ನೆರೆ ನಿರಾಶ್ರಿತರಿಗೆ ತಕ್ಷಣ ಪರಿಹಾರ – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ

ಬಳ್ಳಾರಿ: ನೆರೆ ನಿರಾಶ್ರಿತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಮೂಲಕ ತಕ್ಷಣ ಅಗತ್ಯ ಪರಿಹಾರ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದರು.

ವಿವಿಧ ಜಿಲ್ಲೆಗಳ ನೆರೆ ಹಾನಿ ಪ್ರದೇಶಗಳಿಗೆ ತೆರಳುವ ಮುನ್ನ ಸಂಡೂರು ತಾಲೂಕಿನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರವಾಹದಿಂದ ಇದುವರೆಗೆ ಯಾವುದೇ ಅನಾಹುತಗಳಾಗಿಲ್ಲ. ಭಾನುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಅಧಿಕಾರಿಗಳು ಎಲ್ಲ ಅಗತ್ಯ ಕ್ರಮಕೈಗೊಂಡಿದ್ದಾರೆ. ಸೇನಾಪಡೆ, ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಮತ್ತು ಪರಿಹಾರ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಅಗತ್ಯವಾದರೆ ಗ್ರಾಮಗಳನ್ನು ಸ್ಥಳಾಂತರಿಸಲಾಗುವುದು ಎಂದರು.

ಬಳ್ಳಾರಿ ಹಾಗೂ ಮಲೆನಾಡಿನಲ್ಲಿ ಮಳೆಯಾಗಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಒಂದೆಡೆ ನೆರೆ ಮತ್ತೊಂದೆಡೆ ಬರ ಪರಿಸ್ಥಿತಿ ಇದೆ. ಎರಡೂ ಪರಿಸ್ಥಿತಿಗಳನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಿಸಲಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ನೆರೆ ಪರಿಹಾರ ಕೋರಲಾಗುವುದು. ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವ ಕಾರಣ ಆಲಮಟ್ಟಿ ಜಲಾಶಯದಿಂದ 2.11 ಲಕ್ಷ ಕ್ಯೂಸೆಕ್ ಮತ್ತು ನಾರಾಯಣಪುರ ಜಲಾಶಯದಿಂದ 2.9 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗಿದೆ ಎಂದರು.

ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಿಲ್ಲೆಯ ಬರ ಹಾಗೂ ಅಭಿವೃದ್ಧಿ ಕಾರ್ಯಗಳ ಸ್ಥಿತಿಗತಿ ಬಗ್ಗೆ ಮುಖ್ಯಮಂತ್ರಿ ಮಾಹಿತಿ ಪಡೆದರು. ಶಾಸಕ ಜಿ.ಸೋಮಶೇಖರರೆಡ್ಡಿ , ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಬಿಜೆಪಿ ಮುಖಂಡರಾದ ಡಾ.ಎಸ್.ಜೆ.ವಿ.ಮಹಿಪಾಲ್, ಕಾರ್ತಿಕೇಯ ಘೋರ್ಪಡೆ, ವೀರಶೇಖರರೆಡ್ಡಿ ಇತರರಿದ್ದರು.