ಶಿರೂರಿಗೆ ಬೇಕಿದೆ ಶಾಶ್ವತ ನೀರು ಯೋಜನೆ

ನರಸಿಂಹ ನಾಯಕ್ ಬೈಂದೂರು
ಇಲ್ಲಿನ ಜನರಿಗೆ ಬೇಸಿಗೆ ಬಂತೆಂದರೆ ಊರು ಬಿಟ್ಟು ಹೋಗಬೇಕೆನ್ನುವ ಪರಿಸ್ಥಿತಿ. ಮಳೆಗಾಲದಲ್ಲೇ ಕುಡಿಯುವ ನೀರಿಗೆ ಪ್ರಯಾಸ ಪಡಬೇಕಾದ ಇವರಿಗೆ ಬೇಸಿಗೆ ಕಳೆಯುವುದೆಂದರೆ ನಿತ್ಯ ಯಾತನೆಯ ದಿನಗಳು. ಜಿಲ್ಲೆಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಾಗಿರುವ ಶಿರೂರಿನ ಕಳಿಹಿತ್ಲು, ಕರಾವಳಿ, ದೊಂಬೆ, ಬುಕಾರಿ ಕಾಲನಿ, ಹಡವಿನಕೋಣೆ, ಕೆಸರಕೋಡಿ, ಕರಿಕಟ್ಟೆ, ಆರ್ಮಿ ಮುಂತಾದ ಪ್ರದೇಶಗಳು ನೀರಿಲ್ಲದೆ ಟ್ಯಾಂಕರ್ ನೀರು ಅವಲಂಬಿಸಬೇಕಾಗಿದೆ.

ಸಾಕಾರಗೊಳ್ಳದ ಶಾಶ್ವತ ಯೋಜನೆಗಳು: ವಿಶಾಲ ವ್ಯಾಪ್ತಿ ಹೊಂದಿರುವ ಶಿರೂರಿಗೆ ನೀರು ಸರಬರಾಜು ಪ್ರತಿ ಬೇಸಿಗೆಯಲ್ಲೂ ಸಮಸ್ಯೆ. ಹಲವು ವರ್ಷಗಳಿಂದ ಶಾಶ್ವತ ಯೋಜನೆಗಳ ಬಗ್ಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಪ್ರಯತ್ನಿಸದ ಪರಿಣಾಮ ಪ್ರತಿ ಬೇಸಿಗೆಯಲ್ಲಿ ಬಿಂದಿಗೆ ಹಿಡಿದು ನೀರಿಗಾಗಿ ಕಾಯಬೇಕಾದ ದುಸ್ಥಿತಿ. ಗ್ರಾಮದಲ್ಲಿ 25ರಿಂದ 30,000 ಜನಸಂಖ್ಯೆಯಿದೆ. 34 ಬೋರ್‌ವೆಲ್, 28 ತೆರೆದ ಬಾವಿಗಳಿದ್ದರೂ ನೀರು ಸರಬರಾಜು ಕಷ್ಟ. ಕಾರಣ ರೈಲ್ವೆ ಮಾರ್ಗ ಹಾದುಹೋದ ಬಹುತೇಕ ಕಡೆ ಪೈಪ್‌ಲೈನ್ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. 2015ರಲ್ಲಿ ಶಿರೂರಿಗೆ ಆಗಮಿಸಿದ ಪಂಚಾಯತ್‌ರಾಜ್ ಸಚಿವರು ಸಮುದ್ರದ ಉಪ್ಪು ನೀರು ಸಂಸ್ಕರಿಸಿ ಸಿಹಿ ನೀರಾಗಿ ಮಾರ್ಪಡಿಸುವ ಯೋಜನೆ ಸ್ಥಾಪಿಸುವ ಭರವಸೆ ನೀಡಿದ್ದರು. ಆದರೆ ಅದನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆದಿಲ್ಲ. ಶಿರೂರು, ಪಡುವರಿ, ಯಡ್ತರೆ, ಬೈಂದೂರು ಸೇರಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತು 10 ವರ್ಷಗಳಿಂದ ಚರ್ಚೆಯಾಗುತ್ತಿರುವುದು ಬಿಟ್ಟರೆ ಕೆಲಸ ನಡೆದಿಲ್ಲ. ಹೀಗಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಹಲವು ಅವಕಾಶಗಳಿದ್ದರೂ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಕಾಡುತ್ತಿದೆ.

ನೀರಾವರಿ ಯೋಜನೆಗೆ ಬೇಕಿದೆ ಒತ್ತು: ಶಿರೂರಿನಲ್ಲಿ ಮೂರು ಕೆರೆಗಳು, ನಾಲ್ಕು ಹೊಳೆ, ತೊರೆಗಳು ಈ ವರ್ಷ ಬಹಳ ಬೇಗ ಬತ್ತಿಹೋಗಿವೆ. ಅಂರ್ತಜಲ ವೃದ್ಧಿಯಾಗಬೇಕಾದರೆ ಚೆಕ್‌ಡ್ಯಾಂ, ಕೆರೆಗಳ ಹೂಳೆತ್ತುವುದು ಹಾಗೂ ಬಾವಿ ನಿರ್ಮಾಣಕ್ಕೆ ಒತ್ತು ಕೊಡಬೇಕಾಗಿದೆ. ಪ್ರತಿವರ್ಷ ಗ್ರಾಪಂ ಮಾತ್ರವಲ್ಲದೆ ಸ್ಥಳೀಯ ದಾನಿಗಳು ಕೂಡ ಉಚಿತವಾಗಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಈ ವರ್ಷ ದಾನಿಗಳಿಂದ ಎರಡು ಬೋರ್‌ವೆಲ್ ದುರಸ್ತಿ, ಐದಕ್ಕೂ ಅಧಿಕ ಬಾವಿ ದುರಸ್ತಿ ಮಾಡಲಾಗಿದೆ. ಬತ್ತಿಹೋದ ಸರ್ಕಾರಿ ಬಾವಿಗಳ ಹೂಳು ತೆಗೆದು ರಿಂಗ್ ಅಳವಡಿಸುವ ಕಾರ್ಯ ಎಂ.ಎಂ. ಹೌಸ್ ವತಿಯಿಂದ ನಡೆಯುತ್ತಿದೆ. ಪ್ರತಿವರ್ಷ ಸಮಸ್ಯೆ ಕಾಡುವುದರಿಂದ ಶಾಶ್ವತ ಪರಿಹಾರ ಬೇಕು. ಪೈಪ್‌ಲೈನ್ ದುರಸ್ತಿ ಮೂಲಕ ಮನೆ ಮನೆಗೆ ನಳ್ಳಿ ಕಲ್ಪಿಸಬೇಕು, ಟ್ಯಾಂಕರ್ ವ್ಯವಸ್ಥೆ ಪರಿಪೂರ್ಣವಾಗಬೇಕು. ಊರಿನಲ್ಲಿರುವ ತೋಡು, ಕೆರೆ, ಹಳ್ಳಗಳ ಹೂಳೆತ್ತಬೇಕು ಎಂಬುದು ಜನರ ಬೇಡಿಕೆ.

ಶಿರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. 20 ಟ್ರಿಪ್‌ನಂತೆ ಪ್ರತಿದಿನ 80 ಸಾವಿರ ಲೀಟರ್ ನೀರು ಪೂರೈಕೆಯಾಗುತ್ತಿದೆ. ಪಂಚಾಯಿತಿ ನೀರಿನ ಸಮಸ್ಯೆ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದೆ. ಜನರಿಗೆ ತೊಂದರೆಯಾಗದಂತೆ ನೀರು ಪೂರೈಕೆ ಮಾಡಲಾಗುತ್ತಿದೆ. ಶಾಶ್ವತ ಯೋಜನೆಗಳ ಬಗ್ಗೆ ಮುಂದಿನ ದಿನದಲ್ಲಿ ಸರ್ಕಾರದ ಸಹಕಾರದಿಂದ ಪ್ರಯತ್ನಿಸಲಾಗುವುದು.
ದಿಲ್‌ಶಾದ್ ಬೇಗಂ ಅಧ್ಯಕ್ಷರು ಗ್ರಾಪಂ ಶಿರೂರು

ಕುಡಿಯುವ ನೀರು ಪ್ರತಿ ವರ್ಷದ ಸಮಸ್ಯೆ. ಪಂಚಾಯಿತಿ ಸಮರ್ಪಕ ಹಾಗೂ ಶಾಶ್ವತ ಪರಿಹಾರದ ಬಗ್ಗೆ ಚಿಂತಿಸಬೇಕು. ಕಳಿಹಿತ್ಲು, ಮುದ್ರಮಕ್ಕಿ, ಹಡವಿನಕೋಣೆ ಮುಂತಾದ ಕಡೆ ಉಪ್ಪು ನೀರಿನಿಂದಾವೃತವಾದ ಪ್ರದೇಶಗಳಿಗೆ ಪ್ರಾಧಾನ್ಯತೆ ನೀಡಬೇಕು. ನೀರು ಪೋಲಾಗದ ಹಾಗೆ ಗಮನ ಹರಿಸಬೇಕು. ಶಾಶ್ವತ ಪರಿಹಾರವಾಗಬೇಕಾದರೆ ಉತ್ತಮ ಸ್ಥಳದಲ್ಲಿ ದೊಡ್ಡ ಬಾವಿ ನಿರ್ಮಿಸಬೇಕು. ಕ್ರಿಯಾತ್ಮಕ ಚಿಂತನೆ ಬೇಕು.
ಗಿರಿ, ಶಿರೂರು ನಿವಾಸಿ

ಸಾಂಪ್ರದಾಯಿಕ ಪದ್ಧತಿ ಜಲಮೂಲ ಶೋಧ
ಕೊಕ್ಕರ್ಣೆ: ಇತ್ತೀಚೆಗಿನ ವರ್ಷಗಳಲ್ಲಿ ಅಂತರ್ಜಲ ಪ್ರಮಾಣ ಕುಸಿತವಾಗುತ್ತಿದೆ. ವೈಜ್ಞಾನಿಕ ರೀತಿ ಬೋರ್‌ವೆಲ್ ನಿರ್ಮಿಸುವುದರಿಂದ ಧನಾತ್ಮಕ ಪರಿಣಾಮವಿದೆ ಎಂದು ಜನ ಭಾವಿಸಿದ್ದರೂ ಅದರಿಂದ ತಾತ್ಕಾಲಿಕ ಪರಿಣಾಮ ಮಾತ್ರ ಸಿಗುತ್ತಿದೆ.

ಸಂಪ್ರದಾಯಿಕ ಪದ್ಧತಿಯ ಜಲಮೂಲಗಳ ರಕ್ಷಣೆಯಿಂದ ಅಂತರ್ಜಲ ಹಿಡಿದಿಟ್ಟುಕೊಳ್ಳಬಹುದು. ನಾಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿಯಾರು ನಾರಾಯಣ ಎಂಬುವರು 40 ವರ್ಷಗಳಿಂದ ಜಲಮೂಲ ಶೋಧಿಸಿ, ಬಾವಿ, ಕೆರೆ ನಿರ್ಮಿಸುವಲ್ಲಿ ಪರಿಣಿತರಾಗಿದ್ದಾರೆ. 23ನೇ ವಯಸ್ಸಿನಿಂದ ಪ್ರಾರಂಭಿಸಿದ ಜಲಶೋಧನೆಯ ಕಾರ್ಯ ಮತ್ತು ಬಾವಿ ರಚನೆಗಳಲ್ಲಿ ಪರಿಣತಿ ಹೊಂದಿ 63ರಿಳಿ ವಯಸ್ಸಲ್ಲೂ ಈ ವೃತ್ತಿ ಮುಂದುವರಿಸಿದ್ದಾರೆ.

ಈ ತನಕ ಸುಮಾರು 150ಕ್ಕೂ ಅಧಿಕ ಬಾವಿ ನಿರ್ಮಾಣ ಮಾಡಿದ್ದು, 3500ಕ್ಕೂ ಅಧಿಕ ಕಡೆ ಜಲಶೋಧನೆ ಮಾಡಿದ್ದಾರೆ. ಉಡುಪಿ ಜಿಲ್ಲೆಯ ನಾಲ್ಕೂರು, ಮುದ್ದೂರು, ಮಿಯಾರು, ನಂಚಾರು, ಕೊಕ್ಕರ್ಣೆ, ಮಂದಾರ್ತಿ, ಹಳ್ಳಾಡಿ, ನೈಲಕಾಡಿ, ಆವರ್ಸೆ, ಕಾರ್ಕಳ, ಗೋಳಿಯಂಗಡಿ, ಸಿದ್ದಾಪುರ, ಹರಿಖಂಡಿಗೆ, ನುಕ್ಕೂರು, ಸಂತೆಕಟ್ಟೆ, ಪೆರ್ಡೂರು, ಪಳ್ಳಿ, ಪೇತ್ರಿ ಮುಂತಾದ ಕಡೆ ಜಲ ಶೋಧನೆ ಮಾಡಿದ್ದಾರೆ.

ಬೋರ್‌ವೆಲ್ ಕೊರೆಯುವುದರಿಂದ ಅಂತರ್ಜಲ ಮಟ್ಟ ಕಡಿಮೆಯಾಗುತ್ತದೆ. ಅದು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವೂ ಅಲ್ಲ. ವೆಚ್ಚ ಅಧಿಕ. ಬಾವಿ ರಚನೆಯಿಂದ ಸಾಕಷ್ಟು ನೀರಿನ ಸಂಗ್ರಹವಾಗಿ ಅಂತರ್ಜಲ ವೃದ್ಧಿ ಮತ್ತು ಕುಡಿಯಲು ಯೋಗ್ಯ ನೀರು ದೊರೆಯುತ್ತದೆ. ಜಲಮರುಪೂರಣಕ್ಕೆ ಬಾವಿ ಕೆರೆಗಳು ಸಹಕಾರಿ.
ನಾರಾಯಣ ಮಿಯಾರು ನಾಲ್ಕೂರು ಜಲಶೋಧಕ

ಹೇನ್‌ಬೇರು ಕೆರೆಯಲ್ಲಿ ತುಂಬಿದೆ ಹೂಳು
ಬೈಂದೂರು: ಬೇಸಿಗೆ ಬಿಸಿಲು ಹೆಚ್ಚುತ್ತಿದ್ದಂತೆ ಬಹುತೇಕ ಕಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ಕೆಲವು ಕಡೆ ನೀರಿನ ಮೂಲ ಇಲ್ಲದೆ ಕೊರತೆಯಾದರೆ ಇನ್ನೂ ಕೆಲವು ಕಡೆ ಅವಕಾಶವಿದ್ದರೂ ಕೆರೆಗಳು ದುರಸ್ತಿಯಾಗದೆ ನೀರಿಗಾಗಿ ಪರಿತಪಿಸುವಂತಾಗಿದೆ. ಅಂಥ ಕೆರೆಗಳಲ್ಲಿ ಪ್ರಮುಖವಾಗಿರುವುದು ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಹೇನ್‌ಬೇರು ಕೆರೆ.

ಹೇನ್‌ಬೇರು ರಾಷ್ಟ್ರೀಯ ಹೆದ್ದಾರಿಯಿಂದ ಅನತಿ ದೂರದಲ್ಲಿರುವ ಗ್ರಾಮೀಣ ಪ್ರದೇಶ. 100ಕ್ಕೂ ಅಧಿಕ ಕುಟುಂಬಗಳು ಸಾವಿರಾರು ಎಕರೆ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದು ಇದೇ ಕೆರೆ ಅವಲಂಬಿಸಿದ್ದಾರೆ. ಇಲ್ಲಿನ ದೇವಸ್ಥಾನ ಸಮೀಪ ಎರಡು ಎಕರೆಗೂ ಹೆಚ್ಚು ವ್ಯಾಪ್ತಿಯಲ್ಲಿರುವ ಹೇನ್‌ಬೇರು ಕೆರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಬೇಸಿಗೆ ಅಂತ್ಯದವರೆಗೂ ನೀರು ತುಂಬಿರುವ ಈ ಮದಗ ನಿರ್ವಹಣೆ ಕೊರತೆಯಿಂದ ಹೂಳು ತುಂಬಿದೆ. ಬಹಳ ಹಿಂದೆ ಕುಂದಾಪುರ ಹಂಚಿನ ಕಾರ್ಖಾನೆಗೆ ಇಲ್ಲಿನ ಕೊಜೆ ಮಣ್ಣು ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ಕೆರೆಯಿಂದ ಪಡುವರಿ ಗ್ರಾಮದ ಕೃಷಿ ಭೂಮಿಗೆ ತೋಡಿನ ಮೂಲಕ ನೀರು ಸಾಗಿಸಲಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ ಸರ್ಕಾರ 15 ಲಕ್ಷ ರೂ. ವೆಚ್ಚದಲ್ಲಿ ಒಂದು ಪಾರ್ಶ್ವದ ದಂಡೆ ದುರಸ್ತಿ ಮಾಡಿತ್ತು. ಈ ಕೆರೆ ಅಭಿವೃದ್ಧಿಯಾದರೆ ಪಡುವರಿ ಗ್ರಾಮಕ್ಕೆ ಶಾಶ್ವತ ನೀರಿನ ಸಮಸ್ಯೆ ಪರಿಹಾರವಾಗಲಿದೆ ಮಾತ್ರವಲ್ಲ, ಸಾವಿರಾರು ಎಕರೆ ಕೃಷಿ ಚಟುವಟಿಕೆ ಪುನಃ ಆರಂಭಿಸಬಹುದು.

ಸರ್ಕಾರ ಕುಡಿಯುವ ನೀರು, ಹಳೆಯ ಕೆರೆಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ನೀಡುತ್ತಿದೆ. ಆದರೆ ಅವುಗಳು ಗುತ್ತಿಗೆದಾರರನ್ನು ಕೇಂದ್ರೀಕರಿಸಿ ವಿನಿಯೋಗವಾಗುತ್ತಿದೆಯೇ ಹೊರತು ಇಂಥ ಕೆರೆಗಳ ಬಗ್ಗೆ ಗಮನ ಹರಿಸಲಿಲ್ಲ. ಕೇವಲ ಕಟ್ಟಡ, ರಸ್ತೆ ಮಾತ್ರ ಅಭಿವೃದ್ಧಿಯಲ್ಲ, ಪರಿಸರಕ್ಕೆ ಪೂರಕ ಜಲಮೂಲಗಳ ರಕ್ಷಣೆ ಬಗ್ಗೆಯೂ ಜನನಾಯಕರು ಗಂಭೀರವಾಗಿ ಪರಿಗಣಿಸಬೇಕು. ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿದರೆ ನೀರಿನ ಸಮಸ್ಯೆಯಿಂದ ಮುಕ್ತಿ ಕಾಣಬಹುದು.

ಪಡುವರಿ ಗ್ರಾಮದ ಹೇನ್‌ಬೇರು ಕೆರೆ ಅತ್ಯಂತ ಪ್ರಾಚೀನ ಕೆರೆ. ಇದರ ಅಭಿವೃದ್ಧಿಯಾಗಬೇಕಾದರೆ ಸಾವಿರಾರು ಎಕರೆ ಕೃಷಿ ಭೂಮಿ ಹಸಿರಾಗಲಿದೆ. ಪಂಚಾಯಿತಿ ಅನುದಾನದಲ್ಲಿ ಇದರ ಪ್ರಗತಿ ಸಾಧ್ಯವಿಲ್ಲ. ಹೀಗಾಗಿ ಸಕಾರ ಮತ್ತು ಇಲಾಖೆ ಗಮನಹರಿಸಬೇಕು.
ಗಣೇಶ ಹೆಬ್ಬಾರ್ ಪಿಡಿಒ ಪಡುವರಿ ಗ್ರಾಪಂ

Leave a Reply

Your email address will not be published. Required fields are marked *