ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದ ಬೆನ್ನಲ್ಲೇ ನೀರಜ್ ಚೋಪ್ರಾ ಮನೆಮಾತಾಗಿದ್ದರು. ಇದರ ಜತೆಯಲ್ಲೇ ಅವರ ಬ್ರ್ಯಾಂಡ್ ಮೌಲ್ಯವೂ ಸಾಕಷ್ಟು ಹೆಚ್ಚಾಗಿತ್ತು. ಹಲವು ಕಾರ್ಪೋರೇಟ್ ಕಂಪನಿಗಳು ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಳ್ಳಲು ಅವರ ಬೆನ್ನುಬಿದ್ದಿದ್ದವು. ಇದೀಗ ಒಲಿಂಪಿಕ್ಸ್ ಚಿನ್ನದ ಸಾಧನೆಯ ಬಳಿಕ ಅವರ ಮೊದಲ ಜಾಹೀರಾತು ಬಿಡುಗಡೆಯಾಗಿದ್ದು, ಇದರಲ್ಲಿ ಅವರ ನಟನಾ ಕೌಶಲ ಸಾಕಷ್ಟು ಗಮನ ಸೆಳೆದಿದೆ.
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ವೇದಿಕೆಯಾಗಿರುವ ಬೆಂಗಳೂರು ಮೂಲದ ‘ಕ್ರೆಡ್’ ಕಂಪನಿಯ ಹೊಸ ಜಾಹೀರಾತಿನಲ್ಲಿ 23 ವರ್ಷದ ನೀರಜ್ ಚೋಪ್ರಾ ಕಾಣಿಸಿಕೊಂಡಿದ್ದಾರೆ. ವಿವಿಧ ಅವತಾರಗಳಲ್ಲಿ ಕಂಪನಿ ಸಿಇಒ, ಟಿವಿ ವರದಿಗಾರ, ಬ್ಯಾಂಕ್ ನೌಕರ, ಸಿನಿಮಾ ನಿರ್ದೇಶಕ ಸಹಿತ ಹಲವು ವೇಷಗಳಲ್ಲಿ ನೀರಜ್ ಚೋಪ್ರಾ ಮಿಂಚಿದ್ದು, ನಟನೆಯಲ್ಲೂ ಅವರು ‘ಚಿನ್ನದ ಎಸೆತ’ವನ್ನೇ ಎಸೆದಿದ್ದಾರೆ.
ನೀರಜ್ ಚೋಪ್ರಾ ಚಿನ್ನದ ಹುಡುಗನಾಗಿ ಮಿಂಚಿದ ಬಳಿಕ ಭಾರತೀಯರು ಹೇಗೆ ಅವರ ಬಗೆಗೆ ಕ್ರೇಜ್ ಆಗಿದ್ದರು ಎಂಬುದನ್ನು ಜಾಹೀರಾತಿನಲ್ಲಿ ತೋರಿಸಲಾಗಿದ್ದು, ನೀರಜ್ ಮೇಲೆ ಫಿದಾ ಆಗಿರುವ ಭಾರತದ ವಿವಿಧ ಕ್ಷೇತ್ರಗಳ ಜನರ ಪಾತ್ರಗಳಲ್ಲಿ ಅವರೇ ಕಾಣಿಸಿಕೊಂಡಿದ್ದಾರೆ. ಜಾವೆಲಿನ್ ಹಿಡಿದುಕೊಂಡು ಅವರು ಕ್ರಿಕೆಟ್ ಬ್ಯಾಟ್ ಹಿಡಿದಂತೆ ಬ್ಯಾಟಿಂಗ್ ಮಾಡಿರುವುದು ಕೂಡ ಜಾಹೀರಾತಿನಲ್ಲಿ ಗಮನಸೆಳೆದಿದೆ.
360 Degree Marketing! @cred_club #ad pic.twitter.com/RmjWAXERxm
— Neeraj Chopra (@Neeraj_chopra1) September 19, 2021
ಟೋಕಿಯೊ ಒಲಿಂಪಿಕ್ಸ್ ಯಶಸ್ಸಿನ ಬಳಿಕ ಜಾಹೀರಾತು ಕ್ಷೇತ್ರದಲ್ಲಿ ಇದು ಅವರ ಆರಂಭವಷ್ಟೇ ಆಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಜಾಹೀರಾತುಗಳಲ್ಲಿ ಅವರು ಮಿಂಚಿವ ನಿರೀಕ್ಷೆ ಇದೆ. ಇದೀಗ ಅವರು ಪ್ರತಿ ಜಾಹೀರಾತಿಗೆ ವರ್ಷಕ್ಕೆ 2.5ರಿಂದ 3 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದು ವಿರಾಟ್ ಕೊಹ್ಲಿ (5 ಕೋಟಿ ರೂ.) ಬಳಿಕ ಭಾರತದ ಕ್ರೀಡಾಪಟುಗಳು ಜಾಹೀರಾತಿಗೆ ಪಡೆಯುತ್ತಿರುವ ಅತ್ಯಧಿಕ ಸಂಭಾವನೆಯಾಗಿದೆ.
ಇಂದಿನಿಂದ ಐಪಿಎಲ್ ಸೆಕೆಂಡ್ ಇನಿಂಗ್ಸ್, 8 ತಂಡಗಳ ಪ್ಲೇಆಫ್ ಲೆಕ್ಕಾಚಾರ ಹೇಗಿದೆ ಗೊತ್ತೇ?