ದೇವದುರ್ಗ: ಕೃಷ್ಣಾನದಿಯಲ್ಲಿ 2009, 2019ರಲ್ಲಿ ಉಂಟಾದ ನೆರೆಯಿಂದ ಸೂರು ಕಳೆದುಕೊಂಡ ಕುಟುಂಬಗಳಿಗೆ ನಿವೇಶನ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಾಲಹಳ್ಳಿಯಲ್ಲಿ ಜಿಲ್ಲಾಧಿಕಾರಿ ಕೆ.ನಿತೀಶಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಸ್ಥಾಪಿತ) ಶನಿವಾರ ಮನವಿ ಸಲ್ಲಿಸಿತು.

ನೆರೆಹಾವಳಿಯಿಂದ ನದಿದಂಡೆಯ ಹಲವು ಗ್ರಾಮಗಳ ಬಡವರು ಸಂತ್ರಸ್ತರಾಗಿದ್ದು, ಅವರಿಗೆ ನಿವೇಶನ ನೀಡದ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಿನ ಭೂರಹಿತ ಬಡವರು ಸರ್ಕಾರಿ, ಅರಣ್ಯ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಪಟ್ಟಾ ನೀಡದ ಕಾರಣ ಅಧಿಕಾರಿಗಳ ಕಿರುಕುಳ ಹೆಚ್ಚಾಗಿದೆ ಎಂದು ದೂರಿದರು.
ಕೂಡಲೇ ಹೇರುಂಡಿ ಗ್ರಾಮದಲ್ಲಿ ಹಕ್ಕುಪತ್ರ ನೀಡಿದ ನೆರೆಸಂತ್ರಸ್ತರಿಗೆ ನಿಯಮಪ್ರಕಾರ ಮನೆಗಳನ್ನು ನೀಡಬೇಕು. ಸಂತ್ರಸ್ತ ಕುಟುಂಬಗಳಿಗೆ ನಿವೇಶನ ನೀಡಬೇಕು. ಬಗರ್‌ಹುಕುಂ ನಮೂನೆ 57ರಡಿ ಅರ್ಜಿ ಸಲ್ಲಿಸಿದ ರೈತರಿಗೆ ಹಕ್ಕುಪತ್ರ ನೀಡಬೇಕು. ದೇವದುರ್ಗದ ಮಾಳಗಡ್ಡಿಯಲ್ಲಿ ಒತ್ತುವರಿ ತೆರವು ಮಾಡಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಸುವರ್ಣಗ್ರಾಮ ಯೋಜನೆಯಡಿ ಶಾವಂತಗೇರಾ, ಕ್ಯಾದಿಗೇರಾ, ಲಿಂಗದಹಳ್ಳಿ, ತಿಪ್ಪನಹಳ್ಳಿಯಲ್ಲಿ ಭೂಮಿ ಖರೀದಿಸಿದ್ದು ವಸತಿ ಬಡಾವಣೆ ನಿರ್ಮಿಸಬೇಕು. ಮಸರಕಲ್‌ನಲ್ಲಿ ಲಭ್ಯವಿರುವ ಜಮೀನಿನಲ್ಲಿ ಲೇಔಟ್ ನಿರ್ಮಿಸಬೇಕು. ಜಾಲಹಳ್ಳಿಯಲ್ಲಿ ಫಸಲ್ ಬಿಮಾ ಯೋಜನೆ ಅವ್ಯವಹಾರದಲ್ಲಿ ಭಾಗಿಯಾದವರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಸಂಚಾಲಕ ಶಿವಪ್ಪ ಪಲಕನಮರಡಿ, ಬಸವರಾಜ ಹುಲಿಗುಡ್ಡ, ಭೀಮಣ್ಣ ವೀರಗೋಟ, ರಮೇಶ ಬಾವಿಮನಿ, ದೇವಪ್ಪ ಹೇರುಂಡಿ, ರಾಮಪ್ಪ ಮ್ಯಾಗಳಮನಿ, ಯಲ್ಲಪ್ಪ ಹೇರುಂಡಿ, ಮಲ್ಲಿಕಾರ್ಜುನ ನವಿಲಗುಡ್ಡ ಇದ್ದರು.