ಬೆಂಗಳೂರು: ‘ದೇವರಿಂದ ಮನುಷ್ಯನವರೆಗೂ ವಿಘ್ನಗಳು ಬಂದಿವೆ. ಅವೆಲ್ಲವನ್ನು ಎದುರಿಸಿ ಸಿನಿಮಾ ಮುಗಿಸಿದ್ದು ಸಾಧನೆ. ಅದಕ್ಕೆ ಪೋಸ್ಟರ್ನಲ್ಲಿ ಕಾಲೆಳೆದವರೇ ಸ್ಪೂರ್ತಿ ಎಂದು ಹಾಕಿಸಿಕೊಂಡಿದ್ದೇವೆ’ ಎನ್ನುತ್ತ ತಮ್ಮ ಚಿತ್ರ ‘ವೇಷಧಾರಿ’ ಬಗ್ಗೆ ಹೇಳಿಕೊಂಡರು ನಿರ್ದೇಶಕ ಶಿವಾನಂದ ಭೂಷಿ.
‘ಇಲ್ಲಿರುವುದು ಸಾಮಾಜಿಕ ವಿಡಂಬನೆಯ ಕಥಾಹಂದರ. ಹುಡುಗನೊಬ್ಬ ತನ್ನ ಆಸೆಗಳಿಗಾಗಿ ನಾನಾ ವೇಷಗಳನ್ನು ಹಾಕಿಕೊಂಡರೂ ಅವು ಈಡೇರುವುದಿಲ್ಲ. ಕೊನೆಗೆ ಜಿಗುಪ್ಸೆ ಹೊಂದಿ ಎಲ್ಲ ತ್ಯಜಿಸಲು ಮುಂದಾದಾಗ ಬಯಸಿದ್ದೆಲ್ಲವೂ ಬೆನ್ನಟ್ಟಿ ಬರುತ್ತವೆ. ನಂತರ ಏನೇನಾಗುತ್ತದೆ ಎಂಬುದೇ ಚಿತ್ರದ ಕಥೆ’ ಎನ್ನುತ್ತಾರೆ ನಿರ್ದೇಶಕರು.
‘ಈ ಸಿನಿಮಾ ಆಗಿದ್ದೇ ಒಂದು ಪವಾಡ. ಕೆಲವು ನಿರ್ವಪಕರು ಕಥೆ ಇಷ್ಟವಾದರೂ ಇದು ಮಠಾಧಿಪತಿಗಳು- ಜ್ಯೋತಿಷಿಗಳ ವಿರುದ್ಧ ಇರುವುದರಿಂದ ಬಂಡವಾಳ ಹಾಕುವುದು ಕಷ್ಟ ಎಂದರು. ಕೊನೆಗೆ ಹುಕ್ಕೇರಿಯ ಸಿವಿಲ್ ಕಂಟ್ರಾಕ್ಟರ್ ಅನಿಲ್ ಮತ್ತಿತರರು ಬಂಡವಾಳ ಹೂಡಿದರು. ಅದರಿಂದಾಗಿ ಈ ಸಿನಿಮಾ ಆಯಿತು’ ಎನ್ನುತ್ತ ಚಿತ್ರದ ನಿರ್ದೇಶನಕ್ಕಾಗಿ ಪಟ್ಟ ಕಷ್ಟದ ದಿನ ನೆನಪಿಸಿಕೊಂಡರು ಶಿವಾನಂದ.
ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಪ್ರೋಗ್ರಾಮ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿಕೊಂಡಿದ್ದ ಶಿವಾನಂದ ಭೂಷಿ, ‘ಇದು ನನ್ನದೇ ಅನುಭವದ ಕಥನ. ಸುದ್ದಿವಾಹಿನಿಯೊಂದಕ್ಕೆ ಕಾರ್ಯಕ್ರಮ ರೂಪಿಸುವಾಗ ರಾಜ್ಯದ ಹಲವಾರು ಮಠಾಧಿಪತಿಗಳು, ಜ್ಯೋತಿಷಿಗಳು, ರಾಜಕಾರಣಿಗಳ ಮುಖಾಮುಖಿ ಮಾತುಕತೆ ಜತೆಗೆ ಅವರನ್ನು ಹತ್ತಿರದಿಂದ ನೋಡುವುದಕ್ಕೂ ಸಾಧ್ಯವಾಯಿತು. ಅವರೆಲ್ಲ ಹೇಳುವುದೇ ಒಂದು ರೀತಿ, ಬದುಕುವುದೇ ಇನ್ನೊಂದು ರೀತಿ. ಅವರೆಲ್ಲ ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ ಎನಿಸಿದ್ದರಿಂದ ಈ ಕಥೆ ಬರೆದಿದ್ದೇನೆ’ ಎನ್ನುತ್ತಾರೆ ಶಿವಾನಂದ.
ಆರ್ಯನ್ ಚಿತ್ರದ ನಾಯಕನಾಗಿದ್ದು, ನಾಯಕಿಯರಾಗಿ ಸೋನಂ ರೈ, ಶ್ರುತಿ ರಾಜೇಂದ್ರ, ರಿತನ್ಯಕೃಪಾ ನಟಿಸಿದ್ದಾರೆ. ವಿಭಿನ್ನ ಪಾತ್ರಗಳ ಜತೆಗೆ ಪ್ರೇಕ್ಷಕರನ್ನು ರಂಜಿಸುವ ಎಲ್ಲ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿದ್ದು, ಹಾಡು, ಕತೆ ಸಿನಿಮಾದ ಹೈಲೈಟ್ ಆಗಲಿದೆ ಎನ್ನುವ ವಿಶ್ವಾಸ ಶಿವಾನಂದ ಅವರದ್ದು. ಹುಕ್ಕೇರಿಯ ಎಸ್.ಎನ್. ವೀರಣ್ಣ, ಅನಿಲ್ ಹೆಚ್. ಅಂಬಿ ಮತ್ತು ಹೆಚ್.ಕೆ. ಫ್ರೆಂಡ್ಸ್ ಸಹಭಾಗಿತ್ವದಲ್ಲಿ ‘ಸಾಯಿ ಭಗವಾನ್ ಕಂಬೈನ್ಸ್’ ಮೂಲಕ ನಿಮಾಣ ಆಗಿರುವ ಈ ಚಿತ್ರ ಜ. 3ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.