2020ಕ್ಕೆ ಸಿದ್ಧೇಗೌಡ ಬರ್ತಾನೆ ಕಾಯ್ರಪ್ಪೋ

ಬೆಂಗಳೂರು: ನಟ ನೀನಾಸಂ ಸತೀಶ್ ಕೆಲ ತಿಂಗಳ ಹಿಂದಷ್ಟೇ ಸಿನಿಮಾ ನಿರ್ವಣದ ಜತೆಗೆ ನಿರ್ದೇಶನ ಮಾಡುವುದಾಗಿಯೂ ಹೇಳಿಕೊಂಡಿದ್ದರು. ‘ಮೈ ನೇಮ್ ಈಸ್ ಸಿದ್ಧೇಗೌಡ’ ಶೀರ್ಷಿಕೆಯನ್ನೂ ಬಿಡುಗಡೆ ಮಾಡಿದ್ದರು. ಈಗ ಆ ಸಿನಿಮಾ ಬಗ್ಗೆ ಅಪ್​ಡೇಟೆಡ್ ಮಾಹಿತಿ ಲಭ್ಯವಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ‘..ಸಿದ್ಧೇಗೌಡ’ ಸಿನಿಮಾ ಸೆಟ್ಟೇರಿರಬೇಕಿತ್ತು. ಆದರೆ, ಆಗಿದ್ದೇ ಬೇರೆ! ಹಾಗಂತ ಸಿನಿಮಾ ನಿಂತೇ ಹೋಯಿತು ಎಂದುಕೊಳ್ಳುವಂತಿಲ್ಲ. ಕೈಯಲ್ಲಿರುವ ಸರಣಿ ಸಿನಿಮಾಗಳನ್ನು ಮುಗಿಸಿದ ಬಳಿಕ ‘..ಸಿದ್ಧೇಗೌಡ’ ಚಿತ್ರ ಶುರುಮಾಡಲಿದ್ದಾರಂತೆ ನೀನಾಸಂ ಸತೀಶ್. ಈ ವಿಷಯವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಈ ವರ್ಷ ಒಪ್ಪಿಕೊಂಡಿರುವ ‘ಬ್ರಹ್ಮಚಾರಿ’, ‘ಪರಿಮಳ ಲಾಡ್ಜ್’ ಮತ್ತು ಇನ್ನೊಂದು ಹೆಸರಿಡದ ಸಿನಿಮಾ ಕೆಲಸಗಳನ್ನು ಮುಗಿಸಿ ಬಿಡುಗಡೆ ಮಾಡುವ ಜವಾಬ್ದಾರಿ ಇದೆ. ಹಾಗಾಗಿ ನನ್ನ ನಿರ್ದೇಶನದ ‘ಮೈ ನೇಮ್ ಈಸ್ ಸಿದ್ಧೇಗೌಡ’ ಸಿನಿಮಾ ತಡವಾಗಲಿದೆ. ಅಂದರೆ 2020ಕ್ಕೆ ಈ ಚಿತ್ರದ ಕೆಲಸ ಶುರುವಾಗಲಿದೆ’ ಎಂದಿದ್ದಾರೆ. ಈಗಾಗಲೇ ಚಿತ್ರೀಕರಣೋತ್ತರ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ‘ಗೋದ್ರಾ’ ಇದೇ ವರ್ಷದಲ್ಲಿ ಬಿಡುಗಡೆ ಆಗಲಿದೆ. ಅದಿತಿ ಪ್ರಭುದೇವ ಜತೆಗಿನ ‘ಬ್ರಹ್ಮಚಾರಿ’ ಚಿತ್ರವೂ ಚಿತ್ರೀಕರಣ ಮುಗಿಸಿಕೊಂಡಿದೆ. ಟೀಸರ್ ಮೂಲಕವೇ ಸಖತ್ ಸದ್ದು ಮಾಡಿದ್ದ ‘ಪರಿಮಳ ಲಾಡ್ಜ್’ ಕೆಲಸಗಳಲ್ಲೂ ಸತೀಶ್ ಬಿಜಿಯಾಗಿದ್ದಾರೆ. ಹಾಗಾಗಿ ನಿರ್ದೇಶನ, ನಿರ್ಮಾಣ ಮತ್ತು ನಾಯಕನಾಗಿಯೂ ನಟಿಸಬೇಕಿರುವ ‘..ಸಿದ್ಧೇಗೌಡ’ ಚಿತ್ರವನ್ನು ಮುಂದೂಡಿದ್ದಾರೆ. ಮಂಡ್ಯ ಶೈಲಿಯ ಸೊಗಡಿನಲ್ಲಿ ಸಿನಿಮಾ ಸಾಗಲಿದ್ದು, ಸಿದ್ಧೇಗೌಡ ಅನ್ನೋ ವ್ಯಕ್ತಿ ಜಾತಿ-ಧರ್ಮದ ಗಡಿ ಮೀರಿ ಹೇಗೆ ಬೆಳೆಯುತ್ತಾನೆ ಎಂಬುದೇ ಚಿತ್ರದ ಕಥೆ.

Leave a Reply

Your email address will not be published. Required fields are marked *