ನಾಟ್​ರೀಚೇಬಲ್​ನಲ್ಲಿದೆ ಬಿಎಸ್​ಎನ್​ಎಲ್

ಚಿಕ್ಕಮಗಳೂರು: ಜಿಲ್ಲೆಯಲ್ಲಿ 4.20 ಲಕ್ಷ ಮೊಬೈಲ್ ಗ್ರಾಹಕರನ್ನು ಹೊಂದಿರುವ ಬಿಎಸ್​ಎನ್​ಎಲ್ ನೆಟ್ ವರ್ಕ್ ಸಮರ್ಥಗೊಳಿಸಲು ತಿಣುಕಾಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಗ್ರಾಹಕರು ಮುನಿಸಿಕೊಳ್ಳತೊಡಗಿದ್ದಾರೆ.

ದಿನಂಪ್ರತಿ ಸಾವಿರಾರು ಪ್ರವಾಸಿಗರು ಪ್ರವಾಸಿ ಕೇಂದ್ರಗಳಿಗೆ ಬರುತ್ತಿದ್ದು, ಬಿಎಸ್​ಎನ್​ಎಲ್ ಮೊಬೈಲ್ ನೆಟ್​ವರ್ಕ್ ಮಾತ್ರ ಹಲವು ಕಡೆ ನಾಟ್ ರೀಚಬಲ್ ಆಗಿರುತ್ತದೆ. ಪ್ರವಾಸಿಗರು, ಗ್ರಾಹಕರು ಬಿಎಸ್​ಎನ್​ಎಲ್​ಗೆ ಹಿಡಿ ಶಾಪ ಹಾಕಿ ಬೇರೆ ನೆಟ್​ವಕ್​ಗಳಿಗೆ ಫೋರ್ಟ್ ಆಗುತ್ತಿದ್ದಾರೆ. ಕೇಂದ್ರ ಸರ್ಕಾರ ಸ್ವಾಮ್ಯದ ಕಂಪನಿಯೊಂದು ಇಷ್ಟೊಂದು ಸಿಬ್ಬಂದಿ, ಸೌಕರ್ಯ ಹೊಂದಿಯೂ ಉತ್ತಮ ಸೇವೆ ನೀಡದಿರುವುದು ಗ್ರಾಹಕರ ದೌರ್ಭಾಗ್ಯ.

ಖಾಸಗಿ ಕಂಪನಿಗಳ ಜತೆ ಪೈಪೋಟಿ ಮಾಡುತ್ತಿರುವ ಬಿಎಸ್​ಎನ್​ಎಲ್ ಸಾಕಷ್ಟು ಮೂಲ ಸೌಲಭ್ಯವಿದ್ದರೂ ಗ್ರಾಹಕರಿಗೆ ಸರಿಯಾದ ಸೇವೆ ನೀಡುವಲ್ಲಿ ವಿಫಲವಾಗುತ್ತಿದೆ. ಹಲವು ಬಾರಿ ಗ್ರಾಮೀಣ ಭಾಗದ ಜನರು ಮನವಿ ಮಾಡಿದರೂ ನಿರೀಕ್ಷಿತ ಪ್ರಮಾಣ ಅಭಿವೃದ್ಧಿಯಾಗದೆ ಮೊಬೈಲ್​ನಲ್ಲಿ ಮಾತನಾಡುವಾಗಲೇ ಅರ್ಧಕ್ಕೆ ಕಟ್ ಆಗುವುದು, ನಾಟ್ ರೀಚಬಲ್ ಆಗುತ್ತಿರುವುದರಿಂದ ಗ್ರಾಹಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಖಾಸಗಿ ಕಂಪನಿಗಳು ಈಗಾಗಲೆ 4ಜಿ ಸೇವೆ ನೀಡುತ್ತಿದ್ದು, ಇದಕ್ಕೂ ಮೇಲ್ದರ್ಜೆಯ 5ಜಿ ಸೇವೆ ನೀಡುವ ಚಿಂತನೆ ನಡೆಸುತ್ತಿವೆ. ಆದರೆ, ಬಿಎಸ್​ಎನ್​ಎಲ್ ತನ್ನ ಗ್ರಾಹಕರಿಗೆ ಇನ್ನೂ 3ಜಿ ಸೇವೆಯನ್ನೇ ಜಿಲ್ಲೆಯ ಮೊಬೈಲ್ ಗ್ರಾಹಕರಿಗೆ ಒದಗಿಸಲು ಪರದಾಡುತ್ತಿದೆ.

ಯುಎಸ್​ಒ ಅನುದಾನದಡಿ 20 ದೂರವಾಣಿ ಕೇಂದ್ರದಲ್ಲಿ ವೈ-ಫೈ ಹಾಟ್ ಸ್ಪಾಟ್ ಹಾಕಲಾಗಿದ್ದು, ಇನ್ನು 40 ಕೇಂದ್ರಗಳಲ್ಲಿ ಅಳವಡಿಸುವ ಕಾರ್ಯಕ್ರಮ ಪ್ರಗತಿಯಲ್ಲಿದೆ. ವಿ. ಯರದಕೆರೆ, ಕೆಮ್ಮಣ್ಣುಗುಂಡಿ, ಕುನ್ನಹಳ್ಳಿ, ಬೆಟ್ಟಗೆರೆ, ಸೀತಾಳಯ್ಯನ ಬೆಟ್ಟದಲ್ಲಿ 3ಜಿ ಟವರ್ ಅಳವಡಿಸಲಾಗುತ್ತಿದ್ದು, ಇನ್ನೊಂದು ತಿಂಗಳಲ್ಲಿ ಗ್ರಾಹಕರಿಗೆ ಇವುಳ ಸೇವೆ ದೊರೆಯಲಿದೆ. ಇದಲ್ಲದೆ ಇನ್ನೂ 70 ಪ್ರದೇಶದಲ್ಲಿ ಬಿಎಸ್​ಎನ್​ಎಲ್ 3ಜಿ ಟವರ್ ಬೇಡಿಕೆ ಇದೆ.

ಬಿಎಸ್​ಎನ್​ಎಲ್ ಟವರ್ ಅನೇಕ ಕಡೆ ಇದ್ದರೂ ಕನಿಷ್ಠ 3ಜಿ ನೆಟ್​ವರ್ಕ್ ಸಿಗುವುದಿಲ್ಲ. ಇದನ್ನು ನಂಬಿ ಬಂದರೆ ದೇವರೇ ಕಾಪಾಡಬೇಕು. ಅಷ್ಟಾಗಿ ಟವರ್​ಗಳೇ ಕಾಣದ ಜಿಯೋ ಇತರೆ ಕಂಪನಿಗಳ ನೆಟ್​ವರ್ಕ್ ಹಲವು ಕಡೆ ದೊರೆತರೂ ಬಿಎಸ್​ಎನ್​ಎಲ್ ಮಾತ್ರ ಇನ್ನೂ ನಿದ್ದೆ ಮಾಡುತ್ತಿದೆ. ಕೇಂದ್ರ ಸರ್ಕಾರಿ ಒಡೆತನದ ಬಿಎಸ್​ಎನ್​ಎಲ್​ಗೆ ಸಾಕಷ್ಟು ಸೌಲಭ್ಯ ಸರ್ಕಾರದ ವತಿಯಿಂದ ನೀಡಲಾಗಿದ್ದು, ಸರಿಯಾದ ಸೇವೆ ನೀಡಲು ಮುಂದಾಗಬೇಕಿದೆ.

| ತಾರುಣ್ಯ, ಮುಳ್ಳಯ್ಯನಗಿರಿ ಪ್ರವಾಸಿಗರು