ನೀರಾ ನೀತಿ ರೂಪಿಸಿ ಮರೆತ ರಾಜ್ಯ ಸರ್ಕಾರ

| ಶಿವಾನಂದ ತಗಡೂರು ಬೆಂಗಳೂರು

ಅಬಕಾರಿ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ನೀರಾ ಮತ್ತು ತೆಂಗಿನ ಉತ್ಪನ್ನಗಳಿಗೆ ಅನುಮತಿ ನೀಡಿದ್ದ ಸರ್ಕಾರ, ನೀರಾ ಅಭಿವೃದ್ಧಿ ಮಂಡಳಿ ಮಾಡಲು ಮೀನಮೇಷ ಎಣಿಸುತ್ತಿದೆ. ರಾಜ್ಯದಲ್ಲಿ ತೀವ್ರವಾಗಿ ಹಬ್ಬಿದ್ದ ನೀರಾ ಚಳವಳಿಗೆ ಮಣಿದಿದ್ದ ಸರ್ಕಾರ, ಹತ್ತು ಹಲವು ಕ್ರಮ ಕೈಗೊಳ್ಳುವುದಾಗಿ ನೀಡಿದ್ದ ಭರವಸೆ ಹಾಗೆಯೇ ಉಳಿದಿದೆ. ನೀರಾ ಉತ್ಪನ್ನಗಳ ಮೂಲಕ ಲಾಭದಾಯಕ ಉದ್ಯೋಗ ಮಾಡಬಹುದೆಂಬ ತೆಂಗು ಬೆಳೆಗಾರರ ಕನಸು ಕಮರುತ್ತಿದೆ.

2001ರಲ್ಲಿ ನೀರಾ ಚಳವಳಿ ತೀವ್ರವಾಗಿದ್ದಾಗ ಚನ್ನಪಟ್ಟಣ ತಾಲೂಕಿನ ವಿಠ್ಠೇಲನಹಳ್ಳಿಯಲ್ಲಿ ನಡೆದ ಗೋಲಿಬಾರ್​ಗೆ ಇಬ್ಬರು ರೈತರು ಮೃತಪಟ್ಟಿದ್ದರು. ಆಗ ಚಳವಳಿಗೆ ಧುಮುಕಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ವಿಠೇಲನಹಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದರು. ನೀರಾ ಅನುಮತಿಗೆ ಆಗ್ರಹಿಸಿದ್ದಲ್ಲದೆ, ಅದರ ಉತ್ಪನ್ನಗಳ ಮಾರುಕಟ್ಟೆಗೆ ಒತ್ತಾಯಿಸಿದ್ದರು.

ಕಾಕತಾಳೀಯ ಎನ್ನುವಂತೆ ಈಗ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ವಿಶೇಷ ಅಂದರೆ, ನೀರಾ ಚಳವಳಿ ನಡೆದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ನಾಡಿನ ಅಧಿಕಾರ ಚುಕ್ಕಾಣಿ ಹಿಡಿದಿರುವ ಎಚ್.ಡಿ. ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದಾರೆ. ಆದರೂ ಈತನಕ ನೀರಾ ಉತ್ಪನ್ನಗಳ ಬಗ್ಗೆ ಅವರು ಚಕಾರವೆತ್ತದಿರುವುದು ಚರ್ಚೆಗೆ ಗ್ರಾಸವಾಗಿದೆ.

ಆರೋಗ್ಯಕ್ಕೆ ಉತ್ತೇಜನ: ನೀರಾ ಬಳಕೆ ಆರೋಗ್ಯಕ್ಕೆ ಉತ್ತೇಜನಕಾರಿಯಾದದ್ದು ಎಂದು ವೈಜ್ಞಾನಿಕ ಸಂಶೋಧನೆಗಳು ಸಾದರಪಡಿಸಿವೆ. ಸೂರ್ಯ ಹುಟ್ಟುವ ಮೊದಲೇ ತೆಂಗಿನ ಮರ ಗಳಿಂದ (ಈಚಲ ಮರದ ಸೇಂದಿ ಕಟ್ಟುವ ರೀತಿ) ನೀರಾ ಇಳಿಸಿ ಸಂಸ್ಕರಿಸುವುದು ಅತ್ಯುತ್ತಮ ಎಂದು ಹೇಳಲಾಗಿದೆ. ನೀರಾ ಮೂಲಕ ಬೆಲ್ಲ ಸೇರಿ ಹಲವು ಪೇಯಗಳನ್ನು ಮಾಡಬಹು ದಾಗಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯೂ ಇದೆ.

2000ರಲ್ಲಿ ಆರಂಭವಾದ ನೀರಾ ಚಳವಳಿ

ಬೆಲೆ ಇಳಿಕೆಯಿಂದ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದಾಗ 2000ರಲ್ಲಿ ರೈತ ಸಂಘದ ಅಧ್ಯಕ್ಷ ಪ್ರೊ. ಎಂ.ಡಿ. ನಂಜುಂಡಸ್ವಾಮಿ ನೀರಾ ಚಳವಳಿಗೆ ಅರಸೀಕೆರೆಯಲ್ಲಿ ಚಾಲನೆ ನೀಡಿದರು. ಅಂದಿನ ಸಭೆಗೆ ಉತ್ತರಪ್ರದೇಶ ರೈತ ಮುಖಂಡ ಮಹೇಂದ್ರ ಸಿಂಗ್ ಟಿಕಾಯಿತ್ ಕೂಡ ಬಂದಿದ್ದರು. ಮುಂದೆ ಅದು ನೀರಾ ಚಳವಳಿ ಎಂದೇ ಹೆಸರಾಯಿತು. ಚಳವಳಿ ಹತ್ತಿಕ್ಕಲು ಅಂದು ನೀರಾ ಕಟ್ಟಿದ್ದ ತೋಟಗಳಿಗೆ ನುಗ್ಗಿ ಮಡಿಕೆ ಒಡೆದದ್ದಲ್ಲದೆ, ರೈತರ ಮೇಲೆ ಲಾಠಿಚಾರ್ಜ್ ಮಾಡಿದ್ದು ಇತಿಹಾಸ. ಚಳವಳಿ ತೀವ್ರವಾದ ಮೇಲೆ ವಿಧಾನಮಂಡಲದಲ್ಲಿ ರೈತ ಚಳವಳಿ ಧ್ವನಿ ಪ್ರತಿಧ್ವನಿಸಿತ್ತು.

ಸಬ್ಸಿಡಿ ಹಣ ಹೆಚ್ಚಬೇಕು

ನೀರಾ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಶೇ.25 ಸೇರಿ ರಾಜ್ಯ ಸರ್ಕಾರ ಒಟ್ಟು ಶೇ.50 ಸಬ್ಸಿಡಿ ನೀಡುತ್ತಿದೆ. ಆದರೆ, ಸಬ್ಸಿಡಿಗಾಗಿ ಕೇವಲ 3 ಕೋಟಿ ರೂ ಅನುದಾನ ಒದಗಿಸಲಾಗಿದೆ. ಕನಿಷ್ಠ 100 ಕೋಟಿ ರೂ ಅನುದಾನ ನೀಡಬೇಕು ಎಂಬುದು ರೈತರ ಆಗ್ರಹ. ತೆಂಗು ಅಭಿವೃದ್ಧಿ ಮಂಡಳಿಯಿಂದ ನೀರಾ ಪರಿಷ್ಕರಣೆ ಘಟಕಕ್ಕೆ 50 ಲಕ್ಷ ರೂ ಸಹಾಯಧನ, ಮಾರುಕಟ್ಟೆ ಉತ್ತೇಜನಕ್ಕಾಗಿ 10 ಲಕ್ಷ ರೂ ನೆರವು ನೀಡುವ ಕಾರ್ಯಕ್ರಮವಿದೆ.

ಹತ್ತು ಹಲವು ನಿರ್ಬಂಧ

ತೆಂಗು ಬೆಳೆಯಲ್ಲಿ ಫಿಲಿಫೈನ್ಸ್ ಅಗ್ರಸ್ಥಾನದಲ್ಲಿದ್ದರೆ, ಇಂಡೋನೇಷ್ಯಾ 2ನೇ ಸ್ಥಾನದಲ್ಲಿದೆ. ನಂತರದ ಸ್ಥಾನ ಭಾರತದ್ದು. ಅತಿ ಹೆಚ್ಚು ತೆಂಗು ಹೊಂದಿರುವ ಕೇರಳ ರಾಜ್ಯದಲ್ಲಿ ನೀರಾ ಇಳಿಸಿ ಅದರ ಉತ್ಪನ್ನಗಳನ್ನು ಮಾಡುವುದಕ್ಕೆ ಯಾವುದೇ ಅಡೆ ತಡೆಗಳಿಲ್ಲ. ಆದರೆ, ರಾಜ್ಯದಲ್ಲಿ ಮಾತ್ರ ಹತ್ತು ಹಲವು ನಿರ್ಬಂಧಗಳಿವೆ. ರಾಜ್ಯದಲ್ಲಿ 400ಕ್ಕೂ ಹೆಚ್ಚು ತೆಂಗು ಬೆಳೆಗಾರರ ಸೊಸೈಟಿಗಳಿವೆ. 12 ತೆಂಗು ಬೆಳೆಗಾರರ ಕಂಪನಿಗಳು ನೋಂದಣಿಯಾಗಿದ್ದು, 6 ರೈತ ಉತ್ಪಾದಕ ಸಂಸ್ಥೆಗಳಿವೆ. 125 ಬೆಳೆಗಾರರ ಫೆಡರೇಷನ್​ಗಳಿವೆ. ರೈತರೇ ನೇರವಾಗಿ ನೀರಾ ಇಳಿಸಿ ಅದರ ಉತ್ಪನ್ನಗಳ ಮಾರಿಕೊಳ್ಳಲು ಅವಕಾಶ ನೀಡಬೇಕು. ನೀರಾ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಬೇಕು ಎನ್ನುವುದು ರೈತರ ಆಗ್ರಹವಾಗಿತ್ತು. ಆದರೆ ಈ ಬೇಡಿಕೆ ತಳ್ಳಿಹಾಕಿದ್ದ ಸರ್ಕಾರ, ಸಂಸ್ಥೆಗಳು ಮತ್ತು ಕಂಪನಿಗಳ ಮೂಲಕ ನೀರಾ ಉತ್ಪನ್ನ ಮಾಡಲು ಅವಕಾಶ ನೀಡಿತ್ತು. ಆದರೆ, ಇದಕ್ಕೆ ಸಿಕ್ಕ ಪ್ರತಿಕ್ರಿಯೆ ಮಾತ್ರ ಅಷ್ಟಕಷ್ಟೆ.

ಅಬಕಾರಿ ಕಾಯಿದೆಗೆ ತಿದ್ದುಪಡಿ ತಂದು ನೀರಾ ಚಳವಳಿಗೆ ಅನುಮತಿ ನೀಡಿದ ಸರ್ಕಾರ, ಅದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಲು ಮೀನಮೇಷ ಎಣಿಸುತ್ತಿದೆ. ನೀರಾ ಅಭಿವೃದ್ಧಿ ಮಂಡಳಿ ಕನಸಾಗಿ ಉಳಿದಿದೆ.

| ಕೋಡಿಹಳ್ಳಿ ಚಂದ್ರಶೇಖರ್ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ