ಸುಪ್ರೀಂ ಹೆಚ್ಚಿನ ಪೀಠ ರಚನೆ ಚರ್ಚೆಯಾಗಲಿ

ಹುಬ್ಬಳ್ಳಿ: ಸವೋಚ್ಚ ನ್ಯಾಯಾಲಯದ ಹೆಚ್ಚಿನ ಪೀಠ ಸ್ಥಾಪನೆ ಬಗ್ಗೆ ಆರೋಗ್ಯಕರ ಚರ್ಚೆಯಾಗಬೇಕು ಎಂದು ಧಾರವಾಡ ಸಂಸದ ಪ್ರಲ್ಹಾದ ಜೋಶಿ ಅವರು ಇಲ್ಲಿಯ ಕೋರ್ಟ್ ಸಂಕೀರ್ಣ ಉದ್ಘಾಟನೆಗೆ ಆಗಮಿಸಿದ್ದ ದೇಶದ ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ ಅವರ ಗಮನ ಸೆಳೆದರು.

ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲರಿಗೂ ದೆಹಲಿಗೆ ಹೋಗುವು ದು ದುಸ್ಸಾಧ್ಯ. ಆದ್ದರಿಂದ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪೀಠಗಳು ಸ್ಥಾಪನೆಯಾಗಬೇಕು ಎಂಬ ಕೂಗು ಇದೆ. ಈ ವಿಷಯದಲ್ಲಿ ಚರ್ಚೆಯಾಗಿ, ಹೆಚ್ಚಿನ ಪೀಠಗಳ ಸ್ಥಾಪನೆ ಬೇಕೆ ಬೇಡವೆ ಎನ್ನುವುದು ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ನಿರ್ಧಾರವಾಗಬೇಕು ಎಂದು ಮನವಿ ಮಾಡಿದರು.

ರಾಜಿಯನ್ನು ಪ್ರೋತ್ಸಾಹಿಸಬೇಕು: ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥ ಮಾಡಿಕೊಳ್ಳುವಂತೆ ವಕೀಲರು ಕಕ್ಷಿದಾರರನ್ನು ಪ್ರೇರೇಪಿಸಬೇಕು. ಅದು ಸಾಧ್ಯವಿಲ್ಲದಿದ್ದ ಹಂತದಲ್ಲಷ್ಟೇ ನ್ಯಾಯಾಲಯ ಕಟ್ಟೆ ಏರಬೇಕು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಸಲಹೆ ನೀಡಿದರು.

ನ್ಯಾಯಾಂಗದ ಆದೇಶಗಳ ಬಗ್ಗೆ ಸಮಾಜದಲ್ಲಿ ಚರ್ಚೆಯಾಗುತ್ತಿದೆ. ಬೆಂಗಳೂರಿನಲ್ಲಿ ಪ್ಲೆಕ್ಸ್​ಗಳನ್ನೆಲ್ಲ ತೆರವುಗೊಳಿಸುವಂತೆ ಇತ್ತೀಚೆಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಆದೇಶಿಸಿದ್ದರಿಂದ ತಕ್ಷಣದಲ್ಲಿ ಅಧಿಕಾರಿಗಳು ಸ್ಪಂದಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೇರಿದಂತೆ ಎಲ್ಲ ನಗರಗಳಲ್ಲಿಯೂ ಇದು ಜಾರಿಯಾಗಬೇಕು ಎಂದು ಶೆಟ್ಟರ್ ಸಾಂರ್ದಭಿಕವಾಗಿ ಹೇಳಿದರು.

ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣಕ್ಕೆ ಭೂ ಸ್ವಾಧೀನ ವಿಷಯದಲ್ಲಿ ಕೆಲವು ತೊಡಕುಗಳು ಎದುರಾದಾಗ ಸ್ವತಃ ಮುತುವರ್ಜಿ ವಹಿಸಿ ಪರಿಹರಿಸಿಕೊಟ್ಟಿದ್ದನ್ನು ಅವರು ಸ್ಮರಿಸಿಕೊಂಡರು.

ಜಿಪುಣತನ ಮಾಡುವುದಿಲ್ಲ: ನ್ಯಾಯಾಂಗಕ್ಕೆ ಅಗತ್ಯ ಸೌಕರ್ಯ ಒದಗಿಸಿಕೊಡುವ ವಿಷಯದಲ್ಲಿ ಸರ್ಕಾರ ಜಿಪುಣತನ ತೋರಿಸುವುದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಕಾನೂನು ಸಚಿವನಾಗಿದ್ದನ್ನು ನೆನಪಿಸಿಕೊಂಡ ಅವರು, ಕಾನೂನು ಇಲಾಖೆಯಲ್ಲಿ ಕೆಲಸ ಮಾಡಲು ಹೆಚ್ಚು ಅವಕಾಶ ಇದೆ ಎಂದರು.

ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ನ್ಯಾಯಾಂಗ ಇಲಾಖೆಗೆ ಎಲ್ಲ ರೀತಿಯ ಬೆಂಬಲ ಇದೆ ಎಂದರು.

ನ್ಯಾ. ಶಾಂತನಗೌಡರ ಆನಂದಭಾಷ್ಪ: ನಾನು ಹುಬ್ಬಳ್ಳಿ ವಕೀಲರ ಸಂಘದ ಸದಸ್ಯನಾಗಿದ್ದೆ. ಇಲ್ಲಿಯ ನ್ಯಾಯಾಲಯದಲ್ಲಿ ಪ್ರಕರಣ ನಡೆಸಿದ್ದೇನೆ. ಕೋರ್ಟ್ ಸಂಕೀರ್ಣ ಉದ್ಘಾಟನೆಗೆ ಮುಖ್ಯ ನ್ಯಾಯಮೂರ್ತಿಯವರನ್ನು ಕರೆತರುವ ಮೂಲಕ ವಕೀಲರ ಸಂಘದ ಋಣ ತೀರಿಸಿದ್ದೇನೆ ಎಂದು ಹೇಳುತ್ತ ಸವೋಚ್ಚ ನ್ಯಾಯಾಲಯ ನ್ಯಾಯಮೂರ್ತಿ ಮೋಹನ ಶಾಂತನಗೌಡರ ಭಾವುಕರಾದರು.

ಹುಬ್ಬಳ್ಳಿ ಕೋರ್ಟ್ ವಿಶಿಷ್ಟವಾಗಿರಬೇಕು ಎಂಬ ಆಶಯವಿತ್ತು. ಅದಕ್ಕಾಗಿ ಸಂಕೀರ್ಣದ ವಿನ್ಯಾಸ ರಚನೆಯಲ್ಲೂ ಆಸ್ಥೆ ವಹಿಸಿದ್ದೆ ಎಂದು ಹೇಳಿದ ಅವರು, ಈ ನ್ಯಾಯಾಲಯವನ್ನು ಮೂಲ ಉದ್ದೇಶಕ್ಕೆ ಬಳಸಿಕೊಳ್ಳಿ. ಸ್ವಚ್ಛವಾಗಿ ಇಟ್ಟುಕೊಳ್ಳಿ. ನಮ್ಮ ಜನ ಕಂಡ ಕಂಡಲ್ಲಿ ಎಲೆ ಅಡಿಕೆ ಉಗುಳುವುದಿದೆ. ಹಾಗೆ ಉಗುಳಿದವರಿಗೆ 500 ರೂ. ದಂಡ ಹಾಕಿ. ಅದಕ್ಕಾಗಿ ಒಬ್ಬರಿಗೆ ಜವಾಬ್ದಾರಿ ನೀಡಿ ಎಂದು ವಕೀಲರ ಸಂಘಕ್ಕೆ ಸಲಹೆ ನೀಡಿದರು. ತಾವು ನೆಟ್ಟಿರುವ ಗಿಡವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದೂ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇದೆ. ಪ್ರಾಮಾಣಿಕತೆಯಿಂದ, ಮನಸ್ಸು ಕೊಟ್ಟು ಕೆಲಸ ಮಾಡಿದರೆ ಖಂಡಿತ ಮುಂದೆ ಬರುತ್ತೀರಿ. ಇದಕ್ಕೆ ನಾನೂ ಉದಾಹರಣೆ. ವೇದಿಕೆ ಮೇಲೆ ಇರುವ ಎಲ್ಲರೂ ಕಷ್ಟಪಟ್ಟು ಮುಂದೆ ಬಂದವರೇ. ಕಿರಿಯರು ಅವರನ್ನು ನೋಡಬೇಕು. ತಳ ಮಟ್ಟದಲ್ಲಿ ನೂಕುನುಗ್ಗಲು ಇರುತ್ತದೆ. ಮೇಲ್ಮಟ್ಟದಲ್ಲಿ ಪ್ರಮುಖ ಸ್ಥಾನಗಳು ಖಾಲಿ ಇವೆ ಎನ್ನುವುದನ್ನು ಮನಗಾಣುವಂತೆ ಯುವ ವಕೀಲರಿಗೆ ಅವರು ಕಿವಿಮಾತು ಹೇಳಿದರು.

ಹಳೆ ಕೋರ್ಟ್ ಕಟ್ಟಡವನ್ನು ನ್ಯಾಯಾಂಗ ಇಲಾಖೆ ವಶದಲ್ಲೇ ಇಟ್ಟುಕೊಳ್ಳಿ ಎಂದೂ ಅವರು ತಿಳಿಸಿದರು.

ಸುಪ್ರೀಂ ಕೋರ್ಟ್​ನ ಇನ್ನೋರ್ವ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಮಾತನಾಡಿ, ಕಕ್ಷಿದಾರರಿಗೆ ಕಡಿಮೆ ಖರ್ಚಿನಲ್ಲಿ ನ್ಯಾಯ ಸಿಗುವಂತೆ ವಕೀಲರು ನೋಡಿಕೊಳ್ಳಬೇಕು ಎಂದರು.

ಹುಬ್ಬಳ್ಳಿ ಕೋರ್ಟ್ ಸಂಕೀರ್ಣ ಉದ್ಘಾಟನೆಯೂ ಕೋರ್ಟ್ ಪ್ರಕರಣಗಳಂತೆ ಮುಂದಕ್ಕೆ ಹೋಗಿತ್ತು ಎಂದು ಹಾಸ್ಯ ಚಟಾಕಿ ಹಾರಿಸಿದ ಅವರು, ಆಗಿದ್ದೆಲ್ಲ ಒಳ್ಳೇದಕ್ಕೆ ಎನ್ನೋಣ. ಶಬರಿಯು ರಾಮನಿಗೆ ಕಾದ ಹಾಗೆ ಹುಬ್ಬಳ್ಳಿ ಕೋರ್ಟ್ ಸಹ ಉದ್ಘಾಟನೆಗಾಗಿ ಸವೋಚ್ಚ ನ್ಯಾಯಾಲಯ ನ್ಯಾಯಮೂರ್ತಿಗಾಗಿ ಕಾದಿತ್ತು ಎಂದು ಬಣ್ಣಿಸಿದರು.

ಕನ್ನಡ ಡಿಂಡಿಮ: ನ್ಯಾ. ಎಸ್. ಅಬ್ದುಲ್ ನಜೀರ್ ಅವರು ಕನ್ನಡದಲ್ಲೇ ಚುಟುಕಾದ ಭಾಷಣ ಮಾಡಿದರು. ನ್ಯಾ. ಮೋಹನ ಶಾಂತನಗೌಡರ್ ಇಂಗ್ಲಿಷ್​ನಲ್ಲಿ ಆರಂಭಿಸಿ ಕನ್ನಡದಲ್ಲಿ ಮುಂದುವರಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅಧಿಕಾರಿಗಳು ಇಂಗ್ಲಿಷ್​ನಲ್ಲಿ ಭಾಷಣ ಸಿದ್ಧಪಡಿಸಿಕೊಟ್ಟಿದ್ದಾರೆ, ಆದರೆ ಕನ್ನಡದಲ್ಲೇ ಮಾತನಾಡುತ್ತೇನೆ ಎಂದು ಹೇಳಿಕೊಂಡೇ ಭಾಷಣ ಶುರುಮಾಡಿದರು. ಉಳಿದ ಹೆಚ್ಚಿನ ಗಣ್ಯರೂ ಕನ್ನಡದಲ್ಲೇ ಮಾತನಾಡಿದರು.

ಕಾಂಗ್ರೆಸ್ ಅಂತರ?: ಕೋರ್ಟ್ ಸಂಕೀರ್ಣ ಉದ್ಘಾಟನಾ ಸಮಾರಂಭದಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿತೆ ಎಂಬ ಪ್ರಶ್ನೆ ಮೂಡಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಕಾನೂನು ಸಚಿವರು ಸೇರಿ ಪ್ರಮುಖರು ಸಮಾರಂಭಕ್ಕೆ ಆಗಮಿಸಿರಲಿಲ್ಲ. ಇದು ಮುಖ್ಯಮಂತ್ರಿಯವರಿಗೆ ಸ್ವಲ್ಪ ಮುಜುಗರ ತಂದಂತೆ ಕಂಡುಬಂತು. ಕಾಂಗ್ರೆಸ್ ಶಾಸಕರನ್ನು ಆಹ್ವಾನಿಸಿಲ್ಲ, ಹೀಗಾಗಿ ನೀವು ಬರದೇ ಇದ್ದರೆ ಸರಿ ಎಂಬರ್ಥದಲ್ಲಿ ಪಕ್ಷದ ಸ್ಥಳೀಯ ಕೆಲವರು ಸಚಿವರಿಗೆ ವಿನಂತಿ ಮಾಡಿಕೊಂಡಿದ್ದರು ಎಂಬ ಮಾತು ಕೇಳಿಬಂದಿದೆ.