ಮೂವತ್ತರ ನಂತರವೇ ವಿಶೇಷ!

ಮದುವೆಯಾಗಿ ವರ್ಷವಾಗುತ್ತಿರುವಂತೆಯೇ ‘ವಿಶೇಷ ಏನಾದ್ರೂ ಇದೆಯಾ?’ ಎಂದು ಎಲ್ಲರೂ ಕಾಲೆಳೆಯುವುದು ಗ್ಯಾರಂಟಿ. ಆದರೆ, ವಿದ್ಯಾವಂತ ಯುವತಿಯರು ಮಾತ್ರ ಇದಕ್ಕೆಲ್ಲ ತಲೆಕೆಡಿಸಿಕೊಳ್ಳುತ್ತಿಲ್ಲ. ‘ಹೆಚ್ಚಿನ ಓದು, ಉದ್ಯೋಗದ ಬಳಿಕವಷ್ಟೇ ಮಗು ಪಡೆಯುತ್ತೇನೆ’ ಎನ್ನುವ ಧೋರಣೆ ಅವಳದ್ದು. ಇದು ಇಂದಿನ ಬಹುತೇಕ ನೂತನ ದಂಪತಿಯ ಪಾಲಿಸಿಯೂ ಹೌದು.

ಸೀಮಾ ಆಗಷ್ಟೆ ಪದವಿ ಮುಗಿಸಿದ್ದಳು. ಮನೆಯಲ್ಲಿ ಮದುವೆಯ ಧಾವಂತ. ಸೀಮಾಳಿಗೆ ತನ್ನ ಕಾಲ ಮೇಲೆ ತಾನು ನಿಲ್ಲುವ ತುಡಿತ. ಈಕೆಯ ಮಾತಿಗೆ ಸೊಪ್ಪು ಹಾಕದೆ ಐಟಿ ಹುಡುಗನಿಗೆ ಮದುವೆ ಮಾಡಿದರು. ಮದುವೆಯಾದ ಮೇಲೂ ಉನ್ನತ ಶಿಕ್ಷಣ ಪಡೆಯುವ ಸೀಮಾಳ ಆಸೆಗೆ ತಣ್ಣೀರೆರಚಲಿಲ್ಲ ಪತಿ. ತನ್ನಿಷ್ಟದಂತೆ ಎರಡು ವರ್ಷ ಪಿಜಿ ಮುಗಿಸಿದಳು. ಸೀಮಾಳಿಗೆ ಒಂದೊಳ್ಳೆ ಹುದ್ದೆ ಸಿಕ್ಕಮೇಲೆ ಮಗು ಪಡೆಯುವುದೆಂದು ನಿರ್ಧರಿಸಿದ ಜೋಡಿ ಫ್ಯಾಮಿಲಿ ಪ್ಲಾನಿಂಗ್ ಮೊರೆಹೊಕ್ಕು, ಮಗು ಪಡೆಯುವುದನ್ನು ಇನ್ನೆರಡು ವರ್ಷ ಮುಂದಕ್ಕೆ ಹಾಕಿತು. ಸೀಮಾಳಿಗಿನ್ನೂ ಚಿಕ್ಕ ವಯಸ್ಸು ಅಂತ ಮನೆಯವರೂ ಸುಮ್ಮನಾದರು.

ಅನು ಮನೆಯಲ್ಲಿ ಬಡತನ. ತಾನೇ ಮನೆಯ ಎಲ್ಲ ಕಷ್ಟಗಳಿಗೆ ಹೆಗಲು ಕೊಡಬೇಕಿತ್ತು. ಓದು ಮುಗಿಯುತ್ತಿದ್ದಂತೆ ಕೆಲಸಕ್ಕೆ ಸೇರಿದ್ದ ಆಕೆ ಕುಟುಂಬವನ್ನೂ ತಾನೇ ನಿರ್ವಹಿಸುವಲ್ಲಿ ಬ್ಯುಸಿ ಆದಳು. ವಯಸ್ಸು ಇಪ್ಪತ್ತೆಂಟಾಯ್ತು, ಮಗಳಿಗೆ ಮದುವೆ ಮಾಡಿ ಎಂದಾಗಲೇ ಮನೆಯವರಿಗೆ ಮಗಳ ಮದುವೆಯ ನೆನಪಾಗಿದ್ದು. ಉತ್ತಮ ವರನನ್ನು ಹುಡುಕಿ ಮದುವೆ ಮಾಡಿದರು. ಆದರೆ ಫ್ಯಾಮಿಲಿ ಪ್ಲಾನಿಂಗ್ ಕಷ್ಟ ಎನ್ನುವಂತಾಗಿತ್ತು ಅನುಗೆ. ಕಾರಣ ವಯಸ್ಸು. ಅದಾಗಲೇ ಇಪ್ಪತ್ತೆಂಟಾಗಿದೆ. ಇನ್ನು ಪ್ಲಾನಿಂಗ್ ಅಂದುಕೊಂಡು ಕುಳಿತರೆ ಮಕ್ಕಳಾಗುವುದಿಲ್ಲ ಎಂದುಕೊಂಡಾಗಲೇ ನುರಿತ ವೈದ್ಯರೊಬ್ಬರು ಸಲಹೆಯಿತ್ತರು. ‘ಆರೋಗ್ಯವಾಗಿದ್ದರೆ ಮಕ್ಕಳನ್ನು ಹೆರಬಹುದು’ ಎಂದು.

ಈ ಎರಡು ಕಥೆಗಳ ಸಾರ ಒಂದೇ. ಅವಿಭಕ್ತ ಕುಟುಂಬ ಅನ್ನುವ ಪರಿಕಲ್ಪನೆ ದೂರವಾಗಿ ಎಷ್ಟೋ ಕಾಲವಾಗಿದೆ. ಓದಿನೊಂದಿಗೆ ಉದ್ಯೋಗ ಎನ್ನುವ ಹುಡುಗಿಯರು ಮದುವೆಯಾದ ಮೇಲೂ ಕೆಲಸದಲ್ಲಿ ಮುಂದುವರಿಯಲು ಇಷ್ಟಪಡುತ್ತಾರೆ. ಗಂಡನ ಸಹಕಾರವಿದ್ದರೆ ಫ್ಯಾಮಿಲಿ ಪ್ಲಾನಿಂಗ್ ಯೋಚನೆ ಇರುತ್ತದೆ. ಇತ್ತೀಚೆಗಂತೂ ಉದ್ಯೋಗದ ನಡುವೆ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟ ಎನ್ನುವ ಕಾರಣಕ್ಕೆ ಮಹಿಳೆ ಸಮಯ ಪಡೆಯುತ್ತಾಳೆ. ಮದುವೆಯಾಗಿ 2-3 ವರ್ಷ ಕಳೆದ ಮೇಲೆ ಮಕ್ಕಳನ್ನು ಹೆತ್ತು ಕೆಲಸದಿಂದ ದೂರವಿರುವವರು ಹಲವರಾದರೆ, ಎರಡನ್ನೂ ನಿಭಾಯಿಸುವವರೂ ಸಿಗುತ್ತಾರೆ.

ಮಕ್ಕಳಿಗೆ ಉತ್ತಮ ಶಿಕ್ಷಣ

ಅನೇಕ ಸಮೀಕ್ಷೆಗಳೂ ಇದನ್ನು ಹೇಳಿವೆ. ಮಹಿಳೆ 30ರ ನಂತರ ಮಕ್ಕಳನ್ನು ಪಡೆದರೆ ಅವರಿಗೆ ಉತ್ತಮ ಶಿಕ್ಷಣ ಸಿಗುವ ಸಾಧ್ಯತೆ ಹೆಚ್ಚು. ತಾಯಿಯೂ ವಿದ್ಯಾವಂತಳಾಗಿರುತ್ತಾಳೆ. ಅಂತೆಯೇ ಶಿಕ್ಷಣ ವ್ಯವಸ್ಥೆಯಲ್ಲೂ ಬದಲಾವಣೆಗಳಾಗಿರುವುದರಿಂದ 20ಕ್ಕೆ ಮದುವೆಯಾದ ಮಹಿಳೆಯ ಮಕ್ಕಳಿಗಿಂತ 30ರ ನಂತರ ಮದುವೆಯಾದ ಮಹಿಳೆಯ ಮಕ್ಕಳು ಹೆಚ್ಚು ಕ್ರಿಯಾಶೀಲರಾಗಿರುತ್ತಾರಂತೆ. ಆರ್ಥಿಕವಾಗಿಯೂ ಸಬಲರಾಗಿರುವುದರಿಂದ ಮಕ್ಕಳ ಭವಿಷ್ಯಕ್ಕೂ ಇದು ಸಹಕಾರಿ ಎನ್ನುತ್ತವೆ ಅನೇಕ ಸರ್ವೆಗಳು.

ಸರಿಯಾದ ವಯಸ್ಸೆಷ್ಟು?

ಮದುವೆ ಬೇಗನೇ ಆಗಲಿ, ತಡವಾಗಿಯೇ ಆಗಿರಲಿ, ಮಕ್ಕಳನ್ನು ಪಡೆಯುವುದು ಯಾವಾಗ ಎಂಬ ಪ್ರಶ್ನೆ ಎಲ್ಲರನ್ನೂ ಒಮ್ಮೆಯಾದರೂ ಕಾಡುತ್ತದೆ. ಕೆಲವರಿಗೆ ಇದು ಮುಜುಗರದ ವಿಷಯವಾಗಿರಬಹುದು. ಆದರೆ ನುರಿತ ವೈದ್ಯರನ್ನು ಭೇಟಿಯಾದಾಗ ಇದಕ್ಕೆಲ್ಲ ಪರಿಹಾರ ಇದ್ದೇ ಇದೆ. ಮದುವೆ ಯಾವಾಗ ಆದರೂ ಮಕ್ಕಳ ವಿಷಯದಲ್ಲಿ ಗಂಡ-ಹೆಂಡತಿ ನಿರ್ಧಾರವೇ ಮುಖ್ಯವಾಗುತ್ತದೆ. ಬೇರೆಯವರು ಏನೇ ಹೇಳಿದರೂ ಭವಿಷ್ಯದ ದೃಷ್ಟಿಯಿಂದ ಅವರ ನಿರ್ಧಾರವೇ ಅಂತಿಮ.

ಒಬ್ಬರನ್ನೊಬ್ಬರು ಅರಿಯುವುದು ಮುಖ್ಯ

ಮದುವೆಯಾದ ಮೇಲೆ ಮಕ್ಕಳು ಎಂಬುದು ಮೊದಲಿತ್ತು. ಈಗ ಕಾಲ ಬದಲಾಗಿದೆ. ಗಂಡ-ಹೆಂಡತಿ ಒಬ್ಬರನ್ನೊಬ್ಬರು ಅರಿತರೆ ಸಂಸಾರ ನೌಕೆ ಸರಾಗವಾಗಿ ಮುಂದೆ ಹೋಗಲು ಸಾಧ್ಯ ಎಂದು ಹಿರಿಯರು ಹೇಳುತ್ತಾರೆ. ಆದರೂ, ಅರಿವಿನ ಕೊರತೆಯಿಂದ ಎಷ್ಟೋ ಸಂಸಾರಗಳು ಒಡೆದುಹೋಗಿರುವ ಉದಾಹರಣೆ ಇವೆ. ಈ ಕಾರಣಕ್ಕಾಗಿಯೇ ಈಗಿನ ದಂಪತಿ ಮೊದಲು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಮನೆ ನಿಭಾಯಿಸಬಲ್ಲೆ ಎಂದು ಮನವರಿಕೆಯಾದಾಗಲೇ ಮಕ್ಕಳ ಯೋಚನೆ ಮಾಡುವುದು. ಅಪ್ಪ, ಅಮ್ಮ ನೋಡಿದ ಹುಡುಗನಿಗೆ ಕೊರಳೊಡ್ಡಿದ ಹುಡುಗಿಗೆ ಆತನ ಪೂರ್ವಾಪರ ತಿಳಿದಿರುವುದಿಲ್ಲ. ‘ಒಮ್ಮಿಂದೊಮ್ಮೆಲೆ ಮಕ್ಕಳು, ಮರಿ ಅಂದುಕೊಂಡರೆ ಗಂಡನೊಂದಿಗೆ ಬಾಂಧವ್ಯ ಕಳಚಿಹೋಗುತ್ತದೆ. ಮಕ್ಕಳಿಗೇ ಸಮಯ ಮೀಸಲಿಡುವುದು ಅನಿವಾರ್ಯವಾಗುವುದರಿಂದ ಪತಿಯನ್ನು ಅರಿಯದೆ ಸಂಬಂಧ ಗಟ್ಟಿಯಾಗುವುದಿಲ್ಲ’ ಎನ್ನುವುದು ಬಹುತೇಕರ ಅಭಿಪ್ರಾಯ. ಇದು ನಿಜವೂ ಹೌದು. ಹಾಗಾಗಿಯೇ ಪತಿಯ ಎಲ್ಲ ಕಷ್ಟ-ಸುಖಗಳನ್ನು ತಿಳಿದ ಮೇಲಷ್ಟೆ ಮಕ್ಕಳ ಬಗ್ಗೆ ಆಸಕ್ತಿ ಹೊಂದುತ್ತಿದ್ದಾರೆ ಇಂದಿನ ಯುವತಿಯರು.

ಅಂದುಕೊಂಡಷ್ಟು ಸುಲಭವೂ ಅಲ್ಲ

ಮನೆ, ಜವಾಬ್ದಾರಿ, ಶಿಕ್ಷಣ, ಆರ್ಥಿಕ ಹಿಡಿತ ಏನೇ ಅಂದುಕೊಂಡರೂ ಮಹಿಳೆಯರಲ್ಲಿ 35ರ ನಂತರ ಸಂತಾನಶಕ್ತಿ ಕುಸಿತವಾಗುತ್ತದೆ. ಇನ್ನು 40ರ ನಂತರ ಸ್ವಾಭಾವಿಕವಾಗಿ ಗರ್ಭ ಧರಿಸುವ ಸಾಧ್ಯತೆ ಶೇ.5ರಷ್ಟು ಮಾತ್ರ ಇರುತ್ತದೆ. ಒಂದು ವೇಳೆ ಇದ್ದರೂ ಆರೋಗ್ಯಕರ ಮಗು ಹುಟ್ಟುವುದು ಕಷ್ಟ ಎನ್ನುವುದು ತಿಳಿದಿರುವ ವಿಚಾರ. ಬಂಜೆತನ, ಗರ್ಭಪಾತ ಆಗುವ ಸಾಧ್ಯತೆ ಹೆಚ್ಚೇ ಇರುತ್ತದೆ. ತನ್ನ ಓದು, ಉದ್ಯೋಗ, ಕುಟುಂಬದ ಜವಾಬ್ದಾರಿ ಎಂದು ಯೋಚಿಸುವ ಯುವತಿ ಮುಂದೆ ಇದನ್ನೆಲ್ಲ ಎದುರಿಸುವ ಕಷ್ಟವೂ ಬರಬಹುದು. ಏನೇ ಇದ್ದರೂ ವೈದ್ಯರ ಸಲಹೆ ಪಡೆದು ಮುಂದಡಿಯಿಡದಷ್ಟು ಆಕೆ ದಡ್ಡಳಂತೂ ಅಲ್ಲ.

ಇನ್ನೂ ಮಕ್ಕಳಾಗಿಲ್ವಾ?

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೆಲವೊಮ್ಮ ನಮ್ಮ ಮನಸ್ಥಿತಿಗಳು ಬದಲಾಗುವುದಿಲ್ಲ. ಅಜ್ಜಿ ಕಾಲದಲ್ಲಿ 7-8 ಮಕ್ಕಳನ್ನು ಹೆತ್ತು ಸಾಕಿದ ಉದಾಹರಣೆಗಳೂ ಇವೆ. ಇಂದಿನ ಹುಡುಗಿಯೂ ಅವರಂತೆಯೇ ಎಂದುಕೊಳ್ಳುವ ಅನೇಕ ಹಿರಿಯರು ಮದುವೆಯಾಗುತ್ತಿದ್ದಂತೆ ‘ವಿಶೇಷ ಯಾವಾಗ?’ ಎನ್ನುವ ಪ್ರಶ್ನೆ ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ಮುಜುಗರ ಎನಿಸಿದರೂ ಇದನ್ನೆಲ್ಲ ಎದುರಿಸುವ ಗಟ್ಟಿತನವನ್ನೂ ರೂಢಿಸಿಕೊಂಡಿದ್ದಾಳೆ ಹುಡುಗಿ. ಮದುವೆಯಾದ ಕೂಡಲೇ ಮಕ್ಕಳಾಗಬೇಕೆಂದೇನೂ ಇಲ್ಲ. ಗಂಡ-ಹೆಂಡತಿ ಅರಿತರಷ್ಟೆ ಇವೆಲ್ಲ ಸಾಧ್ಯ ಎನ್ನುವ ಮನಸ್ಥಿತಿ ಬಂದಾಗಲೇ ಮುಂದಿನ ಯೋಚನೆ ಎಂಬುದನ್ನೂ ದೃಢವಾಗಿ ಹೇಳುತ್ತಾಳೆ. ಹಾಗಾಗಿಯೇ ಫ್ಯಾಮಿಲಿ ಪ್ಲಾನಿಂಗ್ ಎನ್ನುವ ನಿರ್ಧಾರವನ್ನು ಇಬ್ಬರೂ ಸೇರಿಯೇ ಮಾಡುತ್ತಾರೆ. ಅಷ್ಟಕ್ಕೂ ಇದನ್ನು ಎಲ್ಲರಿಗೂ ಹೇಳಬೇಕೆಂದೇನೂ ಇಲ್ಲ ಎನ್ನುವ ಮನಸ್ಥಿತಿಯೂ ಅವಳದು.

|ಶ್ವೇತಾ ನಾಯ್ಕ್​