ಸಾಲಿಗ್ರಾಮ: ತಾಯಿಯ ಮಡಿಲಲ್ಲಿ ಕಲಿತ ವಿದ್ಯೆಯನ್ನು ಮಕ್ಕಳು ಯಾವತ್ತೂ ಮರೆಯುವುದಿಲ್ಲ. ಅದರಂತೆ ಶಾಲೆಯಲ್ಲಿ ಶಿಕ್ಷಕರು ಕಲಿಸಿದ ವಿದ್ಯೆಯನ್ನು ಜೀವನದಲ್ಲಿ ಮರೆಯುವುದಿಲ್ಲ ಎಂದು ಶಿಕ್ಷಣ ಇಲಾಖೆಯ ಸಿಆರ್‌ಪಿ ವಸಂತ್‌ಕುಮಾರ್ ತಿಳಿಸಿದರು.
ತಾಲೂಕಿನ ಕುಪ್ಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಅಕ್ಷರ ಅಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳ ಕಲಿಕೆಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಎಲ್ಲ ಯೋಜನೆಗಳು ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಗಲಿದೆ. ಇಂತಹ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಶಿಕ್ಷಣದಿಂದ ಯಾವ ಮಗುವೂ ವಂಚಿತರಾಗಬಾರದು. ಆ ನಿಟ್ಟಿನಲ್ಲಿ ಪಾಲಕರು ನಮ್ಮೊಂದಿಗೆ ಸಹಕರಿಸಿ ಎಂದರು.
ಶಾಲೆಯಲ್ಲಿ ಪಾಲಕರೊಂದಿಗೆ ಮಕ್ಕಳು ಮಡಿಲಲ್ಲಿ ಕುಳಿತು ಅಕ್ಕಿಯ ಮೇಲೆ ಅಕ್ಷರ ಬರೆಯಲು ಮಕ್ಕಳ ಕೈಹಿಡಿದು ಪ್ರತಿ ತಾಯಂದಿರು ಮತ್ತು ಶಿಕ್ಷಕರು ಮಕ್ಕಳಿಗೆ ನೆರವಾದರು. ನಂತರ ದಾಖಲಾತಿ ಆಂದೋಲನ ಮಾಡಲಾಗುತ್ತಿದ್ದು, ಪಾಲಕರು ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಪಾಲಕರಲ್ಲಿ ಅರಿವು ಮೂಡಿಸಿದರು. ನಂತರ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಯಲ್ಲಿ ಎಲ್ಲ ರೀತಿಯ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು ಇದನ್ನ ಪಾಲಕರು ಬಳಸಿಕೊಳ್ಳಬೇಕು. ನಿಮ್ಮೂರಿನ ಸರ್ಕಾರಿ ಶಾಲೆ ಉಳಿಸಿಕೊಳ್ಳಲು ಗ್ರಾಮದ ಸಾರ್ವಜನಿಕರ ಜವಾಬ್ದಾರಿಯು ಹೆಚ್ಚಾಗಿರುತ್ತದೆ. ನಿಮ್ಮೊಂದಿಗೆ ಶಿಕ್ಷಕರು ಸದಾ ಕೆಲಸ ಮಾಡುತ್ತೇವೆ. ಹಾಗಾಗಿ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ ಸರ್ಕಾರಿ ಶಾಲೆಯನ್ನ ಉಳಿಸಿ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಮುಖ್ಯಶಿಕ್ಷಕ ಹೇಮಂತ್‌ಕುಮಾರ್, ಶಿಕ್ಷಕರಾದ ವಿ.ಎಸ್.ಪಲ್ಲವಿ, ನಂದಿನಿ ಪ್ರದೀಪ್, ಪಾಲಕರಾದ ಪುಟ್ಟಗೌರಿ, ಅಶ್ವಿನಿ, ವೀಣಾ, ಸುಮಿತಾ, ಪಲ್ಲವಿ, ಸುನೀತಾ, ಶೋಭಾ, ಅಶ್ವಿನಿ, ಕಾವ್ಯಾ ಸೇರಿದಂತೆ ಇನ್ನಿತರರು ಇದ್ದರು.