ಹರಿವು ನಿಲ್ಲಿಸಿದ ನೇತ್ರಾವತಿ

ಉಪ್ಪಿನಂಗಡಿ: ಈ ಬಾರಿ ಬಿಸಿಲ ಬೇಗೆಗೆ ಮಾರ್ಚ್ ಅಂತ್ಯಕ್ಕೆ ನೇತ್ರಾವತಿ ನದಿ ಉಪ್ಪಿನಂಗಡಿಯಲ್ಲಿ ಕುಮಾರಧಾರಾ ನದಿ ಸಂಗಮಿಸುವ ಸ್ಥಳಕ್ಕೆ 150 ಮೀಟರ್ ಅಂತರ ಇರುವಾಗಲೇ ಹರಿವು ನಿಲ್ಲಿಸಿದೆ. ಇದರಿಂದ ನದಿಯ ಇನ್ನೊಂದು ಪಾರ್ಶ್ವದ ಇಳಂತಿಲ ಗ್ರಾಮದ ಕುಡಿಯುವ ನೀರು ಸರಬರಾಜು ಘಟಕಕ್ಕೆ ನೀರಿನ ಕೊರತೆ ಎದುರಾಗಿದೆ.

ಕೆಲ ದಿನಗಳಿಂದ ಪರಿಸರದಲ್ಲಿ ಸಾಯಂಕಾಲದ ವೇಳೆ ಸುರಿಯುವ ಮಳೆ ಕುಡಿಯುವ ನೀರು ಒದಗಿಸಬಹುದು ಎಂಬ ಆಶಾವಾದ ಮೂಡಿದರೂ ನದಿಯನ್ನು ಕಂಡಾಗ ಮಾತ್ರ ಈ ಭಾವನೆ ಹುಸಿಯಾಗುತ್ತಿದೆ. ಮಳೆ ಸುರಿದಷ್ಟೇ ವೇಗದಲ್ಲಿ ಆವಿಯಾಗುತ್ತಿದೆಯೇನೋ ಎಂಬಂತಿದೆ ಪ್ರಸಕ್ತದ ಸ್ಥಿತಿ. ಮಳೆ ಸುರಿದ ಮರುದಿನದ ವಾತಾವರಣದಲ್ಲಿ ಕಂಡುಬರುವ ಉಷ್ಣಾಂಶ ಇದಕ್ಕೆ ಕಾರಣ. ಕಳೆದ ಬಾರಿಯಂತೆ, ಮೇ ಅಂತ್ಯದವರೆಗೆ ನೀರಿನ ಹರಿವು ಇಲ್ಲದಿದ್ದರೆ ಮಹಾಕಾಳಿ ಕಯದಿಂದಲೇ ನೀರನ್ನು ಎತ್ತಬೇಕಾದ ಅನಿವಾರ್ಯತೆ ಇದೆ ಎಂದು ಇಳಂತಿಲ ಗ್ರಾ.ಪಂ.ಆಡಳಿತ ತಿಳಿಸಿದೆ.

ಪ್ರಸಕ್ತ ಅಂತರ್ಜಲ ಬತ್ತಿ ಹೋಗಿ ಕುಡಿಯುವ ನೀರಿಗೆ ಸಮಸ್ಯೆ ಕಾಡುತ್ತಿರುವ ಇಂದಿನ ದಿನಗಳಲ್ಲಿ ಆಗೊಮ್ಮೆ ಈಗೊಮ್ಮೆ ಎಂಬಂತೆ ಸುರಿಯುವ ಮಳೆಯ ನೀರನ್ನು ತಡೆದು ನಿಲ್ಲಿಸುವ ಮೂಲಕ ಅಂತರ್ಜಲ ವೃದ್ಧಿಸಲು ಪ್ರಯತ್ನಿಸಬೇಕಾಗಿದೆ. ಪರಿಸರದ ಕಣಿ, ತೋಡುಗಳಲ್ಲಿ ಒಡ್ಡುಗಳನ್ನು ನಿರ್ಮಿಸಿ, ಹರಿಯುವ ನೀರನ್ನು ತಡೆದು ನಿಲ್ಲಿಸಬೇಕು.
|ಎಚ್.ಸುಬ್ರಹ್ಮಣ್ಯ ಶೆಣೈ, ಪರಿಸರ ಪ್ರೇಮಿ