ನೆಕ್ಕಿಲಾಡಿ ಡ್ಯಾಂ ಸೋರಿಕೆ

>

ಶ್ರವಣ್ ಕುಮಾರ್ ನಾಳ ಪುತ್ತೂರು
ವಾರದ ಹಿಂದೆ ಒಳಹರಿವು ಕ್ಷೀಣವಾದ ಪರಿಣಾಮ ನೆಕ್ಕಿಲಾಡಿ ಡ್ಯಾಂನ ನೀರು ಶೇಖರಣಾ ಪ್ರಮಾಣ ಕುಸಿದಿದ್ದು, ಪ್ರಸ್ತುತ ಡ್ಯಾಂ ಸೋರಿಕೆಯಾಗುತ್ತಿರುವುದರಿಂದ ವಾರದ ಅಂತರದಲ್ಲಿ 1 ಮೀಟರ್ ನೀರು ಖಾಲಿ ಖಾಲಿಯಾಗಿದೆ.
630 ಎಂಎಲ್‌ಡಿ ನೀರು ಶೇಖರಣಾ ಸಾಮರ್ಥ್ಯದ ನೆಕ್ಕಿಲಾಡಿ ಡ್ಯಾಂನಲ್ಲಿ ಕಳೆದ ವಾರ 3 ಮೀಟರ್ ನೀರಿತ್ತು. ಅಣೆಕಟ್ಟಿನಲ್ಲಿ ನೀರು ನಿರಂತರ ಸೋರಿಕೆಯಾಗುತ್ತಿದ್ದರೂ ನಗರಸಭೆ ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಪ್ರಸ್ತುತ 2 ಮೀಟರ್‌ಗೆ ನೀರಿನ ಪ್ರಮಾಣ ಇಳಿಕೆಯಾಗಿದೆ. ದಿನದ 24 ಗಂಟೆಯೂ ರೇಚಕ ಸ್ಥಾವರದಿಂದ ನೀರು ಮೇಲಕ್ಕೆತ್ತಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸದ್ಯದಲ್ಲೇ ಪುತ್ತೂರಿಗೆ ನೀರಿನ ಬರ ಸಾಧ್ಯತೆ ಹೆಚ್ಚಿದೆ.

ಕಾಮಗಾರಿ ತಾಂತ್ರಿಕ ದೋಷ:  2003-04ರಲ್ಲಿ ಪುತ್ತೂರು ಪುರಸಭೆ (ಇಂದಿನ ನಗರಸಭೆ) ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್‌ನಿಂದ ಸಾಲ ಪಡೆದು ಉಪ್ಪಿನಂಗಡಿ ನೆಕ್ಕಿಲಾಡಿ ಸಮೀಪ ಕುಮಾರಧಾ ನದಿಗೆ ಎಡಿಬಿ ಯೋಜನೆಯಡಿ ಅಣೆಕಟ್ಟು ನಿರ್ಮಿಸಲಾಗಿದೆ. ಏಪ್ರಿಲ್ ಕೊನೇ ವಾರದಲ್ಲಿ ಡ್ಯಾಂನಲ್ಲಿ ಗರಿಷ್ಠ 3 ಮೀಟರ್ ನೀರಿದ್ದು, ಒಳಹರಿವು ಕ್ಷೀಣವಾಗಿತ್ತು. ಆದರೆ ಡ್ಯಾಂ ಕಾಮಗಾರಿಯ ತಾಂತ್ರಿಕ ದೋಷದಿಂದ ವಾರದಲ್ಲೇ 1 ಮೀಟರ್ ನೀರು ಡ್ಯಾಂ ಗೇಟ್ ಮೂಲಕ ಸೋರಿಕೆಯಾಗಿದೆ.

ಸೋರಿಕೆಗೂ ನಮಗೂ ಸಂಬಂಧವಿಲ್ಲ!: ಕಿಂಡಿ ಅಣೆಕಟ್ಟಿಗೆ ನಗರಸಭೆಯಿಂದ ಅಳವಡಿಸಿದ ಹಲಗೆಗಳ ಕೆಳಭಾಗದಲ್ಲಿ ನೀರು ನಿರಂತರ ಸೋರುತ್ತಿದೆ. ನೀರೆತ್ತುವ ಕಾರ್ಯ ನಿರ್ವಹಿಸುವ ಮಂಡಳಿಯ ಸಿಬ್ಬಂದಿ ನೀರಿನ ಕೊರತೆಯ ವರದಿಯನ್ನು ಪ್ರತೀ ದಿನ ನಗರಸಭೆಗೆ ಸಲ್ಲಿಸುತ್ತಿಲ್ಲ ಎಂಬುದು ನಗರಸಭೆಯ ವಾದ. ರೇಚಕ ಯಂತ್ರ ಸ್ಥಾವರದ ಬಳಿ ನೀರೆತ್ತುವ ಮತ್ತು ಜಲಶುದ್ಧೀಕರಣ ವ್ಯವಸ್ಥೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ನಿರ್ವಹಿಸುತ್ತಿದೆ. ಆದರೆ ಡ್ಯಾಂ ಸೋರಿಕೆಯಾಗುವುದಕ್ಕೂ, ನೀರು ಕಡಿಮೆಯಾಗಿರುವುದಕ್ಕೂ ನಮಗೆ ಸಂಬಂಧವಿಲ್ಲ ಎಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಹೇಳಿದೆ.

ನೀರೆತ್ತಲು ಅಸಾಧ್ಯ
ಫೆಬ್ರವರಿ ಕೊನೇ ವಾರದಲ್ಲಿ ಡ್ಯಾಂ ಸಮೀಪ ಗರಿಷ್ಠ 3ಮೀ ಎತ್ತರ ನೀರಿನ ಪ್ರಮಾಣವಿದ್ದು, ಹೆಚ್ಚುವರಿ ನೀರು ಹೊರಹೋಗುತ್ತಿತ್ತು. ಏಪ್ರಿಲ್ ವೇಳೆ ನೀರಿನ ಹರಿವು ಬಹುತೇಕ ನಿಂತಿದ್ದು, 630 ಎಂಎಲ್‌ಡಿ ನೀರು ಶೇಖರಣೆಯಾಗಿತ್ತು. ಹಿಂದೆ ಪುತ್ತೂರು ನಗರಕ್ಕೆ 50 ಲಕ್ಷ ಲೀಟರ್ ನೀರು ಸಾಕಾಗುತ್ತಿತ್ತು. ಈಗ ಬೇಡಿಕೆ 75 ಲಕ್ಷಕ್ಕೆ ಏರಿದೆ. 31 ವಾರ್ಡ್ ಹೊಂದಿರುವ ಪುತ್ತೂರು ನಗರಸಭೆಯಲ್ಲಿ 78 ಸಾವಿರ ಜನಸಂಖ್ಯೆಯಿದ್ದು, ಪ್ರತಿ ದಿನ ಅಗತ್ಯವಿರುವ 75 ಲಕ್ಷ ಲೀಟರ್ ನೀರಿನ ಪೂರೈಕೆಯಾಗುತ್ತಿದೆ. ಡ್ಯಾಂನಲ್ಲಿ 1 ಮೀಟರ್‌ಗಿಂತ ಕೆಳಗೆ ನೀರಿದ್ದರೆ ಹೂಳು ಹಾಗೂ ಕೆಸರು ಹೆಚ್ಚಿರುವ ಕಾರಣ ನೀರೆತ್ತಲು ಸಾಧ್ಯವಾಗುತ್ತಿಲ್ಲ, ಸದ್ಯಕ್ಕೆ ಡ್ಯಾಂ ನೀರು ಸೋರಿಕೆ ತಡೆಗಟ್ಟುವುದೇ ನಗರಸಭೆಗಿರುವ ಪ್ರಮುಖ ಉಪಾಯ.

ನೆಕ್ಕಿಲಾಡಿ ಡ್ಯಾಂನಲಿರುವ್ಲ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ಬಂದಿಲ್ಲ. ಕಳೆದ 1 ವಾರದಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ಡ್ಯಾಂನಲ್ಲಿ ನೀರಿನ ಪ್ರಮಾಣ ಏರಿಕೆಯಾಗಿರಬಹುದು. ಒಂದು ವೇಳೆ ನೀರಿನ ಪ್ರಮಾಣ ಕುಸಿತವಾಗಿದ್ದಲ್ಲಿ ಮುಂದಿನ ದಿನಗಳಲ್ಲಿ ನೀರು ಕೊರತೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ರೂಪಾ ಶೆಟ್ಟಿ, ಹಾಸನದಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ನಗರಸಭೆ ಪುತ್ತೂರು ಪೌರಾಯುಕ್ತೆ,