ರಿಟರ್ನ್ಸ್ ಸಲ್ಲಿಸದವರಿಗೆ ಅರಿವು ಮೂಡಿಸಿ

ದಾವಣಗೆರೆ: ರಾಜ್ಯದ ಇತರ ವಿಭಾಗಗಳಿಗೆ ಹೋಲಿಸಿದರೆ ದಾವಣಗೆರೆ ವಿಭಾಗದಲ್ಲಿ ರಿಟರ್ನ್ಸ್ ಸಲ್ಲಿಸದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವಾಣಿಜ್ಯ ತೆರಿಗೆ ಜಂಟಿ ಆಯುಕ್ತ (ಆಡಳಿತ) ಕೆ.ಎಸ್.ನಿಂಗೇಗೌಡ ಹೇಳಿದರು.
ಜಿಲ್ಲಾ ತೆರಿಗೆ ಸಲಹೆಗಾರರ ಸಂಘದಿಂದ ನಗರದ ಎಂ.ಬಿ.ಎ.ಕಾಲೇಜು ಸಭಾಂಗಣದಲ್ಲಿ ಗುರುವಾರ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಬಗ್ಗೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಎರಡು ಕೋಟಿಯಿಂದ 100 ಕೋಟಿ ರೂ. ವಹಿವಾಟು ಮಾಡುತ್ತಿರುವ 200 ಜನ ರಿಟರ್ನ್ಸ್ ಸಲ್ಲಿಸಿಲ್ಲ. ಕಾನೂನು ಪ್ರಕಾರ 6 ತಿಂಗಳು ರಿಟರ್ನ್ಸ್ ಸಲ್ಲಿಸದೇ ಇದ್ದರೆ ಅವರ ನೋಂದಣಿ ರದ್ದಾಗುತ್ತದೆ. ಈ ಬಗ್ಗೆ ಅವರಿಗೆ ಅರಿವು ಮೂಡಿಸುವ ಕೆಲಸವನ್ನು ತೆರಿಗೆ ಸಲಹೆಗಾರರು ಮಾಡಬೇಕು ಎಂದು ತಿಳಿಸಿದರು.
ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಡಾ.ಬಿ.ಟಿ.ಬಾಣೇಗೌಡ ಮಾತನಾಡಿ, 1957ರಲ್ಲಿ ಮೈಸೂರು ಮಾರಾಟ ತೆರಿಗೆ ಕಾಯ್ದೆ ಜಾರಿಗೆ ಬಂದಾಗ ಇಲಾಖೆಯ ವಾರ್ಷಿಕ ಸಂಗ್ರಹಣೆ ಗುರಿ 3.5 ಕೋಟಿ ರೂ.ಗಳಿದ್ದವು. 2007-08ರಲ್ಲಿ ಗುರಿಯ ಮೊತ್ತ 13,160 ಕೋಟಿ ರೂ. ಆಯಿತು. 2016-17ರಲ್ಲಿ 50 ಸಾವಿರ ಕೋಟಿ ರೂ. ಆಯಿತು ಎಂದು ಮಾಹಿತಿ ನೀಡಿದರು.
ಬದಲಾವಣೆ ಆಗಿದೆ. ಈಗಿನ ಆರ್ಥಿಕತೆಗೆ ಹೊಂದಿಕೊಳ್ಳಬೇಕಿದೆ. ಹೊಸ ಕಾಯ್ದೆಗಳು ಬಂದಾಗ ಸಮಸ್ಯೆಗಳು ಬರುತ್ತವೆ, ಅವುಗಳನ್ನು ಪರಿಹರಿಸಿಕೊಂಡು ಮುಂದೆ ಸಾಗಬೇಕು ಎಂದರು.
ಸಂಘದ ಗೌರವಾಧ್ಯಕ್ಷ ಬಿ.ಜಿ.ಬಸವರಾಜಪ್ಪ ಮಾತನಾಡಿದರು. ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಡಾ.ಎಂ.ಪಿ.ರವಿಪ್ರಸಾದ್ ಮತ್ತು ಸನ್ನದು ಲೆಕ್ಕ ಪರಿಶೋಧಕ ಡಿ.ಆರ್.ವೆಂಕಟೇಶ್ ತರಬೇತಿ ನೀಡಿದರು.
ಎಚ್.ಟಿ.ಸುಧೀಂದ್ರ, ಎಚ್.ಎಸ್.ಮಂಜುನಾಥ್, ಡಿ.ಎಂ.ರೇವಣಸಿದ್ದಯ್ಯ ಭಾಗವಹಿಸಿದ್ದರು. ಕೆ.ಎಸ್.ರುದ್ರಸ್ವಾಮಿ ಸ್ವಾಗತಿಸಿದರು. ಸಿ.ವಿನಯ್ ವಂದಿಸಿದರು. ಶ್ರೀಕಾಂತ್ ಭಟ್ ನಿರೂಪಿಸಿದರು.

ನಾಲ್ಕು ಪ್ರತ್ಯೇಕ ಸರ್ವರ್ ಅಗತ್ಯ
ಜಿಎಸ್‌ಟಿ ಜಾರಿಗೆ ಬಂದ ನಂತರ 2017ರ ಜುಲೈನಿಂದ 2018ರ ಮಾರ್ಚ್ ವರೆಗೆ 2.29 ಕೋಟಿ ವಹಿವಾಟು ವಿವರ ಫೈಲ್ ಮಾಡಲಾಗಿತ್ತು. ಕಳೆದ ಏಪ್ರಿಲ್‌ನಿಂದ ಆಗಸ್ಟ್ ವರೆಗೆ 3.29 ಕೋಟಿ ವಹಿವಾಟು ವಿವರ ಫೈಲ್ ಆಗಿದೆ ಎಂದು ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜೆಂಬಗಿ ರಾಧೇಶ್ ತಿಳಿಸಿದರು. ಆದರೆ, ಸರ್ವರ್ ಸಮಸ್ಯೆ ಗಂಭೀರವಾಗಿದೆ. ಇಡೀ ದೇಶದಲ್ಲಿ ಒಂದೇ ಸರ್ವರ್ ಇದೆ. ಅದರ ಬದಲು 4 ವಲಯಗಳಲ್ಲಿ ಪ್ರತ್ಯೇಕ ಸರ್ವರ್ ಮಾಡುವಂತೆ ತಮ್ಮ ಬೇಡಿಕೆ ಇದೆ, ಅದನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.