ಬಮುಲ್ ನಡೆಗೆ ಉದ್ಯಮಿ ಭವಾನಿಶಂಕರ್ ಬೈರೇಗೌಡ ಬೇಸರ
ನಿರ್ಧಾರ ಬದಲಿಸಲು ಪಟ್ಟು
ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಮಳೆ ಅಭಾವ, ಬರಗಾಲದ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಹಾಲಿನ ದರ ಕಡಿತಗೊಳಿಸಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಉದ್ಯಮಿ ಭವಾನಿಶಂಕರ್ ಬೈರೇಗೌಡ ತಿಳಿಸಿದರು.
ನಗರದ ಕುಣಿಗಲ್ ವೃತ್ತದ ಭವಾನಿಶಂಕರ್ ಹೋಟೆಲ್ ಸಭಾಂಗಣದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಪದಾಧಿಕಾರಿ ಮಾತನಾಡಿದರು. ಪ್ರತಿ ಲೀಟರ್ ಹಾಲಿಗೆ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದ್ದರೂ ಏಕಪಕ್ಷೀಯವಾಗಿ ಬಮುಲ್ ಮತ್ತು ಕೆಎಂಎಫ್ ಪ್ರತಿ ಲೀಟರ್ ಹಾಲಿನ ಖರೀದಿಗೆ ನ.1ರಿಂದ 2 ರೂ. ದರ ಕಡಿತಕ್ಕೆ ಮುಂದಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಬಮುಲ್ ವ್ಯಾಪ್ತಿಯ 11 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಈ ಭಾಗದಲ್ಲಿ ಹಿಂಗಾರು, ಮುಂಗಾರು ಕೈಕೊಟ್ಟಿರುವ ಪರಿಣಾಮ ಮೇವಿನ ಕೊರತೆ ಎದುರಾಗಿದೆ. ಬಮುಲ್ ನೀಡುವ ಪಶು ಆಹಾರದ ಬೆಲೆಯೂ ಹೆಚ್ಚಳವಾಗಿದೆ. ದುಬಾರಿ ಬೆಲೆ ನೀಡಿ ಮೇವು ಖರೀದಿಸಿ ರಾಸುಗಳನ್ನು ಸಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಹಾಲಿನ ದರ ಹೆಚ್ಚಳ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ನಿವಾಸ ಬಳಿ ಪ್ರತಿಭಟನೆ: ಹಾಲಿಗೆ ಸರಿಯಾದ ದರ ನೀಡಬೇಕು. ಸರ್ಕಾರ ರೈತರಿಗೆ ಈಗಾಗಲೇ ಪ್ರತಿ ಲೀಟರ್‌ಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದ್ದು, ಎಲ್ಲರಿಗೂ ಗ್ಯಾರಂಟಿ ನೀಡುವಂತೆ ರೈತರಿಗೆ ಹೆಚ್ಚುವರಿಯಾಗಿ 5 ರೂ. ನೀಡಬೇಕು. ಇಲ್ಲವಾದರೆ ಮುಖ್ಯಮಂತ್ರಿ ನಿವಾಸದ ಬಳಿ ಹಾಲು ಸುರಿದು ಪ್ರತಿಭಟನೆ ಮಾಡುವುದಾಗಿ ಭವಾನಿಶಂಕರ್ ತಿಳಿಸಿದರು.