ಈ ಐದು ಕಾರಣಗಳಿಗಾಗಿ ಪಂತ್​ಗೆ ವಿಶ್ವಕಪ್​ ತಂಡದಲ್ಲಿ ಸ್ಥಾನ ನೀಡಬೇಕು: ನೆಹ್ರಾ

ನವದೆಹಲಿ: ಟೀಂ ಇಂಡಿಯಾದ ಯುವ ಆಟಗಾರ ರಿಷಭ್​ ಪಂತ್​ಗೆ ವಿಶ್ವಕಪ್​ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ನೀಡಲು ಹಲವು ಕಾರಣಗಳಿದ್ದು, ಪಂತ್​ಗೆ ವಿಶ್ವಕಪ್​ನಲ್ಲಿ ಅವಕಾಶ ನೀಡಿದರೆ ಅವರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಟೀಂ ಇಂಡಿಯಾದ ಮಾಜಿ ವೇಗದ ಬೌಲರ್​ ಆಶಿಶ್​ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.

2011ರ ವಿಶ್ವಕಪ್​ ಗೆದ್ದ ತಂಡದ ಭಾಗವಾಗಿದ್ದ ಆಶಿಶ್​ ನೆಹ್ರಾ ದೆಹಲಿಯ 21 ವರ್ಷದ ಎಡಗೈ ಬ್ಯಾಟ್ಸ್​ಮನ್​ ಮತ್ತು ವಿಕೆಟ್​ಕೀಪರ್​ ರಿಷಭ್​ ಪಂತ್​ರನ್ನು ತಂಡಕ್ಕೆ ಆಯ್ಕೆ ಮಾಡಲು ಪ್ರಮುಖ 5 ಕಾರಣಗಳನ್ನು ನೀಡಿದ್ದಾರೆ. ಅವುಗಳೆಂದರೆ,

1. ಭಾರತ ತಂಡದ ಬ್ಯಾಟಿಂಗ್​ ಲೈನ್​ ಅಪ್​ ಗಮನಿಸಿದಾಗ ಶಿಖರ್​ ಧವನ್​ ಹೊರತುಪಡಿಸಿದರೆ ಟಾಪ್​ 7ರಲ್ಲಿ ಬೇರೆ ಯಾವುದೇ ಎಡಗೈ ಬ್ಯಾಟ್ಸ್​ಮನ್​ ಇಲ್ಲ. ಎಡಗೈ ಮತ್ತು ಬಲಗೈ ಬ್ಯಾಟ್ಸ್​ಮನ್​ಗಳ ಕಾಂಬಿನೇಷನ್​ ಇರುವುದು ಮುಖ್ಯ.

2. ರಿಷಭ್​ ಪಂತ್​ ನಂ. 1 ರಿಂದ 7ನೇ ಸ್ಥಾನದವರೆಗೆ ಬ್ಯಾಟಿಂಗ್​ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರನ್ನು ತಂಡದ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು.

3. ಭಾರತ ತಂಡದಲ್ಲಿ ರೋಹಿತ್​ ಶರ್ಮಾ ಅವರನ್ನು ಹೊರತುಪಡಿಸಿದರೆ ನಿರಾಯಾಸವಾಗಿ, ನಿರ್ಭೀತವಾಗಿ ಸಿಕ್ಸರ್​ ಸಿಡಿಸುವ ಸಾಮರ್ಥ್ಯವುಳ್ಳ ಆಟಗಾರರ ಪಟ್ಟಿಯಲ್ಲಿ ರಿಷಭ್​ ಪಂತ್​ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಒತ್ತಡ ಸನ್ನಿವೇಶದಲ್ಲಿ ತಂಡಕ್ಕೆ ಅಗತ್ಯವಿರುವ ರನ್​ ಗಳಿಸುವಲ್ಲಿ ಪಂತ್​ ಪ್ರಮುಖ ಪಾತ್ರ ವಹಿಸಲಿದ್ದಾರೆ.

4. ಟೀಂ ಇಂಡಿಯಾದಲ್ಲಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಮತ್ತು ಜಸ್ಪ್ರೀತ್​ ಬುಮ್ರಾ ಮ್ಯಾಚ್ ವಿನ್ನರ್​ಗಳು. ಇವರೊಂದಿಗೆ ಪಂತ್​ರನ್ನು ಮ್ಯಾಚ್​ ವಿನ್ನರ್​ ಎಂದು ಆಯ್ಕೆ ಮಾಡುತ್ತೇನೆ. ಅವರಿಗೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯವಿದೆ.

5. ಅಂಬಟಿ ರಾಯುಡು, ಕೇದಾರ್​ ಜಾಧವ್​ ಮತ್ತು ದಿನೇಶ್​ ಕಾರ್ತಿಕ್​ ಎಲ್ಲರೂ ಅತ್ಯುತ್ತಮ ಆಟಗಾರರು ಆದರೆ ಎಲ್ಲರೂ ಒಂದೇ ವಿಧದ ಬ್ಯಾಟ್ಸ್​ಮನ್​ಗಳು. ಆದರೆ ಪಂತ್​ ಇವರ ಮಧ್ಯೆ ವಿಶೇಷವಾಗಿ ನಿಲ್ಲುತ್ತಾರೆ ಎಂದು ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.