ನವದೆಹಲಿ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಹಾಮಾರಿ ಕರೊನಾ ಸೋಂಕನ್ನು ತಡೆಗಟ್ಟಲು ಲಾಕ್ಡೌನ್ ಒಂದೇ ಸಾಲುವುದಿಲ್ಲ. ಜನರನ್ನು ತೀವ್ರವಾಗಿ ಪರೀಕ್ಷೆಗೆ ಒಳಪಡಿಸುವುದು ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದವರ ಜಾಡನ್ನು ವೇಗವಾಗಿ ಪತ್ತೆ ಹಚ್ಚುವುದು ಕೂಡ ಲಾಕ್ಡೌನ್ ಅಷ್ಟೇ ಸರಿಸಮಾನವಾಗಿದೆ ಎಂದು ಕೇರಳದ ಹಣಕಾಸು ಸಚಿವ ಥಾಮಸ್ ಇಸಾಕ್ ಕೇಂದ್ರಕ್ಕೆ ಸಲಹೆ ನೀಡಿದ್ದಾರೆ.
ದೇಶದಲ್ಲಿ ಮೊದಲ ಕರೊನಾ ಪ್ರಕರಣ ಪತ್ತೆಯಾದ ರಾಜ್ಯ ಕೇರಳ. ಜನವರಿಯಲ್ಲೇ ಪ್ರಕರಣ ಬೆಳಕಿಗೆ ಬಂದಿತ್ತು. ಆರಂಭದಲ್ಲಿ ಕೇರಳದಲ್ಲಿ ಪ್ರಕರಣಗಳು ಹೆಚ್ಚಾದರೂ ಇದೀಗ ಭಾರಿ ಇಳಿಕೆ ಕಂಡಿದ್ದು, ಲಾಕ್ಡೌನ್ ಮಾತ್ರವಲ್ಲದೇ ಬೇರೆ ಮಾರ್ಗದಲ್ಲೂ ಕೋವಿಡ್ ವೈರಾಣು ತಗ್ಗಿಸಲು ಕೇರಳ ವೇಳಾಪಟ್ಟಿಯೊಂದನ್ನು ಸಿದ್ಧಪಡಿಸಿಕೊಂಡಿದೆ.
ದೇಶಾದ್ಯಂತ ಏಪ್ರಿಲ್ 14ರವರೆಗೆ 21 ದಿನಗಳ ಕಾಲ ಲಾಕ್ಡೌನ್ ಹೇರಲಾಗಿದ್ದು, ಅದನ್ನು ವಿಸ್ತರಿಸಲು ಅನೇಕ ರಾಜ್ಯಗಳು ಕೇಂದ್ರ ಸರ್ಕಾರದ ಬಳಿ ಕೋರಿವೆ. ಅದರಲ್ಲಿ ಕೇರಳವು ಒಂದಾಗಿದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ಏಪ್ರಿಲ್ 30ರವರೆಗೂ ಲಾಕ್ಡೌನ್ ವಿಸ್ತರಣೆ ಮಾಡಿ ಆಗಿದೆ.
ಇಡೀ ಸೋಂಕನ್ನು ತಡೆಗಟ್ಟುವವರೆಗೂ ಲಾಕ್ಡೌನ್ ಅನುಸರಿಸಲಾಗುವುದು. ಆದರೆ, ಈಗ ಲಾಕ್ಡೌನ್ ಒಂದೇ ಸಾಕಾಗಲ್ಲ. ತೀವ್ರವಾದ ಪರೀಕ್ಷೆ ಮತ್ತು ಸೋಂಕಿತರ ಸಂಪರ್ಕದಲ್ಲಿರುವವರನ್ನು ವೇಗವಾಗಿ ಪತ್ತೆ ಹಚ್ಚುವುದು ಹಾಗೂ ಅವರನ್ನು ಪ್ರತ್ಯೇಕವಾಗಿ ಇಡುವುದು ಕೂಡ ತುಂಬಾ ಮುಖ್ಯವಾಗಿದೆ ಎಂದು ಥಾಮಸ್ ಇಸಾಕ್ ಹೇಳಿದ್ದಾರೆ.
ಪರಿಸ್ಥಿತಿಯನ್ನು ಸರ್ಕಾರ ತುಂಬಾ ಹತ್ತಿರದಿಂದ ನಿರ್ವಹಣೆ ಮಾಡುತ್ತಿದೆ. ಕರೊನಾ ವೈರಸ್ ತಡೆಗಟ್ಟಲು ಸರ್ಕಾರ ನಿರ್ದಿಷ್ಟ ತಂತ್ರಗಳನ್ನು ಅನುಸರಿಸುತ್ತಿದೆ. ಲಾಕ್ಡೌನ್ನಿಂದ ಆರ್ಥಿಕ ಚಟುವಟಿಕೆ ಕುಸಿದಿರುವುದರಿಂದ ಮುಂದಿನ ದಿನಗಳಲ್ಲಿ ಲಾಕ್ಡೌನ್ನಲ್ಲಿ ಕೆಲ ಬದಲಾವಣೆ ಮಾಡಿಕೊಂಡು, ಕೃಷಿ ಸೇರಿದಂತೆ ಕೆಲವೊಂದು ವಲಯಗಳಿಗೆ ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ವೇಗವಾಗಿ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ವೇಗವಾಗಿ ಕಡಿಮೆಯಾಗುವ ಭರವಸೆ ಇದೆ ಎಂದರು. (ಏಜೆನ್ಸೀಸ್)
ತಮಿಳುನಾಡಿನಲ್ಲಿ ಸಾವಿರದ ಗಡಿ ದಾಟಿತು ಸೋಂಕು: 13 ಆರೋಗ್ಯ ಸಿಬ್ಬಂದಿಗೂ ತಗುಲಿದ ಹೆಮ್ಮಾರಿ