ನೀರವ್​ ಮೋದಿ ಸೋದರಿ ಪೂರ್ವಿ ಮೋದಿ ವಿರುದ್ಧ ರೆಡ್ ಕಾರ್ನರ್​ ನೋಟಿಸ್​!

ನವದೆಹಲಿ: ಪಂಜಾಬ್​ ನ್ಯಾಷನಲ್ ಬ್ಯಾಂಕ್​ ಸೇರಿ ವಿವಿಧ ಬ್ಯಾಂಕ್​ಗಳಿಗೆ 13 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ವಂಚಿಸಿರುವ ವಜ್ರೋದ್ಯಮಿ ನೀರವ್​ ಮೋದಿ ಸೋದರಿ ಪೂರ್ವಿ ಮೋದಿಗೆ ರೆಡ್​ ಕಾರ್ನರ್​ ನೋಟಿಸ್​ ನೀಡಲಾಗಿದೆ. ಪಿಎನ್​ಬಿ ಬ್ಯಾಂಕ್​ ಹಗರಣದಲ್ಲಿ ಪೂರ್ವಿ ಅವರದ್ದೂ ಪಾಲಿದೆ. ತನಿಖೆಗೆ ಸಹಕರಿಸಬೇಕು ಎಂದು ನೋಟಿಸ್​ನಲ್ಲಿ ಹೇಳಲಾಗಿದೆ.

ಈ ನೋಟಿಸ್​ ಅಂತಾರಾಷ್ಟ್ರೀಯ ಅರೆಸ್ಟ್​ ವಾರೆಂಟ್​ನಂತೆ ಇದ್ದು ಇದರ ಅನ್ವಯ ಪೂರ್ವಿ ದೀಪಕ್​ ಮೋದಿ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿ ಎಂದು ಹೇಳಲಾಗಿದೆ.

ಜಾರಿ ನಿರ್ದೇಶನಾಲಯ (ಇ.ಡಿ.)ದ ಮನವಿ ಮೇರೆಗೆ ಆರ್​ಸಿಎನ್​ ಪೂರ್ವಿ ವಿರುದ್ಧ ನೋಟಿಸ್​ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವಿಯವರನ್ನು ಕಸ್ಟಡಿಗೆ ತೆಗೆದುಕೊಂಡು ತನಿಖೆಯನ್ನು ಮುಂದುವರಿಸಲು ಇಚ್ಛಿಸುತ್ತಿರುವುದಾಗಿ ಇ.ಡಿ. ಹೇಳಿದೆ. ಇ.ಡಿ. ಮಾರ್ಚ್​ನಲ್ಲಿ ಸಲ್ಲಿಸಿದ ತನ್ನ ಮೊದಲ ಚಾರ್ಜ್​ಶೀಟ್​ನಲ್ಲಿ ಪೂರ್ವಿ ಹೆಸರನ್ನು ಉಲ್ಲೇಖಿಸಿದೆ. ಪಂಜಾಬ್ ನ್ಯಾಷನಲ್​ ಬ್ಯಾಂಕ್​ ಬ್ರಾಡಿ ಹೌಸ್​ ಶಾಖೆಯಲ್ಲಿ ನಡೆದ ಹಣ ಅಕ್ರಮ ವರ್ಗಾವಣೆ ​ ಪ್ರಕರಣದಲ್ಲಿ ಆರೋಪಿ ಎಂದು ಹೇಳಿದೆ.

ಆರ್​ಸಿಎನ್​ ನೋಟಿಸ್​ ಪ್ರಕಾರ, ಪೂರ್ವಿ ಇಂಗ್ಲಿಷ್​, ಗುಜರಾತಿ, ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. ಬೆಲ್ಜಿಯನ್​ ರಾಷ್ಟ್ರೀಯತೆ ಹೊಂದಿದ್ದಾರೆ. ಒಂದು ಬಾರಿ ಆರ್​ಸಿಎನ್​ ಯಾರ ವಿರುದ್ಧವಾದರೂ ದೇಶಭ್ರಷ್ಟ ನೋಟಿಸ್​ ಜಾರಿ ಮಾಡಿದರೆ ಅದರ ಅನ್ವಯ ಆರೋಪಿಗಳು ಆರ್​ಸಿಎನ್​ ಸದಸ್ಯತ್ವದ 192 ದೇಶಗಳಲ್ಲಿ ಎಲ್ಲೇ ಇದ್ದರೂ ಅಲ್ಲಿಂದ ಗಡೀಪಾರು ಪ್ರಕ್ರಿಯೆ ಆರಂಭವಾದ ಮೇಲೆ ಅವರನ್ನು ಬಂಧಿಸಬಹುದು ಎನ್ನಲಾಗಿದೆ.