ಅಕ್ರಮ ಕಸಾಯಿಖಾನೆಗೆ ಬೇಕು ಕಡಿವಾಣ

ವಿಜಯವಾಣಿ ವಿಶೇಷ ಅಕ್ಕಿಆಲೂರ

ಪಟ್ಟಣದಲ್ಲಿ ದಿನೇ ದಿನೆ ಅನಧಿಕೃತ ಕಸಾಯಿಖಾನೆಗಳು ತಲೆ ಎತ್ತುತ್ತಿದ್ದರೂ ಸ್ಥಳೀಯ ಗ್ರಾ.ಪಂ. ಆಡಳಿತ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಳಗಿನ ಓಣಿ ಚನ್ನವೀರೇಶ್ವರ ನಗರ, ಕೊರಚರ ಓಣಿ, ಹಾವೇರಿ ರಸ್ತೆ, ಇನ್ನಿತರ ಕಡೆಗಳಲ್ಲಿ ತಗಡಿನ ಶೆಡ್​ಗಳಲ್ಲಿ ನಿರ್ಮಾಣ ಮಾಡಿಕೊಂಡಿರುವ ಕಸಾಯಿಖಾನೆಗಳಲ್ಲಿ ಕಟಮಾ, ಟಾಟಾಎಸ್ ವಾಹನಗಳ ಮೂಲಕ ದನಗಳನ್ನು ತಂದು ಕಡಿಯಲಾಗುತ್ತಿದೆ. ಮಾಂಸವನ್ನು ವಿಂಗಡಿಸಿ ಮಾರುಕಟ್ಟೆಗೆ ಸಾಗಿಸುವ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ.

ಕಳೆದ ಮೂರು ವರ್ಷಗಳಿಂದೀಚೆಗೆ ಕಸಾಯಿಖಾನೆಗಳು ಹೆಚ್ಚುತ್ತಿವೆ. ಗ್ರಾ.ಪಂ. ಅನುಮತಿ ಪಡೆಯದೇ ರಾಜಾರೋಷವಾಗಿ ತಲೆ ಎತ್ತುತ್ತಿವೆ. ಹೀಗಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಕ್ಯಾರೇ ಎನ್ನದಿರುವುದು ಪ್ರಜ್ಞಾವಂತರ ಬೇಸರಕ್ಕೆ ಕಾರಣವಾಗಿದೆ.

ದುರ್ನಾತ: ಸ್ಥಳೀಯ ಚನ್ನವೀರೇಶ್ವರ ವಿರಕ್ತಮಠದ ಆವರಣಕ್ಕೆ ಹತ್ತಿಕೊಂಡಿರುವ ಕಸಾಯಿಖಾನೆಯಿಂದ ಗಬ್ಬು ವಾಸನೆ ಹೊರಸೂಸುತ್ತಿದ್ದು, ಸ್ಥಳೀಯ ನಿವಾಸಿಗಳು ರೋಸಿ ಹೋಗಿದ್ದಾರೆ. ವಾರದ ಸಂತೆ ದಿನವಾದ ಮಂಗಳವಾರ ನಡೆಯುವ ಜಿಲ್ಲೆಯ ಪ್ರಸಿದ್ಧ ಸ್ಥಳೀಯ ಜಾನುವಾರು ಮಾರುಕಟ್ಟೆಯಿಂದ ಕಸಾಯಿಖಾನೆಗಳಿಗೆ ದನಗಳನ್ನು ಸಾಗಿಸಲಾಗುತ್ತಿದೆ. ಆ ಮಾಂಸವನ್ನು ಮಾರುಕಟ್ಟೆಯಲ್ಲಿ ಬಹಿರಂಗವಾಗಿಯೇ ಮಾರಾಟ ಮಾಡುತ್ತಿದ್ದರೂ ಸಂಬಂಧಿಸಿದವರು ಕ್ರಮಕ್ಕೆ ಮುಂದಾಗುತ್ತಿಲ್ಲ.

ಗ್ರಾ.ಪಂ.ನಲ್ಲಿ ಬಿಜೆಪಿ ಆಡಳಿತವಿದ್ದರೂ ಅಕ್ರಮ ಮಾಂಸ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಸ್ವತಃ ಬಿಜೆಪಿ ಕಾರ್ಯಕರ್ತರಲ್ಲೇ ಅಸಮಾಧಾನ ಮೂಡಿಸಿದೆ.

ಉಪಾಧ್ಯಕ್ಷರ ಮನೆ ಪಕ್ಕವೇ..!: ಕೆಳಗಿನ ಓಣಿಯಿಂದ ಚನ್ನವೀರೇಶ್ವರ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಗ್ರಾ.ಪಂ. ಉಪಾಧ್ಯಕ್ಷೆ ಸರೋಜ ಪಾಟೀಲ ಅವರ ಮನೆ ಪಕ್ಕದಲ್ಲೇ ಕಾನೂನುಬಾಹಿರವಾಗಿ 10 ವರ್ಷಗಳಿಂದ ಕಸಾಯಿಖಾನೆ ಕಾರ್ಯನಿರ್ವಹಿಸುತ್ತಿದೆ. ಆದರೂ, ಉಪಾಧ್ಯಕ್ಷರು ಮೌನ ವಹಿಸಿರುವುದು ಆಶ್ಚರ್ಯ ಮೂಡಿಸಿದೆ.

ಸಾಯಿಖಾನೆಗಳಿಂದ ಬರುತ್ತಿರುವ ವಾಸನೆಯಿಂದ ಜೀವನ ರೋಸಿಹೋಗಿದೆ. ಸಂಬಂಧಪಟ್ಟವರಿಗೆ ಸಾಕಷ್ಟ ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಶೀಘ್ರ ಕಸಾಯಿಖಾನೆ ತೆರವುಗೊಳಿಸದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ.

| ಮಂಜುನಾಥ ಮ್ಯಾದರ
ಕೊರಚರ ಓಣಿ ನಿವಾಸಿ, ಬಿಜೆಪಿ ಯುವಮುಖಂಡ ಅಕ್ಕಿಆಲೂರ

ಧಿಕಾರಿಗಳು ಮತ್ತು ಸದಸ್ಯರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಸಾಯಿಖಾನೆ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ. ಆದರೆ, ಯಾವುದೇ ಪ್ರಕ್ರಿಯೆ ನಡೆದಿಲ್ಲ, ಸರ್ವ ಸದಸ್ಯರು ಅಧಿಕಾರಿಗಳ ಜೊತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ಪೊಲೀಸರೊಂದಿಗೆ ತೆರಳಿ ಕಸಾಯಿಖಾನೆಗಳನ್ನು ತೆರವುಗೊಳಿಸಲಾಗುವುದು.

| ಪ್ರದೀಪ ಶೇಷಗಿರಿ
ಗ್ರಾ.ಪಂ. ಅಧ್ಯಕ್ಷ