ಬಂಟ್ವಾಳ: ಸ್ವಲ್ಪ ಒಣ ಭೂಮಿ, ಇನ್ನೂ ಸ್ವಲ್ಪ ಹುಲ್ಲುಗಾವಲು… ಆಟದ ಮೈದಾನದಂತೆ ಕಾಣುತ್ತಿರುವ ಈ ಸ್ಥಳ ಎಎಂಆರ್ ಡ್ಯಾಂ ಇರುವ ಸರಪಾಡಿ ಗ್ರಾಮದ ಪೆರ್ಲ ಬೀಯಪಾದೆ ಸಮೀಪ ಕಾಣುತ್ತಿರುವ ಜೀವನದಿ ನೇತ್ರಾವತಿಯ ಸನ್ನಿವೇಶ.
ಸಾಮಾನ್ಯವಾಗಿ ಡ್ಯಾಂ ಇರುವ ಪ್ರದೇಶ ನೀರಿನಿಂದ ಸಮೃದ್ಧವಾಗಿರುತ್ತದೆ. ಆದರೆ ಸರಪಾಡಿ ಭಾಗದಲ್ಲಿ ಒಳ ಹರಿವು ಇಲ್ಲದೆ ನದಿ ಬತ್ತಿ ಹೋಗಿದೆ. ಮಧ್ಯದಲ್ಲಿ ಓಯಸಿಸ್ನಂತೆ ನೀರು ಕಾಣಿಸಿಕೊಂಡರೆ ಸುತ್ತಮುತ್ತಲಲ್ಲಿ ಬಂಡೆ ಕಲ್ಲು ಹಾಗೂ ಒಣ ಭೂಮಿ ಮಾತ್ರ ಗೋಚರಿಸುತ್ತಿದೆ. ಈ ಬಾರಿಯ ಬಿಸಿಲಿನ ತಾಪ ನದಿಯನ್ನು ಬರಿದಾಗಿಸಿದೆ. ಜಿಲ್ಲೆಯ ಕೆಲವೆಡೆ ಅಪರೂಪಕ್ಕೊಮ್ಮೆ ಮಳೆ ಕಾಣಿಸಿಕೊಂಡರೂ ನದಿಗೆ ನೀರು ಹರಿದು ಬಂದಿಲ್ಲ.
ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಯಾದಾಗಲೂ ಶಂಭೂರು ಎಎಂಆರ್ ಡ್ಯಾಂನಲ್ಲಿ ನೀರಿದೆ ಎನ್ನುವ ಆಶಾಭಾವನೆಯಿತ್ತು. ಏಪ್ರಿಲ್ನಲ್ಲಿಯೇ ಎಎಂಆರ್ ಡ್ಯಾಂ ಬರಿದಾಗಿದ್ದು, ನದಿ ಸೊರಗಿದಂತೆ ಕಾಣುತ್ತಿದೆ. ನದಿ ನೀರನ್ನೇ ನಂಬಿರುವ ಈ ಭಾಗದ ರೈತರು ಕಂಗಲಾಗಿದ್ದಾರೆ.