ವಿವಿಧ ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆದ ನೀಟ್ ಪರೀಕ್ಷೆ

ಬೆಂಗಳೂರು: ರೈಲು ತಡವಾಗಿ ಬಂದು ಪರೀಕ್ಷೆ ಹಾಜರಾಗಲು ಸಾಧ್ಯವಾಗದವರಿಗಾಗಿ ಆಯೋಜಿಸಿದ್ದ ನೀಟ್ ಪರೀಕ್ಷೆ ಸೋಮವಾರ ನಗರದ ವಿವಿಧ ಕೇಂದ್ರಗಳಲ್ಲಿ ಸುಗಮವಾಗಿ ನಡೆಯಿತು.

ಮೇ 5ರಂದು ನಡೆದಿದ್ದ ಪರೀಕ್ಷೆಯಲ್ಲಿ 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದರಿಂದ ವಂಚಿತರಾಗಿ ದ್ದರು ಎಂದು ಹೇಳಲಾಗಿತ್ತು. ಆದರೆ, 100ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮಾತ್ರ ಮರುಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 84ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಪರೀಕ್ಷೆಯಿಂದ ವಂಚಿತರಾಗಿದ್ದವರು ಈ ಬಾರಿ ಒಂದು ದಿನ ಮೊದಲೇ ನಗರಕ್ಕೆ ಆಗಮಿಸಿದ್ದರು. ಪರೀಕ್ಷೆ ನಂತರ ಮಾತನಾಡಿದ ವಿದ್ಯಾರ್ಥಿ ಸುರೇಶ್, ಎರಡನೇ ಅವಕಾಶವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದು ಬೇಡವೆಂದು ತಂದೆಯೊಂದಿಗೆ ಹುಬ್ಬಳ್ಳಿಯಿಂದ ಭಾನುವಾರವೇ ಬಂದು ಲಾಡ್ಜ್ ನಲ್ಲಿ ಉಳಿದುಕೊಂಡಿದ್ದೆ. ಯಾವುದೇ ಆತಂಕವಿಲ್ಲದೆ ಬೆಳಗ್ಗೆ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆದೆ ಎಂದು ತಿಳಿಸಿದರು.

ಪರೀಕ್ಷೆ ಸುಲಭವಾಗಿತ್ತು. ಉತ್ತಮ ಅಂಕಗಳನ್ನು ನಿರೀಕ್ಷಿಸಿದ್ದೇನೆ ಎಂದು ಸತೀಶ್ ಎಂಬುವರು ಹೇಳಿದರು. ನೀಟ್ ಪರೀಕ್ಷೆ ವಿಚಾರದಲ್ಲಿ ರಾಜ್ಯ ಸರ್ಕಾರ ಮಧ್ಯಸ್ಥಿಕೆವಹಿಸಿ ಮತ್ತೊಮ್ಮೆ ಪರೀಕ್ಷೆ ಆಯೋಜನೆ ಮಾಡುವಲ್ಲಿ ಯಶಸ್ವಿಯಾಗಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದರು.

Leave a Reply

Your email address will not be published. Required fields are marked *