More

    ನೆಲಮಂಗಲಕ್ಕೆ ನಗರಸಭೆ ಭಾಗ್ಯ, ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದ ನಗರಾಭಿವೃದ್ಧಿ ಇಲಾಖೆ, ಶಾಸಕ ಶ್ರೀನಿವಾಸಮೂರ್ತಿ ಮಾಹಿತಿ

    ನೆಲಮಂಗಲ: ಪಟ್ಟಣದ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ್ದು ಶೀಘ್ರದಲ್ಲಿ ನೂತನ ನಗರಸಭೆ ಕಚೇರಿ ಆರಂಭಿಸಲಾಗುವುದು ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.

    ನಗರಾಭಿವೃದ್ಧಿ ಇಲಾಖೆ 2019ರ ಡಿ.26 ರಂದು ನೆಲಮಂಗಲ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ವಿವಿಧ ಹಂತದ ಜನಪ್ರತಿನಿಧಿಗಳೊಂದಿಗೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿಯಮಾನುಸಾರ ನಗರಸಭೆ ಕಾರ್ಯ ಆರಂಭವಾಗಲಿವೆ. ನಗರಸಭೆಗೆ ಒಟ್ಟು 33 ಕ್ಷೇತ್ರಗಳನ್ನು ವಿಂಗಡಣೆ ಮಾಡುವ ಸಾಧ್ಯತೆ ಇದೆ. ಶೀಘ್ರದಲ್ಲಿ ನಗರಸಭೆ ನಾಮಫಲಕ ಅಳವಡಿಸಿ ನೂತನ ನಗರಸಭಾ ಕಚೇರಿ ಆರಂಭಿಸುವುದಾಗಿ ತಿಳಿಸಿದರು.

    ಅಭಿವೃದ್ಧಿ ದೃಷ್ಟಿಯಿಂದ ನೆಲಮಂಗಲ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ 2016ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅನುಮೋದಿಸಿತ್ತು. ಅದಾದ ಬಳಿಕ ರಚನೆಯಾದ ಯಡಿಯೂರಪ್ಪ ನೇತೃತ್ವದ ಸರ್ಕಾರ ಅನುಮೋದನೆ ಜತೆಗೆ ನಗರಾಭಿವೃದ್ಧಿ ಸಚಿವಾಲಯದ ಅಧಿಸೂಚನೆ ಹೊರಡಿಸಿದ್ದು ಸಂತಸ ತಂದಿದೆ ಎಂದರು.
    ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾಸಂಪತ್, ತಾಲೂಕು ಪಂಚಾಯಿತಿ ಸದಸ್ಯರಾದ ಬೆಟ್ಟೆಗೌಡ, ಟಿ.ವೆಂಕಟೇಗೌಡ, ರುದ್ರೇಶ್, ಪುರಸಭೆ ಸದಸ್ಯರಾದ ಕೆ.ಎಂ.ಶಿವಕುಮಾರ್, ಆಂಜಿನಪ್ಪ, ನರಸಿಂಹಮೂರ್ತಿ, ಆಂಜಿನಮೂರ್ತಿ, ಆನಂದ್, ಪದ್ಮನಾಭ್, ಪುರಸಭೆ ಮಾಜಿ ಅಧ್ಯಕ್ಷ ಪಿಳ್ಳಪ್ಪ, ಎಂ.ನಾರಾಯಣ್, ಮುಖಂಡರಾದ ನಾರಾಯಣರಾವ್, ನರಸಿಂಹಮೂರ್ತಿ, ಉಮೇಶ್, ಮುನಿಯಪ್ಪ, ರಮೇಶ್, ಮಾರೇಗೌಡ, ಮಂಜುನಾಥ್, ಜಿ.ಎಚ್.ಗೌಡ ಇತರರಿದ್ದರು.

    ನಗರಸಭೆ ವ್ಯಾಪ್ತಿಗೊಳಪಡುವ ಗ್ರಾಮಗಳು: ನೆಲಮಂಗಲ ಪುರಸಭೆ ಮತ್ತು ಪುರಸಭೆಗೆ ಹೊಂದಿಕೊಂಡಂತೆ ಇರುವ ತಾಲೂಕಿನ ಅರಿಶಿನಕುಂಟೆ, ಬಸವನಹಳ್ಳಿ, ವಾಜರಹಳ್ಳಿ, ವಿಶ್ವೇಶ್ವರಪುರ, ಮಲ್ಲಾಪುರ, ಕೆಂಪಲಿಂಗನಹಳ್ಳಿ, ಬ್ಯಾಡರಹಳ್ಳಿ, ಕೂಲಿಪುರ ಗ್ರಾಮಗಳನ್ನು ಒಳಗೊಂಡಂತೆ ನೆಲಮಂಗಲ ನಗರಸಭೆ ಎಂದು ರಾಜ್ಯಪತ್ರದಲ್ಲಿ ಘೋಷಣೆ ಮಾಡಿದೆ.

    ಗೊಂದಲಕ್ಕೆಡೆಯಾದ ಸುದ್ದಿಗೋಷ್ಠಿ: 2019 ಏಪ್ರಿಲ್ ತಿಂಗಳಿನಲ್ಲಿ ಪುರಸಭೆಯ 23 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಕುರಿತ ಮೀಸಲಾತಿ ವಿಚಾರವಾಗಿ ಸರ್ಕಾರ ಈವರೆಗೂ ಅಧಿಸೂಚನೆ ಹೊರಡಿಸಿಲ್ಲ. ಇದರ ನಡುವೆಯೇ ನಗರಸಭೆಯಾಗಿ ಮೇಲ್ದರ್ಜೆಗೇರಿಸಿರುವ ಹಿನ್ನೆಲೆಯಲ್ಲಿ ಶಾಸಕರು ಆಯೋಜಿಸಿದ್ದ ಸುದ್ದಿಗೋಷ್ಠಿ ಗೊಂದಲಕ್ಕೆಡೆ ಮಾಡಿಕೊಟ್ಟಿತು. ಈಗಾಗಲೇ ಆಯ್ಕೆಯಾಗಿರುವ ಪುರಸಭೆ ಸದಸ್ಯರು ಅವಧಿ ಪೂರ್ಣಗೊಳಿಸುತ್ತಾರೆಯೇ?, ಮೇಲ್ದರ್ಜೆಗೇರಿರುವ ನಗರಸಭೆಗೆ ಮತ್ತೆ ಚುನಾವಣೆ ನಡೆಯಲಿದೆಯೇ?, ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಗ್ರಾಪಂ ಹಾಗೂ ಗ್ರಾಮಗಳಲ್ಲಿನ ಜನಪ್ರತಿನಿಧಿಗಳ ಅಧಿಕಾರಾವಧಿ 4 ತಿಂಗಳು ಪೂರ್ಣಗೊಂಡ ಬಳಿಕ ಅಲ್ಲಿನ ಗ್ರಾಮಗಳ ಆಡಳಿತ ನಿರ್ವಹಣೆ ಹೇಗೆ ಎಂಬುದರ ಬಗ್ಗೆ ಯಾರೊಬ್ಬರಲ್ಲೂ ಸ್ಪಷ್ಟತೆ ಇಲ್ಲದಿರುವುದು ಗೊಂದಲಕ್ಕೀಡು ಮಾಡಿದೆ.

    ಕಾನೂನು ಹೋರಾಟಕ್ಕೂ ಸಿದ್ಧ: ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ವಿಚಾರಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದ್ದು ರಾಜ್ಯಪಾಲರ ಅಂಗೀಕಾರ ಮಾತ್ರ ಬಾಕಿ ಇದ್ದು, ಪುರಸಭೆ ಚುನಾವಣೆಯನ್ನು ರದ್ದು ಮಾಡಿ ನಗರಸಭೆಗೆ ಚುನಾವಣೆ ನಡೆಸುವಂತೆ ಕೋರಿ ಚುನಾವಣಾ ಆಯೋಗದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಅದಾಗ್ಯೂ ಚುನಾವಣಾ ಆಯೋಗ ಪುರಸಭೆ ಸ್ಥಾನಗಳಿಗೆ ಚುನಾವಣೆ ನಡೆಸಿದ್ದು ಗೊಂದಲಕ್ಕೆಡೆಯಾಗಿದೆ. ಈ ವಿಚಾರವಾಗಿ ಸರ್ಕಾರ ಮತ್ತು ಚುನಾವಣಾ ಆಯೋಗ ತಗೆದುಕೊಳ್ಳುವ ತೀರ್ಮಾನ ನೋಡಿ ಪುರಸಭೆ ಸದಸ್ಯರು ಒಮ್ಮತದ ಅಭಿಪ್ರಾಯಕ್ಕೆ ಬರಲಾಗುವುದು. ಅಗತ್ಯವಿದ್ದಲ್ಲಿ ಕಾನೂನು ಹೋರಾಟಕ್ಕೂ ಸಿದ್ಧವಿರುವುದಾಗಿ ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts