More

  ಇಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20; ವಿಶ್ವಕಪ್​ ಫೈನಲ್​ ಸೋಲಿಗೆ ಸೇಡು ತೀರಿಸಲು ಸಜ್ಜಾದ ಯುವ ಭಾರತ

  ವಿಶಾಖಪಟ್ಟಣ: ಐಸಿಸಿ ಏಕದಿನ ವಿಶ್ವಕಪ್ ಫೈನಲ್​ ಸೋಲಿನ ಕಹಿ ಅರಗಿಸಿಕೊಳ್ಳುವ ಮುನ್ನವೇ ಭಾರತದ ಯುವ ತಂಡ ಟಿ20 ಸವಾಲಿಗೆ ಸಜ್ಜಾಗಿದೆ. ಪ್ರಮುಖ ಆಟಗಾರರು ವಿಶ್ರಾಂತಿಯ ಕಾರಣದಿಂದ ಹೊರಗುಳಿದಿದ್ದು, “ಮಿ. 360 ಡಿಗ್ರಿ’ ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ಸಾರಥ್ಯದಲ್ಲಿ ಹಾಂಗ್​ರೆೌ ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನ ಗೆದ್ದ ತಂಡದ ಬಹುತೇಕ ಆಟಗಾರರು, ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಮೊದಲ ಪಂದ್ಯ ಗುರುವಾರ ವಿಶಾಖಪಟ್ಟಣದ ಡಾ. ವೈಎಸ್​ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಯುವ ಟೀಮ್​ ಇಂಡಿಯಾಕ್ಕೆ ಇದು ಸತ್ವಪರೀಕ್ಷೆಯಾಗಿರಲಿದೆ.

  ಮುಂಬರುವ 2024ರ ಟಿ20 ವಿಶ್ವಕಪ್​ಗೆ ತಂಡವನ್ನು ಕಟ್ಟುವ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಗೈರಿನಲ್ಲಿ ಸೂರ್ಯಕುಮಾರ್​ ಮೊದಲ ಬಾರಿಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಾಯಕ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಕೆಎಲ್​ ರಾಹುಲ್​, ಜಸ್​ಪ್ರೀತ್​ ಬುಮ್ರಾ ಸೇರಿ ಪ್ರಮುಖ ಆಟಗಾರರಿಗೆ ವಿಶ್ವಕಪ್​ ಟೂರ್ನಿ ಬಳಿಕ ವಿಶ್ರಾತಿ ನೀಡಲಾಗಿದೆ. ಆದರೆ ಇವರಲ್ಲಿ ಮುಂದಿನ ವರ್ಷದ ಟಿ20 ವಿಶ್ವಕಪ್​ಗೆ ಯಾವೆಲ್ಲ ಆಟಗಾರರು ಸ್ಥಾನ ಪಡೆಯಲಿದ್ದಾರೆ ಎಂಬುದು ಸ್ಪಷ್ಟವಿಲ್ಲ.

  ವರ್ಷಾರಂಭದಲ್ಲಿ ಲಂಕಾ, ಕಿವೀಸ್​, ವೆಸ್ಟ್​ ಇಂಡಿಸ್​ ಹಾಗೂ ಐರ್ಲೆಂಡ್​ ವಿರುದ್ಧ ಟಿ20 ಸರಣಿಗಳಲ್ಲಿ ಆಡಿದ್ದ ಬಹುತೇಕ ಆಟಗಾರರು ಈ ಸರಣಿಯಲ್ಲಿ ಆಡಲಿದ್ದಾರೆ. ಉಭಯ ತಂಡಗಳು 2022ರ ಸೆಪ್ಟೆಂಬರ್​ ಬಳಿಕ ಟಿ20ಯಲ್ಲಿ ಮೊದಲ ಬಾರಿಗೆ ಎದುರಾಗಲಿವೆ. ಐಪಿಎಲ್​ ಟೂರ್ನಿಯಲ್ಲಿ ಮಿಂಚಿದ ಬಳಿಕ ಏಷ್ಯನ್​ ಗೇಮ್ಸ್​ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಆಟಗಾರರಿಗೆ ಒಲಿದಿರುವ ಅವಕಾಶವನ್ನು ಬಾಚಿಕೊಳ್ಳಲು ಈ ಸರಣಿ ಉತ್ತಮ ವೇದಿಕೆ ಎನಿಸಿದೆ. ರಾಹುಲ್​ ದ್ರಾವಿಡ್​ ನಂತರ ಟೀಮ್​ ಇಂಡಿಯಾ ಕೋಚ್​ ಸ್ಥಾನ ತುಂಬಬಲ್ಲ ರೇಸ್​ನಲ್ಲಿರುವ ಎನ್​ಸಿಎ ಮುಖ್ಯಸ್ಥ ವಿವಿಎಸ್​ ಲಕ್ಷ್ಮಣ್​​ ಆಸೀಸ್​ ವಿರುದ್ಧ ಸರಣಿಗೆ ಹಂಗಾಮಿ ತರಬೇತುದಾರರಾಗಿದ್ದಾರೆ.ಇನ್ನೂ ವಿಶ್ವಕಪ್​ ಗೆಲುವಿನ ಗುಂಗಿನಲ್ಲಿರುವ ಆಸ್ಟ್ರೆಲಿಯಾ ತಂಡ ಅನುಭವಿ ಹಾಗೂ ಯುವ ಆಟಗಾರರ ಸಮತೋಲನ ಹೊಂದಿದೆ. ವಿಶ್ವಕಪ್​ ತಂಡದಲ್ಲಿದ್ದ ಏಳು ಆಟಗಾರರು ಟಿ20 ಸರಣಿಯಲ್ಲೂ ಕಣಕ್ಕಿಳಿಯಲಿದ್ದಾರೆ. ಪ್ಯಾಟ್​ ಕಮ್ಮಿನ್ಸ್​ ಗೈರಿನಲ್ಲಿ ವಿಕೆಟ್​ ಕೀಪರ್​ ಮ್ಯಾಥ್ಯೂ ವೇಡ್​ ತಂಡವನ್ನು ಮುನ್ನಡೆಸಲಿದ್ದಾರೆ.

  ಯುವ ಬ್ಯಾಟಿಂಗ್​ ವಿಭಾಗ
  ಪ್ರಮುಖ ಆಟಗಾರರ ಗೈರಿನಲ್ಲಿ ಭಾರತ ತಂಡ ಅನನುಭವಿ ಬ್ಯಾಟಿಂಗ್​ ವಿಭಾಗದೊಂದಿಗೆ ಕಣಕ್ಕಿಳಿಯುತ್ತಿದೆ. ವಿಶ್ವ ನಂ.1 ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ಬ್ಯಾಟಿಂಗ್​ ವಿಭಾಗ ಮುನ್ನಡೆಸಲಿದ್ದಾರೆ. ಏಕದಿನ ತಂಡದಲ್ಲಿ ಎಡಗೈ ಬ್ಯಾಟರ್​ಗಳ ಕೊರತೆ ಎದುರಿಸುವ ಟೀಮ್​ ಇಂಡಿಯಾಗೆ ಟಿ20ಯಲ್ಲಿ ಇಶಾನ್​ ಕಿಶನ್​, ಯಶಸ್ವಿ ಜೈಸ್ವಾಲ್​, ತಿಲಕ್​ ವರ್ಮ, ಶಿವಂ ದುಬೆ, ರಿಂಕು ಸಿಂಗ್​, ಅಕ್ಷರ್​ ಪಟೇಲ್​ ಸೇರಿ 7 ಆಟಗಾರರ ಬಲವಿದೆ.

  ಬೌಲರ್​ಗಳಿಗೆ ಸತ್ವ ಪರೀಕ್ಷೆ
  ಏಕದಿನ ವಿಶ್ವಕಪ್​ನಲ್ಲಿ ಅಮೋಘ ಬೌಲಿಂಗ್​ ನಿರ್ವಹಣೆ ತೋರಿದ ಟೀಮ್​ ಇಂಡಿಯಾ ಬೌಲಿಂಗ್​ ವಿಭಾಗದ ಮುಂದಿನ ಪೀಳಿಗೆಯ ಬೌಲರ್​ಗಳಿಗೆ ಈ ಸರಣಿಯಲ್ಲಿ ಸತ್ವ ಪರೀೆ ಎದುರಾಗಲಿದೆ. ಪ್ರಸಿದ್ಧ ಕೃಷ್ಣ, ಅರ್ಷದೀಪ್​ ಸಿಂಗ್​, ಮುಕೇಶ್​ ಕುಮಾರ್​ ಹಾಗೂ ಆವೇಶ್​ ಖಾನ್​ಗೆ ಆಸೀಸ್​ ಬ್ಯಾಟರ್​ಗಳು ಪ್ರಮುಖ ಸವಾಲಾಗಲಿದ್ದಾರೆ.

  ಟೀಮ್​ ನ್ಯೂಸ್​:
  ಭಾರತ: ಇಶಾನ್​ ಕಿಶನ್​ ಜತೆ ಯಶಸ್ವಿ ಜೈಸ್ವಾಲ್​ ಇನಿಂಗ್ಸ್​ ಆರಂಭಿಸುವ ಸಾಧ್ಯತೆಗಳಿವೆ. ನಾಯಕ ಸೂರ್ಯಕುಮಾರ್​ ಯಾದವ್​ 4&5ನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆ ಇದೆ. ಇಶಾನ್​ ಕಿಶನ್​ ಮೊದಲ ಆಯ್ಕೆಯ ವಿಕೆಟ್​ ಕೀಪರ್​ ಆಗಿದ್ದು, ಜಿತೇಶ್​ ಶರ್ಮ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ. ಅಕ್ಷರ್​ ಪಟೇಲ್​ ಹಾಗೂ ವಾಷಿಂಗ್ಟನ್​ ಸುಂದರ್​ ನಿಕಟ ಸ್ಪರ್ಧೆ ಎದುರಿಸಲಿದ್ದಾರೆ. 3ನೇ ವೇಗದ ಬೌಲರ್​ ಸ್ಥಾನಕ್ಕೆ ಆವೇಶ್​ ಖಾನ್​ ಮತ್ತು ಮುಕೇಶ್​ ಕುಮಾರ್​ ನಡುವೆ ಸ್ಪರ್ಧೆ ಇದೆ.
  ಸಂಭಾವ್ಯ ತಂಡ: ಇಶಾನ್​ ಕಿಶನ್​ (ವಿ.ಕೀ), ಯಶಸ್ವಿ ಜೈಸ್ವಾಲ್​, ಋತುರಾಜ್​ ಗಾಯಕ್ವಾಡ್​, ತಿಲಕ್​ ವರ್ಮ, ಸೂರ್ಯಕುಮಾರ್​ (ನಾಯಕ), ರಿಂಕು ಸಿಂಗ್​, ಅಕ್ಷರ್​ ಪಟೇಲ್​/ವಾಷಿಂಗ್ಟನ್​ ಸುಂದರ್​, ರವಿ ಬಿಷ್ಣೋಯಿ, ಪ್ರಸಿದ್ಧ ಕೃಷ್ಣ, ಅರ್ಷದೀಪ್​ ಸಿಂಗ್​, ಆವೇಶ್​ ಖಾನ್​/ಮುಕೇಶ್​ ಕುಮಾರ್​.

  ಆಸ್ಟ್ರೆಲಿಯಾ: ಡೇವಿಡ್​ ವಾರ್ನರ್​ ಗೈರಿನಲ್ಲಿ ಸ್ಟೀವನ್​ ಸ್ಮಿತ್​ ಇನಿಂಗ್ಸ್​ ಆರಂಭಿಸುವ ಸಾಧ್ಯತೆಗಳಿವೆ. ಟಿ20 ವಿಶ್ವಕಪ್​ಗೆ ಮುನ್ನ ಸ್ಮಿತ್​ಗೆ ಹೊಸ ಪಾತ್ರವನ್ನು ನೀಡಲಾಗುತ್ತಿದೆ. ಗ್ಲೆನ್​ ಮ್ಯಾಕ್ಸ್​ವೆಲ್​, ಆಡಂ ಜಂಪಾಗೆ ವಿಶ್ರಾಂತಿ ನೀಡಿದರೆ, ಮಾರ್ಕಸ್​ ಸ್ಟೋಯಿನಿಸ್​, ತನ್ವೀರ್​ ಸಂಘಾ ಆಡುವ ನಿರೀೆ ಇದೆ. ವಿಶ್ವಕಪ್​ ಫೈನಲ್​ ಹೀರೋ ಟ್ರಾವಿಸ್​ ಹೆಡ್​ಗೂ ಮೊದಲ ಪಂದ್ಯದಿಂದ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ.
  ಸಂಭಾವ್ಯ ತಂಡ: ಸ್ಟೀವನ್​ ಸ್ಮಿತ್​, ಮ್ಯಾಥ್ಯೂ ಶಾರ್ಟ್​, ಆರೋನ್​ ಹಾರ್ಡಿ, ಜೋಶ್​ ಇಂಗ್ಲಿಸ್​, ಮಾರ್ಕಸ್​ ಸ್ಟೋಯಿನಿಸ್​/ಗ್ಲೆನ್​ ಮ್ಯಾಕ್ಸ್​ವೆಲ್​, ಟಿಮ್​ ಡೇವಿಡ್​, ಮ್ಯಾಥ್ಯೂ ವೇಡ್​ (ನಾಯಕ, ವಿ.ಕೀ.), ಸೀನ್​ ಅಬೋಟ್​, ನಥಾನ್​ ಎಲ್ಲಿಸ್​, ಜೇಸನ್​ ಬೆಹ್ರನ್​ಡ್​ಾರ್, ಆಡಂ ಜಂಪಾ/ತನ್ವೀರ್​ ಸಂಘಾ.

  *9: ಸೂರ್ಯಕುಮಾರ್​ ಯಾದವ್​ ಭಾರತ ಟಿ20 ತಂಡದ 9ನೇ ನಾಯಕ ಎನಿಸಲಿದ್ದಾರೆ. ಹಾಲಿ ವರ್ಷದಲ್ಲಿ ಟಿ20 ತಂಡ ಮುನ್ನಡೆಸಿದ 4ನೇ ಆಟಗಾರ ಎನಿಸಲಿದ್ದಾರೆ. ಹಾರ್ದಿಕ್​ ಪಾಂಡ್ಯ, ಜಸ್​ಪ್ರೀತ್​ ಬುಮ್ರಾ, ಋತುರಾಜ್​ ಗಾಯಕ್ವಾಡ್​ ಮೊದಲ ಮೂವರು.

  ಮುಖಾಮುಖಿ: 27
  ಭಾರತ: 15
  ಆಸ್ಟ್ರೆಲಿಯಾ: 10
  ರದ್ದು: 2

  ಟಿ20 ಸರಣಿ ವೇಳಾಪಟ್ಟಿ
  ಪಂದ್ಯ ದಿನಾಂಕ ಸ್ಥಳ
  1. ನವೆಂಬರ್​ 23 ವಿಶಾಖಪಟ್ಟಣ
  2. ನವೆಂಬರ್​ 26 ತಿರುವನಂತಪುರ
  3. ನವೆಂಬರ್​ 28 ಗುವಾಹಟಿ
  4. ಡಿಸೆಂಬರ್​ 1 ನಾಗ್ಪುರ
  5. ಡಿಸೆಂಬರ್​ 3 ಬೆಂಗಳೂರು
  ಆರಂಭ: ರಾತ್ರಿ 7.00
  ನೇರಪ್ರಸಾರ: ಸ್ಪೋರ್ಟ್ಸ್​18, ಜಿಯೋ ಸಿನಿಮಾ

  ಪಿಚ್​ ರಿಪೋರ್ಟ್​
  ಪಂದ್ಯಕ್ಕೆ ತುಂತುರು ಮಳೆ ಕಾಡುವ ಭೀತಿ ಇದ್ದು, ಇಲ್ಲಿನ ಪಿಚ್​ನಲ್ಲಿ ರನ್​ಪ್ರವಾಹ ಹರಿಸುವುದು ಕಷ್ಟವೆನಿಸಲಿದೆ. ಮಾರ್ಚ್​ನಲ್ಲಿ ಉಭಯ ತಂಡಗಳ ನಡುವೆ ಇಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಆಸೀಸ್​ ವೇಗಿಗಳ ದಾಳಿಗೆ ತತ್ತರಿಸಿ ಭಾರತ, 26 ಓವರ್​ಗಳಲ್ಲೇ 117 ರನ್​ಗಳಿಗೆ ಕುಸಿದಿತ್ತು. ಇಲ್ಲಿ ಆಡಿದ 3 ಟಿ20 ಪಂದ್ಯಗಳಲ್ಲೂ ಬೌಲರ್​ಗಳೇ, ಅದರಲ್ಲೂ ಪ್ರಮುಖವಾಗಿ ವೇಗಿಗಳೇ ಮೇಲುಗೈ ಸಾಧಿಸಿದ್ದಾರೆ.

  ಮಂಗಳಮುಖಿ ಅಥವಾ ಲಿಂಗ ಪರಿವರ್ತನೆ ಆದವರು ಇನ್ನು ಮಹಿಳಾ ಕ್ರಿಕೆಟ್​ನಲ್ಲಿ ಆಡುವಂತಿಲ್ಲ! ಐಸಿಸಿಯಿಂದ ಸ್ಪಷ್ಟನೆ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts