ನರ್ಮ್ ಬಸ್ ನಿಲ್ದಾಣ ಬಹುತೇಕ ಪೂರ್ಣ

ಅವಿನ್ ಶೆಟ್ಟಿ ಉಡುಪಿ

ಉಡುಪಿ ಸಿಟಿ ನರ್ಮ್ ಬಸ್ ತಂಗುದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ.

ಯೋಜನೆ ಪ್ರಕಾರ 2018ರಲ್ಲೇ ಬಸ್ ತಂಗುದಾಣದ ಕಾಮಗಾರಿ ಮುಗಿಯಬೇಕಿತ್ತು. ಸದ್ಯ ಶೇ.90ರಷ್ಟು ಕೆಲಸ ಪೂರ್ಣಗೊಂಡಿದೆ. ನಗರದ ಸಿಟಿ ಬಸ್ ನಿಲ್ದಾಣ ಪಕ್ಕದಲ್ಲಿದ್ದ ಖಾಲಿ ಜಾಗ 41 ಸೆಂಟ್ಸ್ ಜಾಗದಲ್ಲಿ ಮೂರು ಅಂತಸ್ತುಗಳನ್ನು ಒಳಗೊಂಡಿರುವ ವ್ಯವಸ್ಥಿತ ಬಸ್ ನಿಲ್ದಾಣ ಇದು. ಕೆಳ ಅಂತಸ್ತಿನಲ್ಲಿ 6,814 ಚದರಡಿ ವಿಸ್ತೀರ್ಣ, ಮೇಲಿನ ಅಂತಸ್ತು 5,807 ಚದರಡಿ ವಿಸ್ತೀರ್ಣ ಹೊಂದಿದೆ. ಮೊದಲ ಅಂತಸ್ತು 5,637 ಚದರಡಿ ವಿಸ್ತೀರ್ಣ ಹೊಂದಿದೆ. ಕಟ್ಟಡದ ಒಟ್ಟು ವಿಸ್ತೀರ್ಣವು 18,258 ಚದರಡಿ ಇದ್ದು, ಒಟ್ಟು ಬಸ್ಸು ನಿಲ್ದಾಣ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ.

ವಾಣಿಜ್ಯ ಸಂಕೀರ್ಣ
ಬಸ್ ತಂಗುದಾಣ ಮಾತ್ರವಲ್ಲದೆ ವಾಣಿಜ್ಯ ಬಳಕೆಗೆ ಉಪಯೋಗವಾಗುವಂತೆ ವಾಣಿಜ್ಯ ಸಂಕೀರ್ಣ ವ್ಯವಸ್ಥಿತವಾಗಿ ರೂಪಿಸುವ ಮೂಲಕ ಪರ‌್ಯಾಯ ಆದಾಯ ಪಡೆಯುವುದು ಆಶಯ. ಹೋಟೆಲ್, ಕ್ಯಾಂಟೀನ್, ವಿವಿಧ ವಸ್ತುಗಳ ಮಾರಾಟದ ಅಂಗಡಿಗಳು ಈ ಮಳಿಗೆಯಲ್ಲಿರಲಿವೆ. ವಾಣಿಜ್ಯ ವ್ಯವಹಾರಕ್ಕೆ ಕೆಳ ಅಂತಸ್ತಿನಲ್ಲಿ 3,889 ಚದರಡಿ ವಿಸ್ತೀರ್ಣ, ಮೇಲಂತಸ್ತಿನಲ್ಲಿ 3,049 ಚದರಡಿ ವಿಸ್ತೀರ್ಣ, ಮೊದಲ ಅಂತಸ್ತಿನಲ್ಲಿ 4,390 ಚದರಡಿ ಸಹಿತ ಒಟ್ಟು 11,328 ಚದರಡಿ ವಿಸ್ತೀರ್ಣ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆಂದು ಮೀಸಲಿರಿಸಲಾಗಿದೆ.

10 ಬಸ್‌ಗಳ ನಿಲುಗಡೆ
ನಿಲ್ದಾಣದಲ್ಲಿ ಏಕಕಾಲದಲ್ಲಿ 10 ಬಸ್‌ಗಳು ನಿಲ್ಲುವಷ್ಟು ಜಾಗವಿದೆ. ಪಾರ್ಕಿಂಗ್‌ಗೆ ವಿಶೇಷ ಆದ್ಯತೆ ನೀಡಿ 12 ಕಾರು ಹಾಗೂ 20 ದ್ವಿಚಕ್ರ ವಾಹನ ನಿಲ್ಲಿಸಲು ವ್ಯವಸ್ಥೆ ರೂಪಿಸಲಾಗಿದೆ. ಪ್ರಯಾಣಿಕರಿಗಾಗಿ ಇರುವ ತಂಗುದಾಣ ಸಹಿತ ಕಟ್ಟಡಕ್ಕೆ ಎಸಿ ಅಳವಡಿಸುವ ಚಿಂತನೆ ಇದೆ. ಮುಂಬರುವ ದಿನಗಳಲ್ಲಿ ಎಸಿ, ಟಿವಿ ಅಳವಡಿಸುವ ಮೂಲಕ ಬಸ್ ತಂಗುದಾಟಕ್ಕೆ ಹೈಟೆಕ್ ಸ್ಪರ್ಶ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ನಗರದಲ್ಲಿ ಪ್ರಸ್ತುತ 30 ನರ್ಮ್ ಬಸ್‌ಗಳಿದ್ದು, ಹೆಚ್ಚಿನ ಕಡೆಗಳಿಗೆ ಬಸ್ ಬೇಕೆಂಬ ಬೇಡಿಕೆ ಬರುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಪರಿಕಲ್ಪನೆಯಲ್ಲಿ ನಗರದ ನರ್ಮ್ ಬಸ್ ತಂಗುದಾಣ ನಿರ್ಮಿಸಲಾಗಿದ್ದು, ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಆಶಯವನ್ನು ಕೆಎಸ್‌ಆರ್‌ಟಿಸಿ ಹೊಂದಿದೆ. ಈಗಾಗಲೇ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರ ಜನರಿಗೆ ತೆರೆದುಕೊಳ್ಳಲಿದೆ.
ಅರುಣ್, ವಿಭಾಗೀಯ ನಿಯಂತ್ರಕರು, ಕೆಎಸ್‌ಆರ್‌ಟಿಸಿ ಉಡುಪಿ

Leave a Reply

Your email address will not be published. Required fields are marked *