ವಯನಾಡಿನ ಸಂಸದರಾಗಿ ರಾಹುಲ್​ ಗಾಂಧಿ ಪ್ರಮಾಣವಚನ ಸ್ವೀಕಾರ: ಇಲ್ಲಿಯೂ ಒಂದು ಸಣ್ಣ ಎಡವಟ್ಟು…

ನವದೆಹಲಿ: ಇಂದಿನಿಂದ ಆರಂಭವಾದ 17ನೇ ಲೋಕಸಭೆ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಈ ಬಾರಿ ಆಯ್ಕೆಯಾದ ಎಲ್ಲ ಸಂಸದರೂ ಒಬ್ಬರಾದ ಮೇಲೆ ಒಬ್ಬರಂತೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಹೆಚ್ಚಾಗಿ ಬಿಜೆಪಿ ಸಂಸದರೇ ಇರುವ ಲೋಕಸಭೆಯಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಸೇರಿ ಕೆಲವರು ಮಾತ್ರ ಕಾಂಗ್ರೆಸ್​ ಸಂಸದರಿದ್ದಾರೆ. ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಿದ ರಾಹುಲ್​ ಗಾಂಧಿ ಸಣ್ಣದೊಂದು ಎಡವಟ್ಟು ಮಾಡಿ, ನಂತರ ಸರಿಪಡಿಸಿಕೊಂಡರು.

ಕೇರಳದ ವಯನಾಡಿನಿಂದ ಗೆದ್ದು ಸಂಸದರಾಗಿರುವ ರಾಹುಲ್​ ಗಾಂಧಿ ಪ್ರಮಾಣವಚನವನ್ನು ಸ್ವೀಕರಿಸಿದರು. ಆದರೆ, ಮುಖ್ಯವಾಗಿ ಲೋಕಸಭೆಯ ರಿಜಿಸ್ಟ್ರರ್​ನಲ್ಲಿ ಸಹಿ ಮಾಡುವುದನ್ನೇ ಮರೆತು ಹೋದರು. ಪ್ರಮಾಣವಚನ ಪತ್ರ ಓದಿದ ನಂತರ ಹೊರಟೇ ಬಿಟ್ಟರು. ನಂತರ ಅಲ್ಲಿಯೇ ಇದ್ದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸೇರಿ ಅಧಿಕಾರಿಗಳು ನೆನಪಿಸಿದ ಬಳಿಕ ಮತ್ತೆ ಹಿಂದಿರುಗಿ ಬಂದು ಸಹಿ ಮಾಡಿ ಎಲ್ಲರಿಗೂ ನಮಸ್ಕರಿಸುತ್ತ ತೆರಳಿದರು. ಈ ವೇಳೆ ಅವರ ತಾಯಿ ಸೋನಿಯಾ ಗಾಂಧಿ ಕೂಡ ಹಾಜರಿದ್ದರು.

ಬೆಳಗ್ಗೆಯಿಂದಲೇ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಪ್ರಾರಂಭವಾಗಿದ್ದರೂ ರಾಹುಲ್​ ಗಾಂಧಿ ಆಗಮಿಸದೆ ಇರುವುದು ಕುತೂಹಲಕ್ಕೆ ಕಾರಣವಾಗಿತ್ತು. ನಂತರ ಪ್ರಮಾಣವಚನಕ್ಕೆ ಕೆಲವೇ ಕ್ಷಣ ಮುಂಚಿತವಾಗಿ ಟ್ವೀಟ್​ ಮಾಡಿದ್ದ ರಾಹುಲ್​ ಗಾಂಧಿ, ಸತತವಾಗಿ ನಾಲ್ಕನೇ ಬಾರಿಗೆ ಲೋಕಸಭೆ ಸದಸ್ಯನಾಗಿ ಇಂದಿನಿಂದ ಕೆಲಸ ಪ್ರಾರಂಭಿಸುತ್ತಿದ್ದು, ಕೇರಳದ ವಯನಾಡನ್ನು ಪ್ರತಿನಿಧಿಸುತ್ತಿದ್ದೇನೆ. ಮಧ್ಯಾಹ್ನ ಪ್ರಮಾಣವಚನ ಸ್ವೀಕಾರ ಮಾಡಿ ಹೊಸ ಇನಿಂಗ್ಸ್​ ಪ್ರಾರಂಭಿಸುತ್ತಿದ್ದೇನೆ. ಭಾರತ ಸಂವಿಧಾನಕ್ಕೆ ಬದ್ಧವಾಗಿ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.

Leave a Reply

Your email address will not be published. Required fields are marked *