ಬಿಸಿಲ ಝಳಕ್ಕೆ ನೇತ್ರಾವತಿ ಒಡಲು ಬರಿದು

ಸಂದೀಪ್ ಸಾಲ್ಯಾನ್ ಬಂಟ್ವಾಳ

ಬಿಸಿಲಿನ ತಾಪಕ್ಕೆ ನೇತ್ರಾವತಿ ನದಿ ಬರಿದಾಗಿದ್ದು ಬಂಟ್ವಾಳ ಪುರಸಭೆ ವ್ಯಾಪ್ತಿಯ ಜನರಿಗೂ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಎರಡು ವರ್ಷಗಳ ಹಿಂದಷ್ಟೇ ಅನುಷ್ಠಾನಗೊಂಡಿರುವ ಸಮಗ್ರ ಕುಡಿಯುವ ನೀರಿನ ಯೋಜನೆಯ ಜಕ್ರಿಬೆಟ್ಟು ಜಾಕ್‌ವೆಲ್‌ನಲ್ಲೂ ನೀರಿಲ್ಲದೆ ಪುರಸಭೆ ವ್ಯಾಪ್ತಿಯ ಜನರಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಯಾಗಿ ಮಂಗಳೂರು ನಗರಕ್ಕೆ ನೀರಿನ ಕೊರತೆ ಉಂಟಾದರೂ ಇದರ ಮೇಲ್ಭಾಗದಲ್ಲಿರುವ ಪುರಸಭೆ ಜಾಕ್‌ವೆಲ್‌ಗೆ ಇದುವರೆಗೆ ಸಮಸ್ಯೆ ಕಾಡಿರಲಿಲ್ಲ. ಈ ಬಾರಿ ಶಂಭೂರಿನ ಎಎಂಆರ್ ಡ್ಯಾಂನಲ್ಲೂ ನೀರು ಬರಿದಾಗಿದ್ದು, ಜಕ್ರಿಬೆಟ್ಟುವಿನಲ್ಲೂ ನೀರಿಲ್ಲದೆ ಸಮಗ್ರ ಕುಡಿಯುವ ನೀರಿನ ಜಾಕ್‌ವೆಲ್ ನಿರುಪಯುಕ್ತಗೊಂಡಿದೆ. ವರ್ಷಪೂರ್ತಿ ನೀರು ಒದಗಿಸುವ ಉದ್ದೇಶವಿಟ್ಟುಕೊಂಡು ನಿರ್ಮಾಣಗೊಂಡಿರುವ ಯೋಜನೆ ನದಿಯಲ್ಲಿ ನೀರಿನ ಅಭಾವದಿಂದ ಅಗತ್ಯ ಸಂದರ್ಭದಲ್ಲೇ ಕೈಕೊಟ್ಟಿದೆ.

ಜಕ್ರಿಬೆಟ್ಟು ಜಾಕ್‌ವೆಲ್‌ಗೆ ನೇತ್ರಾವತಿ ನದಿ ಮಧ್ಯದಲ್ಲಿರುವ ಎರಡು ಇಂಟರ್‌ವೆಲ್‌ಗಳಿಂದ ನೀರು ಪೂರೈಕೆಯಾಗುತ್ತದೆ. ನೇತ್ರಾವತಿ ನದಿಯಲ್ಲಿ ಸಂಗ್ರಹವಿರುವ ನೀರು ಸ್ಟೈನರ್ ಮೂಲಕ ಇಂಟರ್‌ವೆಲ್‌ಗೆ ಸರಬರಾಜಾಗುತ್ತದೆ. ಆದರೆ ಎರಡು ಇಂಟರ್‌ವೆಲ್‌ಗಳ ಪೈಕಿ ಒಂದು ಈಗಾಗಲೇ ನೀರಿಲ್ಲದೆ ಬರಿದಾಗಿದ್ದು ಇನ್ನೊಂದು ಇಂಟರ್‌ವೆಲ್‌ನ ಸ್ಟೈನರ್ ಅರ್ಧ ಮಾತ್ರ ಮುಳುಗಡೆಯಾಗುತ್ತಿದೆ. ಇದರಿಂದ ಸರಿಯಾಗಿ ಜಾಕ್‌ವೆಲ್‌ಗೆ ನೀರು ಸರಬರಾಜಾಗುತ್ತಿಲ್ಲ. ಸರಬರಾಜಾಗುತ್ತಿರುವ ನೀರು ಕೂಡ ಕೆಸರಿನಿಂದ ಕೂಡಿದೆ.

ಹೂಳು ತೆರವು: ನೀರಿರುವ ಭಾಗದ ಇಂಟರ್‌ವೆಲ್ ಸ್ಟೈನರ್‌ನ ಸುತ್ತಮುತ್ತ ಹೂಳು ಹಾಗೂ ಮರಳು ತೆಗೆಯುವ ಕಾರ್ಯ ಗುರುವಾರ ಬೆಳಗ್ಗೆಆರಂಭಗೊಂಡಿದೆ. ಹೂಳು ತೆಗೆಯುವುದರ ಜೊತೆಗೆ ಸ್ಟೈನರ್ ಇರುವ ಜಾಗ ಸ್ವಲ್ಪ ಆಳಗೊಳಿಸಿದ್ದಲ್ಲಿ ನೀರು ಲಭ್ಯವಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಈ ಕಾರ್ಯ ನಡೆಸಲಾಗುತ್ತಿದೆ. ಆರು ಮಂದಿ ಕಾರ್ಮಿಕರು ಮರಳು ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಪರ್ಯಾಯ ವ್ಯವಸ್ಥೆ: ಗುರುವಾರ ಬೆಳಗ್ಗೆ 7.30ರವರೆಗೆ ಪುರಸಭೆ ವ್ಯಾಪ್ತಿಯ ಮನೆಗಳಿಗೆ ನೀರು ಪೂರೈಕೆಯಾಗಿದೆ. ಆ ಬಳಿಕ ಇಂಟರ್‌ವೆಲ್ ಡ್ರೈ ಆಗಿ ನೀರು ಸರಬರಾಜು ಸ್ಥಗಿತಗೊಂಡಿದೆ. ಪ್ರಸಕ್ತ ಹಳೆಯ ಜಾಕ್‌ವೆಲ್ ಪಂಪ್ ಸರಿಪಡಿಸಿ, ಲೀಕೆಜ್ ದುರಸ್ತಿ ಮಾಡಿ ರೇಷನಿಂಗ್ ವ್ಯವಸ್ಥೆಯಡಿ ನೀರು ಪೂರೈಸಲು ಪುರಸಭೆ ನಿರ್ಧರಿಸಿದೆ. ಕೆಲವು ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವುದಾಗಿ ಪುರಸಭಾ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ತಿಳಿಸಿದ್ದಾರೆ.

ನೇತ್ರಾವತಿ ನದಿಯಲ್ಲಿ ನೀರಿನ ಅಭಾವದಿಂದ ಬಂಟ್ವಾಳ ಪುರಸಭೆಗೆ ನೀರು ಸರಬರಾಜು ಮಾಡುವ ಜಾಕ್‌ವೆಲ್ ಬರಿದಾಗಿ ಬೆಳಗ್ಗೆ 7.30ರ ಬಳಿಕ ನೀರು ಪೂರೈಕೆ ಸ್ಥಗಿತಗೊಂಡಿದೆ. ಹಳೆಯ ಜಾಕ್‌ವೆಲ್ಲನ್ನು ದುರಸ್ತಿಗೊಳಿಸಿ ರೇಷನಿಂಗ್ ಮೂಲಕ ನೀರು ಪೂರೈಕೆ ಮಾಡಲಾಗುವುದು. ಮಳೆ ಬಂದ ಬಳಿಕವಷ್ಟೇ ಸಮಗ್ರ ಕುಡಿಯುವ ನೀರಿನ ಯೋಜನೆಯ ನೀರು ಪೂರೈಕೆ ಆರಂಭಗೊಳ್ಳಲಿದೆ.
ಡೊಮಿನಿಕ್ ಡಿಮೆಲ್ಲೊ,
ಕಿರಿಯ ಇಂಜಿನಿಯರ್, ಬಂಟ್ವಾಳ ಪುರಸಭೆ