ನವದೆಹಲಿ: ವಿಶ್ವದ ಶ್ರೇಷ್ಠ ಬೌಲರ್‌ಗಳಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸಿಂ ಅಕ್ರಂ ಕೂಡ ಒಬ್ಬರು. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಸ್ಟಾರ್ ಬ್ಯಾಟ್ಸ್ಮನ್ಗಳನ್ನೇ ತಮ್ಮ ಬೌಲಿಂಗ್ ಕೈಚಳಕದಿಂದ ಅಕ್ರಂ ಕಾಡಿದ್ದಾರೆ. ಪಾಕ್ ತಂಡದ ಮಾಜಿ ನಾಯಕರಾಗಿದ್ದ ಅಕ್ರಂ, ಅನೇಕ ಪಂದ್ಯಗಳಲ್ಲಿ ಪಾಕ್ಗೆ ಗೆಲುವು ತಂದುಕೊಟ್ಟಿದ್ದಾರೆ. ಈಗಲೂ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ಅಕ್ರಂ, ಪಾಕಿಸ್ತಾನಿ ಕ್ರಿಕೆಟ್ ವಿಮರ್ಶಕ ಮತ್ತು ಪ್ರಸೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ಸ್ಪೋರ್ಟ್ಸ್ ಚಾನಲ್ ಒಂದರಲ್ಲಿ ನಡೆದ ಸಂದರ್ಶನದಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಸಮಯದಲ್ಲಿ ಭಾರತದಲ್ಲಿ ನಡೆದಂತಹ ಘಟನೆಯೊಂದನ್ನು ಮೆಲಕು ಹಾಕಿದ್ದಾರೆ. ಒಮ್ಮೆ ಸಿಂಗಾಪುರಕ್ಕೆ ಹೋಗುವಾಗ ನಿಗದಿತ ಇಂಧನ ತುಂಬಲು ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ನಿಲ್ಲಿಸಲಾಯಿತು. ಈ ವೇಳೆ ನನ್ನ ಪತ್ನಿ ಪ್ರಜ್ಞಾಹೀನರಾಗಿದ್ದರು. ಈ ಸಮಯದಲ್ಲಿ ನಮ್ಮ ಬಳಿ ಭಾರತೀಯ ವೀಸಾ ಇಲ್ಲದಿದ್ದರೂ ನನ್ನ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಚೆನ್ನೈನಲ್ಲಿರುವ ಅಧಿಕಾರಿಗಳು ಸಹಾಯ ಮಾಡಿದರು ಎಂಬುದನ್ನು ಅಕ್ರಂ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಕಸ್ಟಮರ್ ಅಲ್ಲ ನಷ್ಟಮರ್ ಕೇರ್: ಗೂಗಲ್ ಸರ್ಚ್ನಲ್ಲಿನ ನಂಬರ್ ನಂಬದಿರಿ
ನಾನು ನನ್ನ ದಿವಂಗತ ಪತ್ನಿ ಜೊತೆ ಒಮ್ಮೆ ಸಿಂಗಾಪುರಕ್ಕೆ ವಿಮಾನದಲ್ಲಿ ತೆರಳುತ್ತಿದ್ದೆ. ಈ ವೇಳೆ ಇಂಧನ ತುಂಬಲು ಚೆನ್ನೈನಲ್ಲಿ ಸ್ಟಾಪ್ ಇತ್ತು. ವಿಮಾನ ಲ್ಯಾಂಡ್ ಆದ ಸಮಯದಲ್ಲಿ ನನ್ನ ಪತ್ನಿ ಪ್ರಜ್ಞಾಹೀನಳಾಗಿದ್ದಳು. ಪತ್ನಿಯ ಸ್ಥಿತಿಯನ್ನು ನೋಡಿ ನಾನು ಅಳುತ್ತಿದ್ದೆ. ಜನರು ನನ್ನನ್ನು ವಿಮಾನ ನಿಲ್ದಾಣದಲ್ಲಿ ಗುರುತಿಸಿದರು. ನಮ್ಮ ಬಳಿ ಭಾರತೀಯ ವೀಸಾ ಇರಲಿಲ್ಲ. ನಾವಿಬ್ಬರೂ ಕೇವಲ ಪಾಕಿಸ್ತಾನಿ ಪಾಸ್ಪೋರ್ಟ್ಗಳನ್ನು ಮಾತ್ರ ಹೊಂದಿದ್ದೆವು ಎಂದು ಅಕ್ರಂ ಹೇಳಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದ ಜನರು, ಅಲ್ಲಿನ ಭದ್ರತಾ ಪಡೆಗಳು ಮತ್ತು ಕಸ್ಟಮ್ಸ್ ಹಾಗೂ ಇಮಿಗ್ರೇಷನ್ ಅಧಿಕಾರಿಗಳು ವೀಸಾದ ಬಗ್ಗೆ ಚಿಂತಿಸಬೇಡಿ ಎಂದು ಧೈರ್ಯ ತುಂಬಿದರು. ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಹೇಳಿದರು. ಓರ್ವ ಕ್ರಿಕೆಟರ್ ಮತ್ತು ಮಾನವನಾಗಿ ಈ ಘಟನೆಯನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಅಕ್ರಂ ಭಾವುಕಾರದರು.
ಅಂದಹಾಗೆ ಅಕ್ರಂ ಅವರನ್ನು ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಹಲವಾರು ವಿಮರ್ಶಕರು ಅವರನ್ನು ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಎಡಗೈ ವೇಗದ ಬೌಲರ್ ಎಂದು ಪರಿಗಣಿಸುತ್ತಾರೆ. ಅವರನ್ನು ದಿ ಸುಲ್ತಾನ್ ಆಫ್ ಸ್ವಿಂಗ್ ಎಂದು ಗೌರವಿಸಲಾಗುತ್ತದೆ. ಗಮನಾರ್ಹ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಎಡಗೈ ವೇಗದ ಬೌಲರ್ ಅಕ್ರಂ ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 881 ವಿಕೆಟ್‌ಗಳೊಂದಿಗೆ ವಿಶ್ವದಾಖಲೆಯನ್ನು ಹೊಂದಿದ್ದಾರೆ ಮತ್ತು ಏಕದಿನ ವಿಕೆಟ್‌ಗಳ ವಿಷಯದಲ್ಲಿ 502 ವಿಕೆಟ್‌ಗಳೊಂದಿಗೆ ಶ್ರೀಲಂಕಾದ ಆಫ್‌ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಗಡಿಯನ್ನು ತಲುಪಿದ ಮೊದಲ ಬೌಲರ್ ಆಗಿದ್ದಾರೆ.
ಇದನ್ನೂ ಓದಿ: ಹೈರಾಣಾಗಿಸುವ ನೆಗೆಟಿವ್ ಬಾಡಿ ಇಮೇಜ್: ಆಕಾರ-ವಿಕಾರಗಳಿಗೆ ಅಂಟಿಕೊಳ್ಳದೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳೋಣ
ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ಐದು ಹೊಸ ಸದಸ್ಯರಲ್ಲಿ ಅಕ್ರಂ ಒಬ್ಬರಾಗಿದ್ದರು. ಐಪಿಎಲ್ನಲ್ಲೂ ತಮ್ಮ ಹೆಗ್ಗುರತನ್ನು ಅಕ್ರಂ ಮೂಡಿಸಿದ್ದಾರೆ. ಅವರು ಕೊಲ್ಕತ್ತ ನೈಟ್ ರೈಡರ್ಸ್‌ನ ಬೌಲಿಂಗ್ ಕೋಚ್ ಆಗಿದ್ದರು. (ಏಜೆನ್ಸೀಸ್)
ತನ್ನ ಮದ್ವೆಯಲ್ಲಿ ಭಾರತೀಯ ಉಡುಗೆ ತೊಟ್ಟ ಪಾಕ್ ನಟಿ ವಿರುದ್ಧ ಕಿಡಿ: ನೆಟ್ಟಿಗರ ವಾದ ಹೀಗಿದೆ….
ಹೆತ್ತ ತಾಯಿಯಂತೆ ಎದೆ ಹಾಲುಣಿಸಿ ಮಗು ಆರೈಕೆ: ಬಾಣಂತಿಗೆ ಪರೀಕ್ಷೆ ಬರೆಯಲು ನೆರವಾದ ಲೇಡಿ ಕಾನ್ಸ್ಟೇಬಲ್
ಬೇಸಿಗೆಗೆ ಬೆಸ್ಟ್ ಫೇಸ್ ಮಿಸ್ಟ್: ತ್ವಚೆಗೆ ಏನೆಲ್ಲ ಲಾಭಗಳಿವೆ? ಯಾವ ಸಮಯದಲ್ಲಿ ಬಳಸಬೇಕು?