ಕನಿಷ್ಠ ವೇತನ ನಿಗದಿಗೆ ನಿರ್ಲಕ್ಷೃ

ಚಾಮರಾಜನಗರ: ಸರ್ಕಾರ ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸಲು ನಿರ್ಲಕ್ಷೃ ಮಾಡಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಅಂಗನವಾಡಿ ನೌಕರರ ಸಂಘದ 3ನೇ ಜಿಲ್ಲಾ ಸಮ್ಮೇಳನ ಮತ್ತು ಪ್ರತಿನಿಧಿಗಳ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ 28 ಲಕ್ಷ ಅಂಗನವಾಡಿ ನೌಕರರಿದ್ದು, ನಿತ್ಯ ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ. ಕನಿಷ್ಠ ವೇತನ ನಿಗದಿಪಡಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಅಂಗನವಾಡಿ ನೌಕರರಿಗೆ ನೀಡಿರುವ ಹೊರೆಯನ್ನು ಕಡಿಮೆ ಮಾಡಿಲ್ಲ. ಜತೆಗೆ ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ನೇಮಿಸದೆ ನಿರ್ಲಕ್ಷಿಸಲಾಗಿದೆ. ಜ.30, 31 ಹಾಗೂ ಫೆ.1ರಂದು ಬೀದರ್‌ನ ಬಸವಕಲ್ಯಾಣದಲ್ಲಿ ರಾಜ್ಯಮಟ್ಟದ ಅಂಗನವಾಡಿ ನೌಕರರ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈಗಾಗಲೇ ತಾಲೂಕು ಮಟ್ಟದ ಸಮ್ಮೇಳನಗಳು ಮುಗಿದಿದ್ದು, ಜಿಲ್ಲಾ ಮಟ್ಟದ ಸಮ್ಮೇಳನಗಳು ನಡೆಯುತ್ತಿವೆ ಎಂದು ತಿಳಿಸಿದರು.

2014ರಲ್ಲಿ ಕೇಂದ್ರ ಸರ್ಕಾರ ಯೋಜನಾ ಆಯೋಗವನ್ನು ಕೈ ಬಿಟ್ಟು ನೀತಿ ಆಯೋಗವನ್ನು ಜಾರಿಗೆ ತಂದಿದ್ದು, ಆ ಮೂಲಕ ಬಂಡವಾಳಶಾಹಿ ಹಾಗೂ ಖಾಸಗೀಕರಣ ನೀತಿಯನ್ನು ಜಾರಿಗೊಳಿಸಲು ಹೊರಟಿದೆ. ದೇಶದಲ್ಲಿ ಯಾವುದೇ ಸರ್ಕಾರ ಬಂದರೂ ಅಂಗನವಾಡಿ ನೌಕರರನ್ನು ಕಡೆಗಣಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸುರೇಶ್ ಮಾತನಾಡಿ, ಅಂಗನವಾಡಿ ನೌಕರರ ಸಂಘ 3 ವರ್ಷಗಳಿಗೊಮ್ಮೆ ಆಯೋಜಿಸುವ ರಾಜ್ಯಮಟ್ಟದ ಸಮ್ಮೇಳನಗಳಲ್ಲಿ ಮುಂದಿನ 3 ವರ್ಷಗಳ ತನಕ ಆಗಬೇಕಾದ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ಚರ್ಚಿಸಿ ಯೋಜನೆ ರೂಪಿಸಲಾಗುತ್ತದೆ ಎಂದರು.
ಸಂಘದ ಕಾರ್ಯಕರ್ತರು ಸಂಘಟನೆಯನ್ನು ಬಲಿಷ್ಠಗೊಳಿಸುವ ಮೂಲಕ ಹೋರಾಟ ಮಾಡಬೇಕು. ಮುಂದಿನ 2019ರ ಚುನಾವಣೆಯಲ್ಲಿ ನಮ್ಮ ಬದುಕಿಗೆ ವಿರುದ್ಧವಾದ ರಾಜಕೀಯ ವ್ಯಕ್ತಿಗಳನ್ನು ಸೋಲಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪಣತೊಡಬೇಕಿದೆ ಎಂದು ತಿಳಿಸಿದರು.

ಸಂಘದ ಜಿಲ್ಲಾಧ್ಯಕ್ಷೆ ಸುಜಾತಾ, ಪ್ರಧಾನ ಕಾರ್ಯದರ್ಶಿ ಪುಟ್ಟಬಸಮ್ಮ, ಖಜಾಂಚಿ ರೇವಮ್ಮ, ಯಶೋಧಮ್ಮ, ಜಯಮಾಲ, ಸುಂದ್ರಮ್ಮ, ಮೀನಾಕ್ಷಿ, ಶಾಂತಮ್ಮ, ಸುಮಿತ್ರಾ, ವಿಮಲಾ, ಭಾಗ್ಯ ಇತರರಿದ್ದರು.

28