Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಸುಪ್ರೀಂ ಮುಖ್ಯ ನ್ಯಾಯಮೂರ್ತಿ ವಿರುದ್ಧ ಬಂಡಾಯ

Saturday, 13.01.2018, 3:06 AM       No Comments

ನವದೆಹಲಿ: ದೇಶ ಸ್ವತಂತ್ರಗೊಂಡ ಬಳಿಕ ಇದೇ ಮೊದಲ ಬಾರಿಗೆ ನ್ಯಾಯಾಂಗ ವ್ಯವಸ್ಥೆ ಭಿನ್ನ ಕಾರಣಕ್ಕೆ ಭಾರಿ ಸಂಚಲನಕ್ಕೆ ಸಾಕ್ಷಿಯಾಗಿದೆ. ಸುಪ್ರೀಂ ಕೋರ್ಟ್​ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿಗಳ ಕಾರ್ಯವೈಖರಿ ವಿರುದ್ಧ ಶುಕ್ರವಾರ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದು, ಸುದ್ದಿಗೋಷ್ಠಿ ನಡೆಸಿ ದೇಶದ ಜನರೆದುರು ಅಸಮಾಧಾನ ಹೊರಹಾಕಿದ್ದಾರೆ.

ಸುಪ್ರೀಂಕೋರ್ಟ್ ಕಾರ್ಯವೈಖರಿಯಲ್ಲಿ ಇತ್ತೀಚೆಗೆ ಸಾಕಷ್ಟು ಲೋಪಗಳು ಕಂಡುಬರುತ್ತಿದ್ದು, ಈ ಬಗ್ಗೆ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಪತ್ರ ಬರೆದು ಪರಿಹರಿಸುವಂತೆ ಕೋರಿದ್ದರೂ ಅವರು ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಬಹಿರಂಗ ಹೇಳಿಕೆ ನೀಡುವುದು ಅನಿವಾರ್ಯವಾಯಿತು ಎಂದು ನಾಲ್ವರು ನ್ಯಾಯಮೂರ್ತಿಗಳು ಹೇಳಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ಕಾರ್ಯ ಇದೇ ರೀತಿ ಮುಂದುವರಿದರೆ ಪ್ರಜಾಪ್ರಭುತ್ವವೇ ನಶಿಸುವ ಸಾಧ್ಯತೆಯಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ಅಪಾಯದಲ್ಲಿ…

ವಿದ್ಯಮಾನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಟ್ವೀಟ್ ಮೂಲಕ ಹೇಳಿದೆ. ನ್ಯಾಯಾಧೀಶರ ಪತ್ರಿಕಾಗೋಷ್ಠಿ ಬೆನ್ನಲ್ಲೇ ರಾಹುಲ್ ಗಾಂಧಿ ನಿವಾಸದಲ್ಲಿ ಹಿರಿಯ ನಾಯಕರಾದ ಕಪಿಲ್ ಸಿಬಲ್, ಸಲ್ಮಾನ್ ಖುರ್ಷಿದ್, ಪಿ. ಚಿದಂಬರಂ ಮತ್ತಿತರ ನಾಯಕರು ಸಭೆ ನಡೆಸಿ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನ್ಯಾಯಾಧೀಶರು ಎತ್ತಿರುವ ಪ್ರಶ್ನೆಗಳ ಕುರಿತು ಪರಾಮರ್ಶೆ ನಡೆಯಬೇಕು ಎಂದಿದ್ದಾರೆ.

 

ಅಸಮಾಧಾನಕ್ಕೆ ಪ್ರಮುಖ ಕಾರಣಗಳಿವು…

# ಪ್ರಮುಖ ಪ್ರಕರಣಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠದಲ್ಲಿ ಮಾತ್ರ ನಡೆಯುತ್ತಿದ್ದು, ಇತರ ಹಿರಿಯ ನ್ಯಾಯಮೂರ್ತಿಗಳ ಪೀಠಕ್ಕೆ ವಿಚಾರಣೆಗೆ ಬರುತ್ತಿಲ್ಲ.

# ವಿಚಾರಣೆಗಾಗಿ ಪ್ರಕರಣಗಳ ಹಂಚಿಕೆ ಸರಿಯಾಗಿ ನಡೆಯುತ್ತಿಲ್ಲ

# ಮಹತ್ವದ ಪ್ರಕರಣಗಳಲ್ಲಿ ನ್ಯಾಯಾಧೀಶರು ಸಾಮೂಹಿಕ ನಿರ್ಣಯ ಕೈಗೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಈಗ ಈ ಪದ್ಧತಿ ಉಲ್ಲಂಘನೆಯಾಗುತ್ತಿದೆ

# ನ್ಯಾ. ಬಿ.ಎಚ್. ಲೋಯಾ ಸಾವಿನ ತನಿಖೆಗೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ನಂ.10ಕ್ಕೆ ನೀಡಲಾಗಿತ್ತು. ಸಿಜೆಐ ಹೊರತಾದ ಮೊದಲ ನಾಲ್ಕು ಕೋರ್ಟ್​ಗಳಿಗೆ ನೀಡಲಾಗಿಲ್ಲ

# ಏಳು ಪುಟಗಳಲ್ಲಿ ವಿಸõತವಾಗಿ ನಮ್ಮ ಅಹವಾಲುಗಳನ್ನು ಸಿಜೆಐಗೆ ನೀಡಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಯಾರಿಂದ ಆರೋಪ

# ನ್ಯಾ. ಮದನ್ ಲೋಕುರ್

# ನ್ಯಾ. ಚೆಲಮೇಶ್ವರ್

# ನ್ಯಾ. ರಂಜನ್ ಗೊಗೋಯಿ

# ನ್ಯಾ. ಕುರಿಯನ್ ಜೋಸೆಫ್

ಮಹಾಭಿಯೋಗ?

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮಹಾಭಿಯೋಗ (ಇಂಪೀಚ್​ವೆುಂಟ್) ಕುರಿತಾದ ಪ್ರಶ್ನೆಗೆ ಉತ್ತರಿಸಿದ ನಾಲ್ವರು ನ್ಯಾಯಾಧೀಶರು, ಇದನ್ನು ದೇಶ ನಿರ್ಧರಿಸಬೇಕು ಎಂದಷ್ಟೇ ಉತ್ತರಿಸಿದರು.

ಅಂತರ ಕಾಯ್ದುಕೊಂಡ ಸರ್ಕಾರ

ನಾಲ್ವರು ನ್ಯಾಯಾಧೀಶರು ಮಾಡಿರುವ ಆರೋಪ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಉಂಟಾಗಿರುವ ಸಂಚಲನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಂತರ ಕಾಯ್ದುಕೊಂಡಿದೆ. ಇದು ನ್ಯಾಯಾಂಗದ ಆಂತರಿಕ ವಿಚಾರ ಎಂದು ಪ್ರತಿಕ್ರಿಯೆ ನೀಡಿದೆ. ಆದರೆ ಪರಿಸ್ಥಿತಿ ವಿಕೋಪಕ್ಕೆ ತಲುಪಿದರೆ ಸರ್ಕಾರ ಮಧ್ಯಪ್ರವೇಶಿಸುವ ಸಾಧ್ಯತೆಯಿದೆ.

ಮೋದಿ ಸಭೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತುರ್ತು ಸಭೆ ನಡೆಸಿ ರ್ಚಚಿಸಿದ್ದಾರೆ. ಸರ್ಕಾರ ಕೈಗೊಳ್ಳಬಹುದಾದ ಕ್ರಮ ಹಾಗೂ ಮುಂದಿನ ನಡೆ ಕುರಿತು ಪ್ರಮುಖವಾಗಿ ಚರ್ಚೆಯಾಗಿದೆ ಎನ್ನಲಾಗಿದೆ.

 

ಸಿಜೆಐಗೆ ಬರೆದ ಪತ್ರದ ಮುಖ್ಯಾಂಶ

# ಸುಪ್ರೀಂಕೋರ್ಟ್​ನ ಇತ್ತೀಚಿನ ಕೆಲ ಆದೇಶಗಳಿಂದ ನ್ಯಾಯಾಂಗ ವ್ಯವಸ್ಥೆ, ಹೈಕೋರ್ಟ್​ಗಳ ಸ್ವಾತಂತ್ರ್ಯ ಮತ್ತು ಮುಖ್ಯ ನ್ಯಾಯಮೂರ್ತಿ ಕಾರ್ಯಾಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

# ಮುಖ್ಯ ನ್ಯಾಯಮೂರ್ತಿ ಪ್ರಶ್ನಾತೀತ ಮತ್ತು ಸವೋನ್ನತ ಅಧಿಕಾರಿ ಎಂದಲ್ಲ. ನ್ಯಾಯಾಲಯದ ಮುಖ್ಯಸ್ಥರ ಪೈಕಿ ಆತ ಮೊದಲಿಗ ಅಷ್ಟೇ.

# ಕೋರ್ಟ್ ಪ್ರಕ್ರಿಯೆಗಳ ನಿಯಮ ಮೀರಿದಲ್ಲಿ ನ್ಯಾಯಾಂಗದ ಮೇಲೆ ಸಂಶಯ ಮೂಡಿ, ಭವಿಷ್ಯದಲ್ಲಿ ಭಾರಿ ಪ್ರತಿಭಟನೆ ಎದುರಿಸಬೇಕಾದೀತು.

ಇಂದು ಸಂಧಾನ?

ವಿವಾದ ಬಗೆಹರಿಸುವ ನಿಟ್ಟಿನಲ್ಲಿ ನಾಲ್ವರು ನ್ಯಾಯಮೂರ್ತಿಗಳ ಜತೆ ಸಿಜೆಐ ದೀಪಕ್ ಮಿಶ್ರಾ ಶನಿವಾರ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುಪ್ರೀಂಕೋರ್ಟಲ್ಲಿ ಪ್ರತಿಯೊಬ್ಬ ನ್ಯಾಯಮೂರ್ತಿಗೂ ಸ್ವಾತಂತ್ರ್ಯದೆ. ಮಾತುಕತೆ ಮೂಲಕ ಭಿನ್ನಮತ ಇತ್ಯರ್ಥ ಪಡಿಸಿಕೊಳ್ಳಲು ನಿರ್ಧರಿಸಿದ್ದಾಗಿ ಅವರು ತಿಳಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

 

ಸರ್ಕಾರ, ನ್ಯಾಯ ಮೂರ್ತಿಗಳ ನಡುವೆ ತಿಕ್ಕಾಟವಿರುವುದನ್ನು ನಾಲ್ವರು ಹಿರಿಯರು ಹೊರಹಾಕಿದ್ದಾರೆ.

| ಅಣ್ಣಾ ಹಜಾರೆ ಸಾಮಾಜಿಕ ಹೋರಾಟಗಾರ

ಸಿಜೆಐ ಪತ್ರಿಕಾಗೋಷ್ಠಿ ರದ್ದು ಸರ್ಕಾರದ ಎಚ್ಚರಿಕೆ ಹೆಜ್ಜೆ

ಸುಪ್ರೀಂಕೋರ್ಟ್​ನ ಬಿಕ್ಕಟ್ಟಿನ ವಿವರಗಳನ್ನು ದಾಖಲಿಸಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಶುಕ್ರವಾರ ಮಧ್ಯಾಹ್ನ ಪ್ರಧಾನಿ ಮೋದಿಗೆ ವಿವರಿಸಿದ್ದಾರೆ ಎನ್ನಲಾಗಿದೆ. ಇದು ಸುಪ್ರೀಂಕೋರ್ಟ್ ಆಂತರಿಕ ವಿಚಾರವಾದ್ದರಿಂದ ಆದಷ್ಟು ಅಂತರ ಕಾಯ್ದುಕೊಳ್ಳಲು ಪ್ರಧಾನಿ ಮೋದಿ ಸಚಿವರಿಗೆ ಸೂಚನೆ ನೀಡಿದ್ದಾರೆ. ಮುಖ್ಯ ನ್ಯಾಯಮೂರ್ತಿ ಅಥವಾ ನಾಲ್ವರು ನ್ಯಾಯಮೂರ್ತಿಗಳಿಂದ ಒಂದು ವೇಳೆ ಮಧ್ಯಸ್ಥಿಕೆ ಪ್ರಸ್ತಾವನೆ ಬಂದರೆ ನಂತರ ಪ್ರಧಾನಿ ಮಧ್ಯಪ್ರವೇಶಿಸಿ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ನಾಲ್ವರ ಆರೋಪಕ್ಕೆ ಉತ್ತರ ನೀಡಲು ಮುಖ್ಯ ನ್ಯಾ. ಮಿಶ್ರಾ ನಡೆಸಲುದ್ದೇಶಿಸಿದ್ದ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಲಾಯಿತು.

ಈ ನಡುವೆ, ಸುಪ್ರೀಂಕೋರ್ಟ್​ನ 31 ನ್ಯಾಯಮೂರ್ತಿಗಳ ಪೈಕಿ 25 ಮಂದಿ ಶುಕ್ರವಾರ ಮಧಾಹ್ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ರಾಜಾ-ಚೆಲಮೇಶ್ವರ್ ಭೇಟಿ ಕುತೂಹಲ

ಪತ್ರಿಕಾಗೋಷ್ಠಿ ಬಳಿಕ ನ್ಯಾ. ಚೆಲಮೇಶ್ವರ್ ಎಡಪಕ್ಷಗಳ ನಾಯಕ ಡಿ. ರಾಜಾರನ್ನು ತಮ್ಮ ನಿವಾಸಕ್ಕೆ ಕರೆಸಿ ಸಭೆ ನಡೆಸಿದ್ದು ವಿವಾದಕ್ಕೆ ಕಾರಣವಾಗಿದೆ. ‘ಯಾವುದೇ ಕಾರಣಕ್ಕೂ ನ್ಯಾಯಮೂರ್ತಿ ರಾಜಕಾರಣಿಗಳನ್ನು ಭೇಟಿ ಮಾಡಬಾರದು. ರಾಜಕಾರಣಿ ಬರುತ್ತಾರೆ ಎಂದರೂ ನ್ಯಾಯಮೂರ್ತಿಗಳೇ ಆಸ್ಪದ ನೀಡಬಾರದು. ಉಭಯ ಕುಶಲೋಪರಿ ವಿಚಾರಿಸುವ ಸನ್ನಿವೇಶವೂ ಇದಾಗಿರಲಿಲ್ಲ. ಹೀಗಾಗಿ ಖಂಡಿತವಾಗಿಯೂ ಇದು ಆಕ್ಷೇಪಾರ್ಹ ನಡೆ’ ಎನ್ನುತ್ತಾರೆ ಸುಪ್ರೀಂಕೋರ್ಟ್ ಹಿರಿಯ ವಕೀಲ ಕೆ.ಎನ್.ಭಟ್. ‘‘ಪತ್ರಿಕಾಗೋಷ್ಠಿ ಬಳಿಕ ನಾನು ಚೆಲಮೇಶ್ವರ್ ಅವರಿಗೆ ದೂರವಾಣಿ ಕರೆ ಮಾಡಿದೆ. ಇಲ್ಲೇ ಸುತ್ತಮುತ್ತ ಇದ್ದೀರಿ ಎಂದರೆ ಮನೆಗೆ ಬನ್ನಿ ಎಂದು ಅವರೇ ಆಹ್ವಾನಿಸಿದರು. ಹೀಗಾಗಿಯೇ ನಾನು ಅಲ್ಲಿಗೆ ಹೋದೆ. ಪತ್ರಿಕಾಗೋಷ್ಠಿಗೆ ಮುನ್ನ ನಾನು ನ್ಯಾಯಮೂರ್ತಿಗಳೊಂದಿಗೆ ಈ ವಿಷಯದ ಬಗ್ಗೆ ಮಾತನಾಡಿಲ್ಲ’ ಎಂದು ಡಿ. ರಾಜಾ ಸ್ಪಷ್ಟನೆ ನೀಡಿದ್ದಾರೆ.

ಇಂಥ ವಿಚಾರಗಳನ್ನು ಸಾರ್ವಜನಿಕವಾಗಿ ಹೇಳಬಾರದು. ಜನರು ಇಟ್ಟಿರುವ ವಿಶ್ವಾಸಕ್ಕೆ ಇದರಿಂದ ಧಕ್ಕೆಯಾಗಿದೆ. ಸವೋಚ್ಚ ನ್ಯಾಯಾಲಯಕ್ಕೆ ಕಿವಿಮಾತು ಹೇಳುವವರು ಯಾರೂ ಇಲ್ಲ.

| ಕೆ.ಜಿ. ಬಾಲಕೃಷ್ಣನ್ ಮಾಜಿ ಮುಖ್ಯ ನ್ಯಾಯಮೂರ್ತಿ

ಮುಖ್ಯ ನ್ಯಾ.ದೀಪಕ್ ಮಿಶ್ರಾ (ಭಾರತದ 45ನೇ ಮುಖ್ಯ ನ್ಯಾಯಮೂರ್ತಿ)

# 1953ರ ಅ.3ರಂದು ಜನನ. 1977ರಿಂದ ಒಡಿಶಾ ಮತ್ತು ಮಧ್ಯಪ್ರದೇಶ ಹೈಕೋರ್ಟ್​ನಲ್ಲಿ ವಕೀಲ ವೃತ್ತಿ ಆರಂಭ.

# ಪಟನಾ ಮತ್ತು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಣೆ.

# 2011ರಲ್ಲಿ ಸುಪ್ರೀಂಕೋರ್ಟ್​ಗೆ ಬಡ್ತಿ.

# 2017 ಆಗಸ್ಟ್ 28ರಂದು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕಾರ.

ಮಹತ್ವದ ಆದೇಶಗಳು

# 24 ಗಂಟೆಯೊಳಗೆ ಎಫ್​ಐಆರ್ ಪ್ರತಿ ಆನ್​ಲೈನ್​ಗೆ ಕಡ್ಡಾಯವಾಗಿ ಅಪ್​ಲೋಡ್ ಆಗಬೇಕು.

# ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 4 ಅಪರಾಧಿಗಳಿಗೆ ಮರಣದಂಡನೆ.


ನ್ಯಾ. ಜಸ್ತಿ ಚೆಲಮೇಶ್ವರ್

# ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಪೆದ್ದ ಮುಟ್ಟೆವಿಯಲ್ಲಿ 1953 ಜೂನ್ 23ರಂದು ಜನನ.

# 2007 ಮೇ 3ರಂದು ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ.

# 2010ರಲ್ಲಿ ಕೇರಳದ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗ.

# 2011ರ ಅಕ್ಟೋಬರ್​ನಲ್ಲಿ ಸುಪ್ರೀಂಕೋರ್ಟ್​ಗೆ ಬಡ್ತಿ.


ನ್ಯಾ. ರಂಜನ್ ಗೊಗೋಯಿ

# 1954ರ ನ.18ರಂದು ಗುವಾಹಟಿ ಯಲ್ಲಿ ಜನನ. 1978ರಿಂದ ವಕೀಲ ವೃತ್ತಿ ಆರಂಭ.

# 2011ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ಗೆ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ.

# 2012ರಲ್ಲಿ ಸುಪ್ರೀಂಕೋರ್ಟ್​ಗೆ ಬಡ್ತಿ.


ನ್ಯಾ. ಮದನ್ ಭೀಮ್ಾವ್ ಲೋಕುರ್

# 1953 ಡಿ.31ರಂದು ದೆಹಲಿಯಲ್ಲಿ ಜನನ.

# 1977ರಲ್ಲಿ ದೆಹಲಿ ವಿವಿಯಿಂದ ಕಾನೂನು ಪದವಿ. ಸುಪ್ರೀಂಕೋರ್ಟ್​ನಲ್ಲಿ ವಕೀಲ ವೃತ್ತಿ ಆರಂಭ.

# 2010ರಲ್ಲಿ ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಣೆ.

# 2011ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು 2012ರಲ್ಲಿ ಸುಪ್ರೀಂಕೋರ್ಟ್​ಗೆ ಬಡ್ತಿ.


ನ್ಯಾ.ಕುರಿಯನ್ ಜೋಸೆಫ್

# 1953ರ ನ.30ರಂದು ಕೇರಳದಲ್ಲಿ ಜನನ.

# ತಿರುವನಂಪುರಂನ ಕೇರಳ ಲಾ ಅಕಾಡೆಮಿಯಿಂದ ಕಾನೂನು ಪದವಿ. 1979ರಿಂದ ಹೈಕೋರ್ಟ್​ನಲ್ಲಿ ವಕೀಲ ವೃತ್ತಿ ಆರಂಭ.

# 2010ರಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಣೆ.

# 2013ರಲ್ಲಿ ಸುಪ್ರೀಂಕೋರ್ಟ್​ಗೆ ಬಡ್ತಿ.


 ಪ್ರಜಾಪ್ರಭುತ್ವ ಪ್ರೀತಿಸುವ ಪ್ರತಿಯೊಬ್ಬ ನಾಗರಿಕನೂ ನಾಲ್ವರು ನ್ಯಾಯಮೂರ್ತಿಗಳ ಪರವಾಗಿ ನಿಲ್ಲಬೇಕಿದೆ.

| ಯೋಗೇಂದ್ರ ಯಾದವ್ ರಾಜಕೀಯ ತಜ್ಞ

 

ಸ್ವಾತಂತ್ರ್ಯಾನಂತರ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸುಪ್ರೀಂಕೋರ್ಟ್​ನ ಹಾಲಿ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ದೇಶದ ನ್ಯಾಯಾಂಗ ವ್ಯವಸ್ಥೆಯ ಅಗ್ರ ದೇವಾಲಯ ಎಂಬ ಹಿರಿಮೆಯ ‘ಸವೋಚ್ಚ ನ್ಯಾಯಾಲಯ’ದಲ್ಲಿ ಕೆಲ ತಿಂಗಳಿಂದ ಆಡಳಿತ ಅವ್ಯವಸ್ಥಿತವಾಗಿದೆ ಎಂದು ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಶುಕ್ರವಾರ ದೂರಿದ್ದಾರೆ. ನಿಷ್ಪಕ್ಷಪಾತ ನ್ಯಾಯಾಂಗದಿಂದ ಮಾತ್ರ ಪ್ರಜಾಪ್ರಭುತ್ವ ಸಂರಕ್ಷಣೆ ಸಾಧ್ಯ ಎಂದು ನ್ಯಾಯಮೂರ್ತಿಗಳಾದ ಚೆಲಮೇಶ್ವರ್, ರಂಜನ್ ಗೊಗೋಯಿ, ಮದನ್ ಬಿ.ಲೋಕುರ್ ಮತ್ತು ಜೋಸೆಫ್ ಕುರಿಯನ್ ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ ಸಿಜೆಐ ದೀಪಕ್ ಮಿಶ್ರಾರನ್ನು ಭೇಟಿ ಮಾಡಿ ನ್ಯಾಯಾಂಗದಲ್ಲಿನ ಬಿಕ್ಕಟ್ಟು ಪರಿಹಾರಕ್ಕೆ ಮನವಿ ಮಾಡಿದೆವು. ಆದರೆ, ನಮ್ಮ ಯತ್ನ ವಿಫಲವಾದಾಗ ಸಾರ್ವಜನಿಕರ ಎದುರು ಬರುವುದು ಅನಿವಾರ್ಯವಾಯಿತು ಎಂದು ಈ ನಾಲ್ವರು ನ್ಯಾಯಮೂರ್ತಿಗಳು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪ್ರಜಾಪ್ರಭುತ್ವಕ್ಕೆ ಮಾರಕವಾಗುವಂಥ ಅನಪೇಕ್ಷಿತ ಬೆಳವಣಿಗೆಗಳು ಕೆಲವು ತಿಂಗಳಿನಿಂದ ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿವೆ ಎಂದೂ ಆಕ್ಷೇಪಿಸಿದ್ದಾರೆ. 2018ರ ಅ.2ರಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಧಿಕಾರಾವಧಿ ಮುಕ್ತಾಯಗೊಳ್ಳಲಿದ್ದು, ನಂತರ ನ್ಯಾ. ರಂಜನ್ ಗೊಗೋಯಿಗೆ ಸಿಜೆಐ ಹುದ್ದೆ ಸಿಗಲಿದೆ ಎಂಬುದು ಗಮನಾರ್ಹ.

ಆತ್ಮಸಾಕ್ಷಿ ಮಾರಿಕೊಂಡವರು ಎಂಬ ಆರೋಪ ಬೇಡ

ನಾವು ಬಹಳ ಪ್ರಬುದ್ಧರನ್ನು ನೋಡಿದ್ದೇವೆ. ಆದರೆ, 20 ವರ್ಷಗಳ ನಂತರ ನಾವು ನಾಲ್ವರನ್ನು ಆತ್ಮಸಾಕ್ಷಿ ಮಾರಿಕೊಂಡವರು ಎಂದು ಯಾರೂ ಟೀಕಿಸಬಾರದು ಎಂಬ ಕಾರಣಕ್ಕೆ ಸುದ್ದಿಗೋಷ್ಠಿ ನಡೆಸಬೇಕಾಯಿತು ಎಂದು ಚೆಲಮೇಶ್ವರ್ ತಿಳಿಸಿದ್ದಾರೆ. ರಾಷ್ಟ್ರದ ಪರವಾದ ಜವಾಬ್ದಾರಿಯಿಂದ ಈ ಹೆಜ್ಜೆ ಇಟ್ಟೆವು. ಸಿಜೆಐ ಮಿಶ್ರಾ ವಿರುದ್ಧ ದೋಷಾ ರೋಪ ಹೊರಿಸಲು ಅಲ್ಲ ಎಂದು ಸ್ಪಷ್ಟಪಡಿಸಿದರು.

ನ್ಯಾಯಪ್ರಿಯರು ಸೂಕ್ಷ್ಮವಾಗಿ ನೋಡುತ್ತಿದ್ದಾರೆ

ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಹೊರಹಾಕಿರುವ ಅಸಮಾಧಾನವನ್ನು ಬಹಳ ಎಚ್ಚರಿಕೆಯಿಂದ ಪರಿಗಣಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾ.ಲೋಯಾ ಸಾವಿನ ಬಗ್ಗೆ ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿಗಳ ನಿಗಾದಲ್ಲಿ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.

 

 

ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಮೇಲೆ ದೋಷಾರೋಪ ಹೊರಿಸಬೇಕು. ಒಬ್ಬ ಮುಖ್ಯ ನ್ಯಾಯಮೂರ್ತಿ ವಿರುದ್ಧ ವ್ಯವಸ್ಥಿತವಾಗಿ ನಾಲ್ವರು ಒಟ್ಟಾಗಿ ದೂರಬಾರದು.

| ಆರ್.ಎಸ್. ಸೋಧಿ ದೆಹಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ

ಜನಸಾಮಾನ್ಯರ ವಿಶ್ವಾಸವೇ ನ್ಯಾಯಾಂಗಕ್ಕೆ ಜೀವಾಳ. ನಾಲ್ವರು ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ ಸಾರ್ವಜನಿಕರ ನಂಬಿಕೆಯನ್ನು ಛಿದ್ರಗೊಳಿಸಿದೆ. ಇನ್ಮುಂದೆ ಶಾಸಕರು ಮತ್ತು ಅಧಿಕಾರಿಗಳು ಕೂಡ ನ್ಯಾಯಾಲಯ ವಿರುದ್ಧ ಬೆರಳು ತೋರಿಸಬಹುದು. ಕಾರ್ಯಾಂಗ ಮತ್ತು ಶಾಸಕಾಂಗದ ಮೇಲೆ ಜನರಿಗಿರುವ ಆಕ್ರೋಶದಂತೆ ನ್ಯಾಯಾಂಗದ ಆಕ್ರೋಶ ಸಾರ್ವಜನಿಕವಾಗಬಾರದು. ನಾನು ಮುಖ್ಯ ನ್ಯಾಯಮೂರ್ತಿ ಬೆಂಬಲಕ್ಕೆ ನಿಂತಿಲ್ಲ. ಆದರೆ ನಾಲ್ವರು ನ್ಯಾಯಮೂರ್ತಿಗಳು ತಮ್ಮ ಸಮಸ್ಯೆಯನ್ನು ನ್ಯಾಯಾಲಯದ ನಾಲ್ಕು ಗೋಡೆಗಳ ಒಳಗೆ ಪರಿಹರಿಸಿಕೊಳ್ಳಬೇಕಿತ್ತು ಎಂಬುದು ಮಾತ್ರ ನನ್ನ ನಿಲುವು.

| ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ

 

ಪತ್ರದಲ್ಲಿ ಉಲ್ಲೇಖವಾಗಿರುವ ಬಿಕ್ಕಟ್ಟಿನ ಕಾರಣಗಳು

# ಕೆಲ ತಿಂಗಳ ಹಿಂದೆ ನ್ಯಾ.ಚೆಲಮೇಶ್ವರ್ ಪೀಠದಲ್ಲಿದ್ದ ಪಿಐಎಲ್ ಅರ್ಜಿಯನ್ನು ಸಿಜೆಐ ಮಿಶ್ರಾ ತಮ್ಮ ಪೀಠಕ್ಕೆ ವರ್ಗಾಯಿಸಿಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿದ ಚೆಲಮೇಶ್ವರ್ ಪಿಐಎಲ್ ತುರ್ತು ವಿಚಾರಣೆ ನಡೆಸಿ ಪಂಚಸದಸ್ಯ ಪೀಠ ರಚನೆಗೆ ಆದೇಶಿಸಿದ್ದರು. ಹಾಲಿ ಮತ್ತು ಮಾಜಿ ನ್ಯಾಯಮೂರ್ತಿಗಳ ವಿರುದ್ಧದ ಭ್ರಷ್ಟಾಚಾರದ ಆರೋಪ ತನಿಖೆಗೆ ಆದೇಶಕ್ಕೆ ಪಿಐಎಲ್​ನಲ್ಲಿ ಮನವಿ ಸಲ್ಲಿಕೆಯಾಗಿತ್ತು.

# ಡಾನ್ ಸೊಹ್ರಾಬುದ್ದೀನ್ ಎನ್​ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾ. ಬಿ.ಎಚ್.ಲೋಯಾ 2014ರಲ್ಲಿ ಹೃದಯಾಘಾತದಿಂದ ಮೃತರಾಗಿದ್ದರು. ನಂತರ ಹಲವು ಗಣ್ಯರ ಕೈವಾಡದ ಶಂಕೆಯಿರುವ ಹೈಪ್ರೊಫೈಲ್ ಪ್ರಕರಣಕ್ಕೂ ಲೋಯಾ ಸಾವಿಗೂ ಸಂಬಂಧವಿದೆ. ಪ್ರತ್ಯೇಕವಾಗಿ ತನಿಖೆ ನಡೆಸಿ ಎಂದು ಮಹಾರಾಷ್ಟ್ರದ ಪತ್ರಕರ್ತ ಬಿ.ಆರ್.ಲೊನಿ ಸುಪ್ರೀಂಕೋರ್ಟ್​ಗೆ ಪಿಐಎಲ್ ಸಲ್ಲಿಸಿದ್ದರು. ಸಿಜೆಐ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ನ್ಯಾ. ಅರುಣ್ ಕುಮಾರ್ ನೇತೃತ್ವದಲ್ಲಿ ವಿಚಾರಣಾ ಪೀಠ ರಚಿಸಿತ್ತು. ಈ ಹಿನ್ನೆಲೆಯಲ್ಲಿಯೇ, ನ್ಯಾ. ಗೊಗೋಯಿ ಅವರ ಹಿರಿತನವನ್ನು ಕಡೆಗಣಿಸಿ ಆಯ್ದ ಪೀಠಗಳಿಗೆ ಮಹತ್ವದ ಪ್ರಕರಣದ ವರ್ಗಾಯಿಸಲಾಗುತ್ತಿದೆ ಎಂದು ಶುಕ್ರವಾರ ನಾಲ್ವರು ನ್ಯಾಯಮೂರ್ತಿಗಳು ಆರೋಪಿಸಿದ್ದಾರೆ.

# ಜಡ್ಜ್​ಗಳ ನೇಮಕಾತಿಯ ಕೊಲಿಜಿಯಂನಲ್ಲಿನ ನಿರ್ಧಾರಗಳನ್ನು ಆನ್​ಲೈನ್​ನಲ್ಲಿ ಪ್ರಕಟಿಸುವ ಸಿಜೆಐ ಮಿಶ್ರಾ ನಿರ್ಧಾರದಿಂದ ಆಯ್ಕೆಯಾಗದೆ ತಿರಸ್ಕೃತಗೊಳ್ಳುವ ಕೆಲವು ನ್ಯಾಯಾಧೀಶರು ಮತ್ತು ವಕೀಲರಿಗೆ ಮುಜುಗರ ಉಂಟಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ನ್ಯಾ.ಲೋಕುರ್ ಮತ್ತು ಜೊಸೆಫ್ ಈ ಅಂಶ ಉಲ್ಲೇಖಿಸಿದ್ದಾರೆ.

# 2014ರಲ್ಲಿ ಸಂಸತ್​ನಲ್ಲಿ ಅನುಮೋದನೆಗೊಂಡ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ರಚನೆಗೆ ಸುಪ್ರೀಂಕೋರ್ಟ್ ಅಸಾಂವಿಧಾನಿಕ ನಡೆ ಎಂದು ಹಾಕಿರುವ ತಡೆಯಿಂದ ನ್ಯಾಯಮೂರ್ತಿಗಳ ನೇಮಕಾತಿ ಆಮೆಗತಿಯಲ್ಲಿ ಸಾಗಿದೆ. ಮಾಜಿ ಸಿಜೆಐ ಜೆ.ಎಸ್.ಖೆಹರ್ ನೂತನ ಎಂಒಪಿ (ಮೆಮರ್ಯಾಂಡಂ ಆಫ್ ಪ್ರೊಸಿಜರ್)ಗೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೂ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ನಾಲ್ವರು ನ್ಯಾಯಮೂರ್ತಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನ್ಯಾ. ಲೋಯಾ ನಿಗೂಢ ಸಾವು ಗಂಭೀರ ವಿಚಾರವೆಂದ ಸುಪ್ರೀಂ

ನವದೆಹಲಿ: ಸೊಹ್ರಾಬುದ್ದೀನ್ ಶೇಖ್ ಎನ್​ಕೌಂಟರ್ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎಚ್.ಲೋಯಾರ ನಿಗೂಢ ಸಾವನ್ನು ಸುಪ್ರೀಂಕೋರ್ಟ್ ಗಂಭೀರ ವಿಚಾರ ಎಂದು ಹೇಳಿದೆ. ಅಲ್ಲದೆ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸುವ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಂ.ಎಂ.ಶಾಂತನಗೌಡರ್​ರನ್ನೊಳಗೊಂಡ ನ್ಯಾಯಪೀಠ ಮಹಾರಾಷ್ಟ್ರ ಸರ್ಕಾರಕ್ಕೆ ಜ.15ರೊಳಗಾಗಿ ಉತ್ತರ ನೀಡುವಂತೆ ಸೂಚಿಸಿದೆ. ಮತ್ತೊಂದೆಡೆ ಪ್ರಕರಣದ ವಿಚಾರಣೆ ಹೈಕೋರ್ಟ್​ನಲ್ಲಿ ನಡೆಯುತ್ತಿರುವುದರಿಂದ ಸುಪ್ರೀಂಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪರಿಗಣಿಸಬಾರದು ಎಂದು ಬಾಂಬೆ ವಕೀಲರ ಸಂಘ ಮನವಿ ಸಲ್ಲಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಗಮನಿಸಲಾಗುವುದು ಜತೆಗೆ ಸಂಘ ಸಲ್ಲಿಸಿರುವ ಆಕ್ಷೇಪಣೆಯನ್ನು ಪರಿಗಣಿಸಲಾಗುವುದೆಂದು ಹೇಳಿದೆ.ಪ್ರಕರಣದ ಮುಂದಿನ ವಿಚಾರಣೆಯನ್ನು ಜ.15ಕ್ಕೆ ಮುಂದೂಡಲಾಗಿದೆ. -ಏಜೆನ್ಸೀಸ್

 

ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಬಿಕ್ಕಟ್ಟು ಶಮನಕ್ಕೆ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸಹಕರಿಸಬೇಕು. ಅವರು ಮಾಧ್ಯಮದ ಎದುರು ಹೋಗುವುದನ್ನು ತಡೆಯಬಹುದಿತ್ತು. ನಾನು ಮಾಧ್ಯಮದ ಬಳಿ ಮಾತನಾಡಲ್ಲ ಎಂದು ನಾಲ್ವರಿಗೂ ವಾಗ್ದಾನ ಮಾಡಿದ್ದೇನೆ.

| ಎ.ಕೆ. ವೇಣುಗೋಪಾಲ್ ಅಟಾರ್ನಿ ಜನರಲ್ (ಸಿಜೆಐ ಭೇಟಿ ಬಳಿಕ)

 

ಮಾಜಿ ಮುಖ್ಯ ನ್ಯಾ. ಖೇಹರ್​ಗೂ ಚೆಲಮೇಶ್ವರ್ ಪಾಠ

ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯ ಕೊಲಿಜಿಯಂನಲ್ಲಿದ್ದ ನ್ಯಾ. ಚೆಲಮೇಶ್ವರ್ ಅಂದಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್​ಗೆ ಪತ್ರ ಬರೆದು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಅರ್ಹತೆ ಪರಿಶೀಲಿಸಲಾಗುತ್ತಿಲ್ಲ. ವೈಯಕ್ತಿಕ ಮನವಿಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿದೆ. ಕೊಲಿಜಿಯಂನ ಸಹಸದಸ್ಯರ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲ ಎಂದು ಚೆಲಮೇಶ್ವರ್ ಹೇಳಿದ್ದರು ಎಂದು ತಿಳಿದುಬಂದಿದೆ.

ನಾವು ಈ ನಾಲ್ವರನ್ನು ಟೀಕಿಸಬಾರದು. ತಮ್ಮ ವೃತ್ತಿಯಲ್ಲಿ ನ್ಯಾಯಾಂಗದ ಸಮಗ್ರತೆಗೆ ಸಾಕಷ್ಟು ತ್ಯಾಗ ಮಾಡಿರುವವರು ಅವರು. ಭ್ರಷ್ಟಾಚಾರ ಎಸಗಲು ಅವಕಾಶವಿದ್ದಾಗಲೂ ಮಾಡದಿರುವುದಕ್ಕೆ ಅವರನ್ನು ಗೌರವಿಸಬೇಕು. ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ ಇಡೀ ಸುಪ್ರೀಂಕೋರ್ಟ್ ಒಂದಾಗಿ ಸಾಗುವಂತೆ ನೋಡಿಕೊಳ್ಳಬೇಕು.

| ಸುಬ್ರಮಣಿಯನ್ ಸ್ವಾಮಿ ಬಿಜೆಪಿ ಮುಖಂಡ

 

ನ್ಯಾಯಮೂರ್ತಿಗಳು ಎತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯತ್ನ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದಿಂದ ಆಗಬೇಕು. ಜಾತ್ಯತೀತ ಪ್ರಜಾಪ್ರಭುತ್ವ ಆಧಾರದ ಗಣರಾಜ್ಯದ ಮೇಲೆ ಪರಿಣಾಮ ಬೀರುತ್ತಿರುವ ಶಕ್ತಿಗಳನ್ನು ತನಿಖೆಯಿಂದ ಬಹಿರಂಗಪಡಿಸಬೇಕು.

| ಸೀತಾರಾಮ್ ಯೆಚೂರಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ

 

ವಿಶ್ವದಲ್ಲಿಯೇ ಭಾರತದ ನ್ಯಾಯಾಂಗಕ್ಕೆ ಗೌರವಯುತ ಸ್ಥಾನವಿದೆ. ಸಂಪೂರ್ಣ ಸ್ವತಂತ್ರವಾಗಿರುವ ನಮ್ಮ ನ್ಯಾಯಾಂಗ, ಬಿಕ್ಕಟ್ಟನ್ನು ತಾನೇ ಪರಿಹರಿಸಿಕೊಳ್ಳುವ ಭರವಸೆಯಿದೆ.

| ಪಿ.ಪಿ.ಚೌಧರಿ ಕಾನೂನು ಖಾತೆ ರಾಜ್ಯ ಸಚಿವ

 

ನಾಲ್ವರು ನ್ಯಾಯಮೂರ್ತಿಗಳ ಪ್ರಮುಖ ಆರೋಪಗಳು

# ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠಗಳಲ್ಲಿಯೇ ಪ್ರಮುಖ ಪ್ರಕರಣಗಳ ವಿಚಾರಣೆ ನಡೆಯುತ್ತದೆ. ಇತರ ಹಿರಿಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆಯಾಗುವುದಿಲ್ಲ. ಪ್ರಕರಣಗಳ ಹಂಚಿಕೆಯಲ್ಲಿ ತಾರತಮ್ಯವಿದೆ.

# ಕಳೆದ ಕೆಲ ತಿಂಗಳಲ್ಲಿ ಅನಪೇಕ್ಷಿತವಾದ ಹಲವಾರು ಬೆಳವಣಿಗೆಗಳು ಆಗಿವೆ. ಸುಪ್ರೀಂಕೋರ್ಟ್​ನಲ್ಲಿ ಆಡಳಿತ ವ್ಯವಸ್ಥಿತವಾಗಿಲ್ಲ.

# ಕಡಿಮೆ ಸದಸ್ಯ ಬಲದ ಪೀಠವನ್ನು ಮುಖ್ಯ ನ್ಯಾಯಮೂರ್ತಿ ಮುನ್ನಡೆಸಬಾರದು. ಪಂಚ ಸದಸ್ಯ ಪೀಠದಲ್ಲಿ ವಿಚಾರಣೆಗೊಳಪಟ್ಟಿದ್ದ ನ್ಯಾಯಮೂರ್ತಿಗಳ ಎಂಒಪಿದ ಬಗ್ಗೆ ಅವರು ವಿಸõತ ಚರ್ಚೆಗೆ ಅವಕಾಶ ನೀಡಬೇಕು.

ಸುಪ್ರೀಂಕೋರ್ಟ್ ಮತ್ತು ದೇಶದ ಪರವಾಗಿ ನಮಗೆ ಮಹತ್ತರ ಜವಾಬ್ದಾರಿ ಹೊರಿಸಲಾಗಿದೆ. ಆದರೆ ಸುಪ್ರೀಂಕೋರ್ಟ್​ನಲ್ಲಿ ನ್ಯಾಯ ರಕ್ಷಣೆಯ ನಮ್ಮ ಎಲ್ಲ ಪ್ರಯತ್ನಗಳನ್ನು ಸಿಜೆಐ ವಿಫಲಗೊಳಿಸಿದ್ದಾರೆ.

| ನ್ಯಾ.ಚೆಲಮೇಶ್ವರ್ ಸುಪ್ರೀಂಕೋರ್ಟ್​ನ ಹಿರಿಯ ನ್ಯಾಯಮೂರ್ತಿ

 

 

ನಾಲ್ವರು ನ್ಯಾಯಮೂರ್ತಿಗಳು ಮುಖ್ಯ ನ್ಯಾ.ಮಿಶ್ರಾಗೆ ಬರೆದ ಪತ್ರ

ಪತ್ರದಲ್ಲಿ ಹೇಳಿದ್ದೇನು?

ಆತ್ಮೀಯ ಮುಖ್ಯ ನ್ಯಾಯಮೂರ್ತಿಗಳೇ,

ಅತೀವ ದುಃಖ ಮತ್ತು ನ್ಯಾಯಾಂಗದ ಮೇಲಿನ ಕಾಳಜಿಯಿಂದಾಗಿ ಈ ಪತ್ರ ಬರೆಯಬೇಕಾಗಿದೆ. ಸುಪ್ರೀಂಕೋರ್ಟ್​ನ ಇತ್ತೀಚಿನ ಕೆಲವು ಆದೇಶಗಳಿಂದ ನ್ಯಾಯಾಂಗ ವ್ಯವಸ್ಥೆ, ಹೈಕೋರ್ಟ್​ಗಳ ಸ್ವಾತಂತ್ರ್ಯ ಮತ್ತು ಮುಖ್ಯ ನ್ಯಾಯಮೂರ್ತಿ ಕಾರ್ಯಾಲಯದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗಿವೆ. ಕೊಲ್ಕತ್ತ, ಬಾಂಬೆ, ಮದ್ರಾಸ್ ಹೈಕೋರ್ಟ್​ಗಳ ಸ್ಥಾಪನೆಯಾದಾಗಿನಿಂದ ಕೆಲವು ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಶತಮಾನಗಳಷ್ಟು ಹಳೆಯದಾದ ಈ ಅಭ್ಯಾಸಗಳಿಂದ ಸುಪ್ರೀಂ ಕೋರ್ಟ್​ನ ಯಾವ ನ್ಯಾಯಮೂರ್ತಿ ಅಥವಾ ಪೀಠ ಯಾವ ಪ್ರಕರಣಗಳ ನೇತೃತ್ವದ ವಹಿಸಬೇಕು ಎನ್ನುವ ನಿರ್ಣಯದಿಂದಾಗಿ ನ್ಯಾಯಾಂಗದ ವ್ಯವಸ್ಥೆಯ ಕೊಲಿಜಿಯಂಗೆ ಸಂಬಂಧಿಸಿದ ನಿಯಮಾವಳಿಗಳ ಜ್ಞಾಪನ ಪತ್ರ (ಎಂಒಪಿ) ಸಲೀಸಾಗುತ್ತಾ ಹೋಗುತ್ತದೆ. ಇಂಥ ಸಂಘಟನಾತ್ಮಕ ಕಾರ್ಯವ್ಯವಸ್ಥೆಯನ್ನು ಮುನ್ನಡೆಸುವ ಹೊಣೆ ಮುಖ್ಯ ನ್ಯಾಯಮೂರ್ತಿ ಮೇಲಿರುತ್ತದೆ. ಹಾಗಂತ ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಾತೀತ ಮತ್ತು ಸವೋನ್ನತ ಅಧಿಕಾರಿ ಎಂದಲ್ಲ. ಸವೋಚ್ಚ ನ್ಯಾಯಾಲಯದ ಪ್ರಮುಖರ ಪೈಕಿ ಅವರು ಮೊದಲಿಗರು ಅಷ್ಟೇ. ಕೆಲವು ನಿರ್ದಿಷ್ಟ ಪೀಠಗಳಿಗೆ ಸಂಬಂಧಿತ ಪ್ರಕರಣಗಳಲ್ಲಿ ತಮಗೆ ತಾವೇ ಅಧಿಕಾರ ಕೊಟ್ಟುಕೊಳ್ಳುವುದು ಸರಿಯಲ್ಲ. ಚಾಲ್ತಿ ವ್ಯವಸ್ಥೆ ಹಳಿತಪ್ಪದಂತೆ ಕಾಯ್ದುಕೊಳ್ಳಲು ಈ ನಿಯಮಗಳನ್ನು ಎಲ್ಲರೂ ಪಾಲಿಸಬೇಕಾದ್ದು ಅವಶ್ಯಕ. ಒಂದು ವೇಳೆ ಇದನ್ನು ಮೀರಿದಲ್ಲಿ ನ್ಯಾಯಾಂಗದ ಮೇಲೆಯೇ ಸಂಶಯ ಹುಟ್ಟಿ, ಭವಿಷ್ಯದಲ್ಲಿ ಭಾರಿ ಪ್ರತಿಭಟನೆ ಎದುರಿಸಬೇಕಾದೀತು. ದೇಶ ಹಾಗೂ ನ್ಯಾಯಾಂಗ ವ್ಯವಸ್ಥೆ ಮೇಲೆ ದೂರಗಾಮಿ ಪರಿಣಾಮ ಬೀರಬಲ್ಲ ಪ್ರಕರಣಗಳನ್ನು ಮುಖ್ಯ ನ್ಯಾಯಮೂರ್ತಿಗಳು ‘ತಮ್ಮ ಇಷ್ಟಾನುಸಾರ’ ಆಯ್ದುಕೊಂಡು, ಸಕಾರಣವಿಲ್ಲದೆ ಹಂಚಿಕೆ ಮಾಡಿದ ನಿದರ್ಶನಗಳೂ ಇವೆ. ಹೇಗಾದರೂ ಸರಿ ಇಂಥವುಗಳನ್ನು ತಡೆಯಬೇಕಿದೆ.

ಸುಪ್ರೀಂಕೋರ್ಟ್​ನ ಘನತೆಗೆ ಧಕ್ಕೆಯಾಗಬಾರದೆಂಬ ದೃಷ್ಟಿಯಿಂದ ಯಾವುದೇ ವಿವರಗಳನ್ನು ನಾವು ಈ ಪತ್ರದಲ್ಲಿ ಉಲ್ಲೇಖಿಸಿಲ್ಲ. ಆದರೆ, ಸಂಪ್ರದಾಯದಿಂದ ವಿಮುಖ ವಾಗಿದ್ದರಿಂದಾಗಿ ಈಗಾಗಲೇ ಕೆಲವು ನಿರ್ಧಾರಗಳು ಸಂಸ್ಥೆಯ ಗೌರವಕ್ಕೆ ಚ್ಯುತಿ ತಂದಿವೆ.

ಆರ್.ಬಿ. ಲೂಥ್ರಾ ಮತ್ತು ಕೇಂದ್ರ ಸರ್ಕಾರ ಪ್ರಕರಣದಲ್ಲಿ 2017ರ ಅಕ್ಟೋಬರ್ 27ರಂದು ಹೊರಬಿದ್ದ ಆದೇಶದಲ್ಲಿ, ಕೊಲಿಜಿಯಂಗೆ ಸಂಬಂಧಿಸಿದ ನಿಯಮಾವಳಿಗಳ ಜ್ಞಾಪನ ಪತ್ರ (ಎಂಒಪಿ) ಅಂತಿಮಗೊಳಿಸುವಲ್ಲಿ ವಿಳಂಬವಾಗಬಾರದು. ಇದಕ್ಕೆ ಪೂರಕವಾಗಿ ನೀವೂ ಇದ್ದ ಐವರು ಸದಸ್ಯರ ಕೊಲಿಜಿಯಂನಲ್ಲಿ ಮಾರ್ಚ್ 2017ರಲ್ಲಿ ವಿಸõತ ಚರ್ಚೆಯಾಗಿ ನ್ಯಾಯಮೂರ್ತಿಗಳ ಎಂಒಪಿ ಅಂತಿಮಗೊಳಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಸರ್ಕಾರ ಈವರೆಗೂ ಇದಕ್ಕೆ ಪ್ರತಿಕ್ರಿಯಿಸಿಲ್ಲ. ಹೀಗಾಗಿ ಮೌನಂ ಸಮ್ಮತಿ ಲಕ್ಷಣಂ ಎಂದು ಪರಿಗಣಿಸಬೇಕು.

ನ್ಯಾ.ಸಿ.ಎಸ್.ಕರ್ಣನ್ ಪ್ರಕರಣದಲ್ಲಿ ಏಳು ಸದಸ್ಯರ ಪೀಠದ ತೀರ್ಪು ಗಮನಿಸಿದಾಗ ನಮ್ಮಲ್ಲಿ ಇಬ್ಬರಿಗೆ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ ಪರಿಷ್ಕರಣೆಯಾಗಬೇಕು ಅನ್ನಿಸಿತು. ಯಾಕೆಂದರೆ ದೋಷಾರೋಪಣೆ ಪರಿಹಾರವಲ್ಲ. ಬದಲಿಗೆ ಸುಧಾರಣೆಗೆ ಹೊಸ ವ್ಯವಸ್ಥೆ ರೂಪಿಸುವ ಅವಶಕ್ಯತೆಯಿದೆ.

ನ್ಯಾಯಮೂರ್ತಿಗಳ ಎಂಒಪಿ ಬಗ್ಗೆ ಅಭಿಪ್ರಾಯ ನೀಡಿಲ್ಲ. ಈ ವಿಷಯವು ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನದಲ್ಲಿ ಮತ್ತು ಪೂರ್ಣ ನ್ಯಾಯಾಲಯದಲ್ಲಿ ಚರ್ಚೆಯಾಗಬೇಕು. ಐತಿಹಾಸಿಕ ಮಹತ್ವದ್ದಾಗಿರುವ ಎಂಒಪಿದ ಬಗ್ಗೆ ಮತ್ತೊಂದು ಸಾಂವಿಧಾನಿಕ ಪೀಠದಿಂದಲೂ ಅಭಿಪ್ರಾಯ ಕೇಳುವುದು ತಪ್ಪಲ್ಲ.

ಇಂಥ ಪರಿಸ್ಥಿತಿಯ ಸುಧಾರಣೆಗೆ ಮತ್ತು ಪರಿಹಾರೋಪಾಯಕ್ಕೆ ಮುಖ್ಯ ನ್ಯಾಯಮೂರ್ತಿಗಳು ಕರ್ತವ್ಯಬದ್ಧರಾಗಿರುವುದರಿಂದ ಕೊಲಿಜಿಯಂನ ಇತರೆ ಸದಸ್ಯರೊಂದಿಗೂ ರ್ಚಚಿಸಿ ನಿರ್ಣಯಕ್ಕೆ ಬರಬೇಕಿದೆ. ಅಗತ್ಯಬಿದ್ದಲ್ಲಿ ಕೋರ್ಟಿನ ಇತರ ನ್ಯಾಯಮೂರ್ತಿಗಳ ಅಭಿಪ್ರಾಯವನ್ನೂ ಪಡೆಯಬಹುದಾಗಿದೆ. ಮೇಲೆ ಉಲ್ಲೇಖಿಸಿದ ಲೂಥ್ರಾ ಪ್ರಕರಣವನ್ನು ಸಮರ್ಪಕವಾಗಿ ನೀವು ನಿಭಾಯಿಸಿದ ನಂತರದಲ್ಲಿ, ಇದೇ ರೀತಿ ನಿರ್ವಹಿಸಬೇಕಾದ ನಿರ್ದಿಷ್ಟ ಪ್ರಕರಣಗಳಿದ್ದರೆ ಮುಂದಿನ ದಿನಗಳಲ್ಲಿ ನಾವು ನಿಮ್ಮ ಗಮನಕ್ಕೆ ತರುತ್ತೇವೆ.

ಇಂತಿ ಗೌರವಗಳೊಂದಿಗೆ,

ನ್ಯಾ. ಜೆ. ಚೆಲಮೇಶ್ವರ್, ನ್ಯಾ. ರಂಜನ್ ಗೊಗೋಯಿ, ನ್ಯಾ. ಮದನ್ ಬಿ.ಲೋಕುರ್, ನ್ಯಾ.ಕುರಿಯನ್ ಜೋಸೆಫ್

Leave a Reply

Your email address will not be published. Required fields are marked *

Back To Top