜಿಯವರು ಕಾಶ್ಮೀರಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ್ದರು. ಹೋರಾಟದಲ್ಲಿ ಪಾಲ್ಗೊಂಡು ನಾವೂ ಲಾಠಿ ಏಟು ತಿಂದಿದ್ದೆವು.

  | ಆರ್.ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕ

  ನಾನು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಎಲ್ಲ ಪರಿಸ್ಥಿತಿ, ವಿಷಯಗಳನ್ನು ಅವಲೋಕಿಸಿ ನ್ಯಾಯಾಲಯ ತೀರ್ಪು ನೀಡಿದೆ. ಜಮ್ಮು-ಕಾಶ್ಮೀರಕ್ಕೆ ಶೀಘ್ರ ರಾಜ್ಯದ ದರ್ಜೆ ಕೊಡಬೇಕು ಎಂದು ಪ್ರಧಾನಿಯವರಲ್ಲಿ ವಿನಂತಿಸುತ್ತೇನೆ. ಇದಕ್ಕಾಗಿ ಚುನಾವಣೆ ನಡೆಯುವವರೆಗೂ ಕಾಯುವುದು ಬೇಡ. ಚುನಾವಣೆ ನಡೆದರೆ ಅದು ರಾಜ್ಯಕ್ಕಾಗಿ ನಡೆಯಲಿ, ಕೇಂದ್ರಾಡಳಿತ ಪ್ರದೇಶಕ್ಕಾಗಿ ಅಲ್ಲ.

  | ಕರಣ್ ಸಿಂಗ್ ಕಾಂಗ್ರೆಸ್ ಹಿರಿಯ ಮುಖಂಡ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts