25 ವರ್ಷ ಮೇಲ್ಪಟ್ಟವರೂ ನೀಟ್​ ಬರೆಯಬಹುದು ಎಂದ ಸುಪ್ರೀಂಕೋರ್ಟ್​

ನವದೆಹಲಿ: ವೈದ್ಯಕೀಯ ಶಿಕ್ಷಣದ ಆಕಾಂಕ್ಷಿಗಳ ಪೈಕಿ 25 ವರ್ಷ ಮೇಲ್ಪಟ್ಟವರೂ 2019ರ ನೀಟ್ ಬರೆಯಬಹುದು ಎಂದು ಸುಪ್ರಿಂಕೋರ್ಟ್​ ಗುರುವಾರ ತೀರ್ಪು ನೀಡಿದೆ. ಆದರೆ, ಸಿಬಿಎಸ್​ಇ ನಿಗದಿಪಡಿಸಿರುವ ಗರಿಷ್ಠ ವಯೋಮಿತಿ ಪ್ರಕರಣದ ಇತ್ಯರ್ಥವಾದ ನಂತರ ಕೋರ್ಸುಗಳಿಗೆ ಅಂತಿಮ ಪ್ರವೇಶ ಪಡೆಯಲು ಅವಕಾಶ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಅಲ್ಲದೆ, ಕನಿಷ್ಠ ವಯೋಮಿತಿಯಿಂದಾಗಿ ಅರ್ಜಿ ಸಲ್ಲಿಸುವ ಅವಕಾಶ ವಂಚಿತರಾಗಿದ್ದ ಎಂಬಿಬಿಎಸ್ ಹಾಗೂ ಬಿಡಿಎಸ್ ಆಕಾಂಕ್ಷಿ ಅಭ್ಯರ್ಥಿಗಳಿಗೆ ಅರ್ಜಿ ತುಂಬಲು ಒಂದು ವಾರ ಅವಧಿ ವಿಸ್ತರಿಸಿ ಕೋರ್ಟ್​ ಆದೇಶಿಸಿದೆ. ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು.
ಎಂಬಿಬಿಎಸ್​ ಕೋರ್ಸ್​ಗಾಗಿ ನೀಟ್​ ಪರೀಕ್ಷೆ ಬರೆಯಲು ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 25 ವರ್ಷ, ಪರಿಶಿಷ್ಟರಿಗೆ 30 ವರ್ಷ ನಿಗದಿ ಮಾಡಿ ಸಿಬಿಎಸ್​ಇ ಅಧಿಸೂಚನೆ ಹೊರಡಿಸಿತ್ತು.

ವೈದ್ಯಕೀಯ ಶಿಕ್ಷಣದ ಕಾಲೇಜುಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳ ವಯಸ್ಸಿನ ಮಿತಿಯನ್ನು ಹೆಚ್ಚಿಸುವ ಭಾರತದ ವೈದ್ಯಕೀಯ ಮಂಡಳಿ ನಿರ್ಧಾರದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ತೀರ್ಪು ನೀಡಿದೆ.