ಶಿಕ್ಷಣದಲ್ಲಿ ಹೊಸ ವಿಚಾರ ಸಂಶೋಧನೆ ಅಗತ್ಯ

ಹುಣಸೂರು: ಶಿಕ್ಷಣದಲ್ಲಿ ಹೊಸ ವಿಚಾರಗಳನ್ನು ಸಂಶೋಧಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಬೇಕಿದೆ ಎಂದು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ವತಿಯಿಂದ ‘ಮಾನವೀಯತೆ, ವಾಣಿಜ್ಯ ಮತ್ತು ವಿಜ್ಞಾನದಲ್ಲಿ ಉದಯೋನ್ಮುಖ ಪ್ರವೃತ್ತಿಗಳು’ ವಿಷಯ ಕುರಿತ ಒಂದು ದಿನದ ರಾಷ್ಟ್ರಮಟ್ಟದ ಸಮ್ಮೇಳನ ಮತ್ತು ಪ್ರಬಂಧ ಮಂಡನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣದ ಮೂಲ ಉದ್ದೇಶ ಉದ್ಯೋಗ ಪಡೆಯುವುದು. ದೇಶದಲ್ಲಿ ಮತ್ತು ವಿಶ್ವದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ ಜಾರಿಗೊಂಡ ಮೇಲೆ ಉದ್ಯೋಗಾವಕಾಶಗಳೂ ಹೆಚ್ಚಿವೆ. ಆದರೆ ಹೊಸ ಆವಿಷ್ಕಾರಗಳು, ವಿಷಯವಾರು ಸಂಶೋಧನೆಗಳು ಇನ್ನಷ್ಟು ಹೆಚ್ಚಿದಲ್ಲಿ ಮುಂಬರುವ ವಿದ್ಯಾರ್ಥಿಗಳ ಜೀವನ ಭದ್ರತಗೆ ಅದು ಪೂರಕವಾಗಲಿದೆ. ದೇಶದಲ್ಲಿ ಎಲ್ಲ ಕಡೆ ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಳ್ಳುತ್ತಿವೆ. ವಿಷಯವಾರು ಕೋರ್ಸ್‌ಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ಇರುವಂತೆ ಸಂಶೋಧನೆಗೆಳು ಆಗಬೇಕಿದೆ. ಕೌಶಲ, ವೃತ್ತಿಪರ ಶಿಕ್ಷಣ, ಇಂದಿನ ಶೈಕ್ಷಣಿಕ ಅಗತ್ಯದಲ್ಲಿ ಒಂದಾಗಿದೆ. ಪ್ರಬಂಧ ಮಂಡಿಸಲು ಬಂದಿರುವವರು ಈ ನಿಟ್ಟಿನಲ್ಲಿ ತಮ್ಮ ಸಂಶೋಧನೆ ನಡೆಸುವ ಮೂಲಕ ಬೆಳಕು ಚೆಲ್ಲಲಿ. ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಅನುಕೂಲವಾಗುವಂತೆ ಆಗಲಿ ಎಂದರು.

ಕೇರಳ ರಾಜ್ಯದ ಕಾಲಡಿಯ ಶ್ರೀಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಟಿ.ನಾರಾಯಣನ್ ಮಾತನಾಡಿ, ಸಂಶೋಧನೆಗಳು ಮಾನವೀಯತೆಯ ನೆಲೆಗಟ್ಟಿನಲ್ಲೇ ಆಗಬೇಕಿದೆ. ಜನರಲ್ಲಿ ಮೂಢನಂಬಿಕೆಯನ್ನು ತೊಗಲಿಸುವಂತಾಗಬೇಕು. ಯಾವುದೇ ವಿಷಯದ ಇತಿಹಾಸವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಅದರ ಆಧಾರದಡಿಯಲ್ಲೇ ಹೊಸತನ್ನು ಹುಡುಕುವ ಅವಶ್ಯಕತೆಯಿದೆ. ತಂತ್ರಜ್ಞಾನ ಬೆಳೆದಿದೆ. ಇಂಟರ್‌ನೆಟ್‌ನಲ್ಲಿ ನಮ್ಮಿಂದ ನಮಗೆ ತಿಳಿಯದ ಹಾಗೆ ನಮ್ಮ ವಿಷಯಗಳನ್ನು ಪಡೆಯುವ ಫಿಲ್ಟರ್ ಬಬ್ಬಲ್ ತಂತ್ರಜ್ಞಾನದ ಕುರಿತು ಎಚ್ಚರ ವಹಿಸಬೇಕು. ದಿನದಿನಕ್ಕೂ ಆಯಾ ಪ್ರದೇಶದ ಸ್ಥಳೀಯ ಇತಿಹಾಸ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದೆ. ನಮ್ಮದು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಏಕತೆಯೆನ್ನುವುದು ಕೇವಲ ಪ್ರಜೆಗಳಲ್ಲಿ ಮಾತ್ರವಲ್ಲ. ದೇವರ ನಂಬಿಕೆಯಲ್ಲೂ ಇರಲಿ. ಇತ್ತೀಚಿನ ಕೇರಳದ ಶಬರಿಮಲೆ ಪ್ರಕರಣ ನಮ್ಮೆಲ್ಲರ ಕಣ್ಣು ತೆರೆಯಿಸಲಿ. ಸರಿ ತಪ್ಪುಗಳನ್ನು ಎಲ್ಲರೂ ಅರಿತು ಮುನ್ನಡೆದಲ್ಲಿ ಮಾತ್ರ ಪ್ರಗತಿ ಸಾಧ್ಯ. ಈ ದಿಶೆಯಲ್ಲಿ ಪ್ರಬಂಧಕಾರರು ಹೊಸ ವಿಚಾರಗಳನ್ನು ಪ್ರಸ್ತಾಪಿಸುವಾಗ ಎಲ್ಲರನ್ನೂ ಒಳಗೊಂಡ ಸಿದ್ಧಾಂತವನ್ನು ಪ್ರತಿಪಾದಿಸುವುದು ಸೂಕ್ತವೆಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ವೆಂಕಟೇಶಯ್ಯ, ಸಿಡಿಸಿ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್ ಮಾತನಾಡಿದರು. ಐಕ್ಯೂಎಸಿ ಸಂಚಾಲಕ ಡಾ.ಬಿ.ಸಿ.ಸುರೇಶ್, ಅಧ್ಯಾಪಕರಾದ ಭೋಜೇಗೌಡ, ಡಾ.ಚಂದ್ರಕಾಂತ್, ಡಾ.ಕೃಷ್ಣಮೂರ್ತಿ ಮಯ್ಯ, ಡಾ.ಕನಕಮಾಲಿನಿ, ಡಾ.ಕೆ.ಎನ್.ಮೋಹನ್ ಇತರರಿದ್ದರು.
ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು 220ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದರು.