ಮನೆ ಕಳೆದುಕೊಂಡ ಕುಟುಂಬಗಳಿಗೆ ಆದ್ಯತೆ

ಮಡಿಕೇರಿ: ಅತಿವೃಷ್ಟಿಯಿಂದಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಪ್ರಥಮ ಆದ್ಯತೆಯಲ್ಲಿ ಪುನರ್ವಸತಿ ಕಲ್ಪಿಸಲಾಗುವುದೆಂದು ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಡಾ.ಜಯಮಾಲಾ ಹೇಳಿದರು.

ಮಹಿಳೆಯರು ಮತ್ತು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದು, ನಿರಾಶ್ರಿತ ಕುಟುಂಬಗಳಿಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಎಲ್ಲ ರೀತಿಯ ಸಹಕಾರ ನೀಡಲಾಗುವುದೆಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ 30 ಅಂಗನವಾಡಿ ಕೇಂದ್ರಗಳು ಸಂಪೂರ್ಣ, 144 ಕೇಂದ್ರಗಳು ಭಾಗಶಃ ಹಾನಿಗೀಡಾಗಿವೆ. 75 ಕೇಂದ್ರಗಳನ್ನು ದುರಸ್ತಿ ಮಾಡಬೇಕಿದ್ದು, ಕೊಡಗಿನ ಪರಿಸರಕ್ಕೆ ಪೂರಕವಾದ ವಿಶೇಷ ಮಾದರಿಯಲ್ಲಿ ಕಟ್ಟಡಗಳನ್ನು ಕಟ್ಟಲಾಗುವುದು ಎಂದರು.

ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ 69 ಅಂಗವಿಕಲರು, 188 ಹಿರಿಯ ನಾಗರಿಕರು ಮನೆ ಕಳೆದುಕೊಂಡಿದ್ದಾರೆ. 19 ಜನರ ಬದುಕು ಅತಂತ್ರವಾಗಿದೆ. ಇವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದೆಂದರು.

ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ಅಪೌಷ್ಟಿಕತೆ ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ. ಇದು ಅತ್ಯಂತ ಸಮಾಧಾನದ ಸಂಗತಿ ಎಂದು ಹೇಳಿದರು.

ನಾಡಹಬ್ಬ ಮಡಿಕೇರಿ ದಸರಾಗೆ ಹಿಂದಿನಂತೆ ಸರ್ಕಾರ ಅನುದಾನ ಬಿಡುಗಡೆ ಮಾಡಲಿದೆ. ಯಾವ ಕಾರಣಕ್ಕೂ ಅನುದಾನ ಕಡಿತ ಮಾಡುವುದಿಲ್ಲ ಎಂದು ಜಯಮಾಲಾ ಸ್ಪಷ್ಟಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಪಂ ಸಿಇಒ ಪಿ.ಕೆ. ಮಿಶ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಇದ್ದರು.