ಅಯೋಧ್ಯೆಯಲ್ಲಿ ನವಯುಗಾರಂಭ

ಧರ್ಮಸ್ಥಳ: ವೃಷಭದೇವ ಆಡಳಿತದ ಅಯೋಧ್ಯಾ ನಗರಿಯಲ್ಲಿ ನವಯುಗ ಆರಂಭ ಲಕ್ಷಣಗಳು ಗೋಚರಿಸಲು ಆರಂಭವಾಗಿದೆ. ಪ್ರಜೆಗಳಿಗೆ ತಿನ್ನಲು ಆಹಾರವಿಲ್ಲ, ವಿಷ ಜಂತುಗಳ ಕಾಟ, ಮಹಾರಾಜರ ಮುಂದೆ ಅರುಹಿದಾಗ, ಇದು ಹೊಸ ಯುಗಾರಂಭದ ಲಕ್ಷಣ, ಯುಗದಲ್ಲಿ ಹೇಗಿರಬೇಕು ಎಂದು ತಿಳಿಸಿ ಬೇಕಾದ ಎಲ್ಲ ಸೌಲಭ್ಯ ಪ್ರಜೆಗಳಿಗೆ ನೀಡುತ್ತಾನೆ. ಇದರೊಂದಿಗೆ ಅರಮನೆಯಲ್ಲೂ ನವ ಆಗಮನದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ….

– ಇದು ಧರ್ಮಸ್ಥಳ ಬಾಹುಬಲಿ ಮಸ್ತಕಾಭಿಷೇಕ ಪ್ರಯುಕ್ತ ಆಯೋಜಿಸಿರುವ ಪಂಚಮಹಾವೈಭವ ಕಾರ್ಯಕ್ರಮದಲ್ಲಿ ಸೋಮವಾರ ಬೆಳಗ್ಗೆ ನಡೆದ ನವ ಯುಗಾರಂಭದ ಒಂದು ಚಿತ್ರಣ.
ಅಂದು ನಡೆದ ಘಟನೆಗಳನ್ನು ವರ್ತಮಾನದ ಇತಿಮಿತಿಯ ಒಳಗೆ ತೋರಿಸುವ ಪ್ರಯತ್ನವಿದು. ವೇದಿಕೆಯನ್ನು ಅರಮನೆಯಾಗಿ, ಸಭಾಂಗಣವನ್ನು ರಾಜ್ಯವಾಗಿ ತೋರಿಸಲಾಗಿದೆ. ವೃಷಭದೇವ ಆಸ್ಥಾನದಲ್ಲಿ ಮಂದಿಮಾಗದರೊಂದಿಗೆ, ವೀಣಾವಾದನ ಆಸ್ವಾದಿಸುತ್ತಿರವಾಗ ಪ್ರಜೆಗಳು ಆಕ್ರಂದನ ಮಾಡುತ್ತ ಅರಮನೆಗೆ ಬರುತ್ತಾರೆ. ಸಭೆಯ ಮಧ್ಯದಿಂದ ಬರುವ ಈ ಸನ್ನಿವೇಶ ಅದ್ಭುತವಾಗಿತ್ತು. ಹೀಗೆ ಬಂದ ಪ್ರಜೆಗಳು, ರಾಜ್ಯದಲ್ಲಿ ಆಹಾರ ವಸ್ತುಗಳು ಸಿಗುತ್ತಿಲ್ಲ, ಕ್ರೂರ ಪ್ರಾಣಿಗಳು ವಿಷ ಜಂತುಗಳು ಆಕ್ರಮಣ ಮಾಡುತ್ತಿದೆ ಎಂದು ರಾಜನಿಗೆ ದೂರುತ್ತಾರೆ. ಪ್ರಜೆಗಳ ಕಷ್ಟ ಆಲಿಸಿದ ರಾಜ ಇದು ನವಯುಗಾರಂಭದ ಲಕ್ಷಣ, ಉತ್ಸರ್ಪಿಣಿ ಕಾಲ ಕಳೆದು ಅವಸರ್ಪಿಣಿಯಾಗುತ್ತಿದೆ. ಇನ್ನು ಮುಂದೆ ನೀನು ಬದುಕು ಇನ್ನೊಬ್ಬರನ್ನು ಬದುಕಲು ಬಿಡು ಎನ್ನುವ ಕಾಲ. ಹೊಸ ಯುಗಕ್ಕಾಗಿ ಅರಮನೆಯಲ್ಲಿ ಕೆಲ ವಸ್ತುಗಳನ್ನು ಸಿದ್ಧಪಡಿಸಲಾಗಿದೆ ಎಂದು ಅಸಿ, ಮಸಿ, ಕೃಷಿ, ವಾಣಿಜ್ಯ, ವಿದ್ಯೆ, ಶಿಲ್ಪಕ್ಕೆ ಸಂಬಂಧಿಸಿದ ವಸ್ತುಗಳನ್ನು ನೀಡಿ ಅದನ್ನು ಉಪಯೋಗಿಸಿ ಜೀವನ ನಡೆಸಬೇಕು. ಅದಕ್ಕಾಗಿ ರಾಜ್ಯವನ್ನು ಗ್ರಾಮ ನಗರ, ಖೇದ, ಖಾರ್ವಾಡ, ಪಟ್ಟಣ ಎಂದು ವಿಂಗಡಿಸಿ, ಪುರು ಉತ್ತರ ಹರಿ ಮತ್ತು ನಾಗವಂಶವೆಂದು ಮಾಡಿ, ಮುಖ್ಯಸ್ಥರನ್ನು ನೇಮಿಸಿ, ಎಲ್ಲ ಪ್ರಜೆಗಳು, ಸಮಾನರು, ಎಲ್ಲರೂ ಕಾಯಕದಲ್ಲಿ ತೊಡಗಿಸಿ ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ಸೂಚಿಸುತ್ತಾನೆ.

ದೇವಿಯರಿಗೆ ಕನಸು: ಅರಮನೆಯಲ್ಲೂ ಹೊಸ ಬೆಳವಣಿಗೆ. ರಾಣಿಯರಾದ ಯಶಸ್ವತಿ ದೇವಿ-ಸುನಂದಾ ದೇವಿ ತಮ್ಮ ಕನಸನ್ನು ವೃಷಭದೇವನಲ್ಲಿ ವಿವರಿಸುತ್ತಾರೆ. ಯಶಸ್ವತಿ ದೇವಿ ಕನಸಿನ ಕುರಿತು ತಿಳಿದು ಪುತ್ರ ಚಕ್ರವರ್ತಿಯಾಗಿ ಜಗತ್ತನ್ನು ಗೆಲ್ಲುತ್ತಾನೆ, ಸುನಂದಾ ದೇವಿ ಕನಸಿಗೆ ಪುತ್ರ ಮಹಾ ಪರಾಕ್ರಮಿ, ತ್ಯಾಗಿಯಾಗಿ, ಕೇವಲ ಜ್ಞಾನ ಪಡೆಯುತ್ತಾನೆ. ಸಂತಾನ ಪ್ರಾಪ್ತಿಯ ಶುಭ ವಿಚಾರದ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಆನಂದ ನರ್ತನವಾಗುತ್ತದೆ.

ಸಂತೆಯ ಚಿತ್ರಣ: ರಾಜನಿಂದ ನವಯುಗದ ವಸ್ತುಗಳನ್ನು ಪಡೆದ ಪ್ರಜೆಗಳು ಜೀವನ ಆರಂಭಿಸುತ್ತಾರೆ. ಇದಕ್ಕಾಗಿ ಸಂತೆಯ ಚಿತ್ರಣ ಸಾರ್ವಜನಿಕರು ಕುಳಿತುಕೊಳ್ಳುವಲ್ಲಿ ಮಾಡಲಾಗಿದೆ. ತಾವು ಬೆಳೆದ, ಉತ್ಪಾದಿಸಿದ ವಸ್ತುಗಳನ್ನು ರೈತರು ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಸ್ವಲ್ಪ ಹೊತ್ತು ಸಭೆ ಸಂತೆಯಾಗಿಯೇ ಪರಿವರ್ತನೆಗೊಂಡಿತ್ತು. ಹೆಗ್ಗಡೆಯರು, ಸಹೋದರು ಸಂತೆ ತಿರುಗಿದರು. ರೈತರು ಸುಗ್ಗಿ ಹಾಡಿ ಸಭೆಯ ಮಧ್ಯದಲ್ಲಿ ನರ್ತಿಸಿದರು. ಅರಮನೆಯಲ್ಲಿ ರಾಣಿಯರಿಗೆ ಹೆರಿಗೆ ನೋವು, ಪ್ರಸೂತಿಕ ಸ್ತ್ರೀಯರ ಆಗಮನವಾಗುತ್ತದೆ. ಅಂತಃಪುರದಲ್ಲಿ ಸಂಭ್ರಮ ಸಡಗರದ ವಾತಾವರಣ ನೆಲೆಸುತ್ತದೆ. ಪಾಕತಜ್ಞರ ಆಗಮನ, ಸಂತೋಷದ ನರ್ತನ. ಇದರಲ್ಲಿ ಮುಖ್ಯ ನೃತ್ಯಗಾರ್ತಿಯಾಗಿ ಹೆಗ್ಗಡೆ ಪುತ್ರಿ ಶ್ರದ್ಧಾ ಅಮಿತ್ ಭಾಗವಹಿಸಿದ್ದರು. ಇದರೊಂದಿಗೆ ನವಯುಗ ಆರಂಭದ ಕಥೆ ಮುಕ್ತಾಯ.

ಅಸಿ ಮಸಿ ಕೃಷಿಯ ವಿವರಣೆ: ಪ್ರಜೆಗಳಿಗೆ ಅಸಿ, ಮಸಿ, ಕೃಷಿ, ವಾಣಿಜ್ಯ, ವಿದ್ಯೆ, ಶಿಲ್ಪಕ್ಕೆ ಸಂಬಂಧಿಸಿದ ವಸ್ತುಗಳನ್ನು ನೀಡಿ, ಯಾವುದು ಬೇಕೋ ಅದನ್ನು ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ಇದನ್ನೇ ವೃತ್ತಿಯಾಗಿ ಮಾಡಿ ಜೀವನ ನಿರ್ವಹಿಸಬೇಕು ಎಂದು ಸೂಚಿಸುತ್ತಾನೆ. ಅಸಿ ಎಂದರೆ ಆತ್ಮ ರಕ್ಷಣೆ ದೇಶ ರಕ್ಷಣೆಗೆ ಉಪಯೋಗಿಸುವ ಆಯುಧಗಳು. ಆದರೆ, ರಕ್ತಪಾತ ಉದ್ದೇಶವಲ್ಲ, ಕ್ಷತ್ರಿಯರಾಗಿ ಧರ್ಮ ರಕ್ಷಣೆಗೆ ಉಪಯೋಗಿಸಬೇಕು. ಮಸಿಯನ್ನು ಬರವಣಿಗೆಗೆ ಉಪಯೋಗಿಸುವುದು. ಆ ಮೂಲಕ ಸೂಚ್ಯವಾಗಿಸುವುದು. ಇದು ಶಾಶ್ವತ. ಲೆಕ್ಕಪತ್ರ ನೋಡಿಕೊಳ್ಳುವುದು ಉದ್ಯೋಗ. ಕೃಷಿ ಎಂದರೆ ಬೇಸಾಯ. ಕೃಷಿ ಇದ್ದಲ್ಲಿ ದುರ್ಭಿಕ್ಷೆ ಎಲ್ಲ. ಸಾವಯವ ಗೊಬ್ಬರ ಬಳಸಿ, ಮಿತವಾಗಿ ನೀರು ಬಳಸಿ, ಜಲ ಕಲುಷಿತ ಗೊಳ್ಳದ ರೀತಿಯಲ್ಲಿ ಬೆಲೆಯಲ್ಲಿ ತೊಡಗಿಸಿಕೊಳ್ಳಬೇಕು.

ವಾಣಿಜ್ಯ ಎಂದರೆ ವ್ಯಾಪಾರ. ಒಂದು ವಸ್ತು ಕೊಟ್ಟು ಇನ್ನೊಂದು ವಸ್ತು ಪಡೆಯುವುದು. ವಸ್ತುವಿನ ಬದಲು ದುಡ್ಡು ಪಡೆಯುವುದು. ಮುಂದಕ್ಕೆ ವಣಿಕ (ವರ್ತಕ) ವರ್ಗದವರೆಂದು ಖ್ಯಾತರಾಗುವರು. ಆದರೆ ಅಳತೆ ತೂಕದಲ್ಲಿ ಮೋಸ ವಂಚನೆ ಇರಬಾರದು.
ವಿದ್ಯೆ: ಎಲ್ಲಿ ಅಧ್ಯಯನ, ಅಧ್ಯಾಪನ ಪ್ರಧಾನ. ಸಂಸ್ಕಾರ ನೀಡಿ ಉತ್ತಮ ಗುಣ ನಡತೆ ಕಲಿಸುವುದು. ಉಪಾದ್ಯಾಯ, ಪಂಡಿತ, ಗುರು, ಶಾಸ್ತ್ರೀ ಹೆಸರುಗಳು. ಶಿಲ್ಪ: ಚಿತ್ರ, ಸಂಗೀತ, ನೃತ್ಯ, ಹಾಡು, ವಾದನ, ಶಿಲ್ಪಕಲೆ ಮೂಲಕ ಉದ್ಯೋಗ ಮಾಡುವುದು. ಕಲೆಗಳು ಜನರ ಮನಸ್ಸು ಕೆರಳಿಸದೆ, ಅರಳಿಸುವಂತೆ ಮಾಡಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ರಾಜ ಸೂಚಿಸುತ್ತಾನೆ.

ಮುನಿಗಳಿಂದಲೂ ಮೆಚ್ಚುಗೆ: ಪಂಚಮಹಾವೈಭವ ಕಾರ್ಯಕ್ರಮದ ಕುರಿತು ಜೈನ ಮುನಿಗಳೂ ಮೆಚ್ಚುಗೆ ವ್ಯಕ್ತಪಡಿಸಿದರು. ನಿಜವಾದ ವೃಷಭನಾಥನ ಅಯೋಧ್ಯಾ ನಗರಿಯು ಇಷ್ಟು ವೈಭೋಗದಿಂದ ಕೂಡಿರಲಿಕ್ಕಿಲ್ಲ. ಸುಂದರ ಕಾರ್ಯಕ್ರಮವಾಗಿ ಮೂಡಿಬಂದಿದೆ ಎಂದು ಶ್ರೀ 108 ವರ್ಧಮಾನ ಸಾಗರ ಜೀ, ವಾತ್ಸಲ್ಯ ವಾರಿಧಿ 108 ಪುಷ್ಪದಂತ ಸಾಗರ ಮುನಿ ಮಹಾರಾಜರು ಅಭಿಪ್ರಾಯಪಟ್ಟರು.

ಪುಷ್ಪದಂತ ಮುನಿಮಹಾರಾಜರು, ವರ್ಧಮಾನ ಸಾಗರ ಮುನಿಮಹಾರಾಜರು, ಸಮಸ್ತ ಮುನಿಸಂಘದವರು, ಮಾತಾಜಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಮಾನ್ಯ, ಡಾ.ಬಿ.ಯಶೋವರ್ಮ ಮೊದಲಾದವರು ಇದ್ದರು.

ನವ ಯುಗ ಆರಂಭದಲ್ಲಿ, ಜ್ಞಾನ ವೃದ್ಧಿ, ಜಗತ್ತಿನ ವೃದ್ಧಿ ತೋರಿಸಲಾಗಿದೆ. ವಿಜ್ಞಾನ ದುಷ್ಟರ ಕೈಗೆ ಸಿಕ್ಕಿದರೆ ನಾಶ, ಉತ್ತಮರ ಕೈಗೆ ಸಿಕ್ಕಿದರೆ ಅಭಿವೃದ್ಧಿ, ಬೆಳವಣಿಗೆ.ಇದು ಇಂದಿನ ಕಾಲಕ್ಕೂ ಪ್ರಸ್ತುತ. ಲೋಕೋಪಕಾರಕ್ಕೆ ಆರಂಭವಾದ ಅಣುವಿಜ್ಞಾನ ಇಂದು ಲೋಕ ನಾಶಕ್ಕೆ ಬಳಸುವ ಪ್ರಯತ್ನ ನಡೆಯುತ್ತಿದೆ. ಭೋಗ ವಸ್ತುವಿನಲ್ಲಿ ಇತಿಮಿತಿ ಇರಬೇಕು. ವಿಜ್ಞಾನ ನಮ್ಮ ದಾಸರಾಗಬೇಕೇ ಹೊರತು ನಾವು ವಿಜ್ಞಾನದ ದಾಸರಾಗಬಾರದು.
– ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ, ಧರ್ಮಾಧಿಕಾರಿ