ಪಡೀಲ್, ಕೂಳೂರಿನಲ್ಲಿ ಹೊಸ ಬಸ್ ನಿಲ್ದಾಣ

ಮಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ>
< ಪಡೀಲ್ ಜಿಲ್ಲಾಕೇಂದ್ರ ಸ್ಥಳವಾಗುವ ಹಿನ್ನೆಲೆ ನಿರ್ಧಾರ * ಸ್ಮಾರ್ಟ್ ಸಿಟಿ ಸಭೆಯಲ್ಲಿಯೂ ಚರ್ಚೆ>

– ಭರತ್ ಶೆಟ್ಟಿಗಾರ್ ಮಂಗಳೂರು
ನಗರದ ಸಂಚಾರ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತು ಹೊಸ ಜಿಲ್ಲಾಧಿಕಾರಿ ಕಚೇರಿಗೆ ಪೂರಕವಾಗುವಂತೆ ಪಡೀಲ್‌ನಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಹಾಗೂ ಇದಕ್ಕೆ ಪೂರಕವಾಗಿ ಕೂಳೂರಿನಲ್ಲಿ ಇನ್ನೊಂದು ಬಸ್ ನಿಲ್ದಾಣ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

ನಗರದಲ್ಲಿ ಸೂಕ್ತವಾದ ಖಾಸಗಿ ಸರ್ವೀಸ್-ಸಿಟಿ ಬಸ್ ನಿಲ್ದಾಣವಿಲ್ಲದೆ ದಶಕಗಳೇ ಕಳೆದಿವೆ. ನಿಲ್ದಾಣ ನಿರ್ಮಾಣಕ್ಕೆ ಪಾಲಿಕೆ ಹಲವು ಸ್ಥಳಗಳನ್ನು ಆಯ್ಕೆ ಮಾಡಿದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದಕ್ಕೊಂದು ಅಂತ್ಯ ಹಾಡಲು ಜಿಲ್ಲಾಡಳಿತ ಮುಂದಾಗಿದೆ.

ಸ್ಮಾರ್ಟ್ ಸಿಟಿ ಯೊಜನೆಯಲ್ಲಿ ನಿರ್ಮಾಣವಾಗಲಿದೆ ಎನ್ನಲಾಗಿರುವ ಪಂಪ್‌ವೆಲ್ ಬಸ್‌ನಿಲ್ದಾಣದ ಕುರಿತು ಇನ್ನೂ ಅಂತಿಮ ನಿರ್ಧಾರವಾಗದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಈ ಪ್ರಸ್ತಾವನೆ ಮುಂದಿಟ್ಟಿದ್ದು ಪ್ರಕ್ರಿಯೆ ಆರಂಭವಾಗಿದೆ. ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಕೇಂದ್ರ ಸ್ಥಳವಾಗಲಿದೆ. ಜತೆಗೆ ಸುಸಜ್ಜಿತ ಬಸ್ ನಿಲ್ದಾಣವೂ ಬಂದರೆ ಜನರಿಗೂ ಹೆಚ್ಚು ಅನುಕೂಲವಾಗಲಿದೆ ಎಂಬುದು ಜಿಲ್ಲಾಡಳಿತದ ಅಭಿಪ್ರಾಯ. ಇಲ್ಲಿ ಸಿಟಿ ಬಸ್, ಮೂಡುಬಿದಿರೆ- ಪುತ್ತೂರು, ಬೆಳ್ತಂಗಡಿಯಿಂದ ಬರುವ ಬಸ್‌ಗಳ ಜತೆಗೆ, ಕೆಎಸ್‌ಆರ್‌ಟಿಸಿ ಬಸ್‌ಗಳಿಗೂ ಅವಕಾಶ ನೀಡಲು ಉದ್ದೇಶಿಸಲಾಗಿದೆ.

ಕೂಳೂರಿನಲ್ಲಿ ರಾ.ಹೆ.66ರ ಬದಿಯಲ್ಲಿ ಗೋಲ್ಡ್‌ಫಿಂಚ್ ಸಿಟಿ ಮುಂಭಾಗದಲ್ಲಿ ಸರ್ಕಾರಿ ಖಾಲಿ ಜಾಗವಿದ್ದು, ಅಲ್ಲಿ ಉಡುಪಿ ಕಡೆಗೆ ಹೋಗುವ ಬರುವ ಎಕ್ಸ್‌ಪ್ರೆಸ್-ಸರ್ವೀಸ್ ಬಸ್‌ಗಳಿಗಾಗಿ ಸಣ್ಣ ಮಟ್ಟದ ಬಸ್ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಬಸ್‌ಗಳು ನಗರಕ್ಕೆ ಬರುವುದನ್ನು ತಡೆದು, ಸಿಟಿ ಬಸ್ ಮೂಲಕ ನಗರದ ಇತರೆಡೆಗೆ ಸಂಪರ್ಕ ಕಲ್ಪಿಸಲು ಚಿಂತನೆ ನಡೆದಿದೆ.

ಸ್ಮಾರ್ಟ್ ಸಿಟಿ ಸಭೆಯಲ್ಲಿ ಚರ್ಚೆ: ನಗರದ ಖಾಸಗಿ ಬಸ್ ನಿಲ್ದಾಣವನ್ನು ಹೊರವಲಯದ ಪಡೀಲ್‌ನಲ್ಲಿ ನಿರ್ಮಿಸುವ ಕುರಿತು ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸಭೆಯಲ್ಲಿಯೂ ಒಲವು ವ್ಯಕ್ತವಾಗಿತ್ತು. ಪಂಪ್‌ವೆಲ್ ಪರಿಸರದ ಬದಲು ಪಡೀಲ್‌ನಲ್ಲಿ ಸರ್ವೀಸ್ ಬಸ್ ನಿಲ್ದಾಣ ನಿರ್ಮಿಸುವುದು ಸೂಕ್ತ. ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣ, ಭವಿಷ್ಯದ ಜಿಲ್ಲಾಧಿಕಾರಿ ಕಚೇರಿ ಇರುವ ಕಾರಣ ಹಾಗೂ ನಗರ ವಿಸ್ತರಣೆ ಉದ್ದೇಶದಿಂದ ಪಡೀಲ್ ಹೊಸ ಬಸ್ ನಿಲ್ದಾಣಕ್ಕೆ ಸೂಕ್ತ ಪ್ರದೇಶ ಎಂಬ ಅಭಿಪ್ರಾಯ ಬಂದಿತ್ತು.

ಪಂಪ್‌ವೆಲ್ ಬಸ್ ನಿಲ್ದಾಣವನ್ನೂ ಕೈಬಿಟ್ಟಿಲ್ಲ: ಸ್ಟೇಟ್ ಬ್ಯಾಂಕ್ ಬಳಿಯ ಸಿಟಿ ಮತ್ತು ಖಾಸಗಿ ಬಸ್ ನಿಲ್ದಾಣವನ್ನು ಪಂಪ್‌ವೆಲ್‌ಗೆ ಸ್ಥಳಾಂತರಿಸುವ ಕುರಿತು ಕಳೆದ 10 ವರ್ಷಗಳಿಂದ ಚರ್ಚೆಯಾಗುತ್ತಿದೆ. ಬಸ್ ನಿಲ್ದಾಣಕ್ಕೆ ಸಂಬಂಧಿಸಿ ಸುಮಾರು 7.5 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ನಾಲ್ಕು ಅಂತಸ್ತಿನ ಬಸ್ ನಿಲ್ದಾಣ ನಿರ್ಮಾಣ ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ ಕಾಮಗಾರಿಗೆ ಮಾತ್ರ ಚಾಲನೆ ಸಿಕ್ಕಿಲ್ಲ. ಪಂಪ್‌ವೆಲ್ ಫ್ಲೈಓವರ್‌ನ ಒಂದು ಭಾಗದ ಆರಂಭ ಪ್ರಸ್ತಾವಿತ ಬಸ್‌ನಿಲ್ದಾಣಕ್ಕೆ ಮೀಸಲಿಡಲಾದ ಜಾಗದ ಪಕ್ಕದಲ್ಲಿಯೇ ಆರಂಭವಾಗುವುದರಿಂದ, ಬಸ್ ನಿಲ್ದಾಣದ ಕಾಮಗಾರಿಗೆ ಸಮಸ್ಯೆಯಾಗಿದೆ. ಆದರೆ ಪ್ರಸ್ತಾವನೆಯನ್ನೂ ಕೈಬಿಟ್ಟಿಲ್ಲ ಎನ್ನುತ್ತಾರೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್.

ಕೂಳೂರಿನಲ್ಲಿ ಸರ್ಕಾರಿ ಜಾಗ ಲಭ್ಯವಿದೆ, ಪಡೀಲ್‌ನಲ್ಲಿ ಖಾಸಗಿ ಜಾಗದ ಮಾಲೀಕರೊಬ್ಬರ ಮಾತುಕತೆ ನಡೆಯುತ್ತಿದೆ. ಪಡೀಲ್‌ನಲ್ಲಿ ಬಸ್ ನಿಲ್ದಾಣ ನಿರ್ಮಾಣ ಪ್ರಕ್ರಿಯೆ ಯಾವ ರೀತಿ ಆಗುತ್ತದೆ ಎಂದು ನೋಡಿ ಬಳಿಕ ಪಂಪ್‌ವೆಲ್ ಬಸ್ ನಿಲ್ದಾಣ ಕುರಿತು ನಿರ್ಣಯ ಕೈಗೊಳ್ಳಲಾಗುತ್ತದೆ.
| ಶಶಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ