ಪ್ರಗತಿ ಕಾಣದ ಕೈಗಾರಿಕೆ ಯೋಜನೆ

ಪಿ.ಬಿ.ಹರೀಶ್ ರೈ ಮಂಗಳೂರು

25 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ, 7 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿ .
– ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಂಬಂಧಿಸಿ ರಾಜ್ಯ ಸರ್ಕಾರದ ನಿರೀಕ್ಷೆ. ಆದರೆ ಸರ್ಕಾರ ಅನುಮೋದನೆ ನೀಡಿದರೂ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಬಂಡವಾಳ ಹೂಡಲು ಹಿಂಜರಿಕೆ ಸಹಿತ ಹಲವು ಕಾರಣಗಳಿಂದ ಜಿಲ್ಲೆಯಲ್ಲಿ ಸ್ಥಾಪನೆಯಾಗಬೇಕಿದ್ದ 10ಕ್ಕೂ ಅಧಿಕ ಕೈಗಾರಿಕೆಗಳ ಯೋಜನೆ ರದ್ದುಗೊಂಡಿವೆ. ಕೆಲ ಯೋಜನೆಗಳು ಅರ್ಧಕ್ಕೆ ನಿಂತಿವೆ.

ಹಿಂದಿನ ಸರ್ಕಾರ ಇನ್ವೆಸ್ಟ್ ಕರ್ನಾಟಕ ಹೆಸರಿನಲ್ಲಿ ದೇಶ, ವಿದೇಶದ ಉದ್ಯಮಿಗಳನ್ನು ಸೆಳೆಯಲು ಆಯೋಜಿಸಿದ್ದ ಸಮಾವೇಶದಲ್ಲಿ ಅನುಮೋದನೆ ಪಡೆದ ದ.ಕ.ಜಿಲ್ಲೆಯ ಎರಡು ಯೋಜನೆಗಳನ್ನು ಈಗ ಕೈ ಬಿಡಲಾಗಿದೆ. ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ 4 ಬೃಹತ್ ಮತ್ತು 7 ಮಧ್ಯಮ ಕೈಗಾರಿಕೆ ಸ್ಥಾಪನೆಗೆ ಅನುಮೋದನೆ ನೀಡಲಾಗಿತ್ತು.

ಉನ್ನತ ಮಟ್ಟದ ಸಮಿತಿ: ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿ ಅನುಮೋದನೆ ನೀಡಬೇಕು. 2013ರಿಂದ 2018ರವರೆಗೆ ಉನ್ನತ ಮಟ್ಟದ ಒಪ್ಪಿಗೆ ಸಮಿತಿ ಸಭೆಯಲ್ಲಿ ದ.ಕ.ಜಿಲ್ಲೆಗೆ 6 ಪ್ರಸ್ತಾವನೆ ಅನುಮೋದನೆಗೊಂಡಿದೆ. ಇದರಿಂದ 23,687.53 ಕೋಟಿ ರೂ.ಬಂಡವಾಳ ಹೂಡಿಕೆ ಹಾಗೂ 2,034 ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿತ್ತು. ಈ ಪೈಕಿ ಎರಡು ಪ್ರಸ್ತಾವನೆ ಈಗ ಕೈ ಬಿಡಲಾಗಿದೆ. ಮಂಗಳೂರು ನಗರದಲ್ಲಿ ನಿರ್ಮಾಣವಾಗಬೇಕಿದ್ದ ಪಂಚತಾರಾ ಹೋಟೆಲ್‌ನ ಕಾಮಗಾರಿಯೂ ನಿರೀಕ್ಷಿತ ವೇಗದಲ್ಲಿ ನಡೆದಿಲ್ಲ. ಎಂಆರ್‌ಪಿಎಲ್‌ನ ವಿಸ್ತರಣೆ ಸಹಿತ ಇತರ ಮೂರು ಯೋಜನೆಗಳು ಅನುಷ್ಠಾನ ಹಂತದಲ್ಲಿವೆ.

ಏಕಗವಾಕ್ಷಿ ಒಪ್ಪಿಗೆ ನೀಡಿಕೆ: ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಮಟ್ಟದ ಏಕಗವಾಕ್ಷಿ ಒಪ್ಪಿಗೆ ನೀಡಿಕೆ ಸಮಿತಿಯಿಂದ ಅನುಮೋದನೆ ಪಡೆಯಬೇಕು. ಐದು ವರ್ಷದಲ್ಲಿ ಈ ಸಮಿತಿ ದ.ಕ.ಜಿಲ್ಲೆಯ 27 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಇವುಗಳಿಂದ 1978.63 ಕೋಟಿ ರೂ.ಬಂಡವಾಳ ಹೂಡಿಕೆ ಹಾಗೂ ಸುಮಾರು 5250 ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿತ್ತು. ಅನುಮೋದನೆ ಪಡೆದ 8 ಕಂಪನಿಗಳು ಈಗ ಯೋಜನೆಯನ್ನು ಕೈಬಿಟ್ಟಿವೆ. 15 ಯೋಜನೆ ಅನುಷ್ಠಾನದ ಹಂತದಲ್ಲಿದೆ. 4 ಯೋಜನೆಗಳು ಮಾತ್ರ ಪೂರ್ಣಗೊಂಡಿದೆ.

4 ಯೋಜನೆ ಅನುಷ್ಠಾನ: ಕುಕ್ಕೆ ಸುಬ್ರಹ್ಮಣ್ಯದಲ್ಲಿ 10 ಕೋಟಿ ರೂ.ವೆಚ್ಚದ ಹೋಟೆಲ್ ಉದ್ಯಮ, ಮೂಡುಶೆಡ್ಡೆಯಲ್ಲಿ 3 ಕೋಟಿ ರೂ.ವೆಚ್ಚದ ರೆಸಾರ್ಟ್, ಬೈಕಂಪಾಡಿಯಲ್ಲಿ 4.5 ಕೋಟಿ ರೂ.ವೆಚ್ಚದ ಕೋಲ್ಡ್ ಸ್ಟೋರೇಜ್, ಪಣಂಬೂರು ಬಳಿ 48 ಕೋಟಿ ರೂ. ವೆಚ್ಚದಲ್ಲಿ ಪೆಟ್ರೋ ಕೆಮಿಕಲ್ಸ್ ಉತ್ಪನ್ನ ಘಟಕ ಸ್ಥಾಪನೆಯಾಗಿದೆ. ಇ-ತ್ಯಾಜ್ಯ ಸಂಸ್ಕರಣಾ ಘಟಕ, ಪ್ರೆಶರ್ ವೆಸೆಲ್ಸ್ ಘಟಕ, ಪ್ಲಾಸ್ಟಿಕ್ ಫರ್ನಿಚರ್ ಘಟಕ , ಕಾಫಿ ಸಂಸ್ಕರಣಾ ಘಟಕ ಸಹಿತ ಕೆಲವು ಕೈಗಾರಿಕೆ ಸ್ಥಾಪಿಸಲು ಉದ್ದೇಶಿಸಿದ್ದ ಕಂಪನಿಗಳು ಈಗ ಹಿಂದೆ ಸರಿದಿವೆ. ಇದರಿಂದ ಸುಮಾರು 2,800 ಕೋಟಿ ರೂ. ಹೂಡಿಕೆಗೆ ಹಿನ್ನಡೆಯಾಗಿದೆ.

2016ರ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ದ.ಕ.ಜಿಲ್ಲೆ-2, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಂದು ಬೃಹತ್ ಕೈಗಾರಿಕೆಗೆ ಅನುಮೋದನೆ ನೀಡಲಾಗಿತ್ತು. ಇದರಿಂದ 35 ಸಾವಿರ ಕೋಟಿ ರೂ. ಹೂಡಿಕೆ ನಿರೀಕ್ಷಿಸಲಾಗಿದೆ. ಅನುಮೋದನೆ ಪಡೆದ 7 ಮಧ್ಯಮ ಕೈಗಾರಿಕೆಗಳ ಮೂಲಕ 369 ಕೋಟಿ ರೂ.ಆದಾಯ ನಿರೀಕ್ಷಿಸಲಾಗಿತ್ತು. ಈ ಪೈಕಿ ಎರಡು ಕಂಪನಿಗಳು ಈಗ ಯೋಜನೆ ಕೈಬಿಟ್ಟಿವೆ.
-ಕೆ.ಜೆ.ಜಾರ್ಜ್, ಸಚಿವರು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ

ದ.ಕ.ಜಿಲ್ಲೆಯಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಮೂಲಸೌಲಭ್ಯಗಳ ಕೊರತೆ ಇಲ್ಲ. ಕೈಗಾರಿಕೆ ಸ್ಥಾಪನೆಗೆ ಪೂರಕ ವಾತಾವರಣ ಇಲ್ಲಿದೆ. ಅನುಮೋದನೆ ಪಡೆದ ಕಂಪನಿಗಳು ಅದರದ್ದೇ ಆದ ಸಮಸ್ಯೆಗಳಿಂದ ಯೋಜನೆಗಳನ್ನು ರದ್ದು ಮಾಡಿರುವ ಸಾಧ್ಯತೆ ಹೆಚ್ಚಿದೆ.
– ಗೌರವ್ ಹೆಗ್ಡೆ, ಅಧ್ಯಕ್ಷರು, ಕೆನರಾ ಸಣ್ಣ ಕೈಗಾರಿಕೆಗಳ ಸಂಘ