ಖುಷಿಯಾಗಿರುವುದ ಕಲಿಸಬೇಕಿದೆ!

(ಹಿಂದಿನ ಸಂಚಿಕೆಯಿಂದ…)

ಬದುಕಿಗಾಗಿ ಉದ್ಯೋಗ, ಮನೆ, ವಾಹನ ಹಾಗೂ ಬೇರೆ ಎಲ್ಲ ವ್ಯವಸ್ಥೆಗಳೇ ಹೊರತು ಅವೆಲ್ಲವನ್ನು ನಿರ್ವಹಿಸಲಿಕ್ಕಾಗಿ ನಮ್ಮ ಬದುಕಲ್ಲ. ನಮ್ಮ ವಾಸ್ತವ್ಯಕ್ಕಾಗಿ ಮನೆಯೇ ಹೊರತು ಮನೆಯ ನಿರ್ವಹಣೆಗಾಗಿ ನಾವಲ್ಲ. ಹೀಗಾಗಿ, ದೈನಂದಿಕ ಕೆಲಸದಲ್ಲಿ ಕಳೆದು ಹೋಗದೆ, ಸಮಾಧಾನ, ಸಂತೃಪ್ತಿಯಂತಹ ಉತ್ತಮ ಸ್ವಭಾವಗಳನ್ನು ಅಳವಡಿಸಿಕೊಂಡು, ಅನುಭವಿಸುತ್ತ ಅಭಿವ್ಯಕ್ತಿ ಮಾಡುವುದನ್ನು ಕಲಿಯಬೇಕು. ಪ್ರತಿದಿನ ಕೆಲವು ನಿಮಿಷಗಳಾದರೂ ಪರಸ್ಪರ ಮಾತುಕತೆ, ನಗು, ವಿಶ್ರಾಂತಿ, ತಮಾಷೆ ಇವುಗಳಿಗೆ ಆಸ್ಪದ ಕೊಡಲೇಬೇಕು. ಹಾಗಿಲ್ಲದೆ ಏನೋ ಕಳೆದುಕೊಂಡವರಂತೆ, ಏನೋ ಗಳಿಸುವಿಕೆಯ ಹಪಾಹಪಿಯಲ್ಲಿ ಇದ್ದುಬಿಟ್ಟರೆ ಮನೆಯಲ್ಲಿ ಉದ್ವೇಗ, ಅವಸರದ ವಾತಾವರಣ ನಿರ್ವಣವಾಗುತ್ತದೆ. ಆದ್ದರಿಂದ ಪ್ರಯತ್ನಪೂರ್ವಕ ಸಂತೋಷ ನಿರ್ಮಾಣ ಅನಿವಾರ್ಯ.

2) ಇನ್ನೊಂದು ಮುಖ್ಯ ವಿಧಾನವೆಂದರೆ ಮಕ್ಕಳು ಪ್ರಯತ್ನ ಮಾಡಲಿ ಎಂದು ನಿರೀಕ್ಷಿಸಬೇಕೇ ಹೊರತು ಅದರಲ್ಲಿ ಪರ್ಫೆಕ್ಷನ್ ಅಲ್ಲ. ಅಂದರೆ ಮಕ್ಕಳು ಕೆಲಸ ಮಾಡುವುದರಲ್ಲಿ ಪಾಲ್ಗೊಳ್ಳಬೇಕು ಹೊರತು ಅದನ್ನು ಸರಿಯಾಗಿ ಮಾಡದಿದ್ದಲ್ಲಿ ತೀವ್ರವಾಗಿ ಅವರ ಮೇಲೆ ಸಿಡಿಮಿಡಿಕೊಳ್ಳಬಾರದು. ಆಗ ಅವರು ಕೆಲಸ ಮಾಡುವ ಆಸಕ್ತಿ ಕಳೆದುಕೊಳ್ಳುತ್ತಾರೆ. ಪುನಃ ಪ್ರಯತ್ನ ಪಡೆದೆ ಹಿಂದಕ್ಕೆ ಉಳಿಯಲು ಪ್ರಾರಂಭಿಸುತ್ತಾರೆ ಅಥವಾ ನೆಪ ಒಡ್ಡುತ್ತಾರೆ. ಮನುಷ್ಯನ ಮನಸ್ಸು ಕ್ರಿಯಾಶೀಲವಾಗಿದ್ದಲ್ಲಿ ಹೊಸ ಹೊಸ ವಿಧಾನದಲ್ಲಿ ಕೆಲಸ ಮಾಡಲು ಪ್ರಯತ್ನಿಸುತ್ತದೆ. ಹೆಚ್ಚು ಉಲ್ಲಾಸದಿಂದ ಕೂಡಿರುತ್ತದೆ. ಅವರಿಗೆ ವಿಶೇಷ ಜವಾಬ್ದಾರಿ, ಅವರೇ ನಿರ್ಧಾರ ತೆಗೆದುಕೊಳ್ಳಬಹುದಾದ ಸಣ್ಣ ಸಣ್ಣ ಕೆಲಸಗಳನ್ನು ವಹಿಸಬೇಕು ಮತ್ತು ಅವರೇ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಇದರಿಂದ ಅವರಲ್ಲಿ ಲವಲವಿಕೆ ತುಂಬುತ್ತದೆ. ಯಶಸ್ಸಿಗಿಂತ ಸರಿಯಾದ ಪ್ರಯತ್ನ ಮುಖ್ಯ.

3) ಇನ್ನೊಂದು ವಿಧಾನವೆಂದರೆ ಪ್ರತಿ ಸ್ಥಿತಿಯನ್ನೂ ಸಕಾರಾತ್ಮಕವಾಗಿ ನೋಡುವುದು. ಯಾವಾಗ ಈ ಸ್ವಭಾವ ತಾಯಿ ತಂದೆಯಲ್ಲಿಯೂ ಕಾಣುತ್ತದೆಯೋ ಆಗ ಮಕ್ಕಳೂ ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳುತ್ತಾರೆ. ಸಣ್ಣಪುಟ್ಟ ತೊಂದರೆ ಆದಾಗ ಅಥವಾ ಯಾವುದಾದರೂ ಸೋಲು ಉಂಟಾದಾಗ ಯಾವ ತಪ್ಪಿನಿಂದ ಯಾವ ಪಾಠ ಕಲಿಯಬಹುದು ಎಂದು ವಿಮಶಿಸಿಕೊಂಡು ಇದರಲ್ಲಿ ಯಾವ ಹೊಸ ದಾರಿ ಇದೆ ಎನ್ನುವುದನ್ನು ವಿಶ್ಲೇಷಣೆ ಮಾಡಬೇಕು. ನಂತರ ಸೋಲು, ನೋವನ್ನು ಮರೆತು ಸಕಾರಾತ್ಮಕ ದೃಷ್ಟಿಕೋನದಿಂದ ಪ್ರಯತ್ನ ಪ್ರಾರಂಭಿಸಬೇಕು ಇಂತಹ ನಡವಳಿಕೆ ಪಾಲಕರಲ್ಲಿ ಬಂದಾಗ ಮಕ್ಕಳಲ್ಲೂ ಅದು ಪ್ರತಿಫಲನಗೊಳ್ಳುತ್ತದೆ.

ಎಲ್ಲಕ್ಕಿಂತ ಮುಖ್ಯವಾದ ಮಾಧ್ಯಮವೆಂದರೆ, ಸಂತೃಪ್ತಿ ಮತ್ತು ಧನ್ಯತಾಭಾವ. ಜೀವನದ ಪ್ರತಿಯೊಂದು ಯಶಸ್ಸಿಗೂ ಧನ್ಯವಾದ, ಅರ್ಪಣೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.

ಈ ವಿಶ್ವ, ಪ್ರಕೃತಿ ಅಥವಾ ಅವರವರ ನಂಬಿಕೆಗೆ ಅನುಗುಣವಾಗಿ ದೇವರು, ಗುರುಗಳಿಗೆ ಯಶಸ್ಸನ್ನು ಗಳಿಸುವ ಸಾಮರ್ಥ್ಯ ಕೊಟ್ಟಿದ್ದಕ್ಕಾಗಿ ಧನ್ಯವಾದ ಅರ್ಪಿಸುವ ಸ್ವಭಾವ ರೂಪುಗೊಳ್ಳಬೇಕು.

ವಾಸ್ತವವಾಗಿ ನಮ್ಮೆಲ್ಲ ಸಾಮರ್ಥ್ಯಳನ್ನು ನಾವು ಪ್ರಕೃತಿಯಿಂದ ಎರವಲು ಪಡೆದದ್ದೇ ಹೊರತು ಸ್ವಯಾರ್ಜಿತವಲ್ಲ.

ಭನನ್ನ ಯಶಸ್ಸು ನನ್ನಿಂದ ಮಾತ್ರ ಆಗಿದೆ ಎನ್ನುವ ಅಹಂಕಾರ ಮೂಡಿದಾಗ ಮನುಷ್ಯನಲ್ಲಿ ಅಭದ್ರತೆ ಮೂಡುತ್ತದೆ. ಇದರಿಂದ ಮಾನಸಿಕ ಅಶಾಂತಿ, ಅಸಂತೋಷ ಉಂಟಾಗುತ್ತದೆ.

ನಂಬಿಕೆಗೆ ಅನುಗುಣವಾಗಿ ಪ್ರಾರ್ಥನೆ, ಕೃತಜ್ಞತೆಯ ಅರ್ಪಿಸುವುದು ಮನುಷ್ಯನಲ್ಲಿ ಸಂತೋಷವನ್ನು ಹೆಚ್ಚಿಸುವ ಸಾಧನಗಳಾಗಿವೆ. ಏನು ಸಿಕ್ಕಿಲ್ಲ ಎಂದು ಕೊರಗುವುದಕ್ಕಿಂತ ಏನೆಲ್ಲ ಸಿಕ್ಕಿದೆ ಎಂದು ಸಂಭ್ರಮಿಸುವ ಸ್ವಭಾವ ಮೊದಲು ದೊಡ್ಡವರಲ್ಲಿ ಬರಬೇಕು.

ತಮ್ಮಲ್ಲಿ ಬೇರೆಯವರಿಗಿಂತ ಏನೋ ಕೊರತೆ ಇದೆ ಎಂದು ಲೆಕ್ಕ ಹಾಕುವವರು ಅಸಂತೋಷಿಗಳಾಗಿರುತ್ತಾರೆ. ಅನೇಕರಿಗೆ ಹೋಲಿಸಿದಾಗ ತಮ್ಮ ಬದುಕಿನಲ್ಲಿ ಹೆಚ್ಚಿನ ಅನುಕೂಲಗಳಿವೆ ಎನ್ನುವವರು ಪರೋಪಕಾರಿ ಮತ್ತು ಆತ್ಮಸಂತೋಷ ಹೊಂದಿದವರು ಆಗಿರುತ್ತಾರೆ.

ಸಂತೋಷ ಹೊರಗಿನವರು ನೀಡುವಂಥದ್ದಲ್ಲ, ನಮ್ಮೊಳಗೆ ರೂಪುಗೊಳ್ಳಬೇಕಾದ ಹವ್ಯಾಸ

ಎನ್ನುವ ಕಟುಸತ್ಯವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಿ. ಯಾವ ಕಾರಣಕ್ಕೂ ನೀನು ಸಂತೋಷ ಕೊಟ್ಟಿಲ್ಲ, ಅದಕ್ಕೆ ನಿನಗೆ ಇಂತಹ ಶಿಕ್ಷೆ ಅಥವಾ ನೀನು ನನ್ನನ್ನು ಸಂತೋಷಪಡಿಸಿದಕ್ಕೆ ನಾನು ನಿನಗೆ ಇಂಥದ್ದನ್ನು ಕೊಡುತ್ತೇನೆ ಎನ್ನುವ ವ್ಯವಹಾರ ಮಾಡಬೇಡಿ. ನಮ್ಮನ್ನು ಸಂತೋಷವಾಗಿ ಇಟ್ಟುಕೊಳ್ಳಬೇಕಾದವರು ನಾವೇ ಹೊರತು ಬೇರೆಯವರಲ್ಲ, ಏಕೆಂದರೆ ಇದೊಂದು ಹವ್ಯಾಸ.